೧
(ಈಗಿಲ್ಲದ) ಅಡಗೂಲಜ್ಜಿಯ ಮನೆಜಗಲಿಯಲ್ಲೊಬ್ಬ ಹುಡುಗ
ಮಲಗಿ ಸೊಳ್ಳೆ ಹೊಡೆಯುತ್ತ, ಆರಡಿ ದಪ್ಪ ಗಾದಿಯ ಕೆಳಗೆ
ಎಲ್ಲೋ ಸಿಕ್ಕ ಕೂದಲೆಳೆ ಕಾರಣ ನಿದ್ದೆಯಿಲ್ಲದೆ ಹೊರಳುವ
ರಾಜಕುಮಾರಿಯನ್ನು ನೆನೆಯುತ್ತ ನಿದ್ರಿಸಿದಾಗ ಕೊನೆಗೆ
ಅವನ ಮೈಮೇಲೆ ಒಂದೆರಡು ಜಿರಳೆಗಳು
ಹರಿದ ವಿರೋಧಾಭಾಸ
೨
ಆಳೆತ್ತರ ಗಾಂಧೀಚಿತ್ರದ ಕೆಳಗೆ (ಈಗಿಲ್ಲದ) ಉಮೇಶರಾಯರು,
ಅವರ ಮುಂದೆ ಕಾಸರಗೋಡು ಚಳುವಳಿಯಲ್ಲಿ
ಧುಮುಕಲು ಹೊರಟ ನಮ್ಮ ಪ್ರತಿಜ್ಞೆ: ಸತ್ಯವನ್ನೇ ಹೇಳುವೆವು,
ಹಿಂಸೆ ಮಾಡೆವು. ಆ ಮೇಲೆ ಸಬ್‌ಜೈಲಿನಲ್ಲಿ
ಎಷ್ಟೋ ಎತ್ತರದಲ್ಲಿದ್ದ ಬೆಳಕಿಂಡಿಯನ್ನು ನೋಡುತ್ತ
ಕಳೆದ ಒಂದು ರಾತ್ರಿ
೩
(ಈಗಿಲ್ಲದ) ವಸಂತಭವನದ ಮಾಳಿಗೆಯಲ್ಲಿ
ಒಂದು ಕಡೆ ಬಾಣಲೆತುಂಬ ಕರಿಯುವ ಬಾಳೆಹಣ್ಣಿನ ಪೋಡಿ
ಇನ್ನೊಂದು ಕಡೆ ಈ ಊರನ್ನು ಸಾಂಸ್ಕೃತಿಕ ಕ್ರಾಂತಿಗೆ
ಬಡಿದೆಬ್ಬಿಸುತ್ತೇವೆಂದು ಒಂದೊಂದು ಬೀಡಿ
ಹಚ್ಚಿ ಸೇದುತ್ತ ಯಾವ ವಿಡಂಬನೆಯನ್ನೂ ಉದ್ದೇಶಿಸದೆ ಕಾಯುವ
ನಾಲ್ಕಾರು ಮಂದಿ ನಾವು
೪
ಈ ಊರಿನ ಹುಡುಗಿಯರಿಗೆ ಹೊಸ ಹೊಸ ಫ್ಯಾಶನು ಕಲಿಸು
ಕಲಿಸಿ ಅವರನ್ನು ನಮ್ಮೊಂದಿಗೆ ತಿರುಗಲು ಬಿಡು
ಅದಕ್ಕೋಸ್ಕರ ನಮಗೆ ಒಂದೆರಡು ಜತೆ ಒಳ್ಳೆ ಶರ್ಟುಗಳನ್ನೂ
ಕೊಲ್ಲಾಪುರ ಚಪ್ಪಲಿಗಳನ್ನೂ ಹಾಗೆಯೆ ಸ್ವಲ್ಪ ಧೈರ್ಯವನ್ನೂ ಕೊಡು
-ಎಂದು ನಾವು ಒಳಗೊಳಗೇ ಪ್ರಾರ್ಥಿಸಿ ಖಂಡಿತಕ್ಕೂ ನಂಬಿದ
(ಈಗಿಲ್ಲದ) ದೇವರು
*****