ನಡುರಾತ್ರಿಯ ಹನ್ನೊಂದೂವರೆ. ಮುಂಬಯಿಯ ಸಹಾರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಗಲೇನು ರಾತ್ರಿಯೇನು ಎಲ್ಲವೂ ಒಂದೇ. ಇನ್ನು ನಲುವತ್ತು ನಿಮಿಷಗಳಲ್ಲಿ ನಾನು, ಗುರು, ಅನಿತಾ, ಎಲೈನ್ ಮತ್ತು ಹೆಬ್ಬಾರ್ ಏರ್ ಫ್ರಾನ್ಸ್ ವಿಮಾನದ ಗರ್ಭದಲ್ಲಿರುತ್ತೇವೆ. ಪ್ರಥಮ ವಿದೇಶ ಪ್ರಯಾಣದ ಆತಂಕ. ವಿಮಾನ ಏರುವ ಮೊದಲು ಮನೆಗೊಮ್ಮೆ ಫೋನ್ ಮಾಡೋಣವೆಂದು ಪಕ್ಕದಲ್ಲೇ ಇದ್ದ ಬೂತಿಗೆ ಹೋದೆ. ಗಾಢ ನಿದ್ದೆಯಲ್ಲಿದ್ದ ಶೈಲಿ ಫೋನೆತ್ತಿದಾಗ ಮಾತುಗಳೆಲ್ಲಾ ಎಲ್ಲೋ ಆಳ ಗಂಟಲಲ್ಲಿ ಹುದುಗಿಹೋಗಿದ್ದವು. ಅಪ್ಪ ಯಾಕೆ ಹೋಗುವುದು ಎಂಬ ಪ್ರಶ್ನೆಯನ್ನು ಕೇಳಿ ಕೇಳಿ ಸುಸ್ತಾದ ಪುಟ್ಟಿ, ಅಪ್ಪ ವಿದೇಶದಿಂದಲಾದರೂ ಒಂದು ವಾಚು ತಂದಾರೆಂದು ಕಾದಿರುವ ಪೃಥ್ವಿ, ಕಾಣದ ಊರಿನಲ್ಲಿ ಅದೇನೇನು ಕಾದಿರುತ್ತವೆಯೋ ಎಂಬ ಆತಂಕದಲ್ಲಿರುವ ಶೈಲಿ ಮೂರು ಮುಖಗಳು ಕಣ್ಣ ಮುಂದೆ ಸುಳಿದವು. ಮತ್ತೆ ಮರಳಿ ಈ ಮುಖಗಳನ್ನು ನೋಡಲಾಗುತ್ತದೆಯೋ ಇಲ್ಲವೋ ಎಂಬ ನನ್ನ ಮನದ ಮೂಲೆಯಿಂದೆಲ್ಲೋ ಮೊಳಕೆಯೊಡೆದ ಸಂದೇಹ. ಇವುಗಳಿಂದಾಗಿ ಹೇಳಲು ಸಾಧ್ಯವಾದುದು ‘ಹೋಗಿ ಬರುತ್ತೇನೆ’ ಎಂದು ಮಾತ್ರ. ಇದೇ ಮಾತನ್ನು ಸುಳ್ಯದಿಂದ ಹೊರಡುವಾಗಲೇ ಹೇಳಿಯಾಗಿತ್ತು. ಮತ್ತೆ ಅದೇ ಮಾತು ಶೈಲಿ ಹೇಳಿದ್ದು ಶುಭ ಪ್ರಯಾಣವೆಂದೇ ಅಥವಾ ಶುಭ ವಿದಾಯವೆಂದೇ? ವಿದಾಯ ಇಷ್ಟೊಂದು ಯಾತನಾಪೂರ್ಣವಾಗುತ್ತಿರುವುದಾದರೂ ಯಾಕೆ? ಬರಲಾಗದಿದ್ದರೆ ಎಂಬ ಅಂಜಿಕೆಯಿಂದಲೆ? ಎಂಬೆಲ್ಲಾ ಯೋಚನೆಗಳೊಂದಿಗೆ ಪ್ರಯಾಣದ ವಿಧಿ ವಿಧಾನಗಳನ್ನು ಪೂರೈಸಿ, ರಕ್ಷಣಾವಲಯವನ್ನು ದಾಟಿ, ಏರ್‌ಫ್ರಾನ್ಸ್‌ನ ಒಳಹೊಕ್ಕು, ಸೀಟಲ್ಲಿ ಕೂತು, ಬೆಲ್ಟ್ ಭದ್ರಪಡಿಸಿಕೊಂಡೆ. ಆಕಾಶದ ನಿಗೂಢ ಕತ್ತಲನ್ನು ಸೀಳಿ ವಿಮಾನ ಮೇಲೆ ಜಿಗಿದು ಮುಂದಕ್ಕೋಡುತ್ತಿದ್ದಂತೆ, ಹಿಂದಕ್ಕೆ ಒರಗಿ ಕಣ್ಮುಚ್ಚಿಕೊಂಡೆ. ಈಗ ಕಣ್ಣೆದುರು ಕಳೆದ ದಿನಗಳ ಘಟನಾವಳಿಗಳು ಬಿಚ್ಚಿಕೊಳ್ಳತೊಡಗಿದವು.
ಶುಭನುಡಿಯೇ
ಭಾರತ ಒಂದು ಹಿಂದುಳಿದ ದೇಶ ಎಂದು ತರಗತಿಗಳಲ್ಲಿ ಪಾಠ ಮಾಡುವ ನನಗೆ, ಮುಂದುವರಿದ ದೇಶವೊಂದನ್ನು ಕಾಣುವ ಹಂಬಲ ಹಲವು ವರ್ಷಗಳದ್ದು. ಆದರೆ ತಿಂಗಳ ಸಂಬಳವನ್ನೇ ನೆಚ್ಚಿ ದಿನದೂಡಬೇಕಾದ ನನ್ನಂತಹ ಬಡಪಾಯಿ ಅಧ್ಯಾಪಕನೊಬ್ಬನಿಗೆ ವಿದೇಶ ಪ್ರವಾಸವೆಂದರೆ ಅದೊಂದು ವಿಲಾಸೀ ಕನಸು. ಸರಿಯಾದ ಒಂದು ಮನೆಯನ್ನು ಕೂಡಾ ಕಟ್ಟಿಕೊಳ್ಳಲಾಗದವನಿಗೆ ಗಗನ ಹಾರುವ ಹುಚ್ಚು! ನನ್ನ ಮಿತ್ರ ದಾಮ್ಮೆಯವರು ಅಮೇರಿಕಾದ ಲಾಂಗ್ ಐಲೆಂಡ್ ಪ್ರದೇಶಕ್ಕೆ, ಇನ್ನೊಬ್ಬ ಮಿತ್ರ ಬಿಳಿಮಲೆ ಜಪಾನಿನ ಕೆಲವು ನಗರಗಳಿಗೆ ಹೋಗಿ ಬಂದವರು, ನನ್ನ ಹುಚ್ಚಿಗೆ ರೆಕ್ಕೆ ಮೂಡಿಸಿದ್ದರು. ನಮ್ಮ ದೇಶದಲ್ಲಿ ಕೆಲವು ಉದ್ಯೋಗಿಗಳಿಗೆ, ಕಡಿಮೆ ಖರ್ಚಿನಲ್ಲಿ ದೇಶೀಯ ಪ್ರವಾಸ ಮಾಡುವ ಎಲ್.ಟಿ.ಸಿ. ಸೌಲಭ್ಯವಿದೆ. ಯಾರಿಗೆ ಅದು ಅತ್ಯಂತ ಪ್ರಯೋಜನದಾಯಕವೋ ಅಂಥ ಅಧ್ಯಾಪಕ ವೃಂದಕ್ಕೆ ಈ ಸೌಲಭ್ಯವಿಲ್ಲ! ಆದುದರಿಂದ ದೇಶ ಸುತ್ತದೆ, ಕೋಶ ಮಾತ್ರ ಓದಿ ದೇಶ ವಿದೇಶಗಳ ಬಗ್ಗೆ ತರಗತಿಗಳಲ್ಲಿ ಪಾಠ ಹೇಳಬೇಕಾದ ಅನಿವಾರ್ಯತೆ ನನ್ನಂತಹ ಅಧ್ಯಾಪಕರುಗಳ ಪಾಲಿಗೆ! ಆದರೂ ಕನಸು ಕಾಣಲು ಯಾವ ದೊಣೆ ನಾಯಕನ ಅಪ್ಪಣೆ ಕೇಳಬೇಕು?
ವಿಶ್ವ ರೋಟರಿ ಸಂಸ್ಥೆ ಹಲವಾರು ವರ್ಷಗಳಿಂದ ಸಮೂಹ ಅಧ್ಯಯನ ವಿನಿಮಯ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಈ ಕಾರ್ಯಕ್ರಮದನ್ವಯ ರೋಟರಿ ಜಿಲ್ಲೆಯೊಂದರಿಂದ, ವಿದೇಶವೊಂದರ ನಿಗದಿತ ರೋಟರಿ ಜಿಲ್ಲೆಯೊಂದಕ್ಕೆ, ಸಮಾಜದ ವಿವಿಧ ಕೇತ್ರಗಳಿಂದ ಆಯ್ದ ಐವರ ತಂಡವೊಂದನ್ನು ಕಳುಹಿಸಿಕೊಡಲಾಗುತ್ತದೆ. ತಂಡದ ನಾಯಕ ರೋಟರಿ ಸದಸ್ಯನಾಗಿರಬೇಕು. ಉಳಿದ ನಾಲ್ವರು ರೋಟರಿ ಬಳಗಕ್ಕೆ ಸೇರಿದವರಾಗಿರಕೂಡದು. ಇದು ಕಟ್ಟುನಿಟ್ಟಿನ ಕ್ರಮ.
ನಾನು ರೋಟರಿ ಜಿಲ್ಲೆ 318ಂರ ವ್ಯಾಪ್ತಿಗೆ ಒಳಪಡುವವ. ಇದರಲ್ಲಿ ಮೈಸೂರು, ಕೊಡಗು, ದಕಿಣ ಕನ್ನಡ, ಉಡುಪಿ, ಶಿವಮೊಗ್ಗೆ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳು ಒಳಗೊಳ್ಳುತ್ತವೆ. ಈ ಏಳು ಜಿಲ್ಲೆಗಳಲ್ಲಿ 79 ರೋಟರಿ ಕ್ಲಬ್ಬುಗಳಿವೆ. ಪ್ರತಿಯೊಂದು ಕ್ಲಬ್ಬು ತನ್ನ ವ್ಯಾಪ್ತಿಯಲ್ಲಿರುವ ಪ್ರತಿಭಾ ಸಂಪನನರಲ್ಲಿ ಒಬ್ಬರನ್ನು ಆರಿಸಿ ಜಿಲ್ಲಾ ಸಮಿತಿಗೆ ಕಳುಹಿಸುತ್ತದೆ. ಜಿಲ್ಲಾ ಸಮಿತಿಯು ವೃತ್ತಿ, ಸಾಧನೆ, ಜ್ಞಾನ ಇತ್ಯಾದಿಗಳನ್ನು ಪರಿಗಣಿಸಿ ಐವರನ್ನು ಆಯ್ಕೆಮಾಡುತ್ತದೆ. ತಂಡಕ್ಕೆ ಆಯ್ಕೆಯಾದವರಿಗೆ ಏನಾದರೂ ಸಮಸ್ಯೆಯಿಂದಾಗಿ ವಿದೇಶಕ್ಕೆ ಹೋಗಲಾಗದಿದ್ದರೆ….. ಎಂಬ ಮುನ್ನೆಚ್ಚರಿಕೆಯಿಂದ ಒಬ್ಬ ಬದಲಿ ನಾಯಕನ್ನೂ, ಇಬ್ಬರು ಬದಲಿ ಸದಸ್ಯರನ್ನೂ ಆಯ್ಕೆ ಮಾಡಲಾಗುತ್ತದೆ. ಸಮೂಹ ಅಧ್ಯಯನದ ಅವಧಿ ಒಂದು ತಿಂಗಳು. ನಿಗದಿತ ರೋಟರಿ ಜಿಲ್ಲೆಯ ಸದಸ್ಯರು, ಅಧ್ಯಯನ ತಂಡದ ಒಂದು ತಿಂಗಳ ಊಟೋಪಚಾರದ ವ್ಯವಸ್ಥೆ ನೋಡಿಕೊಳ್ಳುತ್ತಾರೆ. ತಂಡದ ವಿಮಾನ ಪ್ರಯಾಣ ವೆಚ್ಚವನ್ನು ವಿಶ್ವ ರೋಟರಿ ಸಂಸ್ಥೆ ಭರಿಸುತ್ತದೆ.
ಇದೊಂದು ವಿಶಿಷ್ಟ ಕಾರ್ಯಕ್ರಮ. ಹಣವುಳ್ಳವರು ಯಾವುದೇ ದೇಶಕ್ಕೆ ಹೋಗಬಹುದು. ಪಂಚತಾರಾ ಹೋಟೇಲುಗಳಲ್ಲಿ ಸುಖವುಣ್ಣಬಹುದು. ಆದರೆ ವಿದೇಶೀಯರ ಮನೆಗಳಲ್ಲಿ ಉಳಕೊಂಡು ಅವರ ಸಂಸ್ಕೃತಿಯ ನೈಜ ಪರಿಚಯ ಮಾಡಿಕೊಳ್ಳಲು ಇಂತಹ ಕಾರ್ಯಕ್ರಮದಲ್ಲಿ ಮಾತ್ರ ಅವಕಾಶ. ಅದಕ್ಕೆಂದೇ ಈ ಕಾರ್ಯಕ್ರಮದನ್ವಯ ವಿದೇಶಕ್ಕೆ ಹೋಗಲು ಬಯಸುವ, ವಿವಿಧ ಕೇತ್ರಗಳ ಪ್ರತಿಭಾವಂತರ ಸಂಖ್ಯೆ ಪ್ರತಿವರ್ಷ ಏರುತ್ತಲೇ ಹೋಗುತ್ತದೆ. ಆದುದರಿಂದ ಆಯ್ಕೆ ಸಮಿತಿಯದ್ದು ಕತ್ತಿಯಲಗಿನ ನಡಿಗೆಯಂತಹ ನಾಜೂಕಿನ ಕೆಲಸ. ಭಾರತದ ಸಂಸ್ಕೃತಿಯನ್ನು ಅನ್ಯರಿಗೆ ಸರಿಯಾಗಿ ಮನದಟ್ಟುಮಾಡಬಲ್ಲ ಸಮರ್ಥರ ಆಯ್ಕೆ ಇಂದಿನ ಸಂದರ್ರಭದಲ್ಲಿ ಅಷ್ಟು ಸುಲಭದ ಮಾತಲ್ಲ.
ಈ ಬಾರಿ ನಮ್ಮ ರೋಟರಿ ಜಿಲ್ಲೆ 318ಂರಿಂದ ಅಧ್ಯಯನ ತಂಡ ಹೋಗಬೇಕಾಗಿದ್ದುದು ಫ್ರಾನ್ಸಿನ ರೋಟರಿ ಜಿಲ್ಲೆ 1700ಕ್ಕೆ. ಇದು ದಕಿಣ ಫ್ರಾನ್ಸ್‌ನ ಪಿರನೀಸ್ ಮತ್ತು ಲ್ಯಾಂಗ್‌ಡಕ್ ಕೌಸಿಲನ್ ಪ್ರಾಂತ್ಯಗಳನ್ನೊಳಗೊಂಡ ಜಿಲ್ಲೆ. ಒಂದೆಡೆ ಸುಂದರವಾದ ಮೆಡಿಟರೇನಿಯನ್ ಸಮುದ್ರ, ಇನ್ನೊಂದೆಡೆ ಸಾಹಸಿಗಳಿಗೆ ಸದಾ ಸವಾಲೆಸೆಯುತ್ತಲೇ ಇರುವ ಹಿಮಚ್ಢಾದಿತ ಪಿರನಿ ಪರ್ವತ ಶ್ರೇಣಿ. ಮೇಲಾಗಿ ಅಲ್ಲಿಗೆ ಹೋಗಲಿಕ್ಕಿದ್ದುದು ಅತ್ಯಂತ ಆಹ್ಲಾದಕರವಾದ ಶಿಶಿರ ಋತುವಿನಲ್ಲಿ. ಯಾರಿಗುಂಟು, ಯಾರಿಗಿಲ್ಲ.
ಪುಟ್ಟ ದೇಶ ಫ್ರಾನ್ಸ್ ಬಗ್ಗೆ ಎಂದಿನಿಂದಲೂ ನನಗೆ ಎಲ್ಲಿಲ್ಲದ ಆಸಕ್ತಿ. ಅದಕ್ಕೆ ಮುಖ್ಯ ಕಾರಣಗಳು ಎರಡು. ಪ್ರಭುತ್ವವು ಶೋಷಕ ಶಕ್ತಿಯಾಗಿ ಪರಿವರ್ತನೆಗೊಂಡಾಗ, ರಕ್ತಕ್ರಾಂತಿಯ ಮೂಲಕ ರಾಜನು ಪ್ರತ್ಯಕ್ಷ ದೇವನಲ್ಲ ಎನ್ನುವುದನ್ನು ತೋರಿಸಿಕೊಟ್ಟ ದೇಶ ಇದು. ಸ್ವಪ್ರಯತ್ನದಿಂದ ಶ್ರೀ ಸಾಮಾನ್ಯ ಕುಳ್ಳನೊಬ್ಬ ಎಷ್ಟು ಎತ್ತರಕ್ಕೆ ಏರಬಲ್ಲನೆನ್ನುವುದನ್ನು ಸಾಧಿಸಿ ತೋರಿಸಿದ ಚಕ್ರವರ್ತಿ ನೆಪೋಲಿಯನ್ನನ ನಾಡಿದು. ವೈಭೋಗಕ್ಕೆ ಇನ್ನೊಂದು ಹೆಸರಾಗಿದ್ದ ವೆರ್ಸೈಲ್ಸ್ ಅರಮನೆ, ಇಂಜಿನಿಯರಿಂಗ್ ವಿಸ್ಮಯದ ಐಫೆಲ್ ಗೋಪುರ, ವಿಶ್ವವಿಖ್ಯಾತ ಮೊನಾಲೀಸಾಳ ಚಿತ್ರವಿರುವ ಲೂವ್ರ್, ರಕ್ತರಂಜಿತ ಇತಿಹಾಸಕ್ಕೆ ಸಾಕ್ಷಿಯಾದ ಸೀನ್ ನದಿ…. ಒಂದೇ, ಎರಡೇ ಇಲ್ಲಿ ನೋಡಬೇಕಾದುದು. ಆಧುನಿಕ ಅರ್ಥಶಾಸ್ತ್ರಕ್ಕೆ ಅಡಿಗಲ್ಲು ಹಾಕಿದ. ಬ್ರಿಟನ್ನಿನ ಆಡಂಸ್ಮಿತ್ತನ ಚಿಂತನೆಗೆ ಮೂಲಸೆಲೆಯಾಗಿದ್ದ, ಕೃಷಿ ಪಂಥೀಯ ಫ್ರಾಂಸೇ ಕ್ವನೆ ಫ್ರಾನ್ಸಿನವ. ಪೂರೈಕೆಯು ತನ್ನ ಬೇಡಿಕೆಯನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ. ಎಂಬ ಮಾರುಕಟ್ಟೆ ತತ್ವದ ಮೂಲಕ, ಸರಕಾರಗಳು ಆರ್ಥಿಕವಾಗಿ ತಟಸ್ಥವಾಗಿರಬೇಕೆಂದು ಸಾರಿ, ಉದಾರವಾದಕ್ಕೆ ತಾತ್ವಿಕ ನೆಲೆಗಟ್ಟನ್ನು ಒದಗಿಸಿದ ಜುವಾನ್ ಬ್ಯಾಪ್ಟಿಸ್ಟ್ ಸೇ, ಗಣಿತ ಪರೀಕ್ಷೆಯಲ್ಲಿ ಅನುತ್ತೀರ್ಣಾಗಿಯೂ, ಲೋಕವಿಖ್ಯಾತ ಗಣತೀಯ ಅರ್ಥಶಾಸ್ತ್ರಜ್ಞನ್ನೆಸಿದ ಲ್ಯೋನ್ ವಾಲ್ರಾ, ಸಮಾಜಶಾಸ್ತ್ರದ ಪಿತನ್ನೆಿಸಿದ ಯುಗುಸ್ತ್ ಕೋಂತ್ ಎಲ್ಲರೂ ಫ್ರೆಂಚರೇ. ವಿಶ್ವ ಶಾಂತಿಯ ಹರಿಕಾರ ಚಾರ್ಲ್ಸ್ ಡಿ’ಗಾಲ್, ಫುಟ್‌ಬಾಲ್ ಮಾಂತ್ರಿಕ ಪ್ಲಾಟಿನಿ, ಟೆನಿಸ್ ಪ್ರತಿಭೆ ಯಾನಿಕ್ ನೋವಾ, ಗೈಫರ್ಜೆ, ಮೇರಿ ಪಿಯರ್ಸ್, ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಓಟದ ಡಬಲ್ ಸ್ವರ್ಣ ಪದಕ ಗೆದ್ದ ಕೃಷ್ಣ ಸುಂದರಿ ಮೇರಿ ಜೋ ಹೀಗೆ ಫ್ರಾನ್ಸಿನ ಬಗೆಗಿನ ನನ್ನ ಕುತೂಹಲಕ್ಕೆ ಹಲವು ಮುಖಗಳು. ಈಗ ಫ್ರಾನ್ಸಿಗೆ ಹೋಗಲು ಅಧ್ಯಯನ ತಂಡದ ಆಯ್ಕೆಯಾಗುತ್ತಿದೆ. ಆದದ್ದಾಗುತ್ತದೆ ಎಂದು ಅರ್ಜಿ ಗುಜರಾಯಿಸಿದೆ.
ಜಿಲ್ಲಾ ರೋಟರಿ ಗವರ್ನರ್, ಡಾ|| ನಾರಾಯಣರ ಊರಾದ ಶಿವಮೊಗ್ಗೆಯಲ್ಲಿ ಅಂತಿಮ ಸಂದರ್ಶನ ನಡೆಯಿತು. ಐವತ್ತಕ್ಕೂ ಮಿಕ್ಕ ಅಭ್ಯರ್ಥಿಗಳಲ್ಲಿ ಎರಡನೆಯ ಹಂತಕ್ಕೆ ಕೇವಲ ಎಂಟು ಮಂದಿಯನ್ನು ಉಳಿಸಿಕೊಳ್ಳಲಾಯಿತು. ಈ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದ ಎಂಟು ಮಂದಿಯಲ್ಲಿ ಒಬ್ಬ ನಾನು. ಅಂತಿಮವಾಗಿ ಎಲ್ಲರಲ್ಲೂ ಕಾಶ್ಮೀರ ಸಮಸ್ಯೆಯನ್ನು ನೀವು ಹೇಗೆ ಪರಿಹರಿಸುತ್ತೀರಿ ಎಂಬ ಪ್ರಶ್ನೆ ಕೇಳಲಾಯಿತು. ಎಲ್ಲರದ್ದೂ ಅದಕ್ಕೆ ಅಸಂಬದ್ಧ ಉತ್ತರಗಳೇ. ಕೊನೆಗೆ ಫಲಿತಾಂಶ ಫೋಷಿಸಲಾಯಿತು. ತಂಡದ ನಾಯಕರಾಗಿ ಕುಂದಾಪುರದ ವಕೀಲ ಎ.ಎಸ್.ಎನ್. ಹೆಬ್ಬಾರ್ ಮೊದಲೇ ಆಯ್ಕೆಯಾಗಿದ್ದರು. ಅಧ್ಯಾಪಕರ ಕೋಟಾದಿಂದ ಕುವೆಂಪು ವಿಶ್ವವಿದ್ಯಾಲಯದ ಆಂಗ್ಲಭಾಷಾ ಅಧ್ಯಾಪಕ ಡಾ|| ರಾಜೇಂದ್ರ ಚೆನ್ನಿ, ಮಹಿಳಾ ಕೋಟಾದಿಂದ ಮಂಗಳೂರಿನ ಸ್ವಯಂಸೇವಾ ಸಂಘಟನೆ ಶುಭದಾದ ಎಲೈನ್ ಗ್ರೇಸ್ ಫೆರ್ನಾಂಡೀಸ್ ಮತ್ತು ಮಂಗಳ ಗಂಗೋತ್ರಿಯ ಸಮಾಜಶಾಸ್ತ್ರಜ್ಞೆ ಡಾ||ಅನಿತಾ ರವಿಶಂಕರ್, ಹಾಗೂ ಇತರ ವೃತ್ತಿಗಳ ಕೋಟಾದಿಂದ ಮೈಸೂರಿನ ಪ್ರವಾಸೋದ್ಯಮಿ ಗುರುಪ್ರಸಾದ್ ಆಯ್ಕೆಯಾಗಿದ್ದರು. ನಾನು ಪ್ರಥಮ ಮತ್ತು ಚಿಕ್ಕಮಗಳೂರಿನ ದಿನೇಶ ಪಿಜತ್ತಾಯ ದ್ವಿತೀಯ ಮೀಸಲು ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದೆವು.
ಫಲಿತಾಂಶ ಕೇಳಿ ನನ್ನ ಆತ್ಮವಿಶ್ವಾಸವೇ ಉಡುಗಿಬಿಟ್ಟಿತು. ಕಳೆದ ಬಾರಿ ವರ್ಜೀನಿಯಾಕ್ಕೆ, ನಮ್ಮ ಜಿಲ್ಲೆಯಿಂದ ಸಮೂಹ ಅಧ್ಯಯನಕ್ಕೆ ಹೋಗಿದ್ದ ತಂಡದಲ್ಲಿ ಅಧ್ಯಾಪಕರ ಕೋಟಾದಿಂದ ಆಯ್ಕೆಯಾಗಿದ್ದವರು, ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರೊಬ್ಬರು. ನಾನು ಕಳೆದ ಬಾರಿಯೂ ಸಂದರ್ಶನಕ್ಕೆ ಹಾಜರಾಗಿದ್ದೆ. ಈ ಬಾರಿ ಸಂದರ್ಶನ ಪೂರ್ವದಲ್ಲಿ, ಆಯ್ಕೆ ಸಮಿತಿಯ ಹಿರಿಯ ಸದಸ್ಯರೊಬ್ಬರು ನಾವು ಇಂಗ್ಲೀಷ್ ಚೆನ್ನಾಗಿ ಬರುತ್ತದೆ ಎಂಬ ಕಾರಣಕ್ಕಾಗಿ ಆಯ್ಕೆ ಮಾಡುವುದು ತಪ್ಪು. ವಿದೇಶಗಳಿಗೆ ಸಾಂಸ್ಕೃತಿಕ ರಾಯಭಾರಿಗಳಾಗಿ ಹೋಗುವವರಿಗೆ ಹಾಡು ಮತ್ತು ಕುಣಿತ ಬರಬೇಕು. ನಮ್ಮ ಸಾಂಸ್ಕೃತಿಕ ಪ್ರಕಾರಗಳ ವಿವರಣೆ ನೀಡಲು ಸಾಧ್ಯವಾಗಬೇಕು. ನಮ್ಮ ಇಂಗ್ಲೀಷ್ ಅಲ್ಲಿ ಯಾರಿಗೂ ಬೇಡ ಎಂದಿದ್ದರು. ಆದರೆ ಈ ಬಾರಿಯೂ ವಿಶ್ವವಿದ್ಯಾಲಯವೊಂದರ ಆಂಗ್ಲಭಾಷಾ ಪ್ರಾಧ್ಯಾಪಕರು ಆಯ್ಕೆಯಾಗಿದ್ದರು. ವಿಶ್ವವಿದ್ಯಾಲಯಗಳ ಅಧ್ಯಾಪಕರು ಎಂಬ ಕಾರಣಕ್ಕಾಗಿಯೇ ಅವಕಾಶ ಸಿಗುವುದಾದರೆ, ಮಲೆನಾಡ ಹಿಂದುಳಿದ ಪ್ರದೇಶದ ಕಾಲೇಜುಗಳಿಂದ ಬರುವ ನನ್ನಂಥವನಿಗೆ ಅವಕಾಶ ಎಲ್ಲಿ ಸಿಗಲು ಸಾಧ್ಯ? ನನ್ನ ನಿರಾಶೆಯನ್ನು ಗಮನಿಸಿದ ಅದೇ ಹಿರಿಯ ಸದಸ್ಯರು ನಿರಾಶೆ ಬೇಡ. ಅವರಿಗೆ ಫ್ರೆಂಚ್ ಭಾಷೆ ಬರುತ್ತದೆ. ಫ್ರಾನ್ಸಿನಲ್ಲಿ ಬದುಕಲು ಫ್ರೆಂಚ್ ಬೇಕೇ ಬೇಕು. ನೀನೀಗ ಪ್ರಥಮ ಮೀಸಲಿಗ. ಇವರಲ್ಲಿ ಯಾರಿಗಾದರೂ ಏನಾದರೂ ತೊಂದರೆಯಾದರೆ ನಿನಗೆ ಈ ವರ್ಷವೇ ಅವಕಾಶವಿರುತ್ತದೆ. ನಿಜವಾಗಿ ಸಾಂಸ್ಕೃತಿಕ ವಿನಿಮಯ ತಂಡದಲ್ಲಿ ಇರಬೇಕಾದದ್ದು ನಿನ್ನಂತಹ ಕಲಾವಿದರೇ. ಮುಂದಿನ ವರ್ಷ ಖಂಡಿತವಾಗಿ ನಿನಗೆ ಅವಕಾಶವಿರುತ್ತದೆ ಎಂದು ಬೆನ್ನು ತಟ್ಟಿದರು.
ಶಿವಮೊಗ್ಗೆಯಿಂದ ಮಂಗಳೂರಿಗೆ ವಾಪಾಸಾಗುವಾಗ, ಅನಿತಾಳ ಪತಿ ರವಿಶಂಕರ್ ನನ್ನನ್ನು ಸಮಾಧಾನಿಸಿದರು. ನನ್ನ ಹೆಂಡತಿಗೆ ಅವಕಾಶ ಸಿಗದಿದ್ದರೂ ನನಗೆ ಬೇಸರವೇನೂ ಆಗುತ್ತಿರಲಿಲ್ಲ. ನಿಮಗೆ ಸಿಗದ್ದು ತುಂಬಾ ಬೇಸರದ ಸಂಗತಿ. ಎರಡು ವರ್ಷಗಳ ಹಿಂದೆ ಆಯ್ಕೆಯಾದ ತಂಡದ ಒಬ್ಬರಿಗೆ ಅನಾರೋಗ್ಯವಾಗಿ ಮೀಸಲಿಗನನ್ನು ಕಳುಹಿಸಬೇಕಾಯಿತು. ನೀವು ಎಲ್ಲದಕ್ಕೂ ಸಿದ್ಧವಾಗಿರಿ. ನನಗೆ ಅನಿಸುತ್ತದೆ ಫ್ರಾನ್ಸಿಗೆ ಹೋಗುವ ತಂಡದಲ್ಲಿ ಖಂಡಿತಾ ನೀವಿರುತ್ತೀರಿ ಎಂದು ಸಂದರ್ಶನದ ಫಲಿತಾಂಶ ತಿಳಿದ ಮಿತ್ರ ಅರಂತೋಡು ಗಂಗಾಧರ್ ನೀವು ಸುಮ್ಮನಿರಿ. ನಾನು ನಿಮಗೆ ಫ್ರಾನ್ಸಿಗೆ ಹೋಗುವಂತಹ ಅವಕಾಶ ಸೃಷ್ಟಿಯಾಗಲಿ ಎಂದು ದಿನವೂ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ತಂಡದ ಸದಸ್ಯರ ಸಿದ್ಧತಾ ಕಾರ್ಯಕ್ರಮಗಳಲ್ಲಿ ಮತ್ತು ರೋಟರಿಯ ವಾರ್ಷಿಕ ಅಧಿವೇಶನದಲ್ಲಿ ಮೀಸಲು ಅಭ್ಯರ್ಥಿ ಕೂಡಾ ಭಾಗವಹಿಸಬೇಕು. ಸೋಲು ನಿಶ್ಚಯವೆಂದು ತಿಳಿದೂ, ಒಂದು ದಿನದ ಪಂದ್ಯದಲ್ಲಿ ಐವತ್ತು ಓವರು ಆಡಲೇಬೇಕಾದ ಕ್ರಿಕೆಟ್ಟು ತಂಡದ ಹಾಗೆ. ಮೊದಲ ಸಿದ್ಧತಾ ಸಭೆ ಮಂಗಳೂರಲ್ಲಿ, ಎರಡನೆಯದು ನಾಯಕ ಹೆಬ್ಬಾರರ ಮನೆಯಲ್ಲಿ. ಕಾನ್ಫರೆನ್ಸ್ ನಡೆದದ್ದು ಶಿವಮೊಗ್ಗೆಯಲ್ಲಿ. ಅಲ್ಲಿಗೆ ಫ್ರಾನ್ಸಿನ ಸಮೂಹ ಅಧ್ಯಯನ ತಂಡ ಬಂದಿತ್ತು. ಅದರ ನಾಯಕ ಜುವಾನ್ ಬುಯೋ ಆರೂಕಾಲಡಿ ಎತ್ತರದ ಅಜಾನುಬಾಹು. 6ಂ ದಾಟಿದ ನಿವೃತ್ತ ಮೇಜರ್ ಬುಯೋನದ್ದು ವಯಸ್ಸನ್ನು ನಂಬಲು ಸಾಧ್ಯವಾಗದಂತಹ ಚುರುಕುತನ. ಅವನಿಗಿಂತಲೂ ಎತ್ತರದ ಕ್ರಿಸ್ಟೋಫರ್ ಮಾಂಪಿಲಿಯೇ ವಿಶ್ವವಿದ್ಯಾನಿಲಯದಲ್ಲಿ ಮ್ಯಾನೇಜ್‌ಮೆಂಟ್ ಅಧ್ಯಾಪಕ. ಕುಳ್ಳ ಪಿಲಿಪ್ ಅಲ್ಬಿ ಪ್ರದೇಶದಲ್ಲಿ ವೆಟರ್ನರಿ ಉದ್ಯೋಗದಲ್ಲಿದ್ದಾನೆ. ಎಲ್ಲರಿಗಿಂತ ಕಿರಿಯ ಸಣಕಲ ಅಲೈನ್ ಕ್ರೈಸ್ತರ ಪವಿತ್ರ ಕ್ಷೇತ್ರ ಲೂರ್ದ್‌ನಲ್ಲಿ ಹೋಟೇಲು ಉದ್ಯಮಿ. ಏಕೈಕ ಮಹಿಳಾ ಸದಸ್ಯೆ ಎಲಿಜಾಬೆತ್, ನಾಬೋನ್ನಿನ ವೈನ್ ಘಟಕವೊಂದರ ಮಾಲಕಿ.
ಶಿವಮೊಗ್ಗೆಯಲ್ಲಿ ಫ್ರಾನ್ಸಿನಿಂದ ಬಂದವರು, ಫ್ರಾನ್ಸಿಗೆ ಹೋಗಲಿಕ್ಕಿರುವವರು ಮತ್ತು ಮೀಸಲಿಗರು, ವೇದಿಕೆಯಲ್ಲಿ ತಮ್ಮ ಪರಿಚಯ ಹೇಳಲಿಕ್ಕಿತ್ತು. ನಾವೆಲ್ಲಾ ಒಟ್ಟಾಗಿ ಒಂದು ಹಿಂದಿ ಹಾಡನ್ನು ಹೇಳಿ ಕುಣಿದೆವು. ಹಿಂದಿನ ದಿನ ಬುಯೋನ ಅತಿಥೇಯರ ಮನೆಯಲ್ಲಿ, ಆ ಮನೆಯ ಸೊಸೆ ನೀಲು, ನಮಗೆಲ್ಲಾ ಬಾಂಗ್ಡಾ ನೃತ್ಯ ಕಲಿಸಿದ್ದಳು. ಬುಯೋ ನಮ್ಮ ಜತೆ ಕುಣಿದ. ನೀನು ಚೆನ್ನಾಗಿ ಕುಣೀತೀಯಾ. ಫ್ರಾನ್ಸಿಗೆ ಬಂದಾಗ ನನಗೆ ಕೆಲವು ಕುಣಿತ ಕಲಿಸಿಕೊಡು ಎಂದ. ಆಗ ನಾನು ಮೀಸಲಿಗ ಮಾರಾಯ. ನಿನ್ನ ನಾಡಿಗೆ ಬರುವಂತಿಲ್ಲ ಎಂದೆ. ಅದಕ್ಕವನು ಯಾಕೆ ಹಾಗಂತಿ. ನಿನಗೂ ಒಂದು ಅವಕಾಶ ಬಂದೇ ಬರುತ್ತದೆ ಎಂದು ನನ್ನ ಬೆನ್ನು ತಟ್ಟಿದ. ಕಾನ್ಫರೆನ್ಸ್ ಮುಗಿದ ಬಳಿಕ ಹೆಬ್ಬಾರರು ಮುಂದಿನ ಸಿದ್ಧತಾ ಶಿಬಿರ ಮೈಸೂರಲ್ಲಿ. ಯಾರೂ ತಪ್ಪಿಸುವಂತಿಲ್ಲ ಎಂದರು. ನಾನು ಯಾಕೆ ‘ವೃಥಾ ಶ್ರಮ’ ಅಲ್ವಾ? ನೀವೇ ಸಿದ್ಧತೆ ಮಾಡಿಕೊಳ್ಳಿ ಎಂದು ಅವರಿಂದ ಬೀಳ್ಕೂಂಡಿದ್ದೆ. ಅಂದು 1997ರ ಜನವರಿ 1 ಫ್ರಾನ್ಸಿಗೆ ತಂಡ ಹೋಗಲಿಕ್ಕಿದ್ದುದು ಎಪ್ರಿಲ್ 1ರಂದು. ಸಿದ್ಧತೆಗೆ ಸಾಕಷ್ಟು ಕಾಲಾವಧಿಯಿತ್ತು. ಹೆಬ್ಬಾರರಿಗೂ ನನ್ನ ‘ವೃಥಾ ಶ್ರಮ’ ಅರ್ಥವಾಗಿ ಅವರು ನಕ್ಕು ಸಮ್ಮತಿಸಿದ್ದರು. ಸುಳ್ಯಕ್ಕೆ ಮರಳಿ ನಾನು ನನ್ನ ದಿನಚರಿಯಲ್ಲಿ ಮುಳುಗಿಹೋಗಿದ್ದೆ.
ಅಂದು ಮಾರ್ಚ್ ಏಳು. ತರಗತಿಯೊಂದರಲ್ಲಿ ನಾನು ಪಾಠಮಗ್ನನಾಗಿದ್ದಾಗ ಅಟೆಂಡರ ವಿಜಯ ಓಡಿ ಬಂದ. ಯಾರೋ ಹೆಬ್ಬಾರರಂತೆ ಸಾ. ಕುಂದಾಪುರದಿಂದ ಫೋನು. ನೀವು ತಕ್ಷಣ ಎಸ್.ಟಿ.ಡಿ. ಮಾಡಬೇಕಂತೆ ಎಂದ.
ಫ್ರಾನ್ಸಿಗೆ ಹೋಗಲಿಕ್ಕಿರುವ ತಂಡಕ್ಕೆ ನೀನು ಕೋಲಾಟ ಕಲಿಸಿಕೊಡಬೇಕು. ನಾನು ಸಂಪರ್ಕಿಸಿದಾಗ ನೀನು ಬರಬೇಕು. ತಪ್ಪಿಸಬೇಡ ಎಂದು ಹೆಬ್ಬಾರರು ಶಿವಮೊಗ್ಗೆಯಲ್ಲಿ ನನಗೆ ಒಮ್ಮೆ ಹೇಳಿದ್ದರು. ಈಗ ಅದಕ್ಕೇ ಸಂಪರ್ಕಿಸುತ್ತಿರಬೇಕು. ಕ್ರಿಕೆಟ್ಟಿನಲ್ಲಿ ಹನ್ನೆರಡನೇ ಆಟಗಾರನೊಬ್ಬನಿರುತ್ತಾನೆ. ಆಟಗಾರರಿಗೆ ನೀರು, ಗ್ಲೌಸು, ಪ್ಯಾಡು ತಂದುಕೊಡಲು ಮೀಸಲಿಗನಾಗಿ ನನ್ನದೂ ಅಂತಹದ್ದೇ ಕೆಲಸವಾಯ್ತಲ್ಲಾ ಎಂದುಕೊಂಡು, ಬೂತಿಗೆ ಹೋಗಿ ಹೆಬ್ಬಾರರನ್ನು ಸಂಪರ್ಕಿಸಿದೆ. ಹೆಬ್ಬಾರರು ಒಂದೇ ಉಸಿರಲ್ಲಿ ಹೇಳಿದರು. ಚೆನ್ನಿಗೆ ಬರಲಾಗುತ್ತಿಲ್ಲ. ನೀನು ಫ್ರಾನ್ಸಿಗೆ ಹೊರಡಲು ತಕ್ಷಣ ತಯಾರಾಗಬೇಕು. ನಾಳೆ ರಾತ್ರೆ ಬೆಂಗಳೂರು ಬಸ್ಸು ಹತ್ತು. ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಥಾಮಸ್ ಕುಕ್ಕ್ ಕಛೇರಿಯಿದೆ. ನಮಗೆಲ್ಲಾ ವೀಸಾ ಮಾಡಿಕೊಡಬೇಕಾದದ್ದು ಅವರು. ಅಲ್ಲಿ ಜೂಲಿ ಇದ್ದಾಳೆ. ನಾಡಿದ್ದು ಬೆಳಿಗ್ಗೆ ಹತ್ತು ಗಂಟೆಗೆ ಅಲ್ಲೇ ಭೇಟಿಯಾಗೋಣ. ನಿನ್ನಲ್ಲಿರುವ ಎಲ್ಲಾ ಪೇಪರ್ಸ್ ಹಿಡ್ಕೂಂಡು ಬಾ. ವೀಸಾಕ್ಕೆ ಬೇಕಾಗಬಹುದು.
ಅವರು ಫೋನಿಟ್ಟ ಮೇಲೂ ಒಂದೆರಡು ನಿಮಿಷ ರಿಸೀವರ್ ನನ್ನ ಕೈಯಲ್ಲೇ ಇತ್ತು. ನಾನು ಸಾಧ್ಯವೇ ಇಲ್ಲ ಅಂದುಕೊಂಡದ್ದು ಆಗಿಬಿಟ್ಟಿದೆ. ಗಂಗಾಧರರ ಪ್ರಾರ್ಥನೆ ದೇವರಿಗೆ ಮುಟ್ಟಿದೆ. ಆದರೆ…. ಇನ್ನೆರಡೇ ವಾರ ತಯಾರಿಗೆ. ಮೊದಲು ಹಣ ಆಗಬೇಕು. ಮತ್ತೆ ವೀಸಾ ಆಗಬೇಕು. ಟೈಬೇಕು, ಕೋಟು ಬೇಕು, ಜರ್ಕಿನ್ ಬೇಕು. ಒಂದೆರಡು ಜತೆ ಹೊಸ ಬಟ್ಟೆ ಹೊಲಿಸಬೇಕು. ಕ್ಯಾಮರಾ ಆಗಬೇಕು… ಒಂದೇ, ಎರಡೇ. ಫ್ರಾನ್ಸಿನ ಪ್ರಯಾಣದ ಜವಾಬ್ದಾರಿ ರೋಟರಿಯದ್ದು. ಅಷ್ಟು ದೂರ ಹೋದ ಮೇಲೆ ಇಂಗ್ಲೆಂಡ್, ಜರ್ಮನಿಗಳನ್ನು ನೋಡದೆ ಬರುವುದೇ? ಅದಕ್ಕೆ ಕನಿಷ್ಠ ಒಂದೂವರೆ, ಎರಡು ಲಕ್ಷ ಬೇಕು. ಜೀವನದಲ್ಲಿ ಇಂತಹ ಅವಕಾಶಗಳು ಸಿಗುವುದೇ ಕಷ್ಟ. ಇನ್ನೊಮ್ಮೆ ಇಂತಹ ಅವಕಾಶ ಸಿಗುತ್ತದೆಯೋ ಇಲ್ಲವೋ. ಈಗ ಸಿಕ್ಕಿದಾಗ ಸಿಕ್ಕಷ್ಟನ್ನು ದಕ್ಕಿಸಿಕೊಳ್ಳಬೇಕು. ಮುಖ್ಯವಾಗಿ ಮೊದಲು ಹಣ ಮಾಡಿಕೊಳ್ಳಬೇಕು. ಹೇಗೆ?
ಸಾಲ ತೆಗೆಯಬೇಕಷ್ಟೇ. ಆದರೆ ಫೈನಾನ್ಸುಗಳಿಂದ ಸಾಲ ಬೇಡವೇ ಬೇಡ. ಮತ್ತೆ ದಿನದೂಡಲೂ ಆಗಲಿಕ್ಕಿಲ್ಲ. ಕಡಿಮೆ ಬಡ್ಡಿಯ ಸಾಲದ ಬಗ್ಗೆ ಯೋಚಿಸಿ. ಶೈಲಿ ಪರಿಹಾರ ಸೂಚಿಸಿದಾಗ, ಎಲ್ಲೈಸಿ ಪಾಲಿಸಿಗಳ ನೆಪಾಯಿತು. ಬಡ್ಡಿ ಕೇವಲ ಹತ್ತೂವರೆ ಪಸೆರ್ಸೆಂಟು. ಮನಸ್ಸು ನಿರಾಳವಾಯಿತು. ನಾಳೆ ಬೆಂಗಳೂರಿಗೆ ಹೋಗಿ ಬಂದ ಮೇಲೆ ಮುಂದಿನ ಮಾತು. ಸದ್ಯಕ್ಕೆ ಶೈಲಿಯ ಉಳಿತಾಯದ ಹಣ ಆರು ಸಾವಿರಗಳು ಧಾರಾಳ ಸಾಕು. ಎಲ್ಲೈಸಿಯ ಸಾಲವೂ ಸಾಕಾಗದಿದ್ದರೆ ರೋಟರಿ ಅಧ್ಯಕ ಸೀತಣ್ಣ ಇದ್ದಾರೆ. ಸವೊ9ೕದಯ ಪ್ರೆಸ್ಸಿನ ರಾಘವಣ್ಣ ಇದ್ದಾರೆ. ಅಗತ್ಯಕ್ಕೆ ಸಾಲ ಕೊಡದೆ ಇರಲಾರರು ಎಂದು ನೆಮ್ಮದಿ ಪಟ್ಟುಕೊಂಡೆ. “ಋಣಂ ಕೃತ್ವಾ ವಿದೇಶಗಮನಂ’ ತಪ್ಪೋ, ಸರಿಯೋ? ಅಂತೂ ಹೊಸತೊಂದು ಗಾದೆ ಮಾತನ್ನು ಸೃಷ್ಟಿಸಿಯೇ ಬಿಟ್ಟೆ. ಮತ್ತು ವೇದ ಸುಳ್ಳಾದರೂ ಈ ಗಾದೆ ಸುಳ್ಳಾಗದಂತೆ ಅಕರಶಃ ನೋಡಿಕೊಂಡೆ.
ಇದು ವೀಸಾದ ಕತೆಯು
ಕಳೆದ ಬಾರಿಯೇ ಮಾಡಿಸಿಟ್ಟುಕೊಂಡಿದ್ದರಿಂದ, ನನಗೆ ಪಾಸ್‌ಪೋರ್ಟ್‌ನ ಸಮಸ್ಯೆ ಇರಲಿಲ್ಲ. ಆದರೆ ವೀಸಾ? ವೀಸಾ ಅಂದರೆ ವಿದೇಶವೊಂದಕ್ಕೆ ಹೋಗಲು ಸಂಬಂಧಿತ ದೇಶದ ದೂತವಾಸವು ನೀಡುವ ಅನುಮತಿ. ಯಾವುದೇ ವಿದೇಶ ಪ್ರವಾಸ ಕಥನ ಓದಿ ನೋಡಿ. ಎಲ್ಲರದೂ ಆರಂಭದ ಸಮಸ್ಯೆ ಒಂದೇ. ವೀಸಾಕ್ಕಾಗಿ ಒದ್ದಾಟ. ಅಮೇರಿಕಾ ಮತ್ತು ಯುರೋಪುಗಳಿಗೆ ಹೋಗಿ ಬಂದಿದ್ದ ನನ್ನ ಪ್ರೊಫೆಸರರೊಬ್ಬರು ಹಿಂದೊಮ್ಮೆ ನನ್ನಲ್ಲಿ ವೀಸಾದ ಸಮಸ್ಯೆಗಳ ಬಗ್ಗೆ ಹೇಳಿದ್ದರು. ಅದರ ಹೆಸರು ವಿಷ ಎಂದಿರಬೇಕಿತ್ತು. ವಿಷ ಕುಡಿದೂ ಈಗ ದಕ್ಕಿಸಿಕೊಳ್ಳಬಹುದು. ಆದರೆ ಅಮೇರಿಕಾ ಮತ್ತು ಯುರೋಪಿನ ದೇಶಗಳಿಗೆ ವೀಸಾ ಪಡೆಯುವುದು ಅಷ್ಟು ಸುಲಭದ ಮಾತಲ್ಲ.
ಭಾರತೀಯರ ಬಗ್ಗೆ ಪಾಶ್ಚಾತ್ಯರ ತಿರಸ್ಕಾರ ಮತ್ತು ವಿದೇಶಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವ ಭಾರತೀಯರ ಸ್ವಭಾವ ಇದಕ್ಕೆ ಕಾರಣವಂತೆ. ಆದರೆ ನಾನೇನು ಉದ್ಯೋಗಾಕಾಂಕಿಯಾಗಿಯೋ, ಅಲ್ಲಿಯ ನಾಗರಿಕತೆ ಪಡೆಯುವ ಉದ್ದೇಶದಿಂದಲೋ ಫ್ರಾನ್ಸಿಗೆ ಹೋಗುತ್ತಿರುವುದಲ್ಲ. ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯೊಂದರಿಂದ ಆಯ್ಕೆಯಾಗಿ ಫ್ರಾನ್ಸಿನ ಆಹ್ವಾನದ ಮೇರೆಗೆ, ಮಹಾನ್ ರಾಷ್ಟ್ರವೊಂದರ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗುತ್ತಿರುವುದುಅ ಆದುದರಿಂದ ವೀಸಾ ಒಂದು ಸಮಸ್ಯೆಯಾಗಲಾರದು. ಅಲ್ಲದೆ ವೀಸಾ ಆಗಬೇಕಾಗಿರುವುದು ನನಗೊಬ್ಬನಿಗೆ ಮಾತ್ರ ಅಲ್ಲವಲ್ಲಾ! ಇದೊಂದು ಸಾಮೂಹಿಕ ಜವಾಬ್ದಾರಿ ಎಂದು ಧೈರ್ಯ ತಂದುಕೊಂಡಿದ್ದೆ. ನಮ್ಮ ವಿದೇಶಯಾನದ ಟಿಕೇಟು ಮತ್ತು ವೀಸಾ ಒದಗಿಸುವ ಜವಾಬ್ದಾರಿ ಹೊತ್ತಿದ್ದ ಥಾಮಸ್ ಕುಕ್ ಕಂಪೆನಿ, ವಿಶ್ವದಾದ್ಯಂತ ಮಹಾನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. ಅದು ನಮ್ಮ ಫ್ರಾನ್ಸ್ ಪ್ರವಾಸಕ್ಕೆ ಅಗತ್ಯವಾಗಿದ್ದ ಶೆಂಗನ್ ವೀಸಾ ಮಾಡಿಕೊಡಬೇಕು. ಶೆಂಗನ್ ಅನ್ನುವುದು ಯುರೋಪಿನ ಪುಟಾಣಿ ರಾಷ್ಟ್ರ ಲಕ್ಸಂಬರ್ಗ್‌ನ ಒಂದು ಪುಟ್ಟ ಪಟ್ಟಣ. ಸಮಸ್ತ ಯುರೋಪಿಗೆ ಒಂದೇ ವೀಸಾ ರೂಪಿಸುವ ಪ್ರಥಮ ಹೆಜ್ಜೆಯಾಗಿ ಜರ್ಮನಿ, ಫ್ರಾನ್ಸ್, ಸ್ಪೈನ್, ಪೋರ್ಚುಗಲ್, ಬೆಲ್ಜಿಯಂ, ನೆದಲ್ರ್ಯಾಂಡ್ಸ್ ಮತ್ತು ಲಕ್ಸಂಬರ್ಗಿನ ಪ್ರತಿನಿಧಿಗಳು ಅಲ್ಲಿ ಸಭೆ ಸೇರಿ, ಈ ಏಳು ರಾಷ್ಟ್ರಗಳಿಗೆ ಒಂದು ಸಾಮಾನ್ಯ ವೀಸಾವನ್ನು ರೂಪಿಸಿದರು. ವಿಶ್ವ ರಾಷ್ಟ್ರ ಪರಿಕಲ್ಪನೆಯತ್ತ ಇದೊಂದು ಪುಟ್ಟ ಹೆಜ್ಜೆ ಎಂದು ಅದನ್ನು ಕರೆದರು. ಪ್ರವಾಸಿಗರಿಗೆ ಮಾತ್ರ ಇದರಿಂದ ಅಪಾರ ಅನುಕೂಲ. ಶೆಂಗನ್ ವೀಸಾ ಒಂದನ್ನು ಪಡೆದರೆ ಸಾಕು. ಈ ಏಳುರಾಷ್ಟ್ರಗಳಲ್ಲಿ ಮುಕ್ತವಾಗಿ ಸಂಚರಿಸುವ ಭಾಗ್ಯ!
ಆದುದರಿಂದಲೇ ನನಗೆ ಫ್ರಾನ್ಸ್ ಅಲ್ಲದೆ ಬೇರೆ ದೇಶಗಳನ್ನು ನೋಡಬೇಕು ಎಂಬ ಉತ್ಸಾಹ ಚಿಗುರೊಡೆದದ್ದು. ರಾತ್ರಿ ಪ್ರಯಾಣದುದ್ದಕ್ಕೂ ನಿದ್ದೆಯು ಕಣ್ಣಿನ ಬಳಿ ಹಾಯದ್ದು. ಮತ್ತು ಥಾಮಸ್ ಕುಕ್ಕ್ ಕಛೇರಿಗೆ ಅದರ ಬಾಗಿಲು ತೆರೆಯುವ ಕಾವಲುಗಾರ ತಲುಪುವುದಕ್ಕಿಂತಲೂ ಮೊದಲೇ ತಲುಪಿದ್ದು, ಏನಿಲ್ಲವೆಂದರೂ ನಾನು ಒಂದು ಗಂಟೆ ಕಾದಿರಬಹುದು. ಕೊನೆಗೂ ನಾನು ಕಾಯುತ್ತಿದ್ದ ಜೂಲಿಯಾ ಬಂದಳು. ಗಂಟೆ ನೋಡಿದರೆ ಇನ್ನೂ ಒಂಬತ್ತೂವರೆ. ಅವಳು ಆಸನ ಅಲಂಕರಿಸಿದ ಬಳಿಕ ಹೋಗಿ ಅವಳೆದುರು ನಿಂತು, ನಾನು ಬಂದ ಕಾರಣ ಹೇಳಿದೆ. ಅರಳು ಹುರಿದಂತೆ ಮಾತಾಡುವ ಚೆಲುವೆ ಜೂಲಿಯಾ, ಹೂನಗುವೊಂದನ್ನು ಚೆಲ್ಲಿ ನಿನ್ನ ತಂಡ ಬರಲಿ. ಎಲ್ಲರದನ್ನೂ ಒಟ್ಟಿಗೇ ಮುಗಿಸೋಣು ಅಂದಳು. ಅವಳ ನಗು ನೋಡಿ ನಮ್ಮ ಕೆಲಸ ಸುಲಭವಾಗಿ ಆದೀತು ಅಂದುಕೊಂಡೆ.
ದಂಡಯಾತ್ರೆ ಹತ್ತೂಕಾಲಕ್ಕೆ ತಂಡ ಬಂತು. ಹೆಬ್ಬಾರರು, ಅನಿತಾ, ಎಲೈನ್, ಗುರು ಎಲ್ಲರೂ ನಿದ್ದೆ ಕೆಟ್ಟವರೇ. ಈಗ ನಾವೆಲ್ಲಾ ಒಟ್ಟಾಗಿ ಜೂಲಿಯಾಳ ಬಳಿಗೆ ಹೋದೆವು. ಫೈಲೊಂದರಲ್ಲಿ ಮುಳುಗಿ ಹೋಗಿದ್ದ ಆಕೆ ತಲೆಯೆತ್ತಿ ನಮ್ಮನ್ನು ನೋಡಿ ಇಂದು ನಾನು ತುಂಬಾ ಬಿಸಿ. ನೀವೀಗ ಅಪ್ಲಿಕೇಶನ್ನು ಕೊಟ್ಟು ಹೋಗಿ. ಕಾಸ್ಮೋಸ್ ಟೂರು ಹೋಗುವುದಾದರೆ ನೀವು ಮದ್ರಾಸಲ್ಲಿ ಬ್ರಿಟನ್ನಿನ ವೀಸಾ ಮಾಡಿಸಿಕೊಳ್ಳಬೇಕು. ಶೆಂಗನ್ ವೀಸಾದ್ದು ನನ್ನ ಜವಾಬ್ದಾರಿ. ಬ್ರಿಟನ್ನಿನದ್ದು ನಿಮ್ಮದು. ಮೊದಲು ಅದನ್ನು ಮಾಡಿಸಿಕೊಂಡು… ಅಂ.. ಇಂದು ಗುರುವಾರ. ನೀವಿಲ್ಲಿಗೆ ಸೋಮವಾರ ಬಂದುಬಿಡಿ. ಆದರೆ ಬ್ರಿಟನ್ನಿನ ವೀಸಾಕ್ಕೆ ಇನ್‌ಕಂ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟು ಬೇಕಾಗಬಹುದು ಅಂದಳು. ಈಗವಳು ಹೂನಗೆ ಚೆಲ್ಲಲಿಲ್ಲ.
ನಾವು ಮುಖ ಮುಖ ನೋಡಿಕೊಂಡೆವು. ಯು.ಜಿ.ಸಿ. ವೇತನ ಪಡೆಯುತ್ತಿರುವ ನನ್ನ ಆದಾಯ ತೆರಿಗೆಯನ್ನು ಕಾಲೇಜು ಕಾಯಾ9ಲಯದಲ್ಲಿ ಪ್ರತಿ ತಿಂಗಳು ಮುರಿಯಲಾಗುತ್ತದೆ. ಪ್ರತಿ ವರ್ಷ ಪುತ್ತೂರಿನ ಚಾರ್ಟರ್ಡ್ ಅಕೌಂಟೆಂಟ್ ರಾಮಭಟ್ಟರ ಮೂಲಕ, ರಿಟರ್ನ್ಸ್ ಫೈಲ್ ಮಾಡಿಸಿದ್ದಕ್ಕೆ ಸ್ವೀಕೃತಿ ಪತ್ರಗಳು ನನ್ನಲ್ಲಿದ್ದವು. ‘ಅದು ಸಾಕಾದೀತು’ ಎಂದು ಜೂಲಿ ಆ ಕ್ಷಣಕ್ಕೆ ನನ್ನಲ್ಲಿ ಜೀವ ತುಂಬಿದಳು. ಅನಿತಾಳದು ಇನ್ನೂ ಕೆಲಸ ಪರ್ಮನೆಂಟು ಆಗದ ಕಾರಣ ಅವಳು ಈವರೆಗೆ ತೆರಿಗೆ ಕಟ್ಟಬೇಕಾಗಿರಲಿಲ್ಲ. ಖಾಸಗಿ ಉದ್ಯೋಗಿಗಳಾದ ಉಳಿದ ಮೂವರು ಈ ವರೆಗೆ ತೆರಿಗೆ ಕಟ್ಟಿದವರಲ್ಲ. ಆದರೂ ಎಲೈನ್ ಅದ್ಯಾರದ್ದೋ ಪ್ರಭಾವ ಬಳಸಿ ಇನ್‌ಕಂಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟು ತಂದಿದ್ದಳು. ಉಳಿದ ಮೂವರಲ್ಲಿ ಏನೇನೂ ಇರಲಿಲ್ಲ. ಹೆಬ್ಬಾರರ ಅಳಿಯ ಶ್ಯಾಮ ಬೆಂಗಳೂರಲ್ಲಿ ಚಾರ್ಟರ್ಡ್ ಅಕೌಂಟೆಂಟ್. ಆತನ ಮೂಲಕ ಸರ್ಟಿಫಿಕೇಟು ಪಡೆಯಲು ಸಾಧ್ಯವೋ ಎಂದು ಹೆಬ್ಬಾರರು ಲೆಕ್ಕ ಹಾಕತೊಡಗಿದರು. ಸಂಜೆ ನಾಲ್ಕೂವರೆಗೆ ನಾವೆಲ್ಲಾ ಕಾವೇರಿ ಭವನದಲ್ಲಿ ಕಣ್ಣನನರ ಆಫೀಸಲ್ಲಿ ಭೇಟಿಯಾಗೋಣ. ರಾತ್ರೆ ಬಸ್ಸಲ್ಲಿ ಮದ್ರಾಸಿಗೆ ಹೋಗುವಾ. ಈಗ ನೀನು ನಮ್ಮ ಡಿಸ್ಟ್ರಿಕ್ಟ್ ಗವರ್ನರ್ ನಾರಾಯಣರಿಗೆ ಶಿವಮೊಗ್ಗೆಗೆ ಫೋನ್ ಮಾಡಿ ನಮ್ಮ ಬಗ್ಗೆ ಬ್ರಿಟಿಷ್ ಹೈಕಮಿಶನಿನಗೆ ಫ್ಯಾಕ್ಸ್ ಸಂದೇಶ ಕಳುಹಿಸಲು ತಿಳಿಸು ಎಂದು ಹೆಬ್ಬಾರರು ಶ್ಯಾಮನ ಬೈಕ್ ಹತ್ತಿ ಕಣ್ಮರೆಯಾದರು. ನಾವೆಲ್ಲರೂ ಒಂದೊಂದು ಹಾದಿ ಹಿಡಿದೆವು.
ನಾನು ಡಾ|| ನಾರಾಯಣರನ್ನು ಸಂಪರ್ಕಿಸಲು ಯತ್ನಿಸಿದೆ. ಅವರ ಮನೆಯಲ್ಲಿದ್ದ ಕೆಲಸದಾಕೆಗೆ ಅವರೆಲ್ಲಿದ್ದಾರೆಂದು ತಿಳಿದಿರಲಿಲ್ಲ. ಮತ್ತೆ ಅರ್ಧಗಂಟೆ ತಡೆದು ಫೋನು ಮಾಡಿದಾಗ ಅವರ ತಮ್ಮ ಸಿಕ್ಕಿ ಅಣ್ಣ ಅರ್ಜಂಟ್ ಕೆಲಸದಲ್ಲಿ ಮಂಗಳೂರಿಗೆ ಹೋಗಿದ್ದಾನೆ ಎಂದರು. ಮಂಗಳೂರಲ್ಲಿ ಎಲ್ಲಿ ಸಿಗುತ್ತಾರೆ ತಿಳಿಸ್ತೀರಾ ಎಂದು ಕೇಳಿದ್ದಕ್ಕೆ ಒಂದು ನಿಮಿಷ ಇರಿು ಎಂದು ಅವರು ನಂಬರ್ ಹುಡುಕಿ ತಿಳಿಸಿದರು. ಮಂಗಳೂರಲ್ಲಿ ಆ ನಂಬರಲ್ಲಿ ಪುಣ್ಯಕ್ಕೆ ನಾರಾಯಣ್ ಸಿಕ್ಕರು. ಅವರಿಗೆ ಅಚ್ಚರಿಯಾಯಿತು, ಅವರ ನಂಬರ್ ಕಂಡುಹಿಡಿದದ್ದಕ್ಕೆ. ಶಾಂತ ಸ್ವರದಲ್ಲಿ ಅವರು ಈಗ ತುರ್ತೊಂದಲ್ಲಿ ಮಂಗಳೂರಿಗೆ ಬಂದಿದ್ದೇನೆ. ಇಂದೇ ರಾತ್ರಿ ಶಿವಮೊಗ್ಗೆಗೆ ವಾಪಾಸಾಗ್ತಿದ್ದೇನೆ. ನಾಳೆ ನೇರವಾಗಿ ಬ್ರಿಟಿಷ್ ಹೈಕಮಿಶನಿನಗೆ ಫ್ಯಾಕ್ಸ್ ಮಾಡುತ್ತೇನೆ ಎಂದರು.
ಇನ್ನೇನು ಮಾಡುವುದು ಹೆಬ್ಬಾರರು ಕೊಟ್ಟಿದ್ದ ನಂಬರಿಗೆ ಫೋನು ಮಾಡಿ ವಿಷಯ ತಿಳಿಸಿದೆ. ಹೆಬ್ಬಾರರು ಇದು ಅರ್ಜಂಟು ಯಾರದಾದರೂ ರೊಟೇರಿಯನನರ ಲೆಟರ್‌ಹೆಡ್‌ನಲ್ಲಿ, ಹೇಗಾದರೂ ಒಂದು ಫ್ಯಾಕ್ಸ್ ಮಾಡಿಬಿಡಲಿ ಮಾರಾಯ. ನಾನೀಗ ಅರ್ಜಂಟ್ ಹೊರಟಿದ್ದೇನೆ. ನಾಲ್ಕುವರೆಗೆ ಭೇಟಿ ಎಂದು ಫೋನಿಟ್ಟರು. ನಾರಾಯಣರನ್ನು ಮತ್ತೆ ಸಂಪರ್ಕಿಸಿ ವಿಷಯ ತಿಳಿಸಿದಾಗ ಅವರಿಗೆ ಕಿರಿಕಿರಿಯಾಯಿತು. ಹಾಗೆಲ್ಲಾ ಮಾಡಲಿಕ್ಕೆ ಆಗುವುದಿಲ್ಲ. ನೀವು ಗಡಿಬಿಡಿ ಯಾಕೆ ಮಾಡ್ತೀರಿ? ನನ್ನ ಲೆಟರ್‌ಹೆಡ್‌ನಲ್ಲೇ ನಾಳೆ ಫ್ಯಾಕ್ಸ್ ಮಾಡುತ್ತೇನೆ ಎಂದರು.
ಗಂಟೆ ಮೂರಾಗಿತ್ತು. ಫೋನಿಗೆ ಇನ್ನೂರಹತ್ತು ಖರ್ಚಾಗಿಯೂ ಪ್ರಯೋಜನವೇನೂ ಆಗಿರಲಿಲ್ಲ. ಇನ್ನು ಕಣ್ಣನನರ ಕಛೇರಿಗೆ ಹೋಗಬೇಕು. ಗೃಹಖಾತೆಯ ಅಧಿಕಾರಿ ಕಣ್ಣನ್ ಎಲೈನಳ ಕುಟುಂಬ ಮಿತ್ರ. ಕಛೇರಿಯ ದೂರವಾಣಿ ಸಂಖ್ಯೆಯನ್ನು ಆಕೆ ನಮಗೆ ಮೊದಲೇ ನೀಡಿದ್ದಳು. ನಾನು ಫೋನ್ ಮಾಡಿದಾಗ ಮೊದಲು ರಿಸೆಪ್ಶನಿಸ್ಟ್ ಎತ್ತಿಕೊಂಡ. ನನ್ನ ಪ್ರವರ ಕೇಳಿ ಕಣ್ಣನ್‌ರಿಗೆ ಫೋನ್ ಸಂಪರ್ಕ ನೀಡಿದ. ಕೊನೆಗೆ ಎಲೈನ್
ಲೈನಿನಲ್ಲಿ ಬಂದಳು. ವಾಹನಗಳ ಅಸಾಧ್ಯ ಗದ್ದಲದ ಎಂ.ಜಿ. ರಸ್ತೆಯಿಂದ ಫೋನು ಮಾಡುತ್ತಿದ್ದ ನನಗೆ ಅವಳ ಸ್ವರ ಕೇಳಿಸುತ್ತಿರಲಿಲ್ಲ. ಹಾಗಾಗಿ ಗಟ್ಟಿಯಾಗಿ ಮಾತಾಡಿದ್ದಕ್ಕೆ ಅವಳು ಕಿರುಚಬೇಡ ಮಾರಾಯಾ. ಇದು ನಿನ್ನ ಸುಳ್ಯ ಅಲ್ಲು ಎಂದು ರೇಗಿದಳು. ನಿನಗೇನು? ನೀನೆಲ್ಲೋ ಏರ್‌ಕಂಡೀಶನ್ಡ್ ರೂಮಿನಲ್ಲಿರಬೇಕು. ಇಲ್ಲಿನ ಸದ್ದು ಗದ್ದಲ ನಿನ್ನ ಕಿವಿಗೆ ಬೀಳುತ್ತದಲ್ಲಾ ಎಂದು ನಾನೂ ದಬಾಯಿಸಿದೆ. ಅವಳು ಸರಿ, ವಿಷಯ ಹೇಳು ಅಂದಳು. ನಾರಾಯಣರೊಡನೆ ನಡೆದ ಮಾತುಕತೆ ವಿಫಲವಾಗಿ ನಾನೀಗ ಕಣ್ಣನರ ಕಛೇರಿಗೆ ಬರುತ್ತಿದ್ದೇನೆ ಎಂದೆ. ಅದಕ್ಕವಳು ನೀನು ಕಮ್ಯುನಿಕೇಟ್ ಮಾಡಿದ್ದು ಸರಿಯಾಗಲಿಲ್ಲ ಎಂದು ಕಾಣುತ್ತದೆ ಎನ್ನಬೇಕೆ?
ಕೊನೆಗೂ ಕಾವೇರಿ ಭವನದ ತುದಿಯಲ್ಲಿರುವ ಕಣ್ಣನ್‌ರ ಕಛೇರಿಗೆ ತಲುಪಿದೆ. ನಿವೃತ್ತಿಯಂಚಿನಲ್ಲಿರುವ ಕಣ್ಣನರದು ಪ್ರಶಾಂತ ಮುಖ, ಚುರುಕಿನ ಕಣ್ಣುಗಳು. ಮಾತುಗಳೆಲ್ಲಾ ಒಬ್ಬ ದಾರ್ಶನಿಕನ ಹಾಗೆ. ನಮ್ಮ ತಂಡ ಇಡೀ ಅಲ್ಲಿತ್ತು ನಾಯಕನನ್ನು ಹೊರತುಪಡಿಸಿ. ಕಾದು, ಕಾದು ಮನದಲ್ಲೇ ಹೆಬ್ಬಾರರಿಗೆ ಸಹಸ್ರನಾಮಾರ್ಚನೆ ಮಾಡಿದೆವು. ಇನ್ನೇನು ಕಛೇರಿ ಮುಚ್ಚಲು ಐದು ನಿಮಿಷಗಳಿವೆ ಎನ್ನುವಾಗ ಸೋತ ಮುಖದ ಹೆಬ್ಬಾರರು ಬಾಗಿಲಲ್ಲಿ ಪ್ರತ್ಯಕ್ಷರಾದರು. ಎಲೈನ್‌ಳಿಂದ ಎಲ್ಲಾ ವಿಷಯಗಳನ್ನು ತಿಳಿದುಕೊಂಡಿದ್ದ ಕಣ್ಣನ್ ನಮಗೆ ಉಪದೇಶ ಮಾಡಿದರು. ನೋಡಿ, ನಿಮಗೆಲ್ಲಾ ಫ್ರಾನ್ಸ್ ಪ್ರವಾಸಯೋಗ ಅತ್ಯಂತ ಅನಿರೀಕ್ಷಿತವಾಗಿ ಒದಗಿಬಂದಿದೆ. ಶೆಂಗನ್‌ವೀಸಾ ಜೂಲಿಯಾ ಮಾಡಿಕೊಡುತ್ತಾಳೆ. ಅದರಲ್ಲಿ ಸಾಧ್ಯವಿರುವಷ್ಟು ದೇಶಗಳಿಗೆ ಹೋಗಿಬನ್ನಿ. ಬ್ರಿಟನ್ನಿನ ಆಸೆ ಬಿಡಿ. ನಿಮ್ಮಲ್ಲಿ ಎಲ್ಲಾ ದಾಖಲೆಗಳಿದ್ದರೂ ಅಲ್ಲಿ ಸತಾಯಿಸುತ್ತಾರೆ. ಈಗ ದಾಖಲೆಗಳು ಇಲ್ಲದೆ ಹೊರಟಿದ್ದೀರಿ. ನಿನ್ನೆ ರಾತ್ರೆ ನಿದ್ರೆಯಿಲ್ಲದೆ ಕಳೆದಿರಿ. ಮದ್ರಾಸಿಗೆ ಹೋಗುವುದಾದರೆ ರಾತ್ರೆ ಇಂದೂ ನಿದ್ದೆಯಿರುವುದಿಲ್ಲ. ನಾಳೆ ರಾತ್ರೆ ಮದ್ರಾಸಿನಿಂದ ಹೊರಡಬೇಕು. ನಾಳೆಯೂ ನಿಮಗೆ ನಿದ್ದೆ ಮಾಡಲಿಕ್ಕಾಗುವುದಿಲ್ಲ. ಮತ್ತೆ ಆದಿತ್ಯವಾರ ರಾತ್ರೆ ನಿಮ್ಮೂರಿಂದ ಬೆಂಗಳೂರಿಗೆ ಹೊರಡಬೇಕು. ಆಗಲೂ ನಿದ್ದೆ ಇರುವುದಿಲ್ಲ. ಒಂದು ವೇಳೆ ಮದ್ರಾಸಲ್ಲಿ ನಿಮ್ಮ ಕೆಲಸ ಆಗದೆ ಇದ್ದರೆ ಎಷ್ಟು ಟೆನ್‌ಶನ್? ಇದೆಲ್ಲಾ ಯಾಕೆ ಬೇಕು? ಪಾಲಿಗೆ ಬಂದ ಪಂಚಾಮೃತದಲ್ಲಿ ತೃಪ್ತಿ ಪಡಬೇಕಪ್ಪ.
ಆದರೆ ಹೆಬ್ಬಾರರು ತೀರ್ಮಾನಿಸಿಯಾಗಿತ್ತು. ನನ್ನ ಪ್ರೀತಿಯ ಸೊಸೆ ಶಾಂತಾ ಬ್ರಿಟನ್ನಿನಲ್ಲಿ ಇದ್ದಾಳೆ. ಬ್ರಿಟನ್ನಿನ ಕಾಸ್ಮೋಸ್ ಸಂಸ್ಥೆಯು ಏರ್ಪಡಿಸುವ ಎರಡು ವಾರಗಳ, ಯುರೋಪಿಯನ್ ಹೈಲೈಟ್ಸ್ ಪ್ರವಾಸ ಹೋಗಲು ನಾನು ನಿರ್ಧರಿಸಿದ್ದೇನೆ. ಅದಕ್ಕೆ ಶೆಂಗನ್ ಮಾತ್ರವಲ್ಲದೆ, ಇಂಗ್ಲಿಷ್, ಸ್ವಿಸ್ ಮತ್ತು ಇತಾಲಿಯನ್ ವೀಸಾ ಬೇಕು. ಕೊನೆಯ ಎರಡನ್ನೂ ಮುಂಬಯಿಯಲ್ಲಿ, ಪ್ಯಾರಿಸಿಗೆ ಹಾರುವ ಮುನ್ನಾದಿನ ಮಾಡಿಸಿಕೊಳ್ಳಬಹುದು. ಬ್ರಿಟಿಷ್ ವೀಸಾ ಮದ್ರಾಸಲ್ಲೇ ಅಗಬೇಕು. ನಾನು ಎಲ್ಲವನ್ನೂ ಪಾಸಿಟಿರ್ವ್ ಆಗಿ ನೋಡುವವ. ನನ್ನ ತೀರ್ಮಾನ ಹೇಳಿದ್ದೇನೆ. ಇನ್ನು ನೀವು ಸ್ವತಂತ್ರರು. ನಾಯಕರನ್ನು ಇಂತಹ ಸಂದರ್ಭದಲ್ಲಿ ಬಿಡೋದುಂಟೆ? ನಾವು ಒಕ್ಕೊರಲಿನಲ್ಲಿ ನಿಮ್ಮ ನಿರ್ಧಾರವೇ ನಮ್ಮದು ಎಂದೆವು. ಅನುಯಾಯಿಗಳ ಅಚಲನಿಷ್ಠೆ ನೋಡಿ ನಾಯಕರಿಗೆ ಅಪಾರ ಸಂತೋಷವಾಯಿತು, ಹಾಗಾದರೆ ನಡೆಯೋಣ ಶ್ಯಾಮನ ಮನೆಗೆ. ಅಲ್ಲಿ ಊಟ ಮುಗಿಸಿ ರಾತ್ರೆ ಮದ್ರಾಸಿಗೆ ಎಂದರು ಹೆಬ್ಬಾರರು ಹೊಸ ಉತ್ಸಾಹದಲ್ಲಿ. ಆಗ ಕಣ್ಣನರು ಎಲ್ಲರ ಕೈಕುಲುಕಿ ನಿಮಗೆ ಒಳ್ಳೆಯದಾಗಲಿು ಎಂದು ಶುಭ ಹಾರೈಸಿದರು.
ಶ್ಯಾಮನ ಮನೆಯಲ್ಲಿ ನಮಗೆಲ್ಲಾ ಭೂರಿ ಭೋಜನ. ಸದಾ ಚುರುಕಾಗಿರುವ ಶ್ಯಾಮ, ನಮ್ಮ ಊಟ ನಡೆಯುತ್ತಿರುವಂತೆ ಮದ್ರಾಸಿಗೆ ಟಿಕೇಟು ರಿಸರ್ವ್ ಮಾಡಿ ಬಂದಿದ್ದ. ಶ್ಯಾಮನ ಮಾವ, ಅತ್ತೆ, ಅತ್ತಿಗೆ, ಮಡದಿ, ಅತ್ತಿಗೆಯ ಮಕ್ಕಳು ಎಲ್ಲರೂ ಒತ್ತಾಯದಿಂದ ನಮ್ಮ ಮಿತಿಗಿಂತ ಹೆಚ್ಚು ಊಟ ಮಾಡಿಸಿಬಿಟ್ಟರು. ಎರಡು ಸ್ವೀಟು, ಶ್ಯಾವಿಗೆ ಪಾಯಸ, ತಂಬ್ಳಿ, ಗೊಜ್ಜು, ಸಾರು, ಸಾಂಬಾರು, ಮೂರು ಪಲ್ಯ, ಹಪ್ಪಳ, ಸಲಾದ್… ಯಾವುದನ್ನು ತಿನ್ನುವುದು, ಯಾವುದನ್ನು ಬಿಡುವುದುಲ ಶ್ಯಾಮನ ಮಾವ ನಿಮ್ಮ ಸಮೂಹ ಅಧ್ಯಯನ ಈ ಮನೆಯಿಂದಲೇ ಆರಂಭ ಎಂದು ನಮ್ಮನ್ನೆಲ್ಲಾ ನಗಿಸಿದರು. ಭುಕ್ತಾಯಾಸದಿಂದ ನಿದ್ದೆ ಬರುವಂತಾಯಿತು. ನಿನ್ನೆ ರಾತ್ರೆ ಬೇರೆ ನಿದ್ದೆಯಿರಲಿಲ್ಲ. ಶ್ಯಾಮನ ಮಾರುತಿಯಲ್ಲಿ ಸಮಯಕ್ಕೆ ಸರಿಯಾಗಿ ನಾವು ಕಲಾಸಿಪಾಳ್ಯಂಗೆ ಬಂದು, ಬಸ್ಸು ಹತ್ತಿ ನಿದ್ರಿಸಲು ಯತ್ನಿಸಿದೆವು.
ಮದ್ರಾಸಲ್ಲಿ ಬಸ್ಸಿಳಿದು ನಾವು ಹೋದದ್ದು ಶ್ಯಾಮನ ತಂಗಿ ಮಮತಾಳ ಮನೆಗೆ. ಎರಡು ಮಕ್ಕಳ ತಾಯಿ ಮಮತಾ ಚುರುಕಿನ ಹುಡುಗಿ. ಆಗ ಎರಡನೇ ಮಗುವನ್ನು ಹೆತ್ತು ಒಂದೂವರೆ ತಿಂಗಳಾಗಿತ್ತಷ್ಟೇ. ಗಂಡ ಸುನಿಲ್ ಎಂಜಿನಿಯರ್. ಆತ ಊರಲ್ಲಿರಲಿಲ್ಲ. ಮನೆಯಲ್ಲಿ ಇಬ್ಬರು ಕೆಲಸದಾಳುಗಳು. ವಿಶಾಲವಾದ ನಾಲ್ಕು ಕೋಣೆಗಳು. ಮಮತಾ ಮತ್ತು ಶ್ಯಾಮರಲ್ಲಿ, ಹೆಬ್ಬಾರ್ ಮಾಮನನ್ನು ಹೆಚ್ಚು ಪ್ರೀತಿಸುವವರು ಯಾರು, ಎಂದು ಹೇಳುವುದು ಕಷ್ಟ. ಸದಾ ಹೆಬ್ಬಾರರ ಸುತ್ತಮುತ್ತ ತಿರುಗುತ್ತಾ ಮಾಮ, ಮಾಮು ಎಂದು ಸಣ್ಣ ಮಕ್ಕಳ ಹಾಗೆ ಆಡುವ ಮಮತಾಳನ್ನು ನೋಡಿ, ನಾವು ನಾಲ್ವರು ಹೆಬ್ಬಾರರಲ್ಲಿ ನಾವೂ ನಿಮ್ಮನ್ನು ಮಾಮ ಎಂದು ಕರೆಯಬಹುದೇ ಎಂದು ಕೇಳಿದೆವು. ನನ್ನನ್ನು ಮಾಮ ಎಂದು ಕರೆಯವ ಅಳಿಯಂದಿರು ಮತ್ತು ಸೊಸೆಯಂದಿರು ತುಂಬಾ ಮಂದಿ ನನಗಿದ್ದಾರೆ. ಅವರ ಸಾಲಿನಲ್ಲಿ ನಿಮ್ಮ ನಾಲ್ವರದು ಹೊಸ ಸೇರ್ಪಡೆಯಾಗುತ್ತದೆ. ಧಾರಾಳವಾಗಿ ಕರೆಯಿರಿ ಎಂದು ಹೆಮ್ಮೆಯಿಂದ ಅವರು ಅನುಮತಿ ನೀಡಿದರು. ನಮ್ಮ ಮಾತುಕತೆ ಕೇಳಿದ ಮಮತಾಳಿಗೆ ತಡೆಯಲಾಗದಷ್ಟು ನಗು ಬಂತು.
ಬೆಳಗಿನ ನಿತ್ಯಕರ್ಮಗಳನ್ನು ಮತ್ತು ಸೊಗಸಾದ ಫಲಹಾರವನ್ನು ಅಲ್ಲೇ ಮುಗಿಸಿ ಬ್ರಿಟಿಷ್ ಹೈಕಮಿಷನಿನಗೆ ನಾವು ಸುನಿಲ್ ಕಾರಲ್ಲಿ ಧಾವಿಸಿದರೆ, ಅದಾಗಲೇ ಅಲ್ಲಿ ಹನುಮಂತನ ಬಾಲದಂತೆ ಉದ್ದನೆಯ ಕ್ಯೂ ಬೆಳೆದಿತ್ತು. ಮದ್ರಾಸಿನ ಅಂಡರ್‌ಸನ್ ರಸ್ತೆಯಲ್ಲಿರುವ ಈ ದೂತವಾಸದಲ್ಲಿ ಇದು ನಿತ್ಯದ ಗೋಳು. ಒಳಹೋಗುವವರು ರಿಸೆಪ್ಶನ್ ಕೌಂಟರ್‌ನಿಂದ ಟೋಕನ್ ತೆಗೆದುಕೊಳ್ಳಬೇಕು. ಅದನ್ನು ಪರೀಕಿಸಿ ಒಳಬಿಡಲು ಕರ್ರಗೆ, ದಪ್ಪಗೆ, ಅಕರಾಳ ವಿಕರಾಳ ಬೆಳೆದ ಒಬ್ಬಾಕೆ ಹೆಣ್ಣುಮಗಳು. ನನಗೆ ಯಕಗಾನದ ಶೂರ್ಪನಖಿ, ತಾಟಕಿ, ಪೂತನಿ ಪಾತ್ರಗಳು ನ್ನೆಪಾದವು. ಅವಳ ಓಡಾಟ, ಕಂಠ, ಜರ್ಬು ಮತ್ತು ನಡವಳಿಕೆಗಳು ನಿಮ್ಮದು ಒಂದೇ ಗುಂಪಾದುದರಿಂದ ಒಂದೇ ಟೋಕನ್ ಸಾಕು ಎಂದು ಹೇಳಿದ ರೀತಿ, ನನ್ನಲ್ಲಿ ಅನುಮಾನಗಳನ್ನು ಮೂಡಿಸಿದವು. ಪಾಸಿಟಿರ್ವ್ ಆಗಿ ಯೋಚಿಸಿದರೆ ಯಾವುದೇ ಕಾರ್ಯ ಖಂಡಿತಾ ಕೈಗೂಡುತ್ತದೆಂಬ ಹೆಬ್ಬಾರರ ಅಚಲ ನಂಬಿಕೆಯ ಬಗ್ಗೆ ಆ ಕಣಕ್ಕೆ ನನ್ನಲ್ಲಿ ವಿಶ್ವಾಸ ಉಳಿಯಲಿಲ್ಲ.
ಅಂತೂ ಒಳಗೆ ಹೋದೆವು. ಅಷ್ಟು ಬೇಗ ಹೋಗಿಯೂ ನಮಗೆ ಸಿಕ್ಕಿದ್ದು ಅರುವತೆ*ದನೇ ನಂಬರುಅ ದೊಡ್ಡ ಹಾಲ್‌ನಲ್ಲಿ ನೂರಕ್ಕೂ ಮಿಕ್ಕು ಆಸನ ವ್ಯವಸ್ಥೆ. ವೀಸಾಕಾಂಕಿಗಳ ಇಂಟರ್‌ವೂ್ಯ ನಡೆಸಲು ಎರಡು ಕೌಂಟರ್‌ಗಳಲ್ಲಿ ಸಾಕ್ಷಾತ್ ಇಬ್ಬರು ಬ್ರಿಟಿಷ್ ಹೆಣ್ಣುಗಳು. ಇಂಟರ್‌ವೂ್ಯನಲ್ಲಿ ತೇರ್ಗಡೆಯಾದರೆ, ವೀಸಾ ಅರ್ಜಿಯೊಂದಿಗೆ ಹಣ ಪಾವತಿಸಲು ಮತ್ತೆರಡು ಕೌಂಟರುಗಳು. ಅಲ್ಲಿ ಭಾರತೀಯ ಹೆಣ್ಮಕ್ಕಳು. ಎಲ್ಲವೂ ಅಚ್ಚುಕಟ್ಟು. ಹಾಲಿನಲ್ಲಿ ಸಣ್ಣ ಶಬ್ದವಾದರೂ ಬಾಗಿಲು ಬಿಟ್ಟು, ಒಳಬಂದು, ಸಣ್ಣ ಮಕ್ಕಳನ್ನು ಟೀಚರ್‌ರಂತೆ ಬೆದರಿಸುವ ಆ ಅಕರಾಳ ವಿಕರಾಳ ದ್ವಾರಪಾಲಕಿ. ನಾವೆಲ್ಲಾ ನಿಶ್ಯಬ್ದವಾಗಿ ನಮ್ಮ ಅವಕಾಶಕ್ಕಾಗಿ ಕಾದೆವು.
ಅವಕಾಶ ಬಂದಾಗ ಎಲ್ಲರೂ ಒಂದು ತಂಡವಾಗಿ ಕೌಂಟರ್‌ನತ್ತ ನಡೆದೆವು. ಆಗ ಅಲ್ಲಿದ್ದ ಬಿಳಿದೊಗಲಿನ ತೀಕ್ಣ ಕಣ್ಣುಗಳ ಬ್ರಿಟಿಷ್ ಹೆಣ್ಮಗಳು ನಮ್ಮನ್ನು ಕೆಕ್ಕರಿಸಿ ನೋಡಿ ನೋ ನೋ.. .. ವನ್ ಎಟ್ ಎ ಟೈಮ್ ಒಮ್ಮೆಗೆ ಒಬ್ಬರು ಮಾತ್ರ ಎಂದಳು. ನಮ್ಮದು ಗ್ರೂಪ್ ಪ್ರೋಗ್ರಾಂ ಎಂದು ಹೆಬ್ಬಾರರು ಸಮಜಾಯಿಷಿ ನೀಡ ಹೊರಟಾಗ ಆಕೆ ಗ್ರೂಪ್ ಲೀಡರ್ ಮಾತ್ರ ಬಂದರೆ ಸಾಕು. ಉಳಿದವರು ಮೊದಲಿದ್ದಲ್ಲಿಗೇ ಹೋಗಿ ಕೂತುಕೊಳ್ಳಿ ಎಂದು ಅಟ್ಟಿಯೇ ಬಿಟ್ಟಳು. ನಾವು ಪೆಚ್ಚುಮೋರೆ ಹಾಕಿಕೊಂಡು ಮರಳಿದೆವು. ಮೊದಲೇ ಎರಡು ರಾತ್ರಿ ನಿದ್ದೆಗೆಟ್ಟಿದ್ದ ಮುಖ,
ಹೆಬ್ಬಾರರು ಆಕೆಗೆ ಸಮೂಹ ಅಧ್ಯಯನ ವಿನಿಮಯ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಆಕೆ ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರಿಸಿ ವೀಸಾ ಅರ್ಜಿಯನ್ನು ಆಕೆಯ ಮುಂದೊಡ್ಡಿದರು. ಅವಳ ಚುರುಕು ಕಣ್ಣುಗಳು ಚಕಚಕನೆ ಅವುಗಳ ಮೇಲೋಡಿದವು. ಕೊನೆಗೆ ಆಕೆ ಹಾಳೆಯೊಂದರಲ್ಲಿ ಶರಾ ಹಾಕಿದಳು. ಇನ್‌ಕಂ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟು, ನಿಮ್ಮ ಉದ್ಯೋಗದಾತರಿಂದ ರಿಲೀವಿಂಗ್ ಸರ್ಟಿಫಿಕೇಟು, ಬ್ಯಾಂಕು ಬ್ಯಾಲೆನ್ಸ್ ಸರ್ಟಿಫಿಕೇಟು, ಓವರ್‌ಸೀಸ್ ಮೆಡಿಕೈಮು ಸರ್ಟಿಫಿಕೇಟು, ಮುನಿಸಿಪಾಲಿಟಿ ಯಿಂದ ಡೊಮಿಸೈಲ್ ಸರ್ಟಿಫಿಕೇಟು ಮತ್ತು ಬ್ರಿಟನಿನ್ನಲ್ಲಿ ನಿಮಗೆ ಆತಿಥ್ಯ ನೀಡುವವರಿಂದ ಆ ಬಗ್ಗೆ ಒಪ್ಪಿಗೆ ಪತ್ರ ಇವಿಷ್ಟನ್ನು ಮಾಡಿಸಿ ತನ್ನಿ. ಅವೆಲ್ಲವೂ ಸರಿಯಾಗಿದ್ದರೆ ಮಾತ್ರ ವೀಸಾ ನೀಡಬಲ್ಲೆ ಎಂದು ಹೆಬ್ಬಾರರ ಅರ್ಜಿಯನ್ನು ಹಿಂತಿರುಗಿಸಿದಳು.
ಕೌಂಟರಿನ ಸಮೀಪದ ಆಸನಗಳಲ್ಲೇ ಕೂತಿದ್ದುದರಿಂದ ನಾವು ಈ ಮಾತುಕತೆಗಳನ್ನೆಲ್ಲಾ ಕೇಳಿಸಿಕೊಂಡಿದ್ದೆವು. ಇನ್ನು ಅಲ್ಲಿದ್ದು ಮಾಡುವುದೇನೂ ಇರಲಿಲ್ಲ. ಇನ್ನೇನು ನಾವು ಹೊರಡಬೇಕು ಅನ್ನುವಷ್ಟರಲ್ಲಿ ಆ ಹೆಣ್ಮಗಳು ಹೆಬ್ಬಾರರನ್ನು ಕೈಸನ್ನೆ ಮಾಡಿ ಕರೆದಳು. ಎಷ್ಟಾದರೂ ಹೆಣ್ಣಲ್ಲವೇ? ನಮ್ಮ ಸ್ಥತಿಯನ್ನು ಅರ್ಥಮಾಡಿಕೊಂಡು ಹೃದಯಕರಗಿ ವೀಸಾ ಕೊಟ್ಟುಬಿಡುತ್ತಾಳೇನೋ ಅಂದುಕೊಂಡೆ ನಾನು. ಅವಳು ನೀವು ನಿಜವಾಗಿ ಹೋಗಬೇಕಾಗಿರುವುದು ಎಲ್ಲಿಗೆ ಎಂದು ಕೇಳಿದಳು. ಇದು ರಾಮಾಯಣ ಕೇಳಿದ ಬಳಿಕ ರಾಮನಿಗೆ ಸೀತೆ ಏನಾಗಬೇಕು ಎಂದು ಕೇಳಿದ ಕತೆ. ಹೆಬ್ಬಾರರು ತಣ್ಣನೆಯ ಸ್ವರದಲ್ಲಿ ಫ್ರಾನ್ಸಿಗೆು ಎಂದರು. ಹಾಗಾದರೆ ಅಲ್ಲಿಯ ವೀಸಾ ತೋರಿಸಿ ಎನ್ನಬೇಕೇ ಆಕೆ! ಅದಕ್ಕೆ ಈಗಾಗಲೇ ಅರ್ಜಿಕೊಟ್ಟು ಬಂದಿದ್ದೇವೆ ಎಂದು ಹೆಬ್ಬಾರರೆಂದರು. ಅವಳ ಬಿಳಿ ಬಿಳಿ ಮೋರೆ ಕೆಂಪು ಕೆಂಪಾಯಿತು. ಅಷ್ಟೂ ಗೊತ್ತಾಗುವುದಿಲ್ವ ನಿಮಗೆ! ನಿಮ್ಮ ಮೈನ್ ಡೆಸ್ಟಿನೇಶನ್ ಯಾವುದೋ, ಅಲ್ಲಿನ ವೀಸಾ ಮೊದಲು ಮಾಡಿಸಿ ತನ್ನಿ. ಅದಿಲ್ಲದೆ ಹೋದರೆ, ನಾನು ಹೇಳಿದ ಡಾಕ್ಯುಮೆಂಟ್ಸು ತಂದರೂ, ನಿಮಗೆ ಬ್ರಿಟಿಷ್ ವೀಸಾ ಸಿಗುವುದಿಲ್ಲ ನೆನಪಿರಲಿ ಎಂದವಳೇ ಮರುಮಾತಿಗೆ ಆಸ್ಪದ ನೀಡದೆ ನೆಕ್ಸ್ಟ್ ಎಂದುಬಿಟ್ಟಳು.
ನಾವು ಹೊರಬಂದೆವು. ಬ್ರಿಟಿಷ್ ವೀಸಾದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ನಮ್ಮನ್ನು ಅನಾವಶ್ಯಕ ಮದ್ರಾಸಿಗೆ ಕಳುಹಿಸಿದ ಜೂಲಿಯಾಳಿಗೆ ನಾವೆಲ್ಲಾ ಚೆನ್ನಾಗಿ ಸಹಸ್ರನಾಮಾರ್ಚನೆ ಮಾಡಿ, ನಮ್ಮ ಸಮಯ, ಹಣ ಅಪವ್ಯಯವಾದುದನ್ನು, ಪೇಚಿಗೆ ಒಳಗಾದ ನೋವನ್ನು, ನೀಗಲು ಯತ್ನಿಸಿದೆವು. ಆದರೆ ಏನು ಪ್ರಯೋಜನ. ಎಂತಿದ್ದರೂ ಸೋಮವಾರ ಬೆಂಗಳೂರಿಗೆ ಹೋಗಲಿಕ್ಕಿದೆ. ಆಗ ಅವಳನ್ನು ನೋಡಿಕೊಂಡರಾಯಿತು ಎಂದು ಸಮಾಧಾನಪಟ್ಟುಕೊಂಡೆವು. ನಾನು ಕುಂದಾಪುರಕ್ಕೆ ಹೋಗಿ ಅಲ್ಲಿಂದ ಭಾನುವಾರ ರಾತ್ರಿ ಬಸ್ಸು ಹತ್ತುತ್ತೇನೆ. ನೀವು ಏನು ಮಾಡುತ್ತೀರೋ ನಿಮ್ಮ ಇಷ್ಟಕ್ಕೆ ಬಿಟ್ಟದ್ದು ಎಂದು ಹೆಬ್ಬಾರರು ಆಯ್ಕೆಯ ಸ್ವಾತಂತ್ರ್ಯವನ್ನು ನಮಗೇ ನೀಡಿದರು. ನಾನು ಕೋಟು, ಹೊಸ ಡ್ರೆಸ್ಸು ಹೊಲಿಸಬೇಕಿತ್ತು. ಹಣ ಹೊಂದಿಸಬೇಕಿತ್ತು. ಹಾಗಾಗಿ ಹೆಬ್ಬಾರರೊಡನೆ ಹೊರಟೆ. ಅನಿತಾ ಮತ್ತು ಎಲೈನ್ ಆರಾಮವಾಗಿ ಗುರುವಿನೊಡನೆ ಪಾಂಡಿಚೇರಿಯ ಸೌಂದರ್ಯ ಸವಿಯಲು ಹೊರಟುಬಿಟ್ಟರು.
ಆದರೆ ನನಗೆ ಮತ್ತು ಹೆಬ್ಬಾರರಿಗೆ ಮಂಗಳೂರು ಟ್ರೈನಲ್ಲಿ ಬರ್ತ್ ಸಿಗುವುದು ಅಷ್ಟು ಸುಲಭವಾಗಲಿಲ್ಲ. ಆರಂಭದಲ್ಲಿ ನಮಗೆ ಸೀಟೇ ಸಿಕ್ಕಿರಲಿಲ್ಲ. ಹೆಬ್ಬಾರರು ಕುಂದಾಪುರಕ್ಕೆ ಫೋನ್ ಮಾಡಿ ತಮ್ಮ ಮಿತ್ರ ಡಾ|| ರಾಮಮೋಹನರಿಂದ ತಾನು ಪತ್ರಕರ್ತನೆಂಬ ಮಾಹಿತಿಯ ಫ್ಯಾಕ್ಸು ತರಿಸಿದರು. ಅವರಿಂದಾಗಿ ನಾನೂ ಪತ್ರಕರ್ತರ ಕೋಟಾದಲ್ಲಿ ಸೀಟು ಗಿಟ್ಟಿಸಿಕೊಂಡೆ. ಸಂಜೆ ಆರೂವರೆಗೆ ನಾವು ರೈಲಲ್ಲಿದ್ದೆವು. ಮರುದಿನ ಮಂಗಳೂರಿಗೆ ತಲುಪಿದ ಬಳಿಕ ಕೋಟು, ಡ್ರೆಸ್ಸು ಹೊಲಿಗೆಗೆ ಕೊಟ್ಟು ಹೆಬ್ಬಾರರಿಂದ ಅಗಲಿದೆ. ನಾನು ಸುಳ್ಯ ಮುಟ್ಟುವಾಗ ಶನಿವಾರ ಸಂಜೆ ಆರು ಗಂಟೆ. ಅಂದು ಅರಂತೋಡಲ್ಲಿ ಸುಳ್ಯ ತಾಲೂಕು ಮಟ್ಟದ ನಾಲ್ಕನೆಯ ಸಾಹಿತ್ಯ ಸಮ್ಮೇಳನ. ವೀಸಾದ ದಂಡಯಾತ್ರೆಯಿಂದಾಗಿ ನನಗದು ತಪ್ಪಿಹೋಗಿತ್ತು. ಅನಾರೋಗ್ಯದಿಂದಿದ್ದರೂ, ಸಾಹಿತ್ಯ ಸಮ್ಮೇಳನದ ಉದ್ಛಾಟನೆಗೆ ಹಿರಿಯ ಕವಿ ಕಯಯ್ಯರರು ನನ್ನ ಒತ್ತಾಯಕ್ಕೆ ಒಪ್ಪಿದ್ದರು. ನನ್ನನ್ನು ಕಾಣದೆ ಖಂಡಿತಾ ಅವರು ಏನಾದರೂ ಅಂದುಕೊಂಡಿರಲೇಬೇಕು.
ಮರುದಿನ ಆದಿತ್ಯವಾರ ನನ್ನಲ್ಲಿದ್ದ ಹಳೆಯ ದಾಖಲೆಗಳೊಡನೆ ರಾತ್ರೆ ಬಸ್ಸು ಹತ್ತುವಾಗ ನಿರ್ಲಿಪ್ತನಾಗಿದ್ದೆ. ಸೋಮವಾರ ಯಥಾಪ್ರಕಾರ ಥಾಮಸ್‌ಕುಕ್ಕ್ ಕಛೇರಿಯಲ್ಲಿ ಎಲ್ಲರಿಗಿಂತ ಮೊದಲು ಹಾಜರಾದವನು ನಾನೇ. ತಂಡ ಬಂದ ಬಳಿಕ ಹೆಬ್ಬಾರರು ಜೂಲಿಯಾಳನ್ನು ಮೃದು ಮಾತುಗಳಿಂದ ಆಕೇಪಿಸಿದರು. ಜೂಲಿಯಾ ಅದನ್ನು ನಗುತ್ತಾ ಸ್ವೀಕರಿಸಿದಳು. ಅವಳು ಪ್ರತಿದಿನ ಅಂತಹ ಅದೆಷ್ಟು ಆಕೇಪಗಳನ್ನು ಕೇಳಬೇಕಾಗುತ್ತದೋ ಏನೋ? ನಮ್ಮ ದಾಖಲೆಗಳು, ಫೋಟೋ, ವೀಸಾ ಅರ್ಜಿಗಳನ್ನು ಸ್ವೀಕರಿಸಿ ಫೈಲಲ್ಲಿ ಹಾಕಿಟ್ಟಳು. ಮತ್ತೆ ಮಂಗಳೂರಿನಿಂದ ಪ್ಯಾರಿಸ್ಸಿಗೆ ಹೋಗುವ ಮತ್ತು ಮಂಗಳೂರಿಗೆ ವಾಪಾಸಾಗುವ ವಿಮಾನ ಟಿಕೇಟುಗಳನ್ನು ಕೂಡಾ ನೀಡಿದಳು ವೀಸಾ ಸಿಗುವ ಮೊದಲೇ ನಾನು ವಿಮಾನ ಟಿಕೇಟುಗಳ ದಿನಾಂಕ ಗಮನಿಸಿರಲಿಲ್ಲ. ನನ್ನ ತಲೆಯಲ್ಲಿ ಪ್ರವಾಸದ ಚಿಂತೆಗಳೇ ತುಂಬಿದ್ದವು. 14 ದಿನಗಳ ಕಾಸ್ಮೋಸ್ ಪ್ರವಾಸಕ್ಕೆ ರೂ. 35೦೦೦ ಕಟ್ಟಬೇಕೆಂದು ಥಾಮಸ್ ಕುಕ್ಕಿನ ಕಾಸ್ಮೋಸ್ ಏಜೆಂಟ್ ನಾಯರ್ ಹೇಳಿದಾಗ ಗುರು, ಅನಿತಾ ಮತ್ತು ಎಲೈನ್ ಹಿಂಜರಿದರು. ಹೆಬ್ಬಾರರು ಹೇಗೂ ಜತೆಗಿದ್ದಾರೆಂದು ನಾನು ಹಣ ಕಟ್ಟಿದೆ. ಬೆಂಗಳೂರಿನ ಪ್ರೋ ಮಾಲಿ ಮದ್ದಣ್ಣ ಮತ್ತು ಮಿತ್ರ ಸತ್ಯನಾರಾಯಣ ಹೊಳ್ಳರಿಂದ ಸಕಾಲಕ್ಕೆ ಆರ್ಥಿಕ ನೆರವು ಸಿಕ್ಕಿದ್ದಕ್ಕೆ ಅದು ಸಾಧ್ಯವಾಯಿತು. ಅದಕ್ಕಾಗಿ ನಮ್ಮ ಹಣವನ್ನು ನಾವು ಅಲ್ಲೇ ಪೌಂಡಿಗೆ ಪರಿವರ್ತಿಸಿಕೊಳ್ಳಬೇಕಾಯಿತು. ಇಷ್ಟೆಲ್ಲಾ ಮುಗಿಸಿ ಹೊರಡುವಾಗ ಹೆಬ್ಬಾರರು ಫ್ಯಾರಿಸ್ಸಿನಲ್ಲಿ ಒಂದು ವಾರಗಳ ಫ್ರೆಂಚ್ ಭಾಷಾ ಕೋರ್ಸು ಇದ್ದರೆ ನಾವು ಮಾರ್ಚ್ 25ರಂದು ಮುಂಬಯಿಯಿಂದ ಪ್ಯಾರಿಸ್ಸಿಗೆ ಹಾರಬೇಕು. ಇಲ್ಲದಿದ್ದರೆ ಎಪ್ರಿಲ್ 1ರಂದು ಹೋದರೆ ಸಾಕು. ಶೆಂಗನ್ ವೀಸಾ ಸಿಕ್ಕ ಬಳಿಕ ಒಟ್ಟಿಗೆ ಮದ್ರಾಸಿಗೆ ಹೋಗೋಣು ಎಂದರು. ನನಗೆ ಆ ರಾತ್ರೆಯೇ ಬಸ್ಸಲ್ಲಿ ಸುಳ್ಯಕ್ಕೆ ವಾಪಾಸಾಗಲು ಸಾಧ್ಯವಾಯಿತು. ಅಂದಿನಿಂದ ಹೆಬ್ಬಾರ ರಿಂದ ಬರಬಹುದಾದ ಫೋನ್ ಕರೆಗಾಗಿ ಕಾಯುವುದು ನನ್ನ ಹೊಸ ಹವ್ಯಾಸವಾಗಿ ಬಿಟ್ಟಿತು.
ಹೊಸತೊಂದು ಆಪತ್ತುತ ಮಾರ್ಚ್ ಹನ್ನೆರಡರಂದು ಅಪರಾಹ್ನ ಎರಡೂವರೆ ಗಂಟೆಗೆ ಕುಂದಾಪುರದಿಂದ ಹೆಬ್ಬಾರರು ಮಾತಾಡಿದರು. ಇನ್‌ಕಂ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟು ಮತ್ತು ಇಂಟರ್‌ನ್ಯಾಶನಲ್ ಮೆಡಿಕ್ಲೇಮು ಸರ್ಟಿಫಿಕೇಟು ಇಲ್ಲದೆ, ಶೆಂಗನ್ ವೀಸಾದ ನಮ್ಮ ಅರ್ಜಿ ತಿರಸ್ಕೃತವಾಗಿದೆ. ನಾನು ಚಾರ್ಟರ್ಡ್ ಅಕೌಂಟೆಂಟ್‌ರೊಬ್ಬರ ಸಹಾಯದಿಂದ ಕ್ಲಿಯರೆನ್ಸ್ ಸರ್ಟಿಕೇಟು ಮಾಡಿಸಿಕೊಂಡೆ. ಮೆಡಿಕ್ಲೇಮು ಪಡೆಯೋದು ಅಷ್ಟು ಕಷ್ಟವಿಲ್ಲ. ‘ನೀನು ಇಂದೇ ಮಂಗಳೂರಿಗೆ ಹೋಗಿ ಎರಡನ್ನೂ ಮಾಡಿಸಿಕೋ. ನಾಳೆ ರಾತ್ರೆ ಬಸ್ಸಲ್ಲಿ ಬೆಂಗಳೂರಿಗೆ ಹೋಗು. ಶುಕ್ರವಾರ, ಅಂದರೆ 14ರಂದು ಬೆಳಿಗ್ಗೆ ಥಾಮಸ್ ಕುಕ್ಕ್ ಕಛೇರಿಯಲ್ಲಿ ಈ ಡಾಕ್ಯುಮೆಂಟ್ಸ್ ಸಹಿತ ನೀನಿರಬೇಕು. ಇಲ್ಲದಿದ್ದರೆ ವೀಸಾ ಸಿಗುವುದಿಲ್ಲ. ತಕ್ಷಣ ಹೊರಡು’ ಹೆಬ್ಬಾರರು ಉದ್ವೇಗದಲ್ಲಿದ್ದರು. ನಾನು ಆಯಿತು ಎಂದಷ್ಟೇ ಹೇಳಿ ಫೋನಿಟ್ಟೆ.
ಸುಳ್ಯದಿಂದ ಮಂಗಳೂರಿಗೆ ಎರಡೂವರೆ ತಾಸುಗಳ ಪಯಣ. ದಾರಿಯಲ್ಲಿ ಬ್ರಿಟಿಷರು ಕಟ್ಟಿಸಿದ ಪಾಣೆಮಂಗಳೂರು ಸೇತುವೆ ಸಿಗುತ್ತದೆ. ಅಗಲ ಕಿರಿದಾದ ಈ ಸೇತುವೆಯಲ್ಲಿ ಒಮ್ಮೆಗೆ ಒಂದು ವಾಹನ ಮಾತ್ರ ಹಾದುಹೋಗಬಹುದು. ಡ್ರೈವರುಗಳ ಆತುರ ಬುದ್ಧಿಯಿಂದಾಗಿ ಅಲ್ಲಿ ಆಗಾಗ ಟ್ರಾಫಿಕ್ ಜಾಂ ಆಗುತ್ತದೆ. ಆಗೆಲ್ಲಾ ಅರ್ಧವೋ, ಮುಕ್ಕಾಲೋ ಗಂಟೆ ಸುಮ್ಮನೆ ವ್ಯಯವಾಗುತ್ತದೆ. ಈಗ ಗಂಟೆ ಎರಡೂವರೆ. ಮನೆಯಿಂದ ಹೊರಟು ಸುಳ್ಯ ಸೇರುವಾಗ ಮೂರು. ಅಲ್ಲಿಂದ ತಕ್ಷಣ ಬಸ್ಸು ಸಿಕ್ಕರೆ ಮಂಗಳೂರು ಮುಟ್ಟುವಾಗ ಐದೂವರೆ. ಆಗ ಇನ್‌ಕಂಟ್ಯಾಕ್ಸ್ ಮತ್ತು ಇನ್ಶೂರೆನ್ಸ್ ಕಛೇರಿಗಳು ಮುಚ್ಚಿರುತ್ತವೆ. ಏನಾದರಾಗಲಿ, ನಾಳೆಯೇ ಮಂಗಳೂರಿಗೆ ಹೋಗುವುದು. ಸರ್ಟಿಫಿಕೇಟುಗಳು ಸಿಕ್ಕರೆ ಅಲ್ಲಿಂದಲೇ ಬಸ್ಸು ಹತ್ತುವುದು. ಆದರೆ ಎಷ್ಟು ಬಾರಿ ಬೆಂಗಳೂರಿಗೆ ನಿದ್ದೆಯಿಲ್ಲದ ಪಯಣ. ಫ್ರಾನ್ಸ್‌ಗೆ ಹೋಗಲು ಆಯ್ಕೆಯಾದ ದಿನದಂದು ಅದೆಷ್ಟು ಸಂತೋಷಪಟ್ಟಿದ್ದೆ! ಆ ಬಳಿಕ ಪ್ರತಿಯೊಂದು ದಿನವೂ ಆತಂಕವೇ. ಹೊಸ ಹೊಸ ಸಮಸ್ಯೆಗಳೇ. ಕೊನೆಗೂ ಫ್ರಾನ್ಸ್‌ಗೆ ಹೋಗಲು ಆಗುತ್ತದೆಯೋ ಇಲ್ಲವೋ? ಹಿಂದೊಮ್ಮೆ ಕರ್ನಾಟಕ ಸರಕಾರವೇ ಆಯ್ಕೆ ಮಾಡಿದ್ದ ಕಲಾ ತಂಡವೊಂದಕ್ಕೆ, ನಿಗದಿತ ಸಮಯದಲ್ಲಿ ವೀಸಾ
ದೊರಕದೆ, ಅದು ವಿದೇಶ ಪ್ರಯಾಣವನ್ನೇ ರದ್ದುಪಡಿಸಿ ಯಾವಜ್ಜೀವನ ಪರಿಯಂತವೂ ಹಳಹಳಿಸುವಂತಾಗಿತ್ತು. ಅದೆಷ್ಟು ಮಂದಿಗೆ ಹೀಗಾಗಿದೆಯೋ ಏನೊ? ಎಲ್ಲವನ್ನೂ ಯೋಚಿಸಿ, ಊಟ ಮುಗಿಸಿ, ಒಂದು ತೀರ್ಮಾನಕ್ಕೆ ಬಂದು, ಹೆಬ್ಬಾರರಿಗೆ ಹೇಳಿದೆ. ಇಂದಿನ್ನು ಮಂಗಳೂರಿಗೆ ಹೋಗಿ ಪ್ರಯೋಜನವಿಲ್ಲ. ನಾಳೆ ಹೋಗುತ್ತೇನೆ. ಅಲ್ಲಿಂದ ಸರ್ಟಿಫಿಕೇಟುಗಳನ್ನು ಕೊರಿಯರಲ್ಲಿ ಜೂಲಿಯಾಳಿಗೆ ಕಳಿಸುತ್ತೇನೆ. ಆಗದೆ? ಏನು ಬೇಕಾದರೂ ಮಾಡಿಕೋ. ಶುಕ್ರವಾರ ಬೆಳಿಗ್ಗೆ ನಿನ್ನ ಡಾಕ್ಯುಮೆಂಟ್ಸ್ ಜೂಲಿಯಾಳ ಕೈ ಸೇರದಿದ್ದರೆ, ನಿನಗೆ ಫ್ರಾನ್ಸ್ ಪ್ರವಾಸದ ಯೋಗವೇ ಇಲ್ಲ ಎಂದು ತಿಳಿ. ಅದಲ್ಲದೆ ಕಾಸ್ಮೋಸ್ ಪ್ರವಾಸಕ್ಕೆಂದು ನೀನು ಕಟ್ಟಿದ ಮೂವತೈದು ಸಾವಿರಕ್ಕೆ ಮೂರು ನಾಮವಾಗುತ್ತ ಎಂದು ಉತ್ತರ ಬಂತು.
ಇನ್‌ಕಂಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಕೇಟು ಪಡೆಯಲು ಒಬ್ಬ ಚಾರ್ಟರ್ಡ್ ಅಕೌಂಟಂಟನ ಸಹಾಯಬೇಕು ಅಂದಾಗ, ನನಗೆ ನೆನಪಾದದ್ದು ಶ್ರೀಕರ. ಮಂಗಳೂರಲ್ಲಿ ಎಕ್ಸ್‌ಪೋರ್ಟ್ ಸಂಸ್ಥೆಯೊಂದರಲ್ಲಿ ಅಕೌಂಟೆಂಟು ಆತ. ಅವನ ಬಾಸ್ ರಾಮಚಂದ್ರರಿಗೆ ಫ್ರೆಂಚ್ ಭಾಷೆ ಚೆನ್ನಾಗಿ ಬರುತ್ತದೆ. ಶ್ರೀಕರನನ್ನು ತಕಣ ಸಂಪರ್ಕಿಸಿದೆ. ಕ್ಲಿಯರೆನ್ಸ್ ಸರ್ಟಿಫಿಕೇಟು ಪಡೆಯಲು ಶ್ಯಾಮಭಟ್ ಸಹಾಯ ಮಾಡುತ್ತಾರೆ. ನಿಮಗೆ ಫ್ರೆಂಚ್ ಜ್ಞಾನಕ್ಕೆ ನಮ್ಮ ಬಾಸ್ ಸಹಾಯ ಮಾಡುತ್ತಾರೆ. ನಿಮ್ಮ ಟ್ಯಾಕ್ಸ್ ಪೇಮೆಂಟ್ ಅಕಾನಲಜ್‌ಮೆಂಟುಗಳನ್ನು ತನ್ನಿ. ಮತ್ತೆ ನಿಮಗೆ ಬೇಕಿರುವ ಪದಗಳನ್ನು ಬರಕೊಂಡು ಬನ್ನಿ. ಬೆಳಿಗ್ಗೆ ಬೇಗ ಬಂದುಬಿಡಿ. ನಿಮ್ಮ ಕೆಲಸ ಖಂಡಿತಾ ಆಗುತ್ತದೆ ಎಂದು ನನ್ನ ಹಳೇ ಶಿಷ್ಯ ಶ್ರೀಕರ ಧೈರ್ಯತುಂಬಿದ.
ನನ್ನ ಆದಾಯ ತೆರಿಗೆ ದಾಖಲೆಗಳಿರುವುದು ಪುತ್ತೂರಿನ ಚಾರ್ಟರ್ಡ್ ಅಕೌಂಟೆಂಟ್ ರಾಮಭಟ್ಟರಲ್ಲಿ. ನಿನ್ನೆ ಎಲ್.ಐ.ಸಿ. ಸಾಲಕ್ಕೆ ಅರ್ಜಿ ಹಾಕಲು ಪುತ್ತೂರಿಗೆ ಹೋಗಿದ್ದೆ. ಇಂದು ಪುನಃ ಹೋಗಲೇಬೇಕು. ಫ್ರಾನ್ಸಿಗೇ ಹೊರಟವನಿಗೆ ಪುತ್ತೂರೇನು? ಹೊರಟೆ. ರಾಮಭಟ್ಟರ ಕಛೇರಿಯಿಂದ ಹಳೆಯ ದಾಖಲೆಗಳನ್ನೆಲ್ಲಾ ಪಡಕೊಂಡೆ. ಸುಳ್ಯಕ್ಕೆ ವಾಪಾಸಾಗಿ, ನನಗೆ ಫ್ರಾನ್ಸಿನಲ್ಲಿ ಬೇಕಾಗಬಹುದಾದ ಪದಗಳ ಪಟ್ಟಿ ತಯಾರಿಸಿದೆ. ಪರಿಚಯ ಹೇಳಿಕೊಳ್ಳುವ ನಾಲ್ಕಾರು ವಾಕ್ಯಗಳನ್ನು ಬರೆದೆ, ರಾಮಚಂದ್ರರಿಂದ ಫ್ರೆಂಚಿಗೆ ತರ್ಜುಮೆ ಮಾಡಿಸಿಕೊಳ್ಳಲು.
ಮರುದಿನ ತಮ್ಮ ಕಛೇರಿಯಲ್ಲಿ ರಾಮಚಂದ್ರರು ಸಿಕ್ಕರು. ಅವರಲ್ಲಿ ತರ್ಜುಮೆ ಸಾಮಾಗ್ರಿಗಳನ್ನು ನೀಡಿದೆ. ‘ಓಹೋ ಅದಕ್ಕೇನಂತೆ’ ಎಂದವರು ಒಪ್ಪಿದರು. ಶ್ರೀಕರ ತನ್ನ ಮಾರುತಿಯಲ್ಲಿ ನನ್ನನ್ನು ಶ್ಯಾಮಭಟ್ಟರಲ್ಲಿಗೆ ಒಯ್ದ. ಅವರು ನನ್ನ ದಾಖಲೆಗಳನ್ನೆಲ್ಲಾ ನೋಡಿ ಇದು ಫೈನ್ನ್ಶಿಯಲ್ ಇಯರೆಂಡ್.ಇನ್‌ಕಂಟ್ಯಾಕ್ಸ್ ಕಛೇರಿ ಬಹಳ ಬಿಸಿ. ಒಂದೇ ದಿನದಲ್ಲಿ ನಿಮ್ಮ ಕೆಲಸ ಆಗುತ್ತದೋ ಇಲ್ಲವೋ ಎಂದು ಶಂಕೆ ಮೂಡಿಸಿದರು. ಹೆಬ್ಬಾರರ ಎಚ್ಚರಿಕೆಯ ಮಾತುಗಳನ್ನು ಯಥಾವತ್ತಾಗಿ ಭಟ್ಟರಲ್ಲಿ ಹೇಳಿದಾಗ, ಅವರು ತಕಣ ಅವರ ಮಾರುತಿಯಲ್ಲಿ ಇನ್‌ಕಂಟ್ಯಾಕ್ಸ್ ಕಛೇರಿಗೆ ನನ್ನನ್ನು ಕರೆದೊಯ್ದರು. ನಾವು ಇನ್‌ಕಂಟ್ಯಾಕ್ಸ್ ಕಛೇರಿ ಮುಖ್ಯಸ್ಥ ವೆಲ್ಲಿತ್ತೋಟ್ಟಂರವರನ್ನು ಭೇಟಿಯಾದೆವು. ಕಡತಗಳ ರಾಶಿಯಲ್ಲಿ ತಮ್ಮನ್ನು ಕಳೆದುಕೊಂಡಿದ್ದ ವೆಲ್ಲಿತ್ತೋಟ್ಟಂ ಇಲ್ಲಿ ಎಷ್ಟೊಂದು ಕೆಲಸ ರಾಶಿ ಬಿದ್ದಿದೆ ನೋಡಿ. ಈಗ ಬಂದು, ಇಂದೇ ನಿಮ್ಮ ಕೆಲಸ ಆಗಬೇಕೆಂದರೆ ಹೇಗೆ? ಇಂದು ಅರ್ಜಿ ಕೊಟ್ಟು ಹೋಗಿ. ನಾಳೆ ಬನ್ನಿ ಈಗ ನಡೀರಿ ಎಂದು ಹರಿಹಾಯ್ದರು.
ನಾನು ಸ್ವರದಲ್ಲಿ ಸಾಧ್ಯವಾದಷ್ಟು ದೈನ್ಯತೆ ತುಂಬಿ ಹೇಳಿದೆ. ನಾನೊಬ್ಬ ಬಡಪಾಯಿ ಅಧ್ಯಾಪಕ. ತಿಂಗಳ ಸಂಬಳದಲ್ಲಿ ಬದುಕುವ ನಾನು, ನನ್ನ ಸ್ವಂತ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡುವುದು ಕನಸಿನ ಮಾತು. ಈಗ ಒಂದು ಅವಕಾಶ ಸಿಕ್ಕಿದೆ. ಇವತ್ತು ನೀವು ಸರ್ಟಿಫಿಕೇಟು ಕೊಡದೇ ಇದ್ದರೆ ನನಗೆ ವೀಸಾ ಸಿಗುವುದಿಲ್ಲ. ಅಲ್ಲಿಗೆ ನನಗೆ ಸಿಕ್ಕ ಒಂದು ಸುವರ್ಣ ಅವಕಾಶ ತಪ್ಪಿಹೋಗುತ್ತದೆ. ನನ್ನ ತಿಂಗಳ ಸಂಬಳದಿಂದ ಕಾಲೇಜು ಕಛೇರಿಯಲ್ಲಿ ಪ್ರತಿ ತಿಂಗಳೂ ಐನೂರು ರೂಪಾಯಿ ತೆರಿಗೆ ಮುರಿಯುತ್ತಾರೆ. ಈ ವರೆಗೆ ನಾನು ರಿಟನ್ಸ್ ಫೈಲ್ ಮಾಡಿದ್ದಕ್ಕೆ ನೀವೇ ಕಳುಹಿಸಿದ ಅಕ್ನಾಲಜ್‌ಮೆಂಟುಗಳು ಇಲ್ಲಿವೆ. ನನ್ನ ಯುರೋಪು ಪ್ರವಾಸಕ್ಕೆ ಎಲ್ಲೈಸಿಯಿಂದ ಸಾಲ ಪಡೆಯುತ್ತಿದ್ದೇನೆ. ಹಾಗಿರುವಾಗ ಹಣಕೊಂಡು ಹೋಗಿ ಸ್ವಿಸ್ ಬ್ಯಾಂಕಲ್ಲಿಡಲು ನನ್ನಂಥವನಿಗೆ ಹೇಗೆ ಸಾಧ್ಯ? ನೀವು ನನ್ನ ಬಗ್ಗೆ ಯಾವ ಸಂಶಯವನ್ನೂ ತಾಳಬೇಕಾದ ಅಗತ್ಯವಿಲ್ಲ.
ವೆಲ್ಲಿತ್ತೋಟ್ಟಂರ ಗಂಭೀರ ಮುಖ ಸಡಿಲವಾಯಿತು. ಅದೆಲ್ಲಾ ನೀವು ಯಾಕೆ ಹೇಳುತ್ತೀರಿ? ಇಲ್ಲಿರುವುದು ಪ್ರಾಕ್ಟಿಕಲ್ ಸಮಸ್ಯೆ ಮಾರಾಯರೇ. ನಿಮ್ಮ ಅಕೌಂಟು ಈವರೆಗೆ ಬೇರೆ ಸರ್ಕಲಲ್ಲಿತ್ತು. ಈಗ ಇಲ್ಲಿಗೆ ಶಿಫ್ಟಾಗಿದೆ. ಕಡತಗಳೆಲ್ಲಾ ಇನ್ನೂ ಇಲ್ಲಿಗೆ ಬಂದಿಲ್ಲ. ನಿಮ್ಮ ಕಡತ, ಈ ಗೊಂದಲದ ಗೂಡಲ್ಲಿ ಎಲ್ಲಿದೆಯೆಂದು ಈಗಲೇ ಹುಡುಕಲು ಯಾರಿಗೆ ಸಮಯವಿದೆ? ನ್ನಾಂತೂ ಸದ್ಯ ಏನನ್ನೂ ಮಾಡುವಂತಿಲ್ಲ. ಒಳಗೆ ಹೋಗಿ ಒಮ್ಮೆ ನೋಡಿ. ನಿಮಗೇ ಅರ್ಥವಾಗುತ್ತದೆ. ಸ್ಟಾಫ್ ಯಾರಾದರೂ ಫ್ರೀಯಾಗಿದ್ದರೆ ನಿಮ್ಮ ಕೆಲಸ ಧಾರಾಳ ಮಾಡಿಸಿಕೊಳ್ಳಬಹುದು ಎಂದು ಕೈ ಚೆಲ್ಲಿದರು. ನಾನು ಶ್ಯಾಮ ಭಟ್ಟರ ಮುಖ ನೋಡಿದೆ. ಅವರಾದರೂ ಏನು ಮಾಡಲು ಸಾಧ್ಯ?
ಅಗ ಬಾಗಿಲನ್ನು ತಳ್ಳಿ ಒಳಬಂದ ವ್ಯಕ್ತಿಯೊಬ್ಬ ‘ನಮಸ್ಕಾರ ಸಾ’ ಅಂದ. ಅರೇ, ಯಾರಿಗಿರಬಹುದು ಈ ನಮಸ್ಕಾರ ಎಂದು ಅತ್ತ ನೋಡಿದೆ. ಆತ ಶರೀಫ್. ನನ್ನೊಬ್ಬ ಹಳೇ ಶಿಷ್ಯ. ಬರಹಗಾರನಾಗಿ ನನಗೆ ಆಪ್ತನಾದವ. ಮುಳುಗುತ್ತಿದ್ದ ನನಗೆ ಹುಲ್ಲುಕಡ್ಡಿ ಸಿಕ್ಕಿತು! ವೆಲ್ಲಿತ್ತೋಟ್ಟಂ ನಿಮ್ಮ ಶಿಷ್ಯನೇ ಸಿಕ್ಕಿದನಲ್ಲಾ! ಇವನನ್ನೇ ಕೇಳಿ. ಇನ್ನು ನಿಮ್ಮ ಅದೃಷ್ಟ ಎಂದು ಅವನೊಟ್ಟಿಗೆ ನನ್ನನ್ನು ಸಾಗಹಾಕಿದರು.
ಶರೀಫ್ ಹಳೆಯ ಕಡತಗಳನ್ನೆಲ್ಲಾ ಹುಡುಕಿ ಧೂಳು ಕೊಡವಿದ. ಸುಮಾರು ಎರಡು ಗಂಟೆಗಳ ಅವಿರತ ಹುಡುಕಾಟದ ಬಳಿಕ ಅವನ ಮುಖ ಅರಳಿತು. ಸಿಕ್ಕಿಬಿಟ್ಟಿತು ಸಾ. ನೀವು ಸಂಜೆ ನಾಲ್ಕು ಗಂಟೆಗೆ ಬನ್ನಿ. ಸರ್ಟಿಫಿಕೇಟು ರೆಡಿ ಮಾಡಿಡ್ತೇನೆ ಅಂದ. ನನಗೆ ಜೀವ ಬಂತು. ಅವನಿಗೆ ಮುಂಗಡ ಕೃತಜ್ಞತೆ ಹೇಳಿ, ಓವರ್‌ಸೀಸ್ ಮೆಡಿಕ್ಲೈಮು ಸರ್ಟಿಫಿಕೇಟು ಮಾಡಿಸಲು ಇನ್ಶೂರೆನ್ಸ್ ಕಛೇರಿಗೆ ಹೋದೆ. ಅಲ್ಲೂ ‘ಇಯರೆಂಡ್’ ಸಮಸ್ಯೆ. ಆದರೆ ಮೇನೇಜರರು ನನ್ನ ತುರ್ತನ್ನು ಅರ್ಥಮಾಡಿಕೊಂಡು ಒಂದು ಗಂಟೆಯಲ್ಲಿ ನನ್ನ ಕೆಲಸ ಮಾಡಿಕೊಟ್ಟರು.
ಸಂಜೆ ನಾಲ್ಕಕ್ಕೆ ಸರಿಯಾಗಿ ಇನ್‌ಕಂಟ್ಯಾಕ್ಸ್ ಕಛೇರಿಗೆ ಬಂದಾಗ, ಶರೀಫ ಸರ್ಟಿಫಿಕೇಟು ರೆಡಿ ಮಾಡಿ ಇಟ್ಟಿದ್ದ. ಗುರುಗಳು ಎಂಬ ಮಮತೆಯಿಂದ ಅವನು ಮಾಡಿದ ಉಪಕಾರಕ್ಕೆ ಹೃದಯತುಂಬಿ ಬಂದು ಅವನ ಕೈಗಳನ್ನು ಪ್ರೀತಿಯಿಂದ ಅದುಮಿದೆ. ವೆಲ್ಲಿತ್ತೋಟ್ಟಂರವರ ಛೇಂಬರ್ ಪ್ರವೇಶಿಸಿ ಬಹಳ ಉಪಕಾರ ಮಾಡಿದ್ರಿ ಸರ್. ನೀವಿವತ್ತು ಇದನ್ನು ಕೊಡದೇ ಇರುತ್ತಿದ್ದರೆ ನಾನು ವಿದೇಶ ಪ್ರವಾಸದ ಆಸೆಯನ್ನೇ ಬಿಟ್ಟುಬಿಡಬೇಕಾಗುತ್ತಿತ್ತು. ಪ್ರವಾಸ ಮುಗಿದ ಬಳಿಕ ಪುಸ್ತಕ ಒಂದನ್ನು ಬರೆಯಬೇಕೆಂದಿದ್ದೇನೆ. ಅದರಲ್ಲಿ ನಿಮ್ಮನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ ಎಂದೆ.
ವೆಲ್ಲಿತ್ತೋಟ್ಟಂ ಮುಖ ಮೊರದಗಲವಾಯಿತು. ಮೇಸ್ಟ್ರುಗಳೆಂದರೆ ನನಗೆ ಯಾವತ್ತೂ ಗೌರವವೇ. ಒಂದಿಷ್ಟೂ ಸ್ವಾರ್ಥವಿಲ್ಲದೆ, ಪ್ರಾಮಾಣಿಕವಾಗಿ ದುಡಿಯುವ ತುಂಬಾ ಮಂದಿಯನ್ನು ನಾನು ಶಿಕ್ಷಕವರ್ಗದಲ್ಲಿ ಕಂಡಿದ್ದೇನೆ. ಈ ಸೀಟಲ್ಲಿ ಕೂತಿರುವ ನಾನು ಅನಿವಾರ್ಯವಾಗಿ ಅನೇಕರಿಗೆ ಕೈಮುಗಿಯಬೇಕಾಗುತ್ತದೆ. ಆದರೆ ನಿಜವಾದ ಗೌರವದಿಂದ ನಾನು ಕೈಮುಗಿಯುವುದು ನನ್ನ ಮೇಷ್ಟ್ರುಗಳಿಗೆ ಮಾತ್ರ. ನಿಮ್ಮಂತಹ ಶಿಕ್ಷಕಕರು ದೇಶ ಸುತ್ತಬೇಕು. ಹೊರದೇಶಗಳಿಗೆ ಹೋಗಿ ಬರುವಂತಾಗಬೇಕು. ಏಕೆಂದರೆ ನಿಮ್ಮ ಜ್ಞಾನ ಮತ್ತು ಅನುಭವಗಳು ಮುಂದಿನ ಪೀಳಿಗೆಗಳಿಗೆ ವರ್ಗಾಯಿಸಲ್ಪಡುತ್ತವೆ. ಹೋಗಿ ಬನ್ನಿ. ನಿಮಗೆ ಒಳ್ಳೆಯದಾಗಲಿ ಎಂದು ಪ್ರಾಮಾಣಿಕ ಸ್ವರದಲ್ಲಿ ಹೇಳಿದರು.
ಆಗಲೇಬೇಕಾಗಿದ್ದ ಎರಡು ದಾಖಲೆಗಳು ನನ್ನ ಕೈಯಲ್ಲಿದ್ದವು. ಹಗುರವಾದ ಮನಸ್ಸಿನಿಂದ ಕಛೇರಿಯಿಂದ ಹೊರಬಿದ್ದೆ. ಅವುಗಳ ಸಾಕಷ್ಟು ಪ್ರತಿಗಳನ್ನು ಮಾಡಿಸಿಕೊಂಡು, ಮೂಲ ದಾಖಲೆಗಳನ್ನು ಎಲಿಫೀ ಕೊರಿಯರ್ ಮೂಲಕ ಬೆಂಗಳೂರಿಗೆ ರವಾನಿಸಿ, ಅವು ಮರುದಿನ ಬೆಳಿಗ್ಗೆ ಹತ್ತು ಗಂಟೆಗೆ ಮೊದಲೇ ಜೂಲಿಯಾಳ ಕೈ ಸೇರುತ್ತವೆನ್ನುವುದನ್ನು ಖಾತರಿಪಡಿಸಿಕೊಂಡೆ. ಖುಷಿಯಿಂದ ಹೆಬ್ಬಾರರನ್ನು ಸಂಪರ್ಕಿಸಿ ಎಲ್ಲಾ ದಾಖಲೆಗಳು ಸಿಕ್ಕಿವೆ. ಕೊರಿಯರ್‌ನಲ್ಲಿ ಥಾಮಸ್‌ಕುಕ್ಕ್‌ಗೆ ಕಳುಹಿಸಿಕೊಟ್ಟೆು ಎಂದೆ. ಗುಡ್, ಪಾಸಿಟಿರ್ವ್ ಥಿಂಕಿಂಗ್‌ನ ಫಲ ಇದು! ನಿನಗೆ ವಿದೇಶ ಪ್ರವಾಸದ ಯೋಗ ಖಂಡಿತಾ ಇದೆ ಎಂದು ಹೆಬ್ಬಾರರು ಉತ್ತರಿಸಿದರು.
ನಾಲ್ಕು ದಿನಗಳು ಉರುಳಿದವು. ಎಲ್ಲೈಸಿ ಸಾಲ ನೀಡಿ, ನನ್ನ ಆರ್ಥಿಕ ತಳಮಳವನ್ನು ಪರಿಹರಿಸಿತ್ತು. ಈಗ ಪ್ರತಿದಿನ ಹೆಬ್ಬಾರರ ಫೋನಿನ ನಿರೀಕ್ಷೆ. ಇನ್ನು ಯಾವ ಕ್ಷಣ ಎಲ್ಲಿಗೆ ಹೋಗಬೇಕೋ? ಯಾವ ಕ್ಷುಲ್ಲಕ ಕಾರಣಕ್ಕೆ ವೀಸಾ ಅರ್ಜಿ ತಿರಸ್ಕೃತವಾಗುತ್ತದೋ ಎಂಬ ತಳಮಳಕ್ಕೆ ಯಾವ ಪರಿಹಾರವೂ ಇರಲಿಲ್ಲ. ಕೊನೆಗೂ ಫೋನು ಕರೆ ಬಂದೇ ಬಿಟ್ಟಿತು. “ಗುಡ್ ನ್ಯೂಸ್. ಶೆಂಗನ್ ವೀಸಾ ಸಿಕ್ಕಿದೆ. ನಾಳೆ ರಾತ್ರಿಯ ಬೆಂಗಳೂರು ಬಸ್ಸು ಹತ್ತು. ಅಲ್ಲಿಂದ ಬ್ರಿಟಿಷ್ ವೀಸಾಕ್ಕಾಗಿ ಮದ್ರಾಸಿಗೆ ಹೋಗಲಿಕ್ಕಿದೆ’ ಹೆಬ್ಬಾರರ ದನಿಯಲ್ಲಿ ಅಪರಿಮಿತ ಉತ್ಸಾಹ. ಒಂಬತ್ತು ತಿಂಗಳು ಗರ್ಭಹೊತ್ತು, ಕಷ್ಟ ಅನುಭವಿಸಿದ ಹೆಣ್ಣೊಬ್ಬಳಿಗೆ ಸುಖ ಪ್ರಸವವಾದರೆ, ಹೀಗೆ ಇರಬಹುದು ಅವಳ ಮನೋಸ್ಥತಿ! ನಾನು ಮರುರಾತ್ರೆ ಬಸ್ಸೇರುವಾಗ ತುಂಬಾ ಉಲ್ಲಸಿತನಾಗಿದ್ದೆ.
ನೆಲಕುಸಿಯೆ ಬೆಂಗಳೂರಲ್ಲಿ ಶೆಂಗನ್ ವೀಸಾ ನೀಡುವಾಗ ಜೂಲಿಯಾ ಹೂ ನಗೆಯೊಂದಿಗೆ ಕೈ ಕುಲುಕಿ ‘ಬೋನ್ ವೋಯೇಜ್’ ಹೇಳಿದಳು. ನಾಯರ್ ನನಗೆ ಮತ್ತು ಹೆಬ್ಬಾರರಿಗೆ ಏಳು ರಾಷ್ಟ್ರಗಳ ಕಾಸ್ಮೋಸ್ ಪ್ರಯಾಣದ ಟಿಕೆಟ್ಟು ಲಂಡನಿನ್ನಲ್ಲಿ ರಿಸರ್ವ್ ಆಗಿರುವುದರ ಬಗ್ಗೆ ಮಾಹಿತಿ ನೀಡಿದ. ನಮ್ಮ ತಂಡದ ಮಹಿಳಾಮಣಿಯರಿಗೆ ಮತ್ತು ಗುರುವಿಗೆ ಬ್ರಿಟನ್ನು ನೋಡುವ ಆಕಾಂಕ್ಷೆಯಿತ್ತು. ಹಾಗಾಗಿ ಎಲ್ಲರೂ ಮಧ್ಯಾಹ್ನದ ಶತಾಬ್ಧಿ ಎಕ್ಸ್‌ಪ್ರೆಸ್ಸಲ್ಲಿ ಮದ್ರಾಸಿಗೆ ಹೊರಟೆವು. ಅಂದು ದಿನಾಂಕ 2್ಝ್ಝ1997. ಹಾದಿಯಲ್ಲಿ ಹೆಬ್ಬಾರರು ನಾವು ೨೪ ರಂದು ಮಂಗಳೂರಿಂದ ಮುಂಬಯಿಗೆ ಹೋಗುವುದು. 25ರಂದು ಅಲ್ಲಿ ಇಟೆಲಿ ಮತ್ತು ಸ್ವಿಜರ್ಲ್ಯಾಂಡ್ ವೀಸಾ ಮಾಡಿಸಿ ಅಂದೇ ರಾತ್ರಿ ಪ್ಯಾರಿಸ್ಸಿಗೆ ಹಾರುವುದು ಎಂದು ಬಾಂಬ್ ಸಿಡಿಸಿದರು.
ನಾನು ನಖಶಿಖಾಂತ ಬೆವತು ಹೋದೆ. ಫ್ರೆಂಚ್ ಭಾಷಾ ಕಲಿಕೆ ಬಗ್ಗೆ ಹೆಬ್ಬಾರರು ನನಗೇನನ್ನೂ ಹೇಳಿರಲಿಲ್ಲ. ಹಾಗಾಗಿ ಎಪ್ರಿಲ್ 1ರಂದು ನಾವು ಭಾರತ ಬಿಡುವುದು ಎಂದು ನಾನು ತಿಳಿದುಕೊಂಡಿದ್ದೆ. ಇಂದು ಮಾರ್ಚ್ ಇಪ್ಪತ್ತು. ವೀಸಾ ಸಿಕ್ಕಿ ನಾಳೆ ಸಂಜೆ ರೈಲಿನಲ್ಲಿ ಹೊರಟರೆ, ಸುಳ್ಯಕ್ಕೆ ಮುಟ್ಟುವುದು ಇಪ್ಪತ್ತೆರಡರಂದು ಸಂಜೆಗೆ. ಮರುದಿನ ಭಾನುವಾರ. ನಾನು ಬ್ಯಾಂಕಿನಿಂದ ಹಣ ಪಡೆಯುವುದು ಯಾವಾಗ? ಮಂಗಳೂರಿನಿಂದ ಕೋಟು ಪಡೆಯುವುದು ಯಾವಾಗ? ರಾಮಚಂದ್ರರಿಂದ ತರ್ಜುಮೆ ಸಾಮಾಗ್ರಿ ಪಡೆಯುವುದು ಯಾವಾಗ? ತೀರಾ ಅನಿರೀಕ್ಷಿತವಾಗಿ ಒದಗಿದ ವಿದೇಶ ಪ್ರವಾಸ ಯೋಗದ ಬಗ್ಗೆ ಆತ್ಮೀಯರಿಗೆ ಹೇಳಲು, ವೀಸಾ ಪುರಾಣದಿಂದಾಗಿ ಸಾಧ್ಯವಾಗಿರಲಿಲ್ಲ. ಅವರಿಗೆ ಇದೆಲ್ಲಾ ಅರ್ಥವಾಗದೆ ಖಂಡಿತಾ ನನ್ನನ್ನು ಅಪಾರ್ಥಮಾಡಿಕೊಳ್ಳುತ್ತಾರೆ. ಛೆ! ಏನು ಮಾಡಲಿ.
ನೀವಿದನ್ನು ನನಗೆ ಮೊದಲೇ ಹೇಳದೆ ಬಹಳ ತೊಂದರೆಯಾಯ್ತು. ಎಂದು ಹೆಬ್ಬಾರರಲ್ಲಿ ಹೇಳಿದೆ. ಅವರು ಗಾಬರಿಬಿದ್ದು ಅಯ್ಯಯೋ… ಎಲ್ಲರಿಗೂ ಹೇಳಿದ್ದೆನಲ್ಲಾ! ನೀನು ಏರ್‌ಟಿಕೆಟ್ ನೋಡಿಲ್ವಾ? ಅದರಲ್ಲಿ ಡೇಟ್ ಇದೆಯಲ್ಲಾ! ನಾನು ಹೇಳದೆ ಇದ್ದರೂ ನೀನಾದರೂ ಕೇಳಬಹುದಿತ್ತಲ್ಲಾ? ಎಂದರು. ಫ್ರೆಂಚ್ ಕಲಿಕೆ ಇದ್ದರೆ ಮಾತ್ರ 25ರಂದು ಹೋಗುವುದೆಂದು ನೀವು ಹೇಳಿದ್ದು. ಆದರೆ ನೀವಿದನ್ನು ಖಚಿತಪಡಿಸಿರಲಿಲ್ಲ ಎಂದೆ. ಅವರದಕ್ಕೆ ಹೌದಾ ಮಾರಾಯಾ…. ನಾನು ವೀಸಾದ ಬಿಸಿಯಲ್ಲೇ ಇದ್ದೆ ನೋಡು. ಫ್ರೆಂಚ್ ಕಲಿಕೆ ಕನ್‌ಫರ್ಮ್ ಆದದ್ದು ನಾಲ್ಕು ದಿನಗಳ ಹಿಂದೆ. ಹೇಗಿದ್ದರೂ ಒಂದು ದಿನ ಬಿಡುವು ಸಿಗುತ್ತದೆ. ಎಲ್ಲಾ ಕೆಲಸ ಅಂದು ಮುಗಿಸಿಬಿಡು. ನನ್ನದು ನಿನಗಿಂತಲೂ ವಿಷಮ ಪರಿಸ್ಥತಿ ಮಾರಾಯ. ಅಲ್ಲದೆ ಫ್ರೆಂಚ್ ಭಾಷಾ ಕಲಿಕೆಯೆಂದರೆ ಪ್ಯಾರಿಸ್ಸಿನಲ್ಲಿ ಏಳು ದಿನ ರೋಟರಿ ಖರ್ಚಲ್ಲಿ ತಂಗುವ ಭಾಗ್ಯ ಎಂದು ನನ್ನನ್ನು ಸಮಾಧಾನ ಪಡಿಸಿದರು.
ನನಗೆ ಶತಾಬ್ಧಿ ಎಕ್ಸ್‌ಪ್ರೆಸ್ ಪಯಣದ ಸುಖವನ್ನು ಅನುಭವಿಸಲು ಆಗಲೇ ಇಲ್ಲ. ಸುನಿಲ್ ಮನೆ ಮುಟ್ಟುವವರೆಗೂ ನಾನು ಉದ್ವೇಗದಲ್ಲೇ ಇದ್ದೆ. ಮುಟ್ಟಿದ ತಕ್ಷಣ ಶೈಲಿಗೆ ವಿಷಯ ತಿಳಿಸಿ, ಬಟ್ಟೆಬರೆಗಳನ್ನು ಜೋಡಿಸಿಡಲು ತಿಳಿಸಿದೆ. ಪ್ರಾಂಶುಪಾಲರನ್ನು ಸಂಪರ್ಕಿಸಿ ರಜಾ ದಯಪಾಲಿಸಬೇಕೆಂದೆ. ತಂತ್ರಿಯವರನ್ನು ಸಂಪರ್ಕಿಸಿದಾಗ, ಫ್ರಾನ್ಸಿನಲ್ಲಿ ವಿನಿಮಯ ಕಾರ್ಯಕ್ರಮದ ಅಂಗವಾಗಿ ಕೊಂಡುಹೋಗಬೇಕಾದ ಸಾಮಗ್ರಿಗಳನ್ನು ಸಿದ್ಧಪಡಿಸುವುದಾಗಿ ಖಾತರಿ ನೀಡಿದರು. ಶ್ರೀಕರ ಫ್ರೆಂಚ್‌ಗೆ ತರ್ಜುಮೆಗೊಂಡ ಪದಗಳನ್ನು ಮನೆಗೆ ಮುಟ್ಟಿಸುವುದಾಗಿ ಹೇಳಿದ. ಕೋಟು ಹೊಲಿಯುವ ಸಿಂಪಿಗ ರಾಮು, ನನಗಾಗಿ ತನ್ನ ಅಂಗಡಿಯನ್ನು ಅರ್ಧಗಂಟೆ ಮುಂಚಿತವಾಗಿ ತೆರೆದಿಡುವ ಮತ್ತು ಅಗತ್ಯ ಬಿದ್ದರೆ ಒಂದು
ಗಂಟೆ ತಡವಾಗಿ ಮುಚ್ಚುವ ಭರವಸೆ ನೀಡಿದ. ಈಗ ನನಗೆ ಕೊಂಚ ಸಮಾಧಾನವಾಯಿತು.
ಮರುದಿನ ಬೆಳಿಗ್ಗೆ ಬೇಗನೆ ಹೋಗಿ, ಬ್ರಿಟಿಷ್ ದೂತವಾಸದ ಬಾಗಿಲು ಕಾದೆವು. ಈ ಬಾರಿಯೂ ಆ ದ್ವಾರಪಾಲಕಿ ನಮಗೆ ಐವರಿಗೆ ಒಂದೇ ಟೋಕನ್ ಸಾಕೆಂದಳು. ಮೊದಲಿಗೆ ಇಂಟರ್‌ವೂ್ಯ ಕೌಂಟರಿಗೆ ಹೆಬ್ಬಾರರು ಹೋದರು. ದಾಖಲೆಗಳೆಲ್ಲವೂ ಸಮರ್ಪಕವಾಗಿದ್ದುದರಿಂದ ಅವರಿಗೆ ಏನೂ ತೊಂದರೆಯಾಗಲಿಲ್ಲ. ಆ ಬಳಿಕ ಹೋದ ಎಲೈನ್‌ಳಿಗೂ ಸಮಸ್ಯೆ ಉಂಟಾಗಲಿಲ್ಲ. ಮೂರನೆಯವನಾಗಿ ನಾನು ಹೋದೆ.
ಕೌಂಟರಿನಲ್ಲಿದ್ದ ಆ ಬ್ರಿಟಿಷ್ ಹೆಣ್ಮಗಳು ನನ್ನ ಅರ್ಜಿಯ ಮೇಲೆ ಕಣ್ಣಾಡಿಸಿ ಕತ್ತೆತ್ತಿ ನನ್ನನ್ನು ನೋಡಿದಳು. ಆ ಮೇಲೆ ಗಂಭೀರವಾದ ದನಿಯಲ್ಲಿ ಕೇಳಿದಳು. ನೀನ್ಯಾಕೆ ಬ್ರಿಟನ್ನಿಗೆ ಹೋಗ್ತಿದ್ದೀಯಾ? ಹೆಬ್ಬಾರ್ ಎಲೈನ್‌ಳಿಗಿಲ್ಲದ ಪ್ರಶ್ನೆ ನನಗೆ! ನಾನು ಸಾವರಿಸಿಕೊಂಡು ಮೆಲುದನಿಯಲ್ಲಿ ಹೇಳಿದೆ. ‘ನಿನ್ನ ಮಹಾನ್ ದೇಶವನ್ನು ನೋಡಲು’
ಅಲ್ಲೇನು ನೋಡ್ತೀಯಾ? ಗುಂಡಿನಂತೆ ಬಂತು ಪ್ರಶ್ನೆ.
ನಾನು ಮೊದಲ ಬಾರಿ ಅಲ್ಲಿಗೆ ಹೋಗುತ್ತಿರುವುದು. ಅಲ್ಲೇನು ನೋಡಬೇಕೆಂಬುದನ್ನು ಅಲ್ಲೇ ನಿರ್ಧಾರ ಮಾಡಬೇಕಷ್ಟೆ.
ಅಷ್ಟೂ ಗೊತ್ತಿಲ್ಲದ ಮೇಲೆ ಅಲ್ಲಿಗ್ಯಾಕೆ ಹೋಗ್ತಿದ್ದೀಯಾ?
ನಾನೀಗ ತಾಳ್ಮೆ ಕಳೆದುಕೊಂಡರೆ ಕೆಲಸ ಕೆಡುತ್ತದೆ. ಮೆಲುದನಿಯಲ್ಲೇ ಹೇಳಿದೆ. ಲಂಡನ್ ಬ್ರಿಜ್, ಲಂಡನ್ ಮ್ಯೂಸಿಯಮ್, ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್, ಮದರ್ ಆಫ್ ಪಾರ್ಲಿಮೆಂಟ್ಸ್, ವೆಸ್ಟ್ ಮಿನಿಸ್ಟರ್ ಅಬೇ ಇವನ್ನು ನೋಡಬೇಕೆಂದಿದ್ದೇನೆ. ಟೆನಿಸ್ ಖ್ಯಾತಿಯ ವಿಂಬಲ್ಡನಿನಗೂ ಭೇಟಿ ನೀಡಬೇಕೆಂದಿದ್ದೇನೆ.
ಅವಳಿಗೆ ಏನ್ನೆಸಿತೋ? ಎಲ್ಲಿ ನಿನ್ನ ಬ್ಯಾಂಕು ಬ್ಯಾಲೆನ್ಸ್ ಸರ್ಟಿಫಿಕೇಟು ಎಂದು ಕೈಚಾಚಿದಳು. ಅದನ್ನು ಕೊಟ್ಟಾಗ ಮುಖ ಸಿಂಡರಿಸಿ ಅರೇ…. ಬರೀ ಇಪ್ಪತೈದು ಸಾವಿರ! ಇದೆಲ್ಲಿಗೆ ಸಾಕು ನೀನು ಹೇಳಿದ್ದನ್ನೆಲ್ಲಾ ನೋಡಲು ಎಂದು ಪೆನ್ನು ಕೈಗೆತ್ತಿಕೊಂಡಳು. ನನ್ನ ವೀಸಾ ಅರ್ಜಿ ತಳ್ಳಿ ಹಾಕುವ ಸೂಚನೆಯಿದು ಎಂದು ಗಾಬರಿಯಾಗಿ ಹೇಳಿದೆ ನಿಲ್ಲು ನಿಲ್ಲು. ನನ್ನ ಪಾಸ್‌ಪೋರ್ಟ್ ನೋಡು. ಏಳು ನೂರು ಪೌಂಡ್ ಈಗಾಗಲೇ ಕೊಂಡು ಅದರಲ್ಲಿ ಎಂಡೋರ್ಸ್ ಮಾಡಿಸಿದ್ದೇನೆ.
ಅವಳದನ್ನು ನೋಡಿ ಮೊದಲೇ ಯಾಕೆ ಹೇಳಿಲ್ಲ ನೀನು? ಎಂದು ಸಿಡುಕಿದಳು. ಇದಕ್ಕೆ ಉತ್ತರ ಕೊಟ್ಟರೆ ಯಾವುದಾದರೂ ಹೊಸ ಸಮಸ್ಯೆ ಸೃಷ್ಟಿಯಾದೀತು ಎಂದು ಸುಮ್ಮನಾದೆ. ಆಗ ಅವಳು ಅದು ಸರಿ. ನೀನು ಇಲ್ಲಿಂದ ಹೋದರೆ ನಿನ್ನ ಹೆಂಡತಿಯ ಗತಿಯೇನು? ಎಂದು ಕ್ಯಾತೆ ತೆಗೆದಳು. ಉಕ್ಕಿ ಬಂದ ಸಿಟ್ಟನ್ನು ನಿಯಂತ್ರಿಸಿಕೊಂಡು ನಾನೆಂದೆ. ಅವಳು ಶಾಲಾ ಶಿಕಕಿ. ತಿಂಗಳ ಸಂಬಳದಲ್ಲಿ ಬದುಕುತ್ತಾಳೆ. ಇನ್ನೂ ಆ ಹೆಣ್ಮಗಳಿಗೆ ತೃಪ್ತಿಯಾಗಲಿಲ್ಲ. ಈಗ ನೇರವಾಗಿ ಕೇಳಿಯೇಬಿಟ್ಟಳು. ನೀನು ಬ್ರಿಟನಿನಗೆ ಹೋದರೆ ಅಲ್ಲೇ ನಿಂತುಬಿಡ್ತೀಯಾ ಹೇಗೆಲು
ಮತ್ತೊಮ್ಮೆ ಸಿಟ್ಟನ್ನು ನಿಯಂತ್ರಿಸಿಕೊಂಡು ನಾನೆಂದೆ ನನಗೆ ಬದುಕಲು ತಕ್ಕಷ್ಟು ಸಂಬಳವಿದೆ. ಪುಟ್ಟ ಕುಟುಂಬವಿದೆ. ಹದಿನೆಂಟು ವರ್ಷಗಳಿಂದ ಒಂದೇ ಕೆಲಸದಲ್ಲಿ ಭದ್ರವಾಗಿ ನೆಲೆಯೂರಿದ್ದೇನೆ. ಇನ್ನು ನನಗೆ ಉದ್ಯೋಗವನ್ನಾಗಲೀ, ದೇಶವನ್ನಾಗಲೀ ಬದಲಾಯಿಸುವ ಮನಸ್ಸು ಖಂಡಿತಾ ಇಲ್ಲ. ನಾನೀಗ ಹೋಗುತ್ತಿರುವುದು ನನ್ನ ಅನುಭವದ ಕ್ಷಿತಿಜಗಳನ್ನು ವಿಸ್ತರಿಸಿಕೊಳ್ಳಲು. ದಯವಿಟ್ಟು ನಿನ್ನ ಸುಂದರವಾದ ಮಹಾನ್ ದೇಶವನ್ನು ನೋಡಲು ಅನುಮತಿ ಕೊಡುು ಎಂದು ಕೈ ಮುಗಿದೆ. ಕಾರ್ಯವಾಸಿ ಕತ್ತೇಕಾಲು!
ಅವಳೀಗ ಕರಗಿದಳು. ಸರಿ. ಹಣಕಟ್ಟು. ಎರಡೂವರೆಗೆ ಬಂದು ವೀಸಾ ತೆಗೆದುಕೋ ಎಂದು ನನ್ನನ್ನು ಅಟ್ಟಿದಳು. ಅಬ್ಬ! ಎಂದು ನಾನು ಉಸಿರೆಳೆದುಕೊಂಡೆ. ವೀಸಾಕ್ಕಾಗಿ ಹಣಕಟ್ಟಿ ಈಚೆ ಬಂದಾಗ ಉಳಿದವರು ನಿನಗೆ ಬ್ರಿಟಿಷ್ ವೀಸಾ ಸಿಗುವುದೇ ಇಲ್ಲ ಎಂದು ಹೆದರಿದ್ದೆವು ಎಂದರು. ವಿಚಿತ್ರವೆಂದರೆ ನನ್ನ ಬಳಿಕ ಹೋದ ಅನಿತಾಳನ್ನಾಗಲೀ, ಗುರುವನ್ನಾಗಲೀ ಯಾವುದೇ ಪಶ್ನೆಗೊಳಪಡಿಸದ ಆ ಹೆಣ್ಮಗಳು, ನನ್ನನ್ನು ಅಷ್ಟು ಹೊತ್ತು ಯಾಕೆ ಕಾಡಿದಳು ಎನ್ನುವುದು ಈಗಲೂ ನನ್ನಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ. ನನ್ನ ದಾಡಿ ನೋಡಿ ನನ್ನನ್ನು ಭಯೋತ್ಪಾದಕರ ಸಾಲಿಗೆ ಸೇರಿಸಿರಬಹುದೇ ಆಕೆ!
ನಾವೆಲ್ಲಾ ನೆಮ್ಮದಿಯ ಉಸಿರು ಬಿಡುತ್ತಿದ್ದಂತೆ ಆವರೆಗೆ ಅದ್ಯಾರಲ್ಲೋ ಮಾತಾಡುತ್ತಿದ್ದ ಎಲೈನ್ ಗಾಬರಿಯಿಂದ ಧಾವಿಸಿ ಬಂದು ಕಾಸ್ಮೋಸ್ ಪ್ರವಾಸ ಮಾಡುವವರು ಆಸ್ಟ್ರಿಯಾದ ವೀಸಾ ಕೂಡಾ ಮಾಡಿಸಬೇಕಂತೆ ಎಂದು ಹೊಸತೊಂದು ಬಾಂಬು ಸಿಡಿಸಿದಳು. ನಾವು ಪ್ರವಾಸ ಹೋಗಲಿರುವ ರಾಷ್ಟ್ರಗಳ ಪಟ್ಟಿ ನೋಡಿದೆವು. ಫ್ರಾನ್ಸ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್ ಮತ್ತು ಜರ್ಮನಿಗಳಿಗೆ ಶೆಂಗನ್ ವೀಸಾ ನಮ್ಮಲ್ಲಿದೆ. ಬ್ರಿಟಿಷ್ ವೀಸಾ ಮಧ್ಯಾಹ್ನ ದೊರೆಯುತ್ತದೆ. ಇಟೆಲಿ ಮತ್ತು ಸ್ವಿಜರ್ಲ್ಯಾಂಡ್‌ಗಳ ವೀಸಾ ಮಾರ್ಚ್ 25ರಂದು ಮುಂಬಯಿಯಲ್ಲಿ ಮಾಡಿಸಲಿಕ್ಕಿದೆ. ಹೌದು. ಆಸ್ಟ್ರಿಯಾದ ವೀಸಾ ಬಗ್ಗೆ ನಾವು ಯೋಚಿಸಿರಲೇ ಇಲ್ಲ. ಅದು ಸಿಗದೆ ಇದ್ದರೆ ಕಾಸ್ಮೋಸ್ ಪ್ರವಾಸಕ್ಕೆ ಪಂಗನಾಮವಾಗುತ್ತದೆ.
ಗಾಬರಿಯಿಂದ ನಾವು ಬ್ರಿಟಿಷ್ ದೂತವಾಸದ ಬಳಿಯಲ್ಲೇ ಇದ್ದ ಥಾಮಸ್ ಕುಕ್ಕ್ ಕಛೇರಿಗೆ ಹೋಗಿ ಬೆಂಗಳೂರು ಕಛೇರಿಯ ನಾಯರನ್ನು ಸಂಪರ್ಕಿಸಿದೆವು. ಆತ ತಣ್ಣನೆಯ ಸ್ವರದಲ್ಲಿ ಸೀಟು ರಿಸರ್ವ್ ಮಾಡಿಸುವುದಷ್ಟೇ ನನ್ನ ಕೆಲಸ. ವೀಸಾ ಎಲ್ಲಾ ನಿಮ್ಮದೇ ಜವಾಬ್ದಾರಿು ಎಂದುಬಿಟ್ಟ. ಹೆಬ್ಬಾರರು ಪೆಚ್ಚಾಗಿ ಕೂತದ್ದನ್ನು ಕಂಡು ಕನಿಕರದಿಂದ ಕಛೇರಿಯ ಮಹಿಳೆಯೊಬ್ಬಳು ಆಸ್ಟ್ರಿಯನ್ ದೂತವಾಸವಿರುವುದು ಬ್ರಿಟಿಷ್ ದೂತವಾಸದ ಎಡದ ಬದಿಯಲ್ಲಿ. ಅದರ ಮುಖ್ಯಸ್ಥೆ ಶೀಲಾ ಗಾಂಧಿ ತುಂಬಾ ಒಳ್ಳೆಯವರು. ಅವರನ್ನು ಭೇಟಿಯಾಗಿ ನಿಮ್ಮ ಸಮಸ್ಯೆಗಳನ್ನು ಹೇಳಿ ಎಂದು ಮಾರ್ಗವೊಂದನ್ನು ತೋರಿಸಿದಳು.
ಹೆಬ್ಬಾರರು ಶೀಲಾ ಗಾಂಧಿಯನ್ನು ಕಂಡು ಮಾತಾಡಿದರು. ಆಕೆ ನಿಮ್ಮ ಪಾಸ್‌ಪೋರ್ಟ್ ಸಮೇತ ಅರ್ಜಿ ಕೊಟ್ಟು ಹೋಗಿ. ನಾಲ್ಕೂವರೆಗೆ ವೀಸಾ ಕೊಡುತ್ತೇನೆು ಅಂದರು. ನಾವು ಪೆಚ್ಚಾದೆವು. ಈಗಾಗಲೇ ವೀಸಾಕ್ಕಾಗಿ ನಾವು ಪಾಸ್‌ಪೋರ್ಟನ್ನು ಬ್ರಿಟಿಷ್ ದೂತವಾಸಕ್ಕೆ ಕೊಟ್ಟು ಬಂದಿದ್ದೆವು. ಅದು ನಮಗೆ ಸಿಗುವುದು ಮಧ್ಯಾಹ್ನ ಎರಡೂವರೆಗೆ. ಈಗೇನು ಮಾಡುವುದು? ನಾನೇನೂ ಮಾಡುವಂತಿಲ್ಲ. ಎರಡು ಗಂಟೆಯವರೆಗೆ ಮಾತ್ರ ನಾವು ವೀಸಾ ಅರ್ಜಿ ಸ್ವೀಕರಿಸುವುದು. ನಿಮಗೆ ಎರಡೂ ಮೂವತೈದರವರೆಗೆ ಸಮಯಾವಕಾಶ ನೀಡುತ್ತಿದ್ದೇನೆ. ಅಷ್ಟರೊಳಗೆ ಪಾಸ್‌ಪೋರ್ಟ್ ಸಹಿತ ಅರ್ಜಿ ಸಲ್ಲಿಸಿದರೆ ನಿಮಗಿವತ್ತು ವೀಸಾ ಸಿಗುತ್ತದೆ. ಇಲ್ಲದಿದ್ದರೆ ನಾಳೆ ಬರಬೇಕಾಗುತ್ತದೆ ಅಷ್ಟೆ ಎಂದು ಹೇಳಿ ಶೀಲಾ ಕಾರ್ಯಮಗ್ನರಾಗಿಬಿಟ್ಟರು.
ಏನೂ ಮಾಡಲು ತೋಚದೆ ನಾವು ಮತ್ತೆ ಥಾಮಸ್ ಕುಕ್ ಕಛೇರಿಗೆ ಹೋದೆವು. ಅಲ್ಲಿ ನಾವು ಕೂತಿದ್ದಾಗ ಮದ್ರಾಸಿನ ನನ್ನ ಸ್ನೇಹಿತ ವಸುಪಾಲ ಹಾಜರಾದ. ಆತನಿಗೆ ನಮ್ಮ ಸಮಸ್ಯೆಗಳನ್ನು ತಿಳಿಸಿ, ಅಗತ್ಯಬಿದ್ದರೆ ಸ್ವಲ್ಪ ಕೈಗಡ ಕೊಡಬೇಕಾಗುತ್ತದೆ ಎಂದೆ. ಆಯಿತು ಮಾರಾಯ. ಈ ಸಂದರ್ಭದಲ್ಲಿ, ಅದೂ ನಿನಗೆ, ಕೊಡದಿರುತ್ತೇನೆಯೇ ಎಂದು ಬೆನ್ನು ತಟ್ಟಿದ. ಸಂಜೆ ನಿಜಕ್ಕೂ ಹಣ ಬೇಕಾಯಿತು. ಕೊಟ್ಟ ಮಾತಿಗೆ ವಸುಪಾಲ ತಪ್ಪಲಿಲ್ಲ!
ಥಾಮಸ್‌ಕುಕ್ ಕಛೇರಿಯ ಅದೇ ಮಹಿಳೆ ಹೆಬ್ಬಾರರಿಗೆ ಯಾವುದೋ ದೂರವಾಣಿ ಸಂಖ್ಯೆಯೊಂದನ್ನು ನೀಡಿ ಸಹಕರಿಸಿದಳು. ಹೆಬ್ಬಾರರು ಮೂರು ನಿಮಿಷ ಆ ಅಜ್ಞಾತ ವ್ಯಕ್ತಿಯೊಡನೆ ಮಾತಾಡಿ ನಗುಮೊಗದಿಂದ ನಮ್ಮತ್ತ ಬಂದರು. ಎರಡು ಗಂಟೆಗೆ ಬ್ರಿಟಿಷ್ ವೀಸಾ ಸಿಗುವಂತೆ ಮಾಡಿದ್ದೇನೆ. ಶೀಲಾ ಗಾಂಧಿ ಹೇಳಿದುದಕ್ಕಿಂತಲೂ ಮೊದಲೇ ಅರ್ಜಿ ಸಲ್ಲಿಸಲು ನಮಗೆ ಸಾಧ್ಯವಾಗುತ್ತದೆ ಎಂದರು. ಎರಡು ಗಂಟೆಗೆ ಸರಿಯಾಗಿ ನಮಗೆ ವೀಸಾ ಸಿಕ್ಕಿಯೂ ಬಿಟ್ಟಿತು. ಅಲ್ಲಿನ ಬೃಹತ್ ಗಾತ್ರದ ದ್ವಾರಪಾಲಕಿ ಈಗ ನಗುತ್ತಾ ನಮಗೆ ಶುಭಪ್ರಯಾಣ ಕೋರಿದಳು. ಈಗವಳನ್ನು ಪೂತನಿ, ಶೂರ್ಪನಖಿಯರ ಸಾಲಿಗೆ ಸೇರಿಸಲು ನನಿನಂದಾಗಲೇ ಇಲ್ಲ.
ಆಸ್ಟ್ರಿಯನ್ ವೀಸಾಕ್ಕೆ ಅರ್ಜಿ ಸಲ್ಲಿಸಿದ ಮೇಲೆ ಸಮಸ್ಯೆ ಏನೂ ಇರಲಿಲ್ಲ. ಸಂಜೆ ನಾಲ್ಕೂವರೆಗೆ ಸುನಿಲ್ ಮನೆಯಲ್ಲಿ ನಾವೆಲ್ಲಾ ಒಟ್ಟಾಗುವುದು. ಮದ್ರಾಸಿನಿಂದ ಬೆಂಗಳೂರುವರೆಗೆ ಬಾಡಿಗೆ ಟ್ಯಾಕ್ಸಿಯಲ್ಲಿ ಹೋಗಿ ಅಲ್ಲಿಂದ ಮಂಗಳೂರಿನ ನೈಟ್ ಬಸ್ಸ್ ಹತ್ತುವುದು. ಗುರು ಮೈಸೂರು ಹಾದಿ ಹಿಡಿಯುವುದೆಂದು ಒಮ್ಮತದಿಂದ ನಿರ್ಧರಿಸಿ ನಾವು ಬೇರೆ ಬೇರೆಯಾದೆವು.
ಹಾರೋದೊಂದೇ ಹಾದಿ
ಎಲ್ಲರ ಆಸ್ಟ್ರಿಯನ್ ವೀಸಾ ಪಡೆದುಕೊಂಡು, ವಸುಪಾಲನ ಹೋಂಡಾದಲ್ಲಿ ನಾನು ಸುನೀಲ್ ಮನೆಗೆ ಮುಟ್ಟಿದಾಗ ನಾಲ್ಕೂವರೆಗೆ ಇನ್ನೂ ಐದು ನಿಮಿಷಗಳಿದ್ದವು. ಆದರೆ ನಮ್ಮ ತಂಡ ನಾಪತ್ತೆ. ಅರ್ಧ ಗಂಟೆಯ ಬಳಿಕ ತಂಡ ಬಂತು. ಅವರದೆಲ್ಲಾ ತಯಾರಿ ಮೊದಲೇ ಆಗಿ ಆರಾಮವಾಗಿದ್ದಾರೆ. ನನಗೋ ಹೇಳತೀರದ ಚಡಪಡಿಕೆ. ಯಾಕಿಷ್ಟು ತಡ? ಎಂದು ಕೇಳಿದಾಗ ಹೆಬ್ಬಾರರು ುಗುರು ನೈಟ್ ಬಸ್ಸಲ್ಲಿ ಇಲ್ಲಿಂದ ಹೊರಡ್ತಾನೆ. ಟ್ಯಾಕ್ಸಿಯಲ್ಲಿ ನಾವು ನಾಲ್ವರೇ ಹೋಗಬೇಕು. ಟ್ಯಾಕ್ಸಿಯವನು ನಾಲ್ಕು ಸಾವಿರ ಕೇಳ್ತಿದ್ದಾನೆ. ನಮ್ಮ ಮಹಿಳೆಯರು ಅದು ದುಬಾರಿ ಎಂದು ನೈಟ್ ಬಸ್ಸಲ್ಲೇ ಹೋಗುವುದಾಗಿ ಹೇಳುತ್ತಿದ್ದಾರೆ. ಅಲ್ಲದೆ ಅವರಿಬ್ಬರಿಗೆ ಇಟೆಲಿ, ಸ್ವಿರ್ಜಲ್ಯಾಂಡ್‌ಗಳ ವೀಸಾದ ಅಗತ್ಯವಿಲ್ಲ. ನಾವು ಗಂಡಸರು ಮಂಗಳೂರಿನಿಂದ 24ಕ್ಕೆ ಹೊರಟರೆ, ಅವರು 25ಕ್ಕೆ ನೇರವಾಗಿ ಮುಂಬಯಿಗೆ ಬಂದು ಸಹಾರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಮ್ಮನ್ನು ಸೇರಿಕೊಳ್ಳುತ್ತಾರೆ. ಅವರಿಗೆ ಒಂದು ದಿನ ಹೆಚ್ಚು ಸಿಗುತ್ತದೆ. ಈಗ ಅರ್ಜಂಟು ಇರುವುದು ನನಗೆ ಮತ್ತು ನಿನಗೆ. ಏನು ಮಾಡೋಣಲು ಎಂದು ನನ್ನನ್ನೇ ಕೇಳಿದರು.
ಅಂದು ಶುಕ್ರವಾರ. ಮರುದಿನ ಶನಿವಾರ. ಶನಿವಾರ ನಾನು ಮಂಗಳೂರಿನಿಂದ ಕೋಟು ಡ್ರೆಸ್ಸು, ಸುಳ್ಯದ ಬ್ಯಾಂಕುಗಳಿಂದ ಹಣ ಪಡೆಯದೆ ಇದ್ದರೆ, ಸೋಮವಾರ ಬೆಳಿಗ್ಗೆ ಮಂಗಳೂರಿನಿಂದ ಮುಂಬಯಿಗೆ ಹಾರುವುದು ಹೇಗೆ? ಶುಕ್ರವಾರ ರಾತ್ರೆ ಬಸ್ಸಲ್ಲಿ ಮದ್ರಾಸಿನಿಂದ ಹೊರಟರೆ ಬೆಂಗಳೂರು ಸೇರುವುದು ಶನಿವಾರ ಬೆಳಿಗ್ಗೆ. ಸುಳ್ಯ ಸೇರುವಾಗ ಶನಿವಾರ ಸಂಜೆಯಾಗಿ ಬಿಡುತ್ತದೆ. ಕಾಲೇಜಲ್ಲಿ ರಜೆಗೆ ಅರ್ಜಿ ಕೊಡಲಿಕ್ಕೂ ಸಮಯಾವಕಾಶವಿರುವುದಿಲ್ಲ. ಏನು ಮಾಡೋದು? ಉಳಿದದ್ದು ಒಂದೇ ದಾರಿ.
ಹೆಬ್ಬಾರರಲ್ಲಿ ಅದನ್ನೇ ಹೇಳಿದೆ. ವಿಮಾನದಲ್ಲಿ ಹೋಗೋದು ಮಾತ್ರ ನಮಗೆ ಉಳಿದಿರುವ ದಾರಿ. ಅವರ ಕಣ್ಣುಗಳು ಮಿಂಚಿದವು. ಎರಡು ಸಾವಿರ ದಾಟುತ್ತದೆ. ನಾನೂ ಅದನ್ನೇ ಯೋಚಿಸುತ್ತಿದ್ದೇನೆ ಎಂದು ಸುನೀಲನ ಕಛೇರಿಗೆ ಫೋನು ಮಾಡಿದರು. ಸುನಿಲ್ ಸಂಜೆ ಟಿಕೆಟ್ಟು ಹಿಡಿದುಕೊಂಡೇ ಬಂದ. ಅಲ್ಲೂ ನಾವು ನೆಮ್ಮದಿಯಿಂದಿರುವಂತಿರಲಿಲ್ಲ. ಏಕೆಂದರೆ ನಮ್ಮದು ವೈಟಿಂಗ್ ಲಿಸ್ಟ್‌ನಲ್ಲಿ ಮೊದಲನೆಯ ಮತ್ತು ಎರಡನೆಯ ನಂಬರು. ಏನು ಬೇಕಾದರೂ ಆಗಲಿ ಎಂದು ಅದೃಷ್ಟದ ಮೇಲೆ ಭಾರ ಹಾಕಿ ಉಳಿದವರನ್ನು ಬೀಳ್ಕೂಟ್ಟು ನಾವಿಬ್ಬರೂ ಸುನೀಲನ ಮನೆಯಲ್ಲಿ ಉಳಿದೆವು.
ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ನಿತ್ಯಾಹ್ನಿಕಗಳನ್ನು ಪೂರೈಸಿ ಸುನೀಲನ ಕಾರಲ್ಲಿ ಮದ್ರಾಸ್ ವಿಮಾನ ನಿಲ್ದಾಣಕ್ಕೆ ನಾವು ತಲುಪಿದಾಗ ಐದು ಗಂಟೆ. ವೈಟಿಂಗ್ ಲಿಸ್ಟ್‌ನವರ ಗತಿ ಏನೆಂಬುದನ್ನು ಆರು ಗಂಟೆಗಷ್ಟೇ ಹೇಳಲು ಸಾಧ್ಯ ಎಂದ ಅಧಿಕಾರಿಯೊಬ್ಬ. ಕೊನೆಗೂ ಕಾತರದ ಆರು ಗಂಟೆ ಹೊಡೆಯಿತು. ಕಂಪಿಸುವ ಸ್ವರದಲ್ಲಿ ನಮ್ಮ ಗತಿಯ ಬಗ್ಗೆ ವಿಚಾರಿಸಿದಾಗ ವೈಟಿಂಗ್ ಲಿಸ್ಟಿನ ಪ್ರಥಮ ಹತ್ತು ಮಂದಿಗೆ ಸೀಟು ಇದೆ ಎಂಬ ಶುಭ ಸಮಾಚಾರವನ್ನು ಅಧಿಕಾರಿ ತಿಳಿಸಿದ. ಬಡಜೀವ ಬದುಕಿತು ಎಂದು ಅಲ್ಲಿಂದಲೇ ಸುನೀಲ್‌ಗೆ ವಿಜಯದ ಸಂಕೇತ ತೋರಿಸಿ, ಬೋರ್ಡಿಂಗ್ ಸ್ಲಿಪ್ಪ್ ಪಡಕೊಂಡು, ಲಗ್ಗೇಜು ಚೆಕ್ ಮಾಡಿಸಿ, ಲೋಹಶೋಧಕ ಯಂತ್ರದ ತಪಾಸಣೆಗೆ ಒಳಗಾಗಿ ನಮಗಾಗಿ ಕಾದಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನದತ್ತ ಓಡಿದೆವು.
ಮೊದಲ ವಿಮಾನ ಪ್ರಯಾಣದ ಮುನ್ನಿನ ಕಾತರ, ಪ್ರಥಮ ರಾತ್ರಿಯ ಹಾಗೆ, ಅನುಭವಿಸಿಯೇ ತಿಳಿಯಬೇಕು. ವಿಮಾನದ ಏಣಿ ಏರುವಾಗ ನೆನಪಾದದ್ದು, ಕೆಲವು ವಾರಗಳ ಹಿಂದೆ ಹರಿಯಾಣಾದ ಆಕಾಶದಲ್ಲಿ ಢಿಕ್ಕಿ ಹೊಡೆದು ಧ್ವಂಸವಾದ ಎರಡು ವಿಮಾನಗಳು ಮತ್ತು ಅದರಿಂದಾಗಿ ದುರ್ಮರಣಕ್ಕೀಡಾದ ದುರ್ದೈವಿಗಳು. ಆರೂಕಾಲಕ್ಕೆ ಹೊರಡಬೇಕಿದ್ದ ವಿಮಾನ ಆರೂವರೆಗೆ ನಿಲ್ದಾಣ ಬಿಟ್ಟೇರಿತು. ಮೇಲಕ್ಕೆ, ಮೇಲಕ್ಕೆ. ಕೆಳಗಿನ ಜನ, ವಾಹನ ಕಟ್ಟಡಗಳೆಲ್ಲಾ ಕಿರಿದಾಗುತ್ತಾ ಬಂದು, ಕಾಣಿಸದಾಗಿ, ಕೊನೆಗೆ ನೆಲ ಮುಗಿಲು ಎಂಬ ಪ್ರಭೇದ ಮಾತ್ರ ಉಳಿದುಕೊಳ್ಳುವಷ್ಟು ಮೇಲಕ್ಕೆ.
ಅರ್ಧಗಂಟೆ ಅದೆಷ್ಟು ಬೇಗ ಸರಿಯಿತು. ಏಳು ಗಂಟೆಗೆ ನಾವು ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದೆವು. ಅಲ್ಲಿ ಕಾಲು ಗಂಟೆ ನಿಲುಗಡೆ. ಈಗ ವಿಮಾನ ಅರ್ಧಕ್ಕರ್ಧ ಖಾಲಿ. ಮದ್ರಾಸಿನಿಂದ ವಿಮಾನ ಹೊರಟ ತಕ್ಷಣ ನಮಗೆ ಬೆಳಗ್ಗಿನ ಉಪಾಹಾರ ಸಿಕ್ಕಿತ್ತು. ಬೆಂಗಳೂರನ್ನು ಏಳೂಕಾಲಕ್ಕೆ ವಿಮಾನ ಬಿಟ್ಟಾಗ ಮತ್ತೊಮ್ಮೆ ತಿಂಡಿ, ಕಾಫಿ. ನಾನು ಕಿಟಕಿಯಿಂದಾಚೆಗೆ ನೋಡುತ್ತಾ ಕೆಳಗಿನ ಪ್ರದೇಶಗಳ ಗುರುತು ಹಿಡಿಯುವ ಸಾಹಸ ನಡೆಸಿದ್ದೆ. ನನ್ನ ವೃತ್ತಿ ಜೀವನ ಆರಂಭಿಸಿದ ಹಾಸನವನ್ನಾದರೂ ಗುರುತಿಸಲಿಕ್ಕಾಗುತ್ತದೆಯೇ ಎಂದರೆ ಊಹುಂ. ಯಾವುದು ನೆಲಮಂಗಲ, ಯಾವುದು ಕುಣಿಗಲ್ಲು, ಯಾವುದು ಚೆನನರಾಯಪಟ್ಟಣ, ಯಾವುದು ಹಾಸನ ಮೇಲೇರುತ್ತಾ ಹೋದಂತೆ ನಾವಾಗಿ ಮಾಡಿಕೊಂಡ ವ್ಯತ್ಯಾಸಗಳೆಲ್ಲಾ ಎಲ್ಲಿ ಉಳಿಯುತ್ತವೆ. ಉಳಿಯುವುದು ನೆಲ, ಜಲ, ಮುಗಿಲು ಮಾತ್ರ. ನನಗೆ ಗುರುತಿಸಲು ಸಾಧ್ಯವಾದದ್ದು ಶಿರಾಡಿ ಘಟ್ಟ ಪ್ರದೇಶ. ಬಲಕ್ಕೆ ಕಣ್ಣು ಹಾಯಿಸಿದರೆ ಶಿಶಿಲದ ತಿಂಣಿ, ಅಮೆದಿಕಲ್ಲು ಮತ್ತು ಎರುತ್ತ ಭುಜ ಪರ್ವತಗಳು. ಎಡಕ್ಕೆ ಸುಬ್ರಹ್ಮಣ್ಯದ ಅರಣ್ಯಪ್ರದೇಶ. ನಿನ್ನೆ ರಾತ್ರೆ ಮದ್ರಾಸಿನಿಂದ ಹೊರಟ ಅನಿತಾ ಮತ್ತು ಎಲೈನ್ ಕೆಳಗಡೆ ಎಲ್ಲೋ ಬಸ್ಸಲ್ಲಿ ತೂಕಡಿಸುತ್ತಿರಬೇಕು…. ಎಂದುಕೊಳ್ಳುತ್ತಿದ್ದಂತೆ ಬಜಪೆ ಬಂದೇಬಿಟ್ಟಿತು.
ಅಂದು ಎಲ್ಲಾ ಕೆಲಸಕಾರ್ಯಗಳು ಸುಸೂತ್ರವಾಗಿ ಸಾಗಿದವು. ಕರ್ನಾಟಕ ಬ್ಯಾಂಕಿನ ಅಧಿಕಾರಿ ಭಟ್ಟರು ತಮ್ಮ ಕಾರಲ್ಲಿ ನನಗೆ ಬಜಪೆಯಿಂದ ಮಂಗಳೂರುವರೆಗೆ ಲಿಫ್ಟ್ ಕೊಟ್ಟರು. ಕೋಟು ಹೊಲಿದಿಟ್ಟು ರಾಮು ನನಗಾಗಿ ಕಾಯುತ್ತಿದ್ದ. ಶ್ರೀಕರನಲ್ಲಿಗೆ ಹೋಗಿ ತರ್ಜುಮೆ ಸಾಮಗ್ರಿಗಳನ್ನು ಪಡೆದುಕೊಂಡೆ. ಸುಳ್ಯಕ್ಕೆ ತಲುಪಿದಾಗ ಕ್ಯಾಷ್ ಕ್ಲಲೋಸ್ ಆಗಿದ್ದರೂ, ಸಿಂಡಿಕೇಟಿನ ಶೇಷಾಚಲಂ ಮತ್ತು ಕಾಪೊ9ೕರೇಶನಿನ್ನ ಶ್ಯಾಮಭಟ್್ ಬ್ಯಾಂಕಿಂದ ಹಣ ನೀಡಿದರು. ಪ್ರಾಂಶುಪಾಲರು ರಜೆ ಮಂಜೂರು ಮಾಡಿ ಕೈ ಕುಲುಕಿದರು.
ಮನೆಗೆ ಮುಟ್ಟಿ ಫ್ರಾನ್ಸಿಗೆ ಒಯ್ಯಬೇಕಾದ ಸಾಮಾಗ್ರಿಗಳನ್ನು ಜೋಡಿಸುವ ಕಾಯಕದಲ್ಲಿ ತೊಡಗಿದೆ. ಆಗ ಬಂತು ಹೆಬ್ಬಾರರ ಫೋನು. ನಾಳೆ ರಾತ್ರೆ ಏಳಕ್ಕೆ ಕುಂದಾಪುರದ ಹೋಟೆಲ್ ಶೆರಟಾನಿನಲ್ಲಿ ನಮ್ಮ ತಂಡಕ್ಕೆ ಬೀಳ್ಕೂಡುಗೆ. ರೋಟರಿ ಜಿಲ್ಲಾ ಗವರ್ನರ್ ಡಾ|| ನಾರಾಯಣ್ ಮುಖ್ಯ ಅತಿಥಿಯಾಗಿರುತ್ತಾರೆ. ನಿನಗೆ ಇಂದೇ ತಿಳಿಸಿದ್ದೇನೆ. ಯಾವ ಕಾರಣಕ್ಕೂ ತಪ್ಪಿಸಕೂಡದು.
ನಾನು ಗೋಗರೆದೆ. ಇದೇನು ನಿಮ್ಮ ಹುಡುಗಾಟ. ನನಗೆ ಉಳಿದಿರುವುದು ನಾಳೆ ಒಂದೇ ದಿನ. ಕುಂದಾಪುರಕ್ಕೆ ಸುಳ್ಯದಿಂದ ಐದು ಗಂಟೆಗಳ ಪ್ರಯಾಣ. ನಾನು ಅಲ್ಲಿಗೆ ಬರುವುದು, ಅಲ್ಲಿಂದ ಹೊರಡೋದು ಯಾವಾಗ. ನನ್ನ ತಯಾರಿ ಏನೇನೂ ಆಗಿಲ್ಲ. ನನಗೆ ಬರಲು ಆಗುವುದೇ ಇಲ್ಲ.
ಹೆಬ್ಬಾರರು ಹಾಗೆಲ್ಲಾ ಬಡಪೆಟ್ಟಿಗೆ ಬಿಡುವವರಲ್ಲ. ನೋಡು ನಾವು ರೋಟರಿ ಮೂಲಕ ಹೋಗುತ್ತಿರುವವರು. ಇದು ರೋಟರಿ ಜಿಲ್ಲೆ 318ಂರಿಂದ ನಮ್ಮೆಲ್ಲರಿಗಾಗಿ ಏರ್ಪಾಡಾಗಿರುವ ಬೀಳ್ಕೂಡುಗೆ. ಇದು ಒಫೀಶಿಯಲ್ ಪ್ರೊಸೀಜರ್. ನಾವ್ಯಾರೂ ಇಲ್ಲವೆನ್ನುವಂತಿಲ್ಲ. ನೀನು ನಿನ್ನ ಲಗ್ಗೇಜ್ ಸಹಿತ ಕುಂದಾಪುರಕ್ಕೆ ಬಂದುಬಿಡು. ಸೋಮವಾರ ಇಲ್ಲಿಂದಲೇ ನಾವೆಲ್ಲಾ ಒಟ್ಟಾಗಿ ವಿಮಾನ ನಿಲ್ದಾಣಕ್ಕೆ ಹೋಗೋಣ.
ಭಾನುವಾರ ಯಕಗಾನ ಪ್ರಿಯ ಬಾಲಣ್ಣನ ಕಾರಲ್ಲಿ ಕುಂದಾಪುರದ ಸಮಾರಂಭಕ್ಕೆ ಕುಟುಂಬ ಸಹಿತ ಹಾಜರಾದಾಗ, ಹೆಬ್ಬಾರರಿಗೆ ಖುಶಿಯೋ ಖುಶಿ. ಸಮಾರಂಭದಲ್ಲಿ ನಮಗೆಲ್ಲರಿಗೂ ಮಾತಾಡಲು ಅವಕಾಶವಿತ್ತು. ಡಾ|| ನಾರಾಯಣ್ ಒಳ್ಳೆಯ ನಾಲ್ಕು ಮಾತುಗಳನ್ನಾಡಿದರು. ಶಿವಮೊಗ್ಗೆಯಲ್ಲಿ ನನಗೆ ಪರಿಚಯವಾದ ಎಲೈನಳ ಕುಟುಂಬ ಮಿತ್ರ ಸಿ.ಬಿ.ಐ. ಅಧಿಕಾರಿ ವಿಷ್ಣು ನಾಯ್ಕ್ ನಿಮಗೆ ಫ್ರಾನ್ಸಿಗೆ ಹೋಗಲು ಅವಕಾಶ ಸಿಕ್ಕಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಅಲ್ಲಿ ಯಕ್ಷಗಾನದ ಬಗ್ಗೆ ಹೇಳಿ ಎಂದರು. ನಾಯ್ಕರು ಬಡಗುತಿಟ್ಟಿನ ಹವ್ಯಾಸಿ ವೇಷಧಾರಿ. ಭರ್ಜರಿ ಭೋಜನ ಕೂಟ ಮುಗಿಸಿ ಹೊರಡುವಾಗ ಡಾ|| ರಾಮಮೋಹನ್ ಕಾಲಾವಕಾಶ ಸಿಗದಿದ್ದರೂ ನೀವು ತಯಾರಾಗಿ ಹೊರಟಿದ್ದೀರಿ. ನಿಮ್ಮ ನಾಯಕರು ಹೇಳಿದಂತೆ ಇದ್ದುಬಿಟ್ಟರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ನೀವು ಸಮರ್ಥವಾಗಿ ಭಾರತೀಯ ಸಂಸ್ಕೃತಿಯನ್ನು ಫ್ರಾನ್ಸಿನಲ್ಲಿ ಪ್ರತಿಬಿಂಬಿಸುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಕೈಕುಲುಕಿದರು.
ಊಟ ಮುಗಿಸಿ, ಕುಂದಾಪುರದಿಂದ ಹೊರಟು, ಸುಳ್ಯ ಸೇರುವಾಗ ಬೆಳಗ್ಗಿನ ಜಾವ ಮೂರೂವರೆ. ತುರ್ತಾಗಿ ನಾನು ಬರೆಯಬೇಕಾಗಿದ್ದ ಪತ್ರಗಳನ್ನು ಮುಗಿಸಿ ಹಾಸಿಗೆ ಸೇರಿದ್ದು ನಾಲ್ಕುವರೆಗೆ. ಕೇವಲ ಅರ್ಧಗಂಟೆಯ ಕೋಳಿನಿದ್ದೆ ಮುಗಿಸಿ ಐದಕ್ಕೆ ಎದ್ದು ಹೊರಡಲು ಸನ್ನದ್ಧನಾದೆ.
ಮತ್ತೆ ಬಂದುದು ವಿಘ್ನ ಇಪ್ಪತ್ತನಾಲ್ಕರಂದು ಬೆಳಿಗ್ಗೆ ಏಳಕ್ಕೆ ಸರಿಯಾಗಿ ಶೈಲಿ, ಪೃಥ್ವಿ ಮತ್ತು ಪ್ರತೀಕ್ಷಾರಿಂದ ಬೀಳ್ಗೊಂಡು, ವಿನ್ಸೆಂಟನ ರಿಕ್ಷಾ ಹತ್ತಿದಾಗ ಕಣ್ಣುಗಳು ತೇವಗೊಂಡಿದ್ದವು. ಮನೆಯಿಂದ ಮೂರು ಫರ್ಲಾಂಗು ದೂರದಲ್ಲೊಂದು ಅನಾಹುತ. ನಮ್ಮೂರಿನ ರಾಮೋಜಿರಾಯರ ಅಕ್ಕಿಗಿರಣಿ ಸಂಪೂರ್ಣ ಬೆಂಕಿಗಾಹುತಿಯಾದ ಬೀಭತ್ಸ ದೃಶ್ಯ. ಅದೇ ಹಾದಿಯಲ್ಲಿ ಬೆಳಗಿನ ಜಾವ ಮೂರೂವರೆಗೆ ನಮ್ಮಕಾರು ಹಾದು ಹೋದಾಗ ಏನೂ ಇಲ್ಲದ್ದು ಈಗ ಹೀಗೆ? ಯಾರೋ ದುರಾತ್ಮರು ಪೆಟ್ರೋಲು ಸುರಿದು, ಇಡೀ ಗಿರಣಿಯನ್ನೇ ಸುಟ್ಟುಬಿಟ್ಟಿದ್ದಾರೆ. ಸಾಧಾರಣವಾಗಿ ಶಾಂತವಾಗಿಯೇ ಇರುವ ನನ್ನೂರಲ್ಲಿ ಈಗ ಇದೇನಾಗುತ್ತಿದೆ? ನಾನು ವಿದೇಶದಲ್ಲಿರುವಾಗ ಯಾರಾದರೂ ವಿಘ್ನ ಸಂತೋಷಿಗಳು ನನ್ನ ಕುಟುಂಬಕ್ಕೆ ಏನಾದರೂ ತೊಂದರೆ ಮಾಡಿಬಿಡಬಹುದೇನೋ ಎಂಬ ಭೀತಿ ಮೊಳಕೆಯೊಡೆಯಿತು. ದಾರಿಯಲ್ಲಿ ಮಂಗಳೂರಿಗೆ ಹೊರಟ ಮಿತ್ರ ಕಣಕ್ಕೂರು ಸಿಕ್ಕರು. ಸ್ಟ್ಯಾಂಡಿಗೆ ಬಂದಾಗ ಪುತ್ತೂರಿಗೆ ಹೋಗುವ ಕಾರೊಂದು ಸಿದ್ಧವಾಗಿತ್ತು. ಸುಟ್ಟುಹೋದ ಗಿರಣಿಯ ಚಿತ್ರವೇ ತಲೆಯಲ್ಲಿ ಸುತ್ತುತ್ತಿದ್ದ ನಾನು ಆತುರಾತುರವಾಗಿ ಕಾರನ್ನೇರಿದೆ. ಕಾರು ಅರ್ಧಹಾದಿ ಕ್ರಮಿಸಿದಾಗ ನೆನಪಾಯಿತು, ನಾನು ರಿಕ್ಷಾದ ಚಾರ್ಜನ್ನೇ ಕೊಟ್ಟಿಲ್ಲ ಎನ್ನುವುದು.ಅ ಕಣಕ್ಕೂರರು ತಾನು ರಿಕ್ಷಾ ಬಾಡಿಗೆ ಕೊಡುವ ಭರವಸೆ ನೀಡಿದಾಗ ಕೊಂಚ ಸಮಾಧಾನಪಟ್ಟೆ.
ಬಜಪೆ ವಿಮಾನ ನಿಲ್ದಾಣ ಹಜ್ ಯಾತ್ರಿಕರಿಂದ ಮತ್ತು ಅವರನ್ನು ಬೀಳ್ಕೂಡಲು ಬಂದವರಿಂದ ತುಂಬಿತುಳುಕುತ್ತಿತ್ತು. ಏರ್ ಟಿಕೇಟಿನಲ್ಲಿ ನಮ್ಮ ಪ್ರಯಾಣದ ದಿನಾಂಕ ಇಪ್ಪತೈದು ಎಂದು ದಾಖಲಾಗಿತ್ತು. ಆದರೆ ಅದನ್ನು ಒಂದು ದಿನ ಹಿಂದಕ್ಕೆ ಹಾಕಿಸಿ ಸೀಟು ಕನ್‌ಫರ್ಮ್ ಮಾಡಿದ್ದಾಗಿ ನಿನ್ನೆ ಕುಂದಾಪುರದಲ್ಲಿ ಹೆಬ್ಬಾರರು ಹೇಳಿದ್ದರು. ನಿಲ್ದಾಣದಲ್ಲಿ ಎಳ್ಳು ಹಾಕಲೂ ಜಾಗವಿಲ್ಲದ್ದನ್ನು ಕಂಡಾಗ ನನ್ನಲ್ಲಿ ಅನುಮಾನದ ಅಲೆಗಳೆದ್ದವು. ಸ್ವಲ್ಪ ಹೊತ್ತಲ್ಲಿ ಹೆಬ್ಬಾರರು ತಮ್ಮ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಹಾಜರಾದರು. ತನ್ನ ತಂದೆ, ತಾಯಿ, ತಮ್ಮಂದಿರೊಡನೆ ಗುರು ಪ್ರತ್ಯಕ್ಷನಾದ. ನಿನ್ನನ್ನು ಬೀಳ್ಕೂಡಲು ಯಾರೂ ಬಂದಿಲ್ಲವಾ? ಎಂದ ಹೆಬ್ಬಾರರು ಕೇಳಿದಾಗ ವೇದಾಂತಿಯಂತೆ ಬರುವಾಗಲೂ ಒಬ್ಬನೇ, ಹೋಗುವಾಗಲೂ ಒಬ್ಬನೇ ಎಂದು ಉತ್ತರಿಸಿದೆ.
ನಮ್ಮನ್ನು ಮುಂಬಯಿಗೆ ಕೊಂಡೊಯ್ಯಬೇಕಿದ್ದ ಜೆಟ್ ಏರ್‌ವೇಸ್ ಹೊರಡಲು ಹದಿನೈದು ನಿಮಿಷಗಳಷ್ಟೇ ಉಳಿದಿದ್ದವು. ಸ್ವಾಗತಕಾರಿಣಿಗೆ ನಮ್ಮ ಟಿಕೇಟು ತೋರಿಸಿದಾಗ ಅವಳು ಕಂಪ್ಯೂಟರ್‌ಗೆ ಫೀಡ್ ಮಾಡಿ ಹೌದು ನಿಮ್ಮ ಪ್ರಯಾಣ ನಾಳೆಗೆ ಕನ್‌ಫರ್ಮು ಆಗಿದೆ ಎಂದಳು. ನಮಗೆ ಗಾಬರಿಯಾಯಿತು. ಹೆಬ್ಬಾರರು ನಾವದನ್ನು ಒಂದು ದಿನ ಹಿಂದಕ್ಕೆ ಹಾಕಿಸಿಕೊಂಡಿದ್ದೇವೆ. ಇಂದಿನದನ್ನು ಚೆಕ್ಕ್ ಮಾಡಿ ಎಂದರು. ಅವಳು ಚೆಕ್ ಮಾಡಿ ುನಿಮ್ಮ ಮೂವರದು ವೈಟಿಂಗ್ ಲಿಸ್ಟಲ್ಲಿ 14a14b14cನೇ ನಂಬರು ಎಂ.ಹೆಬ್ಬಾರರಿಗೆ ಅಸಾಧ್ಯ ಸಿಟ್ಟು ಬಂತು. ತಮಾಷಡ ಮಾಡ್ತಿದ್ದೀರೇನು? ನಾವೆಲ್ಲಾ ಇಂದೇ ಮುಂಬಯಿಗೆ ಹೋಗಬೇಕು. ಯಾರೆಂದುಕೊಂಡಿದ್ದೀರಿ ನಮ್ಮನ್ನು? ಎಂದು ದಬಾಯಿಸಿದರು. ಆಕೆ ಹಾದಿ ತೋರದೆ ವಿಮಾನದ ಪೈಲಟನ್ನು ಸಂಪರ್ಕಿಸಿದಳು. ಕೊನೆಗೆ ಸಾರ್ ನಿಮ್ಮ ಇಂದಿನ ಕನ್‌ಫರ್ಮೇಶನನ್ನು ಯಾರೋ ಫೋನಲ್ಲಿ ಕ್ಯಾನ್ಸಲ್ ಮಾಡಿಬಿಟ್ಟಿದ್ದಾರೆ. ಬಹಳ ಕಷ್ಟದಲ್ಲಿ ಸಿಬ್ಬಂದಿಗಳಿಗೆ ಮೀಸಲಿರುವ ಒಂದು ಸೀಟನ್ನು ಒಬ್ಬರಿಗೆ ಕೊಡಬಹುದು. ಇನ್ನಿಬ್ಬರಿಗೆ ಸಾಧ್ಯವೇ ಇಲ್ಲ. ಆದರೆ ಮಧ್ಯಾಹ್ನ ಬೆಂಗಳೂರಿಗಾಗಿ ಮುಂಬಯಿಗೆ ಹೋಗುವ ವಿಮಾನದಲ್ಲಿ ಸೀಟಿದೆ. ಅದಕ್ಕೆ ಸೀಟೊಂದಕ್ಕೆ ಎರಡು ಸಾವಿರದ ನಾನೂರು ಪ್ರತ್ಯೇಕವಾಗಿ ನೀಡಬೇಕಾಗುತ್ತದೆ ಎಂದಳು.
ನಮ್ಮ ಮುಂಬಯಿ ವಾಸ್ತ್ಯವ್ಯದ ಸಿದ್ಧತೆಗಾಗಿ ಹೆಬ್ಬಾರರು ವಿಮಾನ ಹತ್ತಿದರು. ನಾನು ಮತ್ತು ಗುರು ನಮ್ಮದಲ್ಲದ ತಪ್ಪಿಗೆ ತಲಾ ಎರಡು ಸಾವಿರದ ನಾನೂರು ತೆತ್ತು ಬೆಂಗಳೂರಿಗಾಗಿ ಮುಂಬಯಿಗೆ ಹಾರಿದೆವು. ಹೆಬ್ಬಾರರ ಗೆಳೆಯ ವೆಂಕಟ್ರಾಜ್, ನಮಗಾಗಿ ಸಾಂತಾಕ್ರೂಜ್‌ನ ಬಳಿಯಲ್ಲಿ ಫ್ಲಾಟ್ ಒಂದನ್ನು ಬಿಟ್ಟುಕೊಟ್ಟಿದ್ದರು. ನಾನು ಮತ್ತು ಹೆಬ್ಬಾರರು ಅಲ್ಲೇ ಉಳಕೊಂಡರೆ, ಗುರು ಯಾರ್ಯಾರನ್ನೋ ಹುಡುಕಿಕೊಂಡು ಹೋದ. ಮೂರು ರಾತ್ರೆ ನಿದ್ರೆ ಸರಿ ಇಲ್ಲದ ನಾನು ಏಳು ಗಂಟೆಗೇ ನಿದ್ದೆ ಹೋದೆ. ಬೆಳಿಗ್ಗೆ ಹೆಬ್ಬಾರರು ಎಬ್ಬಿಸಿದಾಗಷ್ಟೇ ನಾನೆಲ್ಲಿದ್ದೇನೆ ಎಂಬ ವಸ್ತುಸ್ಥತಿ ನನಗೆ ಅರಿವಾದದ್ದು. ಏಳು ಗಂಟೆಗೆ ಹೆಬ್ಬಾರರ ಮಿತ್ರ ವಿವೇಕ ಹೆಮ್ಮಾಡಿ ಬಂದರು. ನಮ್ಮನ್ನು ಎಲ್ಲಿ ಸಂಧಿಸಬೇಕೆಂಬ ಮೆಸ್ಸೇಜನ್ನು ಗುರುವಿಗೆ ತಲುಪಿಸುವ ವ್ಯವಸ್ಥೆ ಮಾಡಿ, ನಾವು ಫ್ಲ್ಯಾಟ್ ಬಿಟ್ಟೆವು.
ಮುಂಬಯಿಯಲ್ಲಿ ಸ್ವಿಸ್ ಮತ್ತು ಇತಾಲಿಯನ್ ವೀಸಾಗಳನ್ನು ಒಂದು ದಿನದಲ್ಲಿ ನಮಗೆ ಸಿಗುವಂತೆ ಮಾಡಿದ ಸಾಹಸ ಥಾಮಸ್ ಕುಕ್ಕಿನ ರಮೇಶನದ್ದು. ಆತ ಹನ್ನೊಂದೂವರೆಗೆಲ್ಲಾ ನಮ್ಮ ಸ್ವಿಸ್ ವೀಸಾ ಪಡೆದು, ಇತಾಲಿಯನ್ ದೂತವಾಸಕ್ಕೆ ಪಾಸ್‌ಪೋರ್ಟ್ ಸಹಿತ ಅರ್ಜಿ ಸಲ್ಲಿಸಿದ. ಇತಾಲಿಯನ್ ದೂತವಾಸದ ಒಳಗಡೆ ಕೂರಲು ವ್ಯವಸ್ಥೆಯಿಲ್ಲ. ಹೊರಗಡೆ ಕಾಯಬೇಕು. ಬಿಸಿಲಾದರೇನು… ಮಳೆಯಾದರೇನು! ಬಾಗಿಲಲ್ಲಿರುವ ಸೂಚನಾಫಲಕದಲ್ಲಿ ಹನ್ನೊಂದೂವರೆಯೊಳಗೆ ವೀಸಾಕ್ಕೆ ಅರ್ಜಿ ಸಲ್ಲಿಸಬೇಕು. ನಾಳೆ ವೀಸಾ ಪಡೆದುಕೊಳ್ಳಬೇಕು ಎಂದು ಬರೆದಿದೆ. ಆದರೆ ರಮೇಶನ ದಯೆಯಿಂದ ಮಧ್ಯಾನ್ಹ ಒಂದೂವರೆಗೆ ಇತಾಲಿಯನ್ ವೀಸಾ ನಮಗೆ ಸಿಕ್ಕಿಯಾಗಿತ್ತು. ಹನ್ನೊಂದೂವರೆಗೆ ನೇರವಾಗಿ ಇತಾಲಿಯನ್ ದೂತವಾಸಕ್ಕೇ ಬಂದಿಳಿದ ಗುರುವೂ ನಮ್ಮೊಡನೆ ವೀಸಾ ಗಿಟ್ಟಿಸಿಕೊಂಡ. ಅಷ್ಟೇ ಅಲ್ಲ. ಎಷ್ಟು ಮಾತ್ರಕ್ಕೂ ಸಿಗಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಸ್ವಿಸ್ ವೀಸಾವನ್ನು ಆತ, ರಮೇಶನ ಕರಾಮತ್ತಿನಿಂದ ಮಧ್ಯಾಹನದ ಬಳಿಕ ಅರ್ಜಿ ಸಲ್ಲಿಸಿ ಪಡೆದುಕೊಂಡೇ ಬಿಟ್ಟ!
ವೆಂಕಟ್ರಾಜರ ಮನೆಯಲ್ಲಿ ನಮಗೆ ರಾತ್ರಿಯೂಟ. ಆದರೆ ಸಹಾರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ನಮ್ಮನ್ನು ಕೂಡಿಕೊಳ್ಳಲಿರುವ ನಮ್ಮ ತಂಡದ ಮಹಿಳಾಮಣಿಯರಿಗೆ ಆ ಪರಮ ಷಡ್ರಸ ಭೋಜನ ಸವಿಯುವ ಸೌಭಾಗ್ಯವಿರಲಿಲ್ಲ. ಸ್ವಿಸ್ ವೀಸಾ ಪಡೆದು, ಅದ್ಯಾರನ್ನೋ ಹುಡುಕಿಕೊಂಡು ಹೋಗಿದ್ದ ಗುರುವಿಗೂ ಭೋಜನಯೋಗ ತಪ್ಪಿಹೋಯಿತು. ವೆಂಕಟ್ರಾಜರ ಪತ್ನಿ ಮಿತ್ರಾ ಒಳ್ಳೆಯ ಬರಹಗಾರ್ತಿ. ಅದಕ್ಕಿಂತ ಹೆಚ್ಚಾಗಿ ಪಾಕಪ್ರವೀಣೆ. ಇನ್ನು ಭಾರತೀಯ ಆಹಾರ ಸಿಗುವುದು ಎರಡು ತಿಂಗಳ ಬಳಿಕ ಎಂಬ ಅರಿವಿನಿಂದ ನಾವು, ಮಿತ್ರಾ ವೆಂಕಟ್ರಾಜ್ ಮಾಡಿಟ್ಟ ಬಗೆಬಗೆಯ ಭಕ್ಷ್ಯಗಳಿಗೆ ನಮ್ಮಮಿಂದ ಸಾಧ್ಯವಾದಷ್ಟು ನ್ಯಾಯ ಸಲ್ಲಿಸಿದೆವು!
ವೆಂಕಟ್ರಾಜರ ಕಾರಲ್ಲಿ ಲಗ್ಗೇಜು ಸಹಿತ ಸಹಾರಾಕ್ಕೆ ಬಂದು ಮುಟ್ಟಿದಾಗ ರಾತ್ರೆ ಒಂಬತ್ತು ದಾಟಿತ್ತು. ಒಂಬತ್ತೂವರೆಗೆ ಮಹಿಳಾ ಮಣಿಯರಿಬ್ಬರೂ ನಗೆಮೊಗದೊಂದಿಗೆ ಕಾಣಿಸಿಕೊಂಡರು. ಹತ್ತು ನಿಮಿಷ ಕಳೆದು ಗುರು ಕೂಡಾ ಅದೆಲ್ಲಿಂದಲೋ ಪ್ರತ್ಯಕ್ಷನಾದ. ನಮ್ಮ ಪಾಸ್‌ಪೋರ್ಟು, ವೀಸಾ, ಏರ್ ಟಿಕೇಟು, ಲಗ್ಗೇಜು ಚೆಕಪ್ ಆಗಿ, ಸೆಕ್ಯುರಿಟಿ ವಲಯವನ್ನು ಪ್ರವೇಶಿಸುವ ಮುನ್ನ, ಕಾನೂನಿನಂತೆ ಕೊಳ್ಳಬಹುದಾದ ಐವತ್ತು ಡಾಲರುಗಳನ್ನು ನಾಲ್ವರೂ ಕೊಂಡೆವು. ನನ್ನ ಜೇಬಲ್ಲಿ ಇನ್ನೂ ಏಳು ಸಾವಿರ ರೂಪಾಯಿಗಳಿದ್ದರೂ, ವಿದೇಶೀ ಕರೆನ್ಸಿಗೆ ಪರಿವರ್ತಿಸಲಾಗದ ಪರಿಸ್ಥತಿ. ರೂಪಾಯಿಗಳಿಗೆ ಫ್ರಾನ್ಸ್ ಕಾಣುವ ಯೋಗ! ಅದಾಗಿ ಮನೆಗೆ ಫೋನ್ ಮಾಡಿ ವಿಮಾನ ಏರುವ ಗಳಿಗೆಗಾಗಿ ಕಾಯುತ್ತಾ ಕೂತೆ.
ಕೊನೆಗೂ ಆ ಗಳಿಗೆ ಸನ್ನಿಹಿತವಾಯಿತು. ನಾವು ಐವರು ಸಂಮಿಶ್ರಭಾವದಿಂದ ವಿಮಾನ ಹತ್ತಿ, ನಮ್ಮ ನಮ್ಮ ನಿಗದಿತ ಸೀಟುಗಳನ್ನು ಆಕ್ರಮಿಸಿಕೊಂಡೆವು. ಅದು ಇಪ್ಪತ್ತು ನಿಮಿಷ ತಡವಾಗಿ ಭಾರತದ ನೆಲವನ್ನು ಬಿಟ್ಟು ಮುಗಿಲಿಗೆ ಹಾರಿತು. ಕಗ್ಗತ್ತಲ ರಾತ್ರಿಯಲ್ಲಿ ಹತ್ತು ಗಂಟೆಗಳ ಅವ್ಯಾಹತ ಪಯಣ. ಹೊರಗೇನು ಕಾಣಲು ಸಾಧ್ಯ! ಒಳಗೆ ಸೆಮಿಲಕ್ಸುರಿ ಬಸ್ಸ್ ಮಾದರಿಯ ಸೀಟುಗಳು. ಕುಲುಕಾಟ ಮಾತ್ರ ಇಲ್ಲ. ಆದರೂ ಆವರೆಗೆ ಅನುಭವಿಸಿದ ರಗಳೆಗಳಿಗೆಲ್ಲಾ ಸುಖಾಂತ್ಯ ದೊರಕಿದ ಸಂತೃಪ್ತಿಯಲ್ಲಿ, ನಿಡಿದಾದ ಉಸಿರೊಂದನ್ನು ಬಿಟ್ಟು ಸೀಟಿಗೆ ಒರಗಿ ಕಣ್ಮುಚ್ಚಿಕೊಂಡು, ನಿದ್ರಿಸುವ ವಿಫಲ ಸಾಹಸ ನಡೆಸಿದೆ.
*****