ಅಯ್ಯ ನಿಮ್ಮ ಚರಣವಿಡಿದು,
ಮನವ ನಿಲಿಸಿದೆ.
ತನುವ ಮರೆದೆ.
ಮಹಾಘನವ ಕಂಡೆ.
ಲಿಂಗದ ನೆಲೆವಿಡಿದೆ.
ಅಂಗ ಲಿಂಗವೆಂದು ನೋಡಲು,
ಕಂಗಳ ಮುಂದಣ ಬೆಳಗೆ ಲಿಂಗವಾಗಿ,
ಆ ಕಂಗಳ ಮುಂದಣ
ಬೆಳಗ ನೋಡಿಹೆನೆಂದು,
ಸಂಗಸುಖವ ಮರೆದು,
ಆ ಮಂಗಳದ ಮಹಾಬೆಳಗಿಲೆ
ನಾ ನಿಜಮುಕ್ತಳಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ