ಇಲಿಗಳನ್ನು ಕೊಲ್ಲಲು ಹಲವು ಉಪಾಯಗಳಿದ್ದರೂ
ಅತ್ಯಂತ ಫಲಪ್ರದವಾದ್ದೆಂದರೆ ಇಲಿಬೋನು.
ರೂಮಿನಲ್ಲಿ ಕೂಡಿಹಾಕಿ ಓಡಿಸಿ ಕೊಲ್ಲುವುದರಿಂದ
ರಾತ್ರಿಯ ನಿದ್ದೆ ಹಾಳಾಗುತ್ತದೆ. ಸುಸ್ತಾಗುವಿರಿ,
ಇನ್ನು ಪಾಷಾಣದಿಂದ ಬರೇ ಇಲಿಯಲ್ಲ, ನಿಮ್ಮ ಪ್ರೀತಿಯ
ಬೆಕ್ಕೂ, ತಿಂದರೆ ಹೆಂಡತಿ ಕೂಡ ಸಾಯಬಹುದು.
ಇಲಿಬೋನಿನಿಂದ ಇಂಥ ಯಾವ ಅಪಾಯವೂ ಇಲ್ಲ.
ಬಹುಶಃ ಮನುಷ್ಯರು ಕಂಡುಹಿಡಿದ ಯಂತ್ರಗಳಲ್ಲಿ
ಇಷ್ಟು ನಾಜೂಕಾದ್ದು ಇನ್ನೊಂದಿಲ್ಲ, ಎನ್ನಬೇಕು.
ಬೋನಿನಲ್ಲಿ ಬಿದ್ದ ಇಲಿ ಅದಾಗಿ ಸಾಯುತ್ತದೆಯೆ? ಇಲ್ಲ.
ಆದರೆ ಒಮ್ಮೆ ಬಿದ್ದ ಮೇಲೆ ಕೊಲ್ಲುವುದು ಸುಲಭ.
ಇಷ್ಟೆ: ಬೋನಿನ ಬಾಯಿಗೊಂದು ಗೋಣಿಚೀಲವನ್ನು
ಇಡುವುದು, ಬಾಗಿಲನ್ನು ತೆರೆಯುವುದು.
ಈಗ ಇಲಿ ಗೋಣಿಚೀಲವನ್ನು ಹೊಗುತ್ತದೆ. ಒಡನೆಯೆ
ಚೀಲದ ಬಾಯಿಯನ್ನು ಹಗ್ಗದಿಂದ ಬಿಗಿಯಿರಿ.
ಒಂದು ದೊಣ್ಣೆ ತೆಗೆದು ಕೈಯಾರೆ ಹೊಡೆಯಿರಿ.
ಇದರಿಂದ ಇಲಿ ಸಾಯುತ್ತದೆ ಮಾತ್ರವಲ್ಲ, ಇನ್ನೂ ಏನೇನೊ
ಸಾಯುತ್ತವೆ.
*****