ಬಾರಿನಲ್ಲಿ ಅರ್ಧತುಂಬಿದ ಗ್ಲಾಸಿನ ಮೂಲಕ ಹಾದುಬರುವ
ವಿದ್ಯುದ್ದೀಪದ ಅಪೂರ್ವ ಹೊಂಬಣ್ಣದ ಬಗ್ಗೆ ಹೇಳುತ್ತಿಲ್ಲ
ನಾನು. ಅಥವ ಮಾಗಿಯ ಹಣ್ಣಾದ ಭತ್ತದ ತೆನೆಗಳ ಮೇಲೆ
ಬೀಳುವ ಮುಸ್ಸಂಜೆಯ ಬಗ್ಗೆಯೂ ಅಲ್ಲ. ನಾನು
ಸುವ್ಯವಸ್ಥಿತವಾದ ಹಳದಿ ಬಣ್ಣದ ಬಗ್ಗೆ ಹೇಳುತ್ತಿರುವುದು.
ಹಳದಿ ಸರಕಾರದ ಬಣ್ಣ. ಯಾಕೆಂದರೆ
ಅದನ್ನು ತಾಲೂಕಾಪೀಸಿನ ಬೋರ್ಡುಗಳಲ್ಲೂ, ಸರಕಾರೀ
ಜೀಪುಗಳ ನಂಬರ್‌ಪ್ಲೇಟುಗಳಲ್ಲೂ ಕಾಣಬಹುದು.
ಹಳದಿ ದೊಡ್ಡ ದೊಡ್ಡ ಸಂಗತಿಗಳ ಬಣ್ಣ. ಆದ್ದರಿಂದಲೆ
ಅದನ್ನು ಕರ್ಕಶವಾಗಿ ಸದ್ದುಮಾಡುತ್ತ ಬರುವ
ಬುಲ್‌ಡೋಜರಿನ ಮೈಯಲ್ಲೂ, ಎಕ್ಕಳಿಸುತ್ತಿರುವ ಭಾರೀ
ಕ್ರೇನಿನ ಕುತ್ತಿಗೆಯಲ್ಲೂ ಕಾಣಬಹುದು.
ಹಳದಿ ಹೆಪ್ಪುಗಟ್ಟಿದ ನೆತ್ತರಿನ ಬಣ್ಣ-
ವಾದ್ದರಿಂದ ಇರುಬಹುದು.
ಆದರೆ ಕೊಲ್ಲಲು ಬೇರೆ ವಿಧಾನಗಳಿರುವುದರಿಂದ
ಇಷ್ಟೊಂದು ಹಳದಿಯನ್ನು ಎಲ್ಲಿಂದ ಸಂಗ್ರಹಿಸುತ್ತಾರೋ
*****