ಮಂಚ ಎಷ್ಟೋ ಬಾರಿ ನನ್ನೊಡನೆ ಹೇಳಿದ್ದ. ‘ಯುವಕರನ್ನು ಊರ ರಾಜಕೀಯ ಬಲಿ ತೆಗೆದುಕೊಳ್ಳುತ್ತಿದೆ. ಸರ್ಕಾರದ ಶರಾಬು ಕೇಂದ್ರದೊಡನೆ ಕಳ್ಳಭಟ್ಟಿ ಕೇಂದ್ರಗಳು ಸ್ಪರ್ಧಿಸುತ್ತಿವೆ. ಮಧ್ಯಾಹ್ನದ ಬಳಿಕ ಕ್ಷುಲ್ಲಕ ಕಾರಣಗಳಿಗಾಗಿ ಹೊಡೆದಾಟಗಳಾಗುತ್ತವೆ. ಊರಿಗಾಗಿ ಏನಾದರೂ ಮಾಡಬೇಕು ಸರ್.’
ಏನನ್ನು ಮಾಡುವುದು? ಒಂದು ಸಾಹಿತ್ಯ ಸಂಘ ಮಾಡಿದರೆ ನನ್ನ ಪುಸ್ತಕಗಳನ್ನು ಕೊಳ್ಳುವ ಒಂದೈದಾರು ಮಂದಿ ಸಿಕ್ಕಾರು! ನನ್ನ ಸೂಪರು ಸುಪ್ರೀಮು ಐಡಿಯಾಕ್ಕೆ ಮಂಚ ಮುಖ ಸಿಂಡರಿಸಿದ; ‘ಬಿಟ್ಟಿ ಕೊಟ್ಟರೂ ಓದುಗರು ಸಿಗುವುದು ಕಷ್ಟ. ಬೇರೇನನ್ನೇನಾದರೂ ಮಾಡಬೇಕು.’ ಆಗ ನನಗೆ ನೆನಪಾದದ್ದು ಮಂಡೆಕೋಲಿನ ಬಾಂಜಾರಗಳು.
ಹಳ್ಳಿಗರು ಗುಹೆಗಳನ್ನು ಕರೆಯುವುದೇ ಹಾಗೆ. ಮಂಡೆಕೋಲಿನಲ್ಲಿ ಐದು ಬಾಂಜಾರ ಗಳಿವೆ. ಅವುಗಳ ಬಗ್ಗೆ ಸಾಕಷ್ಟು ಐತಿಹ್ಯಗಳಿವೆ. 1834ರ ವರೆಗೆ ಸುಳ್ಯ ಕೊಡಗಿನ ರಾಜರ ಆಳ್ವಿಕೆಗೊಳಪಟ್ಟಿತ್ತು. ಆ ವರ್ಷ ಕೊಡಗನ್ನು ಆಕ್ರಮಿಸಿದ ಬ್ರಿಟಿಷರು ಹಾಲೇರಿ ವಂಶದ ಕೊನೆಯ ರಾಜ ಚಿಕ್ಕವೀರನನ್ನು ಪದಚ್ಯುತಿಗೊಳಿಸಿ, ಕೊಡಗಿಗೆ ಬ್ರಿಟಿಷ್ ಆಡಳಿತಾಧಿಕಾರಿಯನ್ನು ನೇಮಿಸಿದರು. ಸುಳ್ಯ ಪುತ್ತೂರುಗಳ 110ಗ್ರಾಮಗಳನ್ನು ಕೊಡಗಿನಿಂದ ಬೇರ್ಪಡಿಸಿ ದಕಿಣ ಕನ್ನಡಕ್ಕೆ ಸೇರಿಸಿದರು. ಸುಳ್ಯದಲ್ಲಿ ದ.ಕ. ದ ಕಂದಾಯ ವ್ಯವಸ್ಥೆ ಜಾರಿಗೆ ಬಂದು ಉತ್ಪನ್ನದ ಶೇ 60ರಷ್ಟನ್ನು ರೈತರು ಕಂದಾಯವೆಂದು ಪಾವತಿಸಬೇಕಿತ್ತು. ಕೊಡಗಿನಲ್ಲಿ ಉತ್ಪನ್ನದ ಶೇ 10ರಷ್ಟು ಕಂದಾಯ ಪಾವತಿಸಿದರೆ ಸಾಕಿತ್ತು. ದ. ಕ. ದಲ್ಲಿದ್ದ ಉಪ್ಪು ಹೊಗೆಸೊಪ್ಪು ಏಕಸ್ವಾಮ್ಯ ನಿಯಂತ್ರಣ ಕೊಡಗಲ್ಲಿರಲಿಲ್ಲ. ಸುಳ್ಯ ಸೀಮೆಯ ಬಡ ರೈತರು ಕಂದಾಯ ಕಟ್ಟಲಾಗದೆ ತಮ್ಮ ಜಮೀನುಗಳನ್ನು ಮಾರಾಟ ಮಾಡಬೇಕಾದ ದುಸ್ಥತಿ ನಿರ್ಮಾಣವಾಯಿತು. ಅನಿವಾರ್ಯವಾಗಿ ರೈತರು ಪುಟ್ಟಬಸವನೆಂಬ ರೈತನನ್ನು ಮುಂದಿಟ್ಟುಕೊಂಡು ಬ್ರಿಟಿಷರ ವಿರುದ್ಧ ಬಂಡೆದ್ದರು. ಸುಳ್ಯದಿಂದ ಮಂಗಳೂರುವರೆಗೆ ಹೋದ ರೈತ ದಂಡಿಗೆ ಹೆದರಿ ಬ್ರಿಟಿಷರು ಪಲಾಯನ ಮಾಡಬೇಕಾಯಿತು. ಕೆಲವೇ ದಿನಗಳಲ್ಲಿ ಕಣ್ಣನೂರು ಮತ್ತು ಮುಂಬಯಿಯಿಂದ ಬಂದ ಬಲಿಷ್ಠ ಬ್ರಿಟಿಷ್ ಪಡೆ ರೈತರ ಬೆನ್ನಟ್ಟಿತು. ಜೀವ ವುಳಿಸಿಕೊಳ್ಳಲು ಈ ಗುಹೆಗಳಲ್ಲಿ ಕೆಲವು ರೈತರು ತಂಗಿದ್ದರು. ಅಂಥವರನ್ನು ಹಣದಾಸೆಗೆ ಸ್ಥಳೀಯರೇ ಬ್ರಿಟಿಷರಿಗೆ ತೋರಿಸಿಕೊಟ್ಟರು. ಅಲ್ಲಿಗೆ ಈ ಬಡಪಾಯಿಗಳ ಹೋರಾಟ ಕೊನೆಗೊಂಡಿತು.
ಆ ಬಾಂಜಾರಗಳಲ್ಲಿ ಒಂದಕ್ಕೆ ನುಗ್ಗಿದರೆ ಹೇಗೆ? ಅಂತಹ ಸಾಹಸ ಯುವಕರಿಗೆ ಇಷ್ಟವಾಗದಿರಲು ಸಾಧ್ಯವಿಲ್ಲವಲ್ಲ?
‘ನೀವು ಬರುತ್ತೀರಿ ಎಂದಾದರೆ ಆ ಗುಹೆಗೆ ನುಗ್ಗಲು ಹತ್ತುಹದಿನೈದು ಮಂದಿ ಸಿದ್ಧರಾಗುತ್ತಾರೆ. ಪೋನು ಮಾಡಿ ಬಂದು ಬಿಡಿ’ ಎಂದು ಮಂಚ ಹೇಳಿದ.
ಅವನ ಪೂರ್ಣ ಹೆಸರು ಮಂಡೆಕೋಲು ಚಂದ್ರಶೇಖರ. ಆಗ ಅವನು ಅಂತಿಮ ಬಿ.ಎ.ಯಲ್ಲಿದ್ದ. ಅವನಿಗೆ ವಾರಕ್ಕೊಮ್ಮೆ ನನ್ನ ಮನೆಗೆ ಬಾರದಿದ್ದರೆ, ತಿಂಗಳಿಗೊಮ್ಮೆ ಅವನನ್ನು ನನ್ನ ವೆಸ್ಪಾ ಹಿಂದುಗಡೆ ಕೂರಿಸಿಕೊಂಡು ಯಾವುದೋ ಬೆಟ್ಟ, ಕೋಟೆ, ಭೂತ, ದೇಗುಲಗಳ ಅಧ್ಯಯನಕ್ಕೆ ನಾನು ಕರಕೊಂಡು ಹೋಗದಿದ್ದರೆ ನಿದ್ದೆ ಹತ್ತುತ್ತಿರಲಿಲ್ಲ. ನನ್ನ ಪಾಲಿಗವನು ಬೆನ್ನು ಬಿಡದ ಬೇತಾಳ! ಅವನಿಗೆ ಬರವಣಿಗೆಯ ಹುಚ್ಚಿತ್ತು. ಅಂತಹ ಹುಚ್ಚರ ಸಾಲಲ್ಲಿ ನಾನೂ ಒಬ್ಬನಾದುದರಿಂದ ಅವನ ನನ್ನ ನಡುವೆ ಸಮಾನ ವ್ಯಸನ ಸಖ್ಯವಿತ್ತು.
ಬಾಂಜಾರವೂ ಅದರ ಐತಿಹ್ಯವೂ
ಅವನು ಹೇಳಿದ ಗುಹೆಯಿದ್ದದ್ದು ಸುಳ್ಯ ತಾಲೂಕಿನ ಗಡಿ ಗ್ರಾಮವಾದ ಮಂಡೆಕೋಲಿನಲ್ಲಿ. ಅದರಿಂದಾಚೆ ಕೇರಳ. ಆಚೆ ಬದಿಯಿಂದ ಅಲ್ಲಿಯವರೆಗಿನ ಕಾಡನ್ನು ಸಂಪೂರ್ಣ ಸವರಿದ್ದ ಕೇರಳ ಮಂಡೆಕೋಲಿನ ಸಮೃದ್ಧಿ ಅರಣ್ಯ ಪ್ರದೇಶ ತನ್ನದೆನ್ನುತ್ತಿತ್ತು. ಮಂಡೋಕೋಲಲ್ಲಿ ಮಲೆಯಾಳ ಮಾತಾಡುವವರು ಗ್ರಾಮದ ಜನಸಂಖ್ಯೆಯ ಕಾಲಂಶದಷ್ಟಿದ್ದರೂ ಅವರಿಗೆ ಕೇರಳದ ಅತಿಕ್ರಮಣ ಸಹ್ಯವಾಗಿರಲಿಲ್ಲ. ಉದಯವಾಣಿ ಗುರುತಿಸಿದ್ದ ಸುಳ್ಯದ ಎರಡು ಕುಗ್ರಾಮ ಗಳಲ್ಲಿ ಒಂದಾದ ಮಂಡೆಕೋಲಿನಲ್ಲಿ ಅನೇಕ ಸಮಸ್ಯೆಗಳಿದ್ದವು. ಇನ್ನೊಂದು ಮರ್ಕಂಜ ಊರನ್ನು ಸಾಹಸಕ್ಕೆ, ಹೊಸತನಕ್ಕೆ ಪ್ರೇರಿಸಬಲ್ಲ ಒಂದೇ ಒಂದು ಸಂಘಟನೆಯೂ ಇರಲಿಲ್ಲ.
ಆ ಬಾಂಜಾರಗಳಲ್ಲಿ ಒಂದಕ್ಕೆ ನುಗ್ಗಿದರೆ ಹೇಗೆ? ಅಂತಹ ಸಾಹಸ ಯುವಕರಿಗೆ ಇಷ್ಟವಾಗದಿರಲು ಸಾಧ್ಯವಿಲ್ಲವಲ್ಲ! ಮಂಚನಿಗೆ ಈ ಸಲಹೆ ಇಷ್ಟವಾಯಿತು.
ಅಂದಿನಿಂದ ಪ್ರತಿ ಶನಿವಾರ ನನ್ನನ್ನು ಕಾಡುವುದು ಅವನ ಪರಿಪಾಠವಾಗಿ ಹೋಯಿತು. ನಾನು ದಿನ ನಿಗದಿ ಮಾಡಿದೆ.
ಮಂಡೆಕೋಲಿನಲ್ಲಿ ನನ್ನ ಶಿಷ್ಯರು ಸಾಕಷ್ಟಿದ್ದರು. ನನ್ನ (ಕು)ಖ್ಯಾತಿಯೂ ಸಾಕಷ್ಟು ಹಬ್ಬಿತ್ತು. ಮೌಖಿಕ ವಾರ್ತೆ ಹಬ್ಬಿಯೇ ಬಿಟ್ಟಿತು.
‘ಬಾಂಜಾರ ನುಗ್ಗಲು ಶಿಶಿಲ ಮೇಸ್ಟ್ಟ್ರೇ ಬರ್ತಾರಂತೆ.’
ನನ್ನ ಮನೆಯಿಂದ ಮಂಡೆಕೋಲಿಗೆ ಎಂಟು ಕಿ.ಮೀ. ದೂರ. ನನ್ನನ್ನು ಹೊತ್ತ ವೆಸ್ಪಾ ಗುಂಡಿ ಗುಂಪೆಗಳ, ಅಂಕು ಡೊಂಕುಗಳ, ಏರು ಪೇರುಗಳ ರಸ್ತೆಯಲ್ಲಿ ಅಡ್ಡಾದಿಡ್ಡಿ ಯಾಗಿ ಓಡಿತು. ಬೇತಾಳ ಮಂಡೆಕೋಲಿನವನೇ ಇದ್ದುದರಿಂದ ಪಿಲಿಯನ್ನು ಸೀಟಿಗೆ ವಿಶ್ರಾಂತಿ ಸಿಕ್ಕಿತ್ತು!
ಮಂಡೆಕೋಲು ಶಾಲೆಯ ಬಳಿ ನನಗೆ ಭವ್ಯ ಸ್ವಾಗತ ಸಿಗುತ್ತದೆಂಬ ನಿರೀಕೆ ನನಗಿದ್ದರೆ ಅಲ್ಲಿ ಮಂಚ ಹ್ಯಾಪ ಮೋರೆ ಮಾಡಿ ಹಾಕಿ ನಿಂತಿದ್ದ.
‘ನಿನ್ನೆ ಎಲ್ಲರೂ ಬರಲೊಪ್ಪಿದ್ದರು ಸರ್. ಈಗ ಒಬ್ಬರೂ ಕಾಣುತ್ತಿಲ್ಲ!’
ಗುಹೆಗೆ ನುಗ್ಗಲು ಹೆದರಿದೆ!
‘ಹೆದರಿದ್ದು ಹೌದು ಸರ್. ನೀವು ಬರ್ತೀರಿ ಎಂದ ಮೇಲೆ ಅವರಲ್ಲಿ ಧೈರ್ಯ ಮೂಡಿದೆ. ಈಗ ಬಂದಾರು.’
ಒಂದೊಂದೇ ತಲೆಗಳು ಪ್ರತ್ಯಕವಾಗತೊಡಗಿದವು.
ಮಾಯಿಲಪ್ಪ, ಪ್ರೀತಂ, ಸಂತೋಷ, ಯೋಗೀಶ, ಕುಮಾರ, ಸುಂದರ, ಲವ, ದಾಮೋದರ, ಚಂದ್ರಶೇಖರ, ಕಮಲಾಕ, ಪುರುಷೋತ್ತಮ……… ಮತ್ತೂ ಒಂದೈದು ಮಂದಿ.
ಶಾಲಾ ಬಳಿಯ ಹೋಟೆಲ್ಲಲ್ಲಿ ಕಲ್ತಪ್ಪ ತಿಂದು, ಚಾ ಹೀರುತ್ತಾ ಮುಂದಿನ ಕಾರ್ಯಕ್ರಮ ರೂಪಿಸಿದೆವು.
‘ಹಿರಿಯರು ಹೇಳುತ್ತಾರೆ ಸರ್, ಇರುವುದರಲ್ಲಿ ಮೀನಗದ್ದೆ ಬಾಂಜಾರ ಸೇಫ್ ಅಂತೆ. ಉಳಿದವುಗಳಲ್ಲಿ ಹಾವು, ನರಿ ಇರುತ್ತವಂತೆ’ ಮಂಚ ಹೇಳಿದ.
ನಾನು ಸೇಫ್ಟಿ ಬಗ್ಗೆ ಯೋಚಿಸಿರಲಿಲ್ಲ. ‘ಯಾವುದರಲ್ಲಿ ಹೆಚ್ಚು ಥ್ಥಿಲ್ ಇರುತ್ತೆಂದು ಗೊತ್ತಾ ಮಂಚ?
‘ಮೀನಗದ್ದೆಯದರಲ್ಲೇ ಸರ್. ಅದರಲ್ಲಿ ಮೂರು ಬಿಲದ್ವಾರಗಳಿವೆಯಂತೆ. ‘
ಅಂದ ಮೇಲೆ ಇನ್ನು ತಡವೇಕೆ?
‘ಟಾರ್ಚು, ಹಗ್ಗ, ಕತ್ತಿ ತಂದು ಬಿಡುತ್ತೇನೆ ಸರ್. ನೀವು ಮಾಯಿಲಪ್ಪನೊಡನೆ ಮೀನಗದ್ದೆಗೆ ಹೋಗಿ. ನಾವು ಜೀಪಲ್ಲಿ ಫಾಲೋ ಮಾಡ್ತೀವಿ.’
ಮಂಡೆಕೋಲಿನಿಂದ ಮೀನಗದ್ದೆಗೆ ಎರಡು ಕಿಲೋಮೀಟರ್. ಮತ್ತದೇ ಅಂಕುಡೊಂಕು ಸಂಕಪಾಲ!
‘ಮೀನಗದ್ದೆಯಲ್ಲಿ ಈಗಲೂ ಮೀನುರುತ್ತವಾ ಮಾಯಿಲಪ್ಪಲು’
ಪಿಲಿಯನ್ ರೈಡರ್ ಮಾಯಿಲಪ್ಪ ಪುಸಕ್ಕನೆ ನಕ್ಕಾಗ ನನ್ನ ಕುತ್ತಿಗೆ ಹಿಂಭಾಗಕ್ಕೆ ಲಾಲಾರಸದ ಹನಿಗಳು ಸಿಡಿದವು.
‘ಅಲ್ಲಿರುವುದು ಬರಿಯ ಅಡಿಕೆ ತೋಟಗಳು ಸರ್. ಯಾವ ಕಾಲದಲ್ಲಿ ಅಲ್ಲಿ ಗದ್ದೆ ಇತ್ತೊ?’
ಹಿಂದೆ ದ.ಕ.ದಲ್ಲಿ ಮಳೆಗಾಲದಲ್ಲಿ ಹೊಳೆ, ಹಳ್ಳ, ತೋಡುಗಳಿಂದ ಮೀನುಗಳು ಭತ್ತದ ಗದ್ದೆಗಳಿಗೆ ಬಂದು ಬಿಡುತ್ತಿದ್ದವು. ರೈತರು ತಲೆಗೆ ಕತ್ತಿಯ ಹಿಡಿಯಿಂದ ಡಕ್ಕನೆ ಮೊಟಕಿ ಕೋಮಾ ಸ್ಟೇಜಿನಲ್ಲಿರುವ ಮೀನುಗಳನ್ನು ಗಮಗಮಿಸುವ ಸಾರು ಮಾಡಿ ಚಪ್ಪರಿಸಿ ಚಪ್ಪರಿಸಿ ಉಣ್ಣುತ್ತಿದ್ದರು. ಈಗ ಗದ್ದೆಗಳೇ ಅಪರೂಪ. ಮೂರು ಬೆಳೆ ಬೆಳೆಯುವ ಗದ್ದೆಗಳನ್ನೂ ಅಡಿಕೆ ತೋಟ ಮಾಡಿದರೆ ಭತ್ತದ ಬೆಲೆ ಏರಿ ಅಡಿಕೆಯ ಬೆಲೆ ಇಳಿಯದಿರುತ್ತದೆಯೆ?
ಬಾಂಜಾರ ಇರುವುದು ಮೀನಗದ್ದೆ ಚಂದ್ರಶೇಖರಿಗೆ ಸೇರಿದ ಜಾಗದಲ್ಲಿ. ಮಂಚ ಅವರಿಗೆ ಫೋನಾಯಿಸಿ ‘ಮೇಸ್ಟ್ರು ಬಾಂಜಾರ ನುಗ್ಗಲು ಬರ್ತಿದ್ದಾರೆ’ ಎಂದು ಅದೊಂದು ವಿಶ್ವದ ಅತಿ ಮಹತ್ವದ ಸಂಗತಿ ಎಂಬಂತೆ ಮಂಡೆಕೋಲು ಕಾಕಾನ ಚಾದಂಗಡಿಯಿಂದ ಹೇಳಿದ್ದ. ಎರಡು ಶಿಕಾರಿ ಲೈಟು, ಉದ್ದನೆಯ ದಪ್ಪದ ಹುರಿಹಗ್ಗ, ಕತ್ತಿ ಮತ್ತು ದೊಣ್ಣೆ ಗಳನ್ನು ಸಿದ್ದಪಡಿಸಿ. ಮೀಚಂ ಮೀನಗದ್ದೆ ಚಂದ್ರಶೇಖರ್ ನನ್ನನ್ನು ಕಾಯುತ್ತಿದ್ದರು.
ಮಾವಾಜಿ ಬೈಲಿನ ಕೆಲವರು, ಮಂಡೆಕೋಲು, ಮೀನಗದ್ದೆಯವರು, ಈ ಬಡಪಾಯಿ ಮೇಸ್ಟ್ರು ಎಲ್ಲರೂ ಸೇರಿ ಹನ್ನೆರಡು ಪ್ಲಸ್ ಒಂದು. ದುರ್ಭಿಕ್ಷದಲ್ಲಿ ಅಧಿಕ ಮಾಸ! ಉತ್ಸಾಹ ಎಲ್ಲರಲ್ಲೂ ಇತ್ತು. ಕೆಲವರಲ್ಲಿ ಭೀತಿ ಮನೆ ಮಾಡಿದ್ದನ್ನು ಅವರ ಮುಖದರ್ಪಣ ಪ್ರತಿಬಿಂಬಿಸುತ್ತಿತ್ತು. ಸಮಯ ಮಧ್ಯಾಹನ ಹನ್ನೆರಡೂವರೆ. ಅಭಿಜಿನ್ ಮುಹೂರ್ತ! ಮೀಚಂ ಮುಂದುಗಡೆ, ನಾವು ಹನ್ನೆರಡು ಮಂದಿ ಬುದ್ಧಿವಂತರು ಹಿಂದೆ. ಮೀನಗದ್ದೆ ಗುಡ್ಡ ಏರಿ ಬಾಂಜಾರದತ್ತ ಹೆಜ್ಜೆ ಹಾಕಿದೆವು.
ಕತ್ತಲಲ್ಲೊಂದು ಕಾಣದ ಲೋಕ
ಬಾಂಜಾರದ ಉದ್ದ ಸುಮಾರು ಐವತ್ತು ಮೀಟರುಗಳಾದರೆ ಅಗಲ ಹದಿನೈದು ಮೀಟರುಗಳಿರಬಹುದು ಎಂದು ಮೀಚಂ ತಮ್ಮ ಕಣ್ಣಳತೆಯ ಸರ್ವೆ ಮೂಲಕ ಅಂದಾಜಿಸಿದರು. ‘ಅಷ್ಟು ನಿಖರವಾಗಿ ಹೇಗೆ ಹೇಳುತ್ತೀರಿ’
‘ಕಾಲಿನಿಂದ ಭೂಮಿಯನ್ನು ಒದೆಯಿರಿ. ಗೊತ್ತಾಗತ್ತೆ.’
ನಾವು ಒದ್ದೆವು. ಆರಂಭದಲ್ಲಿ ಏನೂ ವಿಶೇಷ ಕಾಣಿಸಲಿಲ್ಲ. ಒಂದಷ್ಟು ದೂರ ಹೋದ ಮೇಲೆ ಒದ್ದಾಗಲೆಲ್ಲಾ ಧನ್ ಧನ್ ಸದ್ದು ಕೇಳಿಸತೊಡಗಿತು.
ಮೀನಗದ್ದೆ ಮನೆಯಿಂದ ಬಾಂಜಾರದತ್ತ ಪಯಣಿಸುವಾಗ ಲ್ಯಾಟರೆಟ್ ಕಲ್ಲಿನ ಆ ಗುಹೆಯ ಒಂದು ಬದಿಯ ದರ್ಶನವಾಗುತ್ತದೆ. ಅದು ತಗ್ಗು ಪ್ರದೇಶವಾಗಿದ್ದು ಅಲ್ಲೇ ಎರಡು ಬಾವಿಗಳಿವೆ. ಅದರಲ್ಲೀಗ ನೀರಿಲ್ಲ. 1837ರ ಕಲ್ಯಾಣಪ್ಪನ ಕಾಟಕಾಯಿಯ ಸಂದರ್ಭದಲ್ಲಿ ಅಮರ ಸುಳ್ಯದ ರೈತ ಧೀರರು ಬಾಂಜಾರದಲ್ಲಿ ರಕ್ಷಣೆ ಪಡೆದ ದಿನಗಳಲ್ಲಿ ಅವೆರಡು ಬಾವಿಗಳಲ್ಲಿ ನೀರಿದ್ದಿರಬೇಕು. ಅವುಗಳಿಂದ ನೀರೆತ್ತಿ ಅಲ್ಲೇ ಒಲೆ ನಿರ್ಮಿಸಿ ಅವರು ಅಡುಗೆ ಮಾಡಿರಬೇಕು! ಆ ಭಾಗದಿಂದ ನೋಡಿದರೆ ಬರೀ ಲ್ಯಾಟರೈಟು ಹಾಸು ಮಾತ್ರ. ಅದರಾಚೆಗೊಂದು ಗುಹೆ ಇರಬಹುದೆಂಬ ಕಲ್ಪನೆಯೂ ಬರುವುದಿಲ್ಲ.
ಅವೆರಡು ಬಾವಿಗಳನ್ನು ನೋಡಿ ನಾವು ಮೇಲಕ್ಕೆ ಬಂದು ಕಾಲಲ್ಲಿ ಭೂಮಿಯನ್ನು ಒದೆಯುತ್ತಾ ಧನ್ ಶಬ್ದಕ್ಕೆ ಖುಷಿ ಪಡುತ್ತಾ ಗುಹೆಯ ಮುಂಭಾಗಕ್ಕೆ ಬಂದೆವು. ಗುಹೆಯ ಬಾಯಿ ಪೊದೆಗಳಿಂದ ಮುಚ್ಚಿ ಹೋಗಿದೆ. ಬಿಚ್ಚುಗತ್ತಿಯ ಧೀರರು ಪೊದೆ ಸವರಿ ನೋಡಿದರೆ ಒಬ್ಬ ವ್ಯಕ್ತಿ ಇಳಿಯಬಹುದಾದ ಪುಟ್ಟ ಬಿಲದ್ವಾರವೊಂದು ಗೋಚರಿಸಿತು. ಅದರಲ್ಲಿ ನೇರವಾಗಿ ಇಳಿಯುವಂತಿರಲಿಲ್ಲ. ಹಿಮ್ಮೊಗವಾಗಿಯೇ ಇಳಿಯಬೇಕು. ಇಳಿಯುವ ಮೊದಲು ಎರಡು ಪರೀಕೆಗಳಾಗಬೇಕು. ಒಂದು ಗುಹೆಯಲ್ಲಿ ಆಮ್ಮಜನಕ ಉಂಟಾ, ಇಲ್ಲವಾ? ಎರಡು ಅಪಾಯಕಾರಿ ಪ್ರಾಣಿಗಳಿದ್ದಾವಾ?
ಉದ್ದನೆಯ ಕೋಲೊಂದನ್ನು ಮಂಚ ಸಿದ್ಧಪಡಿಸಿ ತಂದಿದ್ದ. ಅದರ ತುದಿಗೆ ಬಟ್ಟೆ ಸುತ್ತಿ ತೆಂಗಿನೆಂಣೆ ಹೊಯಿದು ಒಣಗಿಸಿ ನಿನ್ನೇನೇ ಸಿದ್ಧಗೊಳಿಸಿದ್ದ. ಅದರ ತುದಿಗೆ ಬೆಂಕಿ ಹಚ್ಚಿ ನಿಧಾನವಾಗಿ ಗುಹೆಯ ಒಳಗೆ ತೂರಿಸಿದೆವು. ಮೂರುನಾಲ್ಕು ನಿಮಿಷಗಳ ಬಳಿಕ ಹಿಂದಕ್ಕೆಳೆದು ನೋಡಿದರೆ ಬೆಂಕಿ ನಂದಿರಲಿಲ್ಲ.
ಹುರ್ರಾ!
ಗುಹೆಯಲ್ಲಿ ಜೀವಾನಿಲ ಇದೆ.
ಅಪಾಯಕಾರಿ ಪ್ರಾಣಿಗಳಿರುತ್ತಿದ್ದರೆ ಬೆಂಕಿಗೆ ಪ್ರತಿಕ್ರಿಯೆ ತೋರದಿರಲು ಸಾಧ್ಯವಿರಲಿಲ್ಲ.
ಮೊದಲು ಇಳಿಯುವವರು ಯಾರು?
ನಾನು ಸಜ್ಜಾದೆ.
‘ಬೇಡಿ ಸರ್, ನಾವೇ ಇಳಿಯುತ್ತೇವೆ.’
ಮಾಯಿಲಪ್ಪ, ಸಂತೋಷ ಮುಂದಾದರು.
ಅವರಿಗೆ ಮಂಡೆಕೋಲಿನಲ್ಲಿ ಮೇಸ್ಟ್ರ ಜೀವಕ್ಕೆ ಏನಾದರೂ ಆಗುವುದು ಬೇಕಿರಲಿಲ್ಲ.
ನನ್ನ ಸರದಿ ಬಂತು.
ನಾನು ನೆಲದಲ್ಲಿ ಮಲಗಿ ಕಾಲುಗಳನ್ನು ಜಾರಿಸಿಕೊಂಡು,ಕೌರವ ವೈಶಂಪಾಯನ ಸರೋವರಕ್ಕೆ ಹಿಮ್ಮುಖವಾಗಿ ಇಳಿದಂತೆ ಇಳಿದೆ. ಸುಮಾರು ಏಳೆಂಟು ಮೀಟರು. ಕೊನೆಗೆ ನನ್ನ ಕಾಲುಗಳು ಸಮತಟ್ಟು ಪ್ರದೇಶವನ್ನು ಸ್ಪರ್ಶಿಸಿದವು. ಹಿಂದಿನ ದಿನ ಮಳೆ ಬಂದು ಗುಹೆಗೆ ನುಗ್ಗಿದ ನೀರು ಜೌಗನ್ನು ಸೃಷ್ಟಿಸಿತ್ತು. ನಾವು ಎಚ್ಚರ ವಹಿಸದಿದ್ದರೆ ಜೌಗಿನಲ್ಲಿ ಹೂತು ಹೋಗುವ ಸಂಭವವಿತ್ತು.
ಗುಹೆಯ ಒಳಗೆ ಕಗ್ಗತ್ತಲು. ಧ್ವನಿ ಕೇಳುತ್ತಿದೆ. ಜನ ಕಾಣುತ್ತಿಲ್ಲ. ಟಾರ್ಚು ಲೈಟಿದ್ದವರು ಪ್ರಕಾಶಮಾನವಾದ ಬೆಳಕನ್ನು ಚೆಲ್ಲಿ ಎಚ್ಚರಿಸುತ್ತಿದ್ದರು. ‘ಮಧ್ಯದಲ್ಲಿ ಕೆಸರಿದೆ ಬದಿಯಲ್ಲೇ ನಿಂತುಕೊಳ್ಳಿ.’
ಗುಹೆಯೊಳಗೆ ನೂರಕ್ಕಿಂತ ಹೆಚ್ಚು ಜನ ಆಶ್ರಯ ಪಡೆಯುವಷ್ಟು ಜಾಗವಿದೆ. ಗುಹೆಯ ಚಾವಣಿ, ನೆಲದಿಂದ ಮೂವತ್ತು ಅಡಿ ಎತ್ತರವಿರಬಹುದು. ಗುಹೆಯ ಗೋಡೆಗಳಲ್ಲಿ ರೈಲ್ವೇ ಬರ್ತಿನಂತೆ ಮಲಗಿಕೊಳ್ಳಲು ಸ್ಥಳವಿದೆ. ಮುಳ್ಳುಹಂದಿ, ಚಿರತೆಗಳಿಗೆ ಅತ್ಯಂತ ಪ್ರಶಸ್ತ ಸ್ಥಳ. ಇಲ್ಲಿ ಬ್ರಿಟಿಷರ ವಿರುದ್ಧ 1837ರಲ್ಲಿ ಹೋರಾಡಿದ ನಮ್ಮ ಹಿರಿಯರು ತಂಗಿದ್ದರು. ಅವರು ಸ್ವಾತಂತ್ರ್ಯ ಗಳಿಸಲು ಹೋರಾಡಿದವರು. ನಮಗೆ ಅವರ ಬಗ್ಗೆ ಏನೇನೂ ಗೊತ್ತೇ ಇಲ್ಲ!
ಗುಹೆಯೊಳಗೆ ಬಾವಲಿಗಳ ವಿಸರ್ಜನೆಯ ವಾಸನೆ ಇಡುಗಿತ್ತು. ಅಡಿಕೆ ಬಾವಲಿಗಳು ನಮ್ಮ ಮಾತುಗಳಿಗೆ ಟಾರ್ಚುಗಳ ಬೆಳಕಿಗೆ ಗಾಬರಿಯಾಗಿ ಪರಿಸರದ ಒಂದನೇ ಶತ್ರುಗಳಾದ ಸ್ವಾರ್ಥಿ ಮಾನವರು ಇಲ್ಲಿಗೂ ಬಂದರೇ ಎಂದು ಗಾಬರಿಯಿಂದ ಅತ್ತಿಂದಿತ್ತ ಹಾರಾಡುತ್ತಾ, ಒಮ್ಮೊಮ್ಮೆ ನಮ್ಮ ಮುಖಕ್ಕೆ ಬಡಿಯುತ್ತಾ ಗದ್ದಲವೆಬ್ಬಿಸುತ್ತಿದ್ದವು. ಕಾಲ ಕೆಳಗೆ ಬಗೆ ಬಗೆಯ ಕಪ್ಪೆಗಳು ವಿವಿಧ ಸ್ತರಗಳಲ್ಲಿ ಸಂಗೀತ ಗೋಷ್ಠಿಯಲ್ಲಿ ತಲ್ಲೀನವಾಗಿದ್ದವು. ಆ ಸಂಗೀತಕ್ಕೆ ಕೆಲವು ಕಪ್ಪೆಗಳು ನಮ್ಮ ಮೂಗೆತ್ತರಕ್ಕೆ ನರ್ತಿಸುತ್ತಿದ್ದವು.
ನಾವು ರೈಲ್ವೇ ಬರ್ತಿನಂತಹ ಜಾಗಕ್ಕೆ ಏರಬೇಕಿತ್ತು. ಲ್ಯಾಟರೈಟು ಶಿಲೆಯ ಉಬ್ಬು ತಗ್ಗುಗಳನ್ನು ಬಳಸಿ ಕೆಲವರು ಮೇಲೇರಿದರು. ನಾನು ಹಗ್ಗದ ಸಹಾಯದಿಂದ ಮೇಲಕ್ಕೆ ಬಂದೆ. ಅಲ್ಲಿಂದ ನಮ್ಮ ಪಯಣ ನಾವು ಮೊದಲು ನೋಡಿದ ಎರಡು ಬಾವಿಗಳತ್ತ. ಅದು ಬಿಲದ ಮೂಲಕ ಪಯಣ. ಬಾವಿಗಳ ಕಡೆಯಿಂದ ನೋಡಿದಾಗ ಬಿಲವೊಂದು ಅಲ್ಲಿರಬಹುದೆಂಬ ಕಲ್ಪನೆ ನಮ್ಮಲ್ಲಿ ಸುಳಿದಿರಲಿಲ್ಲ.
ಒಂದಷ್ಟು ಹುಡುಗರು ವಸ್ತುಶಃ ಉರಗಗಳಂತೆ ನನ್ನ ಮುಂದಿನಿಂದ ಹೊಟ್ಟೆಯಲ್ಲೇ ತೆವಳುತ್ತಾ ಬಿಲದಲ್ಲಿ ಸಾಗಿದರು. ‘ಮಂಚು ನಾನು ನಿಮ್ಮ ಮುಂದಿರುತ್ತೇನೆ ಸರ್. ಹಿಂದಿನಿಂದ ಮಾಯಿಲಪ್ಪ. ಬನ್ನಿ ಸರ್’ ಎಂದ. ನಾನು ಶತ್ರು ಪಾಳಯದತ್ತ ತೆವಳುವ ಸೈನಿಕನಂತೆ ನೆಲದಲ್ಲಿ ಮಲಗಿ ತೆವಳ ತೊಡಗಿದೆ. ಮೀಚಂ ಎಲ್ಲರಿಗಿಂತ ಮುಂದಿದ್ದವರು ಬಿಲದ್ವಾರದಲ್ಲಿ ತೆವಳಿ ಬಾವಿಯ ಬಳಿಗೆ ಬಂದು ತಾನು ಯಶಸ್ವಿಯಾಗಿ ಹೊರಬಂದೆನೆಂದು ಕೂ ಸ್ವರ ಹೊರಡಿಸಿದರು. ಸಂತೋಷ, ಲವಾಚಾರ್ ಮುಂತಾದವರ ನಾಲ್ಕೈದು ಸ್ವರ ಕೇಳಿಸಿದ ಮೇಲೆ ಬಿಲದ್ವಾರದಲ್ಲಿ ತುಂಬಾ ಹೊತ್ತು ತೆವಳಬೇಕಾಗಿಲ್ಲ ಎನ್ನುವುದು ನನಗೆ ಖಾತ್ರಿಯಾಯಿತು.
ಅದು ಎರಡಡಿ ಎತ್ತರದ, ಒಂದೂವರೆ ಅಡಿ ಅಗಲದ ಬಿಲದ್ವಾರ. ಸ್ವಲ್ಪ ತೆವಳಿದಾಗ ಬಲಬದಿಯಲ್ಲಿ ಮತ್ತೆರಡು ಬಿಲದ್ವಾರಗಳಿವೆ. ನನ್ನ ಮುಂದಿದ್ದ ಮಂಚ ಕಾಣಿಸುತ್ತಿಲ್ಲ. ನಾನು ತೆವಳ ಬೇಕಾದದ್ದು ಯಾವ ದ್ವಾರದಲ್ಲಿ?
‘ಮಂಚಾ, ದಾರಿ ಎಲ್ಲೊ?’ ಎಂದು ಗಟ್ಟಿಯಾಗಿ ಕೇಳಿದೆ. ಆಗ ಹೊರಗಿನಿಂದ ಕೂ ಸ್ವರ ಕೇಳಿಸಿತು. ಬಲಬದಿಯ ಬಿಲದ್ವಾರಗಳನ್ನು ಬಿಟ್ಟು ಎಡಬದಿಯದರಲ್ಲೇ ತೆವಳ ತೊಡಗಿದೆ. ಬಿಲ ಇನ್ನೂ ಸಣ್ಣಗಾದಂತಾಗಿ ನಾನು ತಲೆ ಎತ್ತಲಾಗದ, ಕೈ ಕಾಲು ಆಡಿಸಲಾಗದ ಸ್ಥತಿಯಲ್ಲಿ ಹೊಟ್ಟೆ ಎಳೆದೆ.
ನಾಲ್ಕು ಮೀಟರು ಕ್ರಮಿಸಿರಬಹುದು. ಸುರಂಗ ಮತ್ತೂ ಇಕ್ಕಟ್ಟಾಯಿತು. ನನ್ನ ಅಗಲ ಶರೀರ ಮತ್ತು ಉದ್ದನೆಯ ಕೈಗಳು ಸಮಸ್ಯೆ ಸೃಷ್ಟಿಸತೊಡಗಿದವು. ಕೈಗಳನ್ನು ಉದ್ದಕ್ಕೆ ಚಾಚದ ಅಗಲಕ್ಕೆ ಅಗಲಿಸಿದ್ದೇ ಇಕ್ಕಟ್ಟಿಗೆ ಸಿಲುಕಿಕೊಂಡೆ. ಮುಂದಕ್ಕೆ ಹೋಗಲಾಗುತ್ತಿಲ್ಲದ ಹಿಂದಕ್ಕೆ ಬರುವಂತಿಲ್ಲ. ಐದು ನಿಮಿಷಗಳ ಒದ್ದಾಟದಲ್ಲಿ ಆಮ್ಮಜನಕದ ಕೊರತೆಯಿಂದ ಶ್ವಾಸ ಕಟ್ಟತೊಡಗಿತು. ಆ ಸ್ಥಿತಿಯಲ್ಲಿ ಹೆಂಡತಿ, ಮಕ್ಕಳು, ಕುರುಂಜಿ ವೆಂಕಟ್ರಮಣಗೌಡರು, ಬಂಧು ಬಾಂಧವರು, ಸಹೋದ್ಯೋಗಿಗಳು, ಮಿತ್ರರು, ವಿದ್ಯಾರ್ಥಿಗಳು ಎಲ್ಲರೂ ನೆನಪಾಗಿ ಬಿಟ್ಟರು!.
ಬಿಲದ ತುದಿ ಮುಟ್ಟಿ ಹೊರ ಬಂದಿದ್ದ ಮಂಚನಿಗೆ ನಾನು ಸುರಂಗದ ಇಕ್ಕಟ್ಟಿನಲ್ಲಿ ಸಿಕ್ಕಿ ಒದ್ದಾಡುತ್ತಿರುವುದು ಗೊತ್ತಾಯಿತು. ‘ಹೇಗಾದರೂ ಬಂದು ಬಿಡಿ ಸರ್’ ಎಂದು ಅವನು ಅಳುಧ್ವನಿ ಹೊರಡಿಸುತ್ತಿದ್ದುದು ಆ ಸ್ಥತಿಯಲ್ಲೂ ನನಗೆ ಕೇಳಿಸಿತು. ಹಿಂದಿದ್ದ ಮಾಯಿಲಪ್ಪ ‘ಕಾಲು ಹಿಡಿದು ಹಿಂದಕ್ಕೆಳೆಯ ಬೇಕಾ ಸರ್?’ ಎಂದು ಕೇಳಿದ. ಎಲ್ಲೋ ಯಾವುದೋ ಅಧೋಲೋಕದ ಧ್ವನಿಯಂತಿತ್ತದು. ಗಾಳಿಯಿಲ್ಲದ ಚಡಪಡಿಕೆ. ಅಡ್ಡಕ್ಕೆ ಸಿಲುಕಿಕೊಂಡಿದ್ದ ಕೈಗಳನ್ನು ಕಷ್ಟಪಟ್ಟು ಬಿಡಿಸಿಕೊಂಡು ಉದ್ದಕ್ಕೆ ಚಾಚಿದೆ. ಒಂದಷ್ಟು ಚರ್ಮ ಕಿತ್ತು ಹೋಗಿ ಉರಿಯತೊಡಗಿತು. ಎರಡೂ ಕೈಗಳನ್ನು ಮುಂದಕ್ಕೆ ಚಾಚಿ ಈಜುವ ಪೋಸಿನಲ್ಲಿ ನಿಧಾನ ವಾಗಿ ನನಗೂ ಸಾವಿಗೂ ಇದ್ದ ಆ ನಾಲ್ಕು ಮೀಟರು ಅಂತರವನ್ನು ಕ್ರಮಿಸಿದೆ. ಆಹ್! ಬೆಳಕು. ‘ಅಬ್ಬಾ, ಮಂಡೆಕೋಲು ವಿಷ್ಣುಮೂರ್ತಿಯ ದಯೆ’ ಎಂದಾರೋ ಉದ್ಗರಿಸಿದರು.
ನನ್ನ ಹಿಂದೆಯೇ ಮಾಯಿಲಪ್ಪ ಬಂದ. ಎಲ್ಲರ ಮುಖದಲ್ಲಿ ಕಂಟಕ ನಿವಾರಣೆಯ ಸಂತಸವಿತ್ತು. ಮೀಚಂ ‘ಎಲ್ಲಾದರೂ ಹೆಚ್ಚು ಕಡಿಮೆಯಾದರೆ ಏನಾಗ್ತಿತ್ತು ಸರ್?’ ಎಂದು ಆತಂಕ ವ್ಯಕ್ತಪಡಿಸಿದರು. ‘ಮತ್ತೇನಿಲ್ಲ. ಸುದ್ದಿ ಬಿಡುಗಡೆಯಲ್ಲಿ ಫ್ರಂಟ್ ಪೇಜಲ್ಲಿ ನ್ಯೂಸ್ ಬರ್ತಿತ್ತು’ ಎಂದೆ. ನನ್ನ ಜೋಕು ಯಾರನ್ನೂ ನಗಿಸಲಿಲ್ಲ!
ಬಿಲದ್ವಾರದ ಮೇಲುಗಡೆ ಲ್ಯಾಟರೈಟ್ ಬಂಡೆಗೆ ಹಾವೊಂದು ಆತುಕೊಂಡು ಇವರು ನನ್ನನ್ನು ಓಡಿಸಿ ಬಿಡುತ್ತಾರೇನೋ ಎಂದು ಪಿಳಿ ಪಿಳಿ ಕಣ್ಣು ಬಿಟ್ಟು ನಮ್ಮನ್ನು ನೋಡುತ್ತಿತ್ತು. ಅಲ್ಲಿದ್ದ ಬಾವಿಗಳಲ್ಲಿ ಒಂದಕ್ಕಿಳಿದು ಸಲೀಸಾಗಿ ಮೇಲಕ್ಕೆ ಬಂದ ಮೀಚಂ ತಮಗೆ ಪ್ರಾಯವಾದರೂ ಕಸುವು ಬತ್ತಿಲ್ಲ ವೆಂಬುದನ್ನು ಸಾಬೀತು ಪಡಿಸಿದರು. ಆಮೇಲೆಂದರು ‘ನೀವು ತೆವಳುತ್ತಾ ಬರುವಾಗ ಬಲಕ್ಕೆರಡು ಬಿಲದ್ವಾರಗಳು ಸಿಕ್ಕುವಲ್ಲಾ ಸರ್’ ಅಲ್ಲೆರಡು ಬಾವಿಗಳಿವೆಯೆಂದು ಹೇಳುವುದನ್ನು ಕೇಳಿದ್ದೇನೆ. ಎರಡರ ಆಳವನ್ನೂ ಕಂಡವರಿಲ್ಲ. ಅವುಗಳಲ್ಲಿ ಒಂದರಲ್ಲಿ ಸುರಂಗಮಾರ್ಗವೊಂದಿದ್ದು ಅದು ಬಂದಡ್ಕಕ್ಕೆ ಒಯ್ಯುತ್ತದಂತೆ.’
‘ಇರಲೂಬಹುದು. ನೀವಂದದ್ದು ನಿಜವಾದರೆ ಮಂಡೆಕೋಲಿನಿಂದ ಬಂದಡ್ಕಕ್ಕೆ ಹೋಗಿ ಬರಲು ರೈತ ಬಂಡಾಯಗಾರರು ಈ ಸುರಂಗ ಮಾರ್ಗವನ್ನು ಬಳಸುತ್ತಿದ್ದರೇನೊ? ಆದರೆ ನೋಡಿ, ನನಗೆ ಎಂಟು ಮೀಟರ್ ತೆವಳಲಿಕ್ಕೇ ಜೀವಕ್ಕೆ ಬಂತು. ಅವರು ಅಷ್ಟು ದೂರ ತೆವಳಬೇಕಾದರೆ ಸ್ವಾತಂತ್ರ್ಯದ ಮೌಲ್ಯವೆಷ್ಟು ಎಂದು ತಿಳಿಯುತ್ತದೆ. ಅನುಭಾವಿಯೊಬ್ಬ ಹೇಳಿದ ಸ್ವಾತಂತ್ರ್ಯವೆಂಬುದು ದೇವರಿಗಿಂತಲೂ ದೊಡ್ಡ ಮೌಲ್ಯಎಂಬ ಮಾತು ನೆನಪಾಗುತ್ತಿದೆ.’
ನಮ್ಮ ಉದ್ದೇಶ ಈಡೇರಿತ್ತು. ಹೆಮ್ಮೆಯಿಂದ ಬೀಗುತ್ತಾ ನಾವು ಮೀಚಂ ಮನೆಗೆ ಬಂದೆವು. ಅಲ್ಲಿ ನಾನು ಸ್ನಾನ ಮಾಡಿ ಬಟ್ಟೆ ಬದಲಾಯಿಸಿಕೊಂಡೆ. ತಂಪು ಶರಬತ್ತು ಕುಡಿದು ಎಲ್ಲರಿಗೂ ವಿದಾಯ ಹೇಳಿ ವೆಸ್ಪಾ ಹತ್ತಿದೆ.
ಹಾದಿಯಲ್ಲಿ ಮಧುರಾಳ ಮನೆ ಸಿಗುತ್ತದೆ. ಶ್ರೀಮಂತರ ಮನೆಯ ಹುಡುಗಿ. ಅಪಾರ ಆಸ್ತಿಗೆ ಒಬ್ಬಳೇ ವಾರೀಸುದಾರಳು. ಅಪ್ಪ ಮೇಸ್ಟ್ರು. ಪಿಯೂಸಿ ಓದುತ್ತಿದ್ದವಳು ಏನು ಸಮಸ್ಯೆ ಬಂದರೂ ನನಗೆ ಕರೆ ಮಾಡಿ ಪರಿಹಾರ ಕೇಳುತ್ತಿದ್ದಳು. ಅವಳು ಹಿಂದಿನ ದಿನ ‘ಗುಹೆಗೆ ನುಗ್ಗಿ ಬನ್ನಿ ಸರ್. ಊಟ ನಮ್ಮಲ್ಲಿ’ ಎಂದಿದ್ದಳು.
ಅಜ್ಜಿ, ಅಮ್ಮ, ಮಧುರಾ ಮೂರು ತಲೆಮಾರುಗಳ ಎದುರು ಕೂತು ಭರ್ಜರಿ ಯಾಗಿ ಉಂಡೆ. ‘ಹೇಗಿದೆ ಸರ್ ನಮ್ಮೂರ ಬಾಂಜಾರ?’ ಎಂದವಳು ಕೇಳಿದಾಗ ನಾನು ಸುರಂಗದಲ್ಲಿ ಸಿಲುಕಿಕೊಂಡುದನ್ನು ಹೇಳಿದೆ.
ಕೈ, ಎದೆವಿಪರೀತ ನೋಯುತ್ತಿತ್ತು. ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಧುರಾ ಒಳ್ಳೆಯ ಚಹಾ, ಒಂದಷ್ಟು ಬಾಳೆಹಣ್ಣು ಕೊಟ್ಟಳು. ‘ಹೇಗೋ ಸುರಂಗದಿಂದ ಪಾರಾದೆ. ನೀನು ಅನ್‌ಲಕ್ಕಿ ಮಧೂ. ನಿನಗೆ ನಾಳೆ ರಜೆ ಸಿಗುವುದು ತಪ್ಪಿ ಹೋಯಿತು.’
ಗುರುಗಳ ಇಂತಹ ಮಾತಿಗೆ ಎಂತಹ ಉತ್ತರ ಕೊಟ್ಟಾಳು ಅವಳು!
ಮನೆಹಾದಿ ಹಿಡಿದಾಗ ಫ್ರಾನ್ಸಿನಲ್ಲಿ ನಾನು ನೋಡಿದ್ದ ಗುಹೆಯೊಂದರ ನೆನಪಾಯ್ತು. ಅದು ಕ್ರಿ. ಪೂ. 2000ವರ್ಷಗಳ ಹಿಂದಿನ ಗುಹೆ. ಅದಕ್ಕೆ ಇಳಿಯಲು ಪಾವಟಿಗೆಗಳಿದ್ದವು. ಒಳಗೆ ವಿದ್ಯುತ್ತು ದೀಪ ಮತ್ತು ಬೀಸಣಿಗೆಗಳಿದ್ದವು. ಅಲ್ಲಿ ಇತಿಹಾಸ ಪೂರ್ವ ಯುಗದ ಪಳೆಯುಳಿಕೆಗಳನ್ನು ಒಂದಿಷ್ಟೂ ಕೆಡದಂತೆ ಸಂರಕಿಸಿಕೊಂಡು ಬರಲೊಂದು ಖಾಸಗಿ ವ್ಯವಸ್ಥೆ ಯಿದೆ. ವಿವರಣೆಗೊಬ್ಬ ವ್ಯಕ್ತಿ ಇದ್ದಾನೆ. ಪ್ರವೇಶದರ ಸುಮಾರು ಐವತ್ತು ರೂಪಾಯಿಗಳು. ಎಲ್ಲಾ ಖರ್ಚು ಕಳೆದು, ಸರ್ಕಾರಕ್ಕೆ ತೆರಿಗೆ ನೀಡಿದ ಬಳಿಕವೂ ತಿಂಗಳಿಗೆ ಸುಮಾರು ಐದು ಲಕದಷ್ಟು ಉಳಿತಾಯವಾಗುತ್ತದೆಂದು ಅಲ್ಲಿನ ವಿವರಣೆಕಾರ ಹೇಳಿದ!
ಮೀನಗದ್ದೆಯ ಬಾಂಜಾರಕ್ಕೆ 1837ರ ರೈತ ಬಂಡಾಯದ ಸಂಬಂಧವಿದೆ. ಅದನ್ನೊಂದು ಅದುಪತ ಪ್ರವಾಸಿ ತಾಣವಾಗಿ ಮಾಡಿ ಇತಿಹಾಸವನ್ನು ಸಂರಕಿಸಲು ಸಾಧ್ಯವಿದೆ. ಮನಸ್ಸು ಮಾಡಿದರೆ ಮಂಡೆಕೋಲು ಪಂಚಾಯತಿಗೆ ಒಂದಷ್ಟು ಆದಾಯವೂ ಬರಲಿದೆ.
****