ಮನುಷ್ಯನನ್ನು ನಿಜದ ನೆಲೆಯಲ್ಲಿ ನಿಲ್ಲಿಸಿ ಅವನಿಂದ ಸತ್ಯ ನುಡಿಸಲು ಮಾಡಿಕೊಂಡು ಬಂದಿರುವ ಪ್ರಯತ್ನಗಳು ನೂರಾರಿವೆ. ಅದಕ್ಕಾಗಿ ಸ್ವರ್ಗ ನರಕಗಳ ಸೃಷ್ಟಿಯೂ ಆಗಿದೆ. ಸತ್ಯವನ್ನು ನುಡಿದರೆ ಸ್ವರ್ಗ, ಸುಳ್ಳಾಡಿದರೆ ನರಕ ಎಂದು ಸ್ವರ್ಗದಲ್ಲಿ ಸುಖದ ಕಲ್ಪನೆಯನ್ನೂ ನರಕದಲ್ಲಿ ಸಂಕಟದ, ಕಷ್ಟದ, ದುಃಖದ ಕಲ್ಪನೆಯನ್ನೂ ಹುಟ್ಟು. ಹಾಕಿ ಆಯಾಯ ದೇಶದ, ಜನಾಂಗದ ಬುದ್ದಿಗೆ ಹೊಳೆದಂತೆ ಕಥೆಗಳನ್ನು ಕಟ್ಟಿ ಹೆಣೆಯಲಾಗಿದೆ. ಈ ಕಥೆಗಳಿಗೆ ಒಲಿದ, ಹೆದರಿದ ಮುಗ್ಧ ಮುಗ್ಧತೆಯ ಚತುರಮತಿಯ ಧರ್ಮಗುರುಗಳ ಬಂಡವಾಳವಾಗಿ ಸಮಾಜದ ವಿಕಲ್ಪಕ್ಕೆ, ಕಾರಣವಾದ ದುರಂತ ಕಥೆ ಮಾನವನ ಇತಿಹಾಸ.
ಮನುಷ್ಯನ ಅಂತಃಸಾಕ್ಷಿಗೆ ಅನುಗುಣವಾಗಿ ನುಡಿಯಲು ಹಿನ್ನೆಲೆಯಾದ ಈ ಪ್ರಮಾಣವಚನ, ಪ್ರಮಾಣ ಮತ್ತು ವಚನ ಎಂಬ ಎರಡು ಪದಗಳಿಂದ ಕೂಡಿದೆ. ಈ ವಿಭಿನ್ನ ಪದಗಳು ತಮ್ಮದೇ ಆದ ಅರ್ಥವ್ಯಾಪ್ತಿಯನ್ನು ಹೊಂದಿವೆ. ಹೀಗೆ ಎರಡೂ ಪದಗಳು ಸೇರಿ ಮನುಷ್ಯನ ಅಂತಃ ಸಾಕ್ಷಿಗೆ ಮತ್ತೊಂದು ಗುರುತರ ಸ್ಥಿತಿಯನ್ನು ತಂದುಕೊಡುವ ಈ ಪ್ರಮಾಣವಚನ, ಅದರ ಉದ್ದೇಶ, ವ್ಯಾಪ್ತಿ ಇತ್ಯಾದಿಗಳ ಅರಿವು ಹಾಗೂ ಅದರ ಅಧ್ಯಯನ ಇಂದು, ಎಂದರೆ ಸಾಮಾಜಿಕವಾಗಿ ಮನುಷ್ಯನ ಅಂತಃಸಾಕ್ಷಿಯೆ ಇಲ್ಲವಾಗುತ್ತಿದೆ ಎನ್ನುವ ಪರ್ವಕಾಲದಲ್ಲಿ ಅತ್ಯಂತ ಅಗತ್ಯವಾಗಿದೆ.
ನಿಘಂಟುವಿನಲ್ಲಿ ಪ್ರಮಾಣ ಎಂದರೆ ಅಳತೆ ಪರಿಮಿತಿ, ನಿಯಮ, ಆಧಾರ, ಎಂದೂ; ಪ್ರಮಾಣಿಸು ಎಂದರೆ ರುಜುವಾತು ಮಾಡು, ಪರೀಕ್ಷಿಸಿ ನೋಡು ಎಂದೂ; ಪ್ರಮಾಣಗ್ರಂಥ ಎಂದರೆ ಆಧಾರ ಗ್ರಂಥ ಎಂದೂ; ಪ್ರಮಾಣಪತ್ರ ಎಂದರೆ ಯೋಗ್ಯತಾ ಪತ್ರ ಎಂದೂ; ಪ್ರಮಾಣ ವಚನ ಎಂದರೆ ಅಧಿಕಾರ ಸ್ವೀಕಾರದ ಪ್ರಾರಂಭದಲ್ಲಿ ಮಾಡುವ ಪ್ರತಿಜ್ಞೆ ಎಂದೂ ಇದೆ. ಇನ್ನು ವಚನ ಎಂದರೆ ಮಾತನಾಡುವುದು, ಮಾತು, ಪ್ರತಿಜ್ಞೆ ಗದ್ಯ, ಕನ್ನಡ ಸಾಹಿತ್ಯದಲ್ಲಿ ಒಂದು ಪ್ರಕಾರ, ವ್ಯಾಕರಣದಲ್ಲಿ ನಾಮಪದ ಸಂಖ್ಯೆಯನ್ನು ಸೂಚಿಸುವ ಪದ ಎಂದೂ; ವಚನಭಂಗ ಎಂದರೆ ಮಾತಿಗೆ ತಪ್ಪುವುದು ಎಂದೂ; ವಚನ ಭ್ರಷ್ಟ ಬಂದರೆ ಮಾತಿಗೆ ತಪ್ಪುವವನು ಎಂದೂ ಇತ್ಯಾದಿ ಇದೆ.
ಇತ್ತೀಚೆಗೆ ದೆಹಲಿಯಲ್ಲಿ ಆದ ಅಂಕುರಪ್ರಾಯದ ಒಂದು ಘಟನೆ ಸರ್ವೋಚ್ಛ, ನ್ಯಾಯಾಲಯದಿಂದ ಹಿಡಿದು ರಾಷ್ಟ್ರದ ಎಲ್ಲಾ ನ್ಯಾಯವಾದಿಗಳು ಮುಷ್ಕರ ಮಾಡುವಂತೆ ಮಾಡಿ, ವಾದ ವಿವಾದಗೆಳಿಗೆ ಎಡ ಮಾಡಿತು. ಅದಕ್ಕೆ ಹಿನ್ನೆಲೆ ಬಂದರೆ ವಕೀಲರಾದ ರಾಜೇಶ್ ಕುಮಾರ್ ಅಗ್ನಿಹೋತ್ರಿ ದೆಹಲಿಯ ಹೆಣ್ಣು ಮಕ್ಕಳ ಕಾಲೇಜೊಂದರ ವಿದ್ಯಾರ್ಥಿನಿಯ ಕೈ ಚೀಲವನ್ನು ಕದ್ದ ಎನ್ನುವ ಕಾರಣಕ್ಕಾಗಿ ಪೋಲಿಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿ ಆತನಿಗೆ ಕೈಕೋಳ ತೊಡಿಸಿ ಕರೆದುಕೊಂಡು ಹೋದರು ಎನ್ನುವುದು. ವಕೀಲ ಕಳ್ಳತನ ಮಾಡಿದನೆ ಇಲ್ಲವೆ ಎನ್ನುವ ಪ್ರಶ್ನೆಗಿಂತ ಹೆಚ್ಚಾಗಿ ಈ ಘಟನೆ ಆತನಿಗೆ ಕೈಬೇಡಿ ತೊಡಿಸಿದ ಕಿರಣ್ ಬೇಡಿಯ ಕ್ರಮದ ಬಗ್ಗೆ ಒತ್ತುಕೊಟ್ಟು ನ್ಯಾಯವಾದಿಗಳ ಹಾಗೂ ಫೋಲಿಸ್ ಧಿಕಾರಿಯ ನಡುವಿನ ಗೌರವದ ಪ್ರಶ್ನೆಯಾಗಿ ಉದ್ಭವಿಸಿತು. ನಂತರ ವಕೀಲರಲ್ಲಿ ಎರಡು ಗುಂಪುಗಳಾಗಿ ಪ್ರತಿಭಟನೆ ಒಂದು ಹಂತಕ್ಕೆ ತಲುಪಿದಮೇಲೆ ಸರ್ಕಾರ ಕಿರಣ್‌ಬೇಡಿಯ ಕ್ರಮಕುರಿತು ಆಕೆಯಮೇಲೆ ಹಾಗೂ ಸಬ್ಇನ್ಸ್‌ಪೆಕ್ಟರ್ ಜಿಂದರ್‌ಸಿಂಗ್ ಮೇಲೆ ತನಿಖೆ ಮಾಡುವಂತೆ ದೆಹಲಿಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ಎನ್. ಸ್ವಾಮಿ ಹಾಗೂ ಮತ್ತೊಬ್ಬ ನ್ಯಾಯಾಧೀಶರಾದ ಡಿ. ಪಿ. ವಾದ್ವ ಅವರನ್ನು ನೇಮಿಸಿ ಆಯೋಗವನ್ನು ರಚಿಸಿತು. ಆಯೋಗದ ಮಂದೆಬಂದ ಕಿರಣ್‌ಬೇಡಿ ಹಾಗೂ ಜಿಂದರ್‌ಸಿಂಗ್ ಸಾಲಿಸಿಟರ್ ಜನರಲ್ ಆದ ಜಿ. ರಾಮಸ್ವಾಮಿಯ ಸಲಹೆಯಮೇರೆಗೆ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದರು. ಅದಕ್ಕೆ ಕಾರಣ ಆಯೋಗದ ಮುಂದೆ ಪ್ರಮಾಣ ಮಾಡಿ ನಾವು ಹೇಳಿಕೆ ಕೊಡಬೇಕೆನ್ನುವುದು ಕ್ರಮವಲ್ಲ, ಯಾರು ನಮ್ಮ ಮುಂದೆ ಆರೋಪ ಹೊರಿಸಿದ್ದಾರೆಯೋ ಮೊದಲು ಅವರು ಹೇಳಿಕೆ ನೀಡಲಿ ಎಂದು. ಕಿರಣ್‌ಬೇಡಿ ಹಾಗೂ ಸಿಂಗ್ ನಿರಾಕರಿಸಿದ್ದರ ಮೇಲೆ ಆಯೋಗ ಅವರ ಮೇಲೆ ಮೊಕದ್ದಮೆ ಕೊಡಲು ಆದೇಶಿಸಿತು. ಆ ಆದೇಶದ ಮೇಲೆ ಕಿರಣ್‌ಬೇಡಿ ಹಾಗೂ ಸಿಂಗ್ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸರ್ವೋಚ್ಛ ನ್ಯಾಯಾಲಯದ ಮೂರು ಜನ ನ್ಯಾಯಾಧೀಶರನ್ನೊಳಗೊಂಡ ಬೆಂಚ್‌ನಲ್ಲಿದ್ದ ನ್ಯಾಯಾಧೀಶರಾದ ಇ. ಎಸ್. ವೆಂಕಟರಾಮಯ್ಯ ಅವರು ಇಲ್ಲಿ ಪಕ್ಷಪಾತವಾಗಿದೆ, ಕಿರಣ್‌ಬೇಡಿ ಹಾಗೂ ಸಿಂಗ್ ಅವರನ್ನು ಪಾಟೀಸವಾಲು ಮಾಡುವಮುನ್ನ ಮತ್ತೊಂದು ಪಕ್ಷದ ಪೂರ್ಣ ಹೇಳಿಕೆಯನ್ನು ಪಡೆದುಕೊಳ್ಳಬೇಕೆಂದು ಆಜ್ಞೆ ಮಾಡಿ ಕಿರಣ್‌ಬೇಡಿ ಹಾಗೂ ಸಿಂಗ್ ಅವರ ಮೇಲ್ಮನವಿಯನ್ನು ಪುರಸ್ಕರಿಸಿತು.
ಅದರೆ ಎನ್. ಎನ್. ಗೋಸ್ವಾಮಿ ಅವರು ಆಯೋಗಕ್ಕೆ ರಾಜೀನಾಮೆ ಇತ್ತರು. ಅದಕ್ಕೆ ಕಾರಣ ಸರ್ವೋಚ್ಛ ನ್ಯಾಯಾಲಯ ತನ್ನ ಆಜ್ಞೆಯಲ್ಲಿ ‘ಆಯೋಗದ ಆಜ್ಞೆಯನ್ನು ಅನಕ್ಷರಸ್ಥನಾದ ಒಬ್ಬ ಹಳ್ಳಿಯ ಮುಖ್ಯಸ್ಥನೂ ಕೂಡ ಆಚೆ ಎಸೆಯುತ್ತಿದ್ದ’ ಎಂದು ಟೀಕೆ ಮಾಡಿದೆ ಎಂದು. ಈ ನಡುವೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಇ. ಎಸ್. ವೆಂಕಟರಾಮಯ್ಯ ಎನ್.ಎನ್. ಗೋಸ್ವಾಮಿ ಅವರಿಗೆ ಒಂದು ಬಹಿರಂಗ ಪತ್ರ ಬರೆದು ಆ ಟೀಕೆಯ ಉದ್ದೇಶ ಅವಮಾನಿಸುವುದಲ್ಲ. ಆ ಆಜ್ಞೆಯನ್ನು ಹಾಗೆ ಭಾವಿಸಬಾರದೆಂದೂ, ಅದರಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಬರೆದು ಒಂದು ಉದಾತ್ತ ಪರಂಪರೆಯನ್ನೆ ಹುಟ್ಟು ಹಾಕಿದರು.
ನ್ಯಾಯಾಲಯಗಳಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಕೆಲವು ಆಕ್ಷೇಪಗಳು ಉದ್ಭವವಾಗುವುದುಂಟು. “ದೇವರ ಮುಂದೆ ಪ್ರಮಾಣ ಮಾಡಿ …..” ಎಂದು ಹೇಳಬೇಕೆಂದು ನ್ಯಾಯಾಲಯ ಆದೇಶಿಸಿದಾಗ ದೇವರ ಮೇಲೆ ನಂಬಿಕೆ ಇರದ ಸಾಕ್ಷಿ ಹಾಗೆ ಪ್ರಮಾಣವಚನ ತೆಗೆದುಕೊಳ್ಳಲು ನಿರಾಕರಿಸುವುದು ಸಹಜ. ಅಂತಃಸಾಕ್ಷಿ ಇಲ್ಲವಾಗುತ್ತಿರುವ ಮತ್ತೊಂದು ಮುಖವೇ ಅಂತಃಸಾಕ್ಷಿಯ ಎಚ್ಚರವೂ ಆಗಿರುತ್ತದೆ. ಇಂತಹ ಸಂದರ್ಭಗಳ ಸೂಕ್ಷ್ಮ ವಿವೇಚನೆಯ ಅಗತ್ಯವಿದೆ.
ವಚನ ಇಂದಿನದಲ್ಲ, ಅದು ಮನುಷ್ಯನ ಚಿಂತನಶಕ್ತಿ ಪ್ರಾರಂಭವಾದ ಕಾಲದಿಂದ ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತಿಯ, ಸಮಾಜದ ನಡುವೆ ನಡೆದು ಬಂದದ್ದೇ ಆಗಿದೆ. ಇದು ಎಲ್ಲ ದೇಶಕಾಲಗಳಲ್ಲೂ ಆಗಿರುವಂಥದ್ದು ರಾಮಾಯಣದಲ್ಲಿ ದಶರಥ ಕೈಕೆಗೆ ಕೊಡುವ ವರದ ರೂಪದ ವಚನವಾಗಲೀ, ‘ಜಗತ್ತಿನಲ್ಲಿ ಅದ್ವಿತೀಯ ಬಿಲ್ಲುಗಾರನನ್ನಾಗಿ ಮಾಡುತ್ತೇನೆಂದು ದ್ರೋಣಾಚಾರ್ಯರು ಅರ್ಜುನನಿಗೆ ಇತ್ತ ವಚನವಾಗಲೀ, ತೊಟ್ಟ ಬಾಣವನ್ನು ಮತ್ತೆ ತೊಡುವುದಿಲ್ಲ ಎಂದು ಕರ್ಣ ತನ್ನ ತಾಯಿ ಕುಂತಿಗೆ ಇತ್ತ ವಚನವಾಗಲೀ ಇವು ಔಚಿತ್ಯದ ಪ್ರಜ್ಞೆಯಿಂದ ದೂರವಾದವುಗಳು, ಅಷ್ಟೆ ಅಲ್ಲ ಅದರ ದುಷ್ಪರಿಣಾಮದ ಅರಿವಿದ್ದೂ ‘ವಚನಭ್ರಷ್ಟ’ ಎನ್ನುವ ಲೋಕೋಪವಾದಕ್ಕೆ ಗುರಿಯಾಗುವ ಭಯದ ಹಿನ್ನೆಲೆಯಲ್ಲಿ ಆವರಿಸಿದ್ದು. ಅದರಿಂದ ಅನುಕೂಲಕ್ಕಿಂತ ಹೆಚ್ಚಾಗಿ ಅನರ್ಥ, ಉಪಯೋಗಕ್ಕಿಂತ ಹೆಚ್ವಾಗಿ ವ್ಯಕ್ತಿತ್ವದ ಉಪೇಕ್ಷೆ ಇತ್ಯಾದಿ ಮಾನವ ವಿರೋಧಿ ಪರಿಣಾಮಗಳಿರುವುದನ್ನು ಕಾಣುತ್ತೇವೆ.
ಈ ವಚನಗಳು ಜನಸಾಮಾನ್ಯರ ಚಿಂತನೆಯ ಅಗ್ನಿಪರೀಕ್ಷೆಗೆ ಒಳಗಾಗಿ ತಂತ್ರ ಮೇಲುಗೈ ಪಡೆದು ಕುತಂತ್ರವೇ ವಾಸ್ತವ ಎನ್ನುವ ಅರಿವು ಮೂಡಿದಾಗ ಈ ವಚನದ ಪುಷ್ಟಿಗೆ ಪ್ರಮಾಣದ ಸಹಾಯವನ್ನು ಪಡೆಯಲಾಯಿತು. ಯಾವ ಅಥವಾ ಯುವುದರ ಪ್ರಮಾಣದ ಮೇಲೆ ವಚನ ತೆಗೆದುಕೊಂಡರೆ ಅವನ ಅಂತಃಸಾಕ್ಷಿಗೆ ವಿರುದ್ಧವಾಗದ ರೀತಿ ಸತ್ಯವನ್ನು ಅಭಿವ್ಯಕ್ತಿಗೊಳಿಸಲು ಸಾಧ್ಯವಾಗುತ್ತದೆ, ಎಂಬ ಚಿಂತನೆಯ ಹಿನ್ನೆಲೆಯಲ್ಲಿ ಈ ಪ್ರಮಾಣ ತನ್ನ ಪ್ರವೇಶ ಪಡೆದಿದೆ.
ಮನುಸ್ಮೃತಿಯ ಕಾಲದಲ್ಲಿ ಜಾತಿಗಳ ಆಧಾರದ ಮೇಲೆ ಪ್ರಮಾಣವಚನ ಅಥವಾ ಆಣೆ ಅಥವಾ ಶಪಥ ಮಾಡಿಸುತ್ತಿದ್ದುದು ಕಂಡು ಬರುತ್ತದೆ. ಉದಾಹರಣೆಗೆ (೧) ನ್ಯಾಯಪತಿಯು ಸಾಕ್ಷಿದಾರ ಕ್ಷತ್ರಿಯನಾಗಿದ್ದರೆ ಅವನಿಗೆ “ಸತ್ಯ ಹೇಳು” ಎನ್ನಬೇಕು; ವೈಶ್ಯನಾಗಿದ್ದರೆ “ಚಿನ್ನ, ಬೀಜ, ಗೋವುಗಳ ಸಾಕ್ಷಿಯಾಗಿ ಸತ್ಯ ಹೇಳು” ಎನ್ನಬೇಕು; ಶೂದ್ರನಿಗೆ “ಪಾಪವಿದೆ ಸತ್ಯ ಹೇಳು” ಎನ್ನಬೇಕು; ಬ್ರಾಹ್ಮಣನಿಗೆ “ಹೇಳು” ಎಂದರೆ ಸಾಕು …… ಮನುಸ್ಮೃತಿ ೮.೮೮, ಪುಟ ೩೦೭ (೨) “ಶೂದ್ರನನ್ನು ಪಾಪಗಳ, ವೈಶ್ಯನನ್ನು ಧನಧಾನ್ಯಗಳ, ಕ್ಷತ್ರಿಯನನ್ನು ವಾಹನಾಯುಧಗಳ, ಬ್ರಾಹ್ಮಣನನ್ನು ಸತ್ಯದ ಆಣೆಯಾಗಿ ಶಪಥ ಮಾಡಿಸಬೇಕು” ……. .ಮನುಸ್ಮೃತಿ ೮-೧೧೩, ಪುಟ ೧೧೨.
ಇದರಿಂದ ನಮಗೆ ಅರಿವಾಗುವ ಒಂದಂಶ ಎಂದರೆ ಯಾರು ಯಾರಿಗೆ ಯಾವ ಯಾವುದರ ಮೇಲೆ ನಂಬಿಕೆ ಇದ್ದಿತೋ ಅಥವಾ ಯಾರು ಯಾರು ಯಾವ ಯಾವ ವೃತ್ತಿಯನ್ನು ಅವಲಂಬಿಸಿದ್ದರೋ ಆ ವಸ್ತುಗಳ, ಜೀವಗಳ ಮೇಲೆ ಆಣೆ ಮಾಡಿಸುವುದರಿಂದ ನಿಜವನ್ನ ನೆಲೆನಿಲ್ಲಿಸಿ ಸತ್ಯವನ್ನು ಅಭಿವ್ಯಕ್ತಿಗೊಳಿಸಲು ಯತ್ನಿಸಿರುವುದು. ಕ್ಷತ್ರಿಯನ ವೃತ್ತಿ ರಕ್ಷಣೆ ಅದ್ದರಿಂದ ಅವನ ಆತ್ಮ ವಾಹನ ಹಾಗೂ ಆಯುಧ, ಅವುಗಳ ಮೇಲೆ ಪ್ರಮಾಣ ಮಾಡಿಸುವುದು; ವೈಶ್ಯನ ವೃತ್ತಿಗೆ ಅನುಗುಣವಾಗಿ ಚಿನ್ನ ಬೀಜ ಧನಧಾನ್ಯಗಳ ಅವನ ಆತ್ಮವಾಗಿರುವುದರಿಂದ ಅವುಗಳ ಮೇಲೆ ಆಣೆ ಮಾಡಿಸುವುದು ; ಬ್ರಾಹ್ಮಣನ ವೃತ್ತಿ ‘ಜ್ಞಾನ’, ಸತ್ಯದ ಆಣೆಯಾಗಿ ಶಪಥ ಮಾಡಿಸುವುದು ಸರಿಯಾದದ್ದೆ. ಅದರೆ ಶೂದ್ರನ ವೃತ್ತಿ ಸೇವೆ ಎಂದು ಇಟ್ಟುಕೊಂಡರೂ ಅವನು “ಪಾಪಗಳ” ಮೇಲೆ ಏಕೆ ಆಣೆ ಮಾಡಬೇಕು? ಬ್ರಾಹ್ಮಣನಿಗೆ “ಸತ್ಯ” ಆತ್ಮವಾಗಿರುವಂತೆ ಶೂದ್ರನಿಗೆ ಆತ್ಮವೆ? ಅಲ್ಲ ಎಲ್ಲರ ಹೃದಯ ಮೂಲವೂ ಒಂದೇ ಎನ್ನುವುದು ಸತ್ಯ. ಎಲ್ಲರ ಪಯಣವೂ ಸತ್ಯದ ಕಡೆಗೇ. ಆದರೆ ಬಹುಸಂಖ್ಯಾತ ಶೂದ್ರರಿಗೆ ಪಾಪಪ್ರಜ್ಞೆಯನ್ನೆ ಆತ್ಮವಾಗಿಸಿದ ಕ್ರೂರತೆಯನ್ನು ಇಲ್ಲಿ ಕಾಣಬಹುದು. ಈ ಜಾತಿಯ ಕ್ರೌರ್ಯವೇ ಭಾರತದ ಆತ್ಮವನ್ನು ಕುಗ್ಗಿ ಕುಸಿಯುವಂತೆ ಮಾಡಿ ಅದರ ನಾಡಿಯೇ ಆಡದ ಸ್ಥಿತಿಗೆ ಬರುತ್ತಿದೆ. ಅದಕ್ಕೆ ಸಾಕ್ಷಿ ಸೋಲ್ (SEOUL OLYM- PICS , ೧೯೯೮) ಒಲಂಪಿಕ್ಸ್‌ನಲ್ಲಿ ಭಾರತದ ಸ್ಥಾನ ಹಾಗೂ ಆಂತಂಕವಾಗಿ ಉಲ್ಬಣಗೊಳ್ಳುತ್ತಿರುವ ಮತೀಯ ಹಾಗೂ ಜಾತೀಯ ಘರ್ಷಣೆಗಳು.
ಪ್ರಮಾಣವಚನಕ್ಕೆ, ಸಂಬಂಧಿಸಿದಂತೆ, ಭಾರತ ದಂಡ ಸಂಹಿತೆ ೧೮೬೦, ಪ್ರಕರಣ ೫೧ ರಲ್ಲಿ ಉಲ್ಲೇಖವಿದೆ. ಸಾರ್ವಜನಿಕ ಕೆಲಸವನ್ನು ನಿರ್ವಹಿಸುವ ಅಧಿಕಾರಿಯ ಅಥವಾ ನ್ಯಾಯಾಂಗದಲ್ಲಿ ನ್ಯಾಯ ವಿತರಣೆ ಮಾಡುವ ನ್ಯಾಯಾಧೀಶರ ಮುಂದೆ ಪ್ರಮಾಣವಚನ ಅಥವಾ ಪ್ರಜ್ಞಪೂರ್ವಕವಾಗಿ ಹೇಳಬೇಕೆನ್ನುವ ನಿಯಮವಿದೆ ಒಂದು ಕಾಲಕ್ಕೆ ಪಮಾಣವಚನವನ್ನು ಬೋಧಿಸುವಾಗ ಪ್ರಮಾಣದ ಆಧಾರದ ಗ್ರಂಥಗಳನ್ನು ಅಥವಾ ಅವರವರ ನಂಬಿಕೆಗೆ ಆಧಾರವಾಗಿದ್ದರೆ ಮೇಲೆ ಪ್ರಮಾಣ ಮಾಡಿಸುವ ಪದ್ಧತಿ ಇದ್ದುದು ಕಂಡು ಬರುತ್ತದೆ. ಅದರ ಉದ್ದೇಶ ಸತ್ಯವನ್ನು ಅಭಿವ್ಯಕ್ತಿಸಲು ಪೂರಕವಾಗುವ ಒಂದು ರೀತಿಯ ಉದ್ದೀಪನೆ. ಅ ಹಿನ್ನೆಲೆಯಲ್ಲಿ ಅವರವರಿಗೆ ಪಾವಿತ್ರ್ಯವೆಂದು ಪರಿಗಣಿತವಾಗಿದ್ದರಮೇಲೆ ಪ್ರಮಾಣ ಮಾಡಿಸುವುದು. ಹೀಗಾಗಿ ಕ್ರಿಶ್ಚಿಯನ್‌ರು, ಬೈಬಲ್ ಮೇಲೆ, ಮುಸಲ್ಮಾನರು ಕುರಾನ್ ಮೇಲೆ ಸ್ವೀಕರಿಸುವ ರೂಢಿ ಇತ್ತು. ಚೈನಾದಲ್ಲಿದ್ದ ರೂಢಿ ಸ್ವಾರಸ್ಯಕರವಾಗಿದೆ. ಚೈನಾ ದೇಶದ ಪ್ರಜೆಯ ಪ್ರಮಾಣಕ್ಕೆ, ‘ಚೀನಾ ಸಾಸರ್’ ಕೊಡಬೇಕಿತ್ತು, ಆತ ಅದನ್ನು ತೆಗೆದುಕೊಂಡು ಚೂರು ಚೂರಾಗಿ ಒಡೆದು ಹೀಗೆ ಹೇಳುತ್ತಿದ್ದ “ನಾನು ಸತ್ಯವನ್ನು ಹೇಳುತ್ತೇನೆ. ನಾನು ಹೇಳುವುದೆಲ್ಲ ಸತ್ಯವೆ. ನಾನು ಸತ್ಯವನ್ನು ಹೇಳದಿದ್ದರೆ ಚೂರು ಚೂರಾದ ಸಾಸರಿನಂತೆ ನನ್ನ ಆತ್ಮ ಒಡೆದು ಚೂರು ಚೂರಾಗಲಿ” ಪ್ರಮಾಣವಚನದ ದೀರ್ಘ ಪಯಣದಲ್ಲಿ ಇವು ಕೆಲವು ಮೈಲಿಗಲ್ಲು ಗಳು ಅಷ್ಟೆ.
ಈ ಪದ್ಧತಿ ನಡೆದು ಬರುತ್ತಿದ್ದ ಕಾಲದ ದಾವೆಯೊಂದರಲ್ಲಿ ಒಂದು ಕುತೂಹಲಕರ ಘಟನೆ ನಡೆದಿದೆ. ಬಹುಶಃ ಅದು ಒಂದು ನೂರು ವರ್ಷಗಳಿಗೂ ಹಿಂದಿನದಿರಬೇಕು. ಆ ದಾವೆ ಒಮಿಚಂದ್ ವಿರುದ್ದ ಬಾರ್ಕರ್ ಇವರ ನಡುವೆ ೧ ಎ. ಟಿ. ಕೆ. ೨೧ ರಲ್ಲಿ ನಡೆದಿರುವುದು. ಅದರಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಹಿಂದೂ ಆದವನು “ಗೀತೆಯ ಮೇಲೆ ಆಣೆ ಇಟ್ಟು ಅಥವಾ ಬ್ರಾಹ್ಮಣನ ಪಾದ ಮುಟ್ಟಿ” ಪ್ರಮಾಣವಚನ ಸ್ವೀಕರಿಸಬೇಕೆಂದು ಉಲ್ಲೇಖವಿದೆ. ((Hindu may swear on the Gila or touching the feet of a Brahmin. Omichand v/s Barker, 1 Atk, 21-
The penal Law of lndia vol. I by H. S. Gour, Second Edition, 1917, P-299))
ಇಲ್ಲಿ ಎರಡು ಅಂಶಕ್ಕೆ ಒತ್ತು ಇದೆ. ಒಂದು ಭಗವದ್ಗೀತೆ, ಎರಡು ಬ್ರಾಹ್ಮಣನ ಪಾದ. ಇಲ್ಲಿ ಗಮನಿಸಬೇಕಾದ್ದು ಬ್ರಾಹ್ಮಣಪದವಿಗಿದ್ದ ಪಾವಿತ್ರ್ಯ ಹಾಗೂ ಔನ್ನತ್ಯ. ಆದರೆ ಆ ಪಾವಿತ್ರ್ಯವನ್ನೊಳಗೊಂಡ ಬ್ರಾಹ್ಮಣ ಭಾರತದಲ್ಲಿ ಇದ್ದಾನೆಯೆ? ಅಲ್ಲದೆ “ಅತ್ಮವತ್ ಸರ್ವಭೂತೇಷು” ಎನ್ನುವ ಸಮಾನವಾದ, ಸಾರ್ವತ್ರಿಕವಾದ, ಸಾರ್ವಕಾಲಿಕವಾದ ಸರ್ವಮಾನ್ಯವಾದ ನಿತ್ಯಸತ್ಯ ಪ್ರಕೃತಿಯ ಅಂತರಂಗವಾಗಿರುವಾಗ ಯಾರ ಪಾದವೇ ಆಗಲಿ ಅದು ಎಷ್ಟೇ ಶ್ರೇಷ್ಠ, ಪವಿತ್ರ ಎಂದರೂ ಅದರ ಆಚರಣೆ ವಿವೇಕ ರಹಿತವಾದದ್ದು ಹಾಗೂ ತರ್ಕಶೂನ್ಯವಾದದ್ದು. ಅದು ಇತ್ತೀಚೆಗೆ ನ್ಯಾಯಾಲಯದ ದಾವೆಯೊಂದರಲ್ಲಿ ಉಲ್ಲೇಖವಾಗಿರುವುದಂತೂ ಅವಿವೇಕದ ಪರಮಾವಧಿ. ಅಷ್ಟೇ ಅಲ್ಲ ಅದು ಯಾವ ಮಾನವೀಯ ಹೃದಯವೂ ಸಹಿಸಲಸಾಧ್ಯವಾದ ಅತ್ಯಂತ ಅಸಹ್ಯ ಕೂಡ. ಏಕೆಂದರೆ ಅದು ಮಾನವ ವಿರೋಧಿ. ಈ ದೇಶದಲ್ಲಿ ನಿಜವಾದ ಬ್ರಾಹ್ಮಣ ಸತ್ತು ಯುಗ ಯುಗಗಳೆ ಕಳೆದಿವೆ. ಇದನ್ನು ಸ್ಪಷ್ಟವಾಗಿ ಧೀರೋದ್ಧಾತ್ತವಾಗಿ ಘೋಷಿಸಿರುವವರು ವಿವೇಕಾನಂದರು. “ಬ್ರಾಹ್ಮಣರೇ – ನಿಮ್ಮ ಜಾತಿ ಕುಲಗಳ ಹೆಮ್ಮೆ ವ್ಯರ್ಥ. ಅದರಿಂದ ಪಾರಾಗಿ, ನಿಮ್ಮ ಶಾಸ್ತ್ರ ಪ್ರಕಾರದ ಬ್ರಾಹ್ಮಣ ನಿಮ್ಮಲ್ಲಿ ಇಂದು ಇಲ್ಲ” ಈ ನಿಜಸ್ಥಿತಿಯ ಅರಿವೇ ಸರ್ವೋದಯದ ಗುರು.
ಯಾವ ಧರ್ಮಗ್ರಂಥಗಳು ಹಾಗೂ ಅವುಗಳ ಅಧ್ಯಯನದಿಂದ ಮಾನವನ ಹೃದಯ ವಿಕಾಸ ಹೊಂದಿ ಅಂತಃಸಾಕ್ಷಿಯ ಜಾಗೃತಿಯಾಗಬೇಕಿತ್ತೋ ಅದೇ ಧರ್ಮ ಗ್ರಂಥಗಳು ಮುಗ್ಧ ಮಾನವನ ಮೌಢ್ಯಕ್ಕೆ, ಕಾರಣವಾಗಿ ಅವನಿಗೆ ಭಯದ ಪ್ರತಿರೂಪವಾಗಿ ಪರಿಣಮಿಸಿರುವುದು ಜನಾಂಗದ ಅವನತಿಯ ಕುರುಹಾಗಿದೆ. ಯಾವುದೇ ಧರ್ಮಗ್ರಂಥ ಆಗಿರಲಿ ಅಲ್ಲಿಯೆ ,ಪುರೋಹಿತರಾದಿಯಾಗಿ ಯಾರೂ ಮುಕ್ತ ಮನಸ್ಸನ್ನು ಒಳಗೊಳ್ಳದೆ ಕಾರಣ ಅ ಧರ್ಮಗ್ರಂಥಗಳು ಅವರ ಶೋಷಣೆಯ ಅಸ್ತ್ರಗಳಾಗಿ ಪರಿಣಮಿಸಿ ಅವುಗಳ ಅಧ್ಯಯನಕ್ಕಿಂತ ಅಂಧ ಆಚರಣೆಯ ಕಿರಾತ ನರ್ತನ ನಿರಂತರ ನಡೆಯುತ್ತಿದೆ. ಅದರಿಂದ ಬಿಡುಗಡೆ ಹೊಂದುವ ವ್ಯಕ್ತಿಗತ ಆಂತರಿಕ ಜಾಗೃತಿ ಎಷ್ಟು ಜಾಗೃತ ಆಗುತ್ತದೆಯೋ ಮಾನವಕುಲಕ್ಕೆ ಅಷ್ಟೂ ಒಳಿತು.
ಬ್ರಿಟಿಷರಿದ್ದ ಕಾಲದಲ್ಲಿ “ದಿ ಇಂಡಿಯನ್ ಓತ್ (oath) ಆಕ್ಟ್ ‘ ೧೮೭೩ ರಲ್ಲಿ ಜಾರಿಗೆ ಬಂತು. ಅದನ್ನು ಸ್ವತಂತ್ರ ಭಾರತ ನಿರಸನಗೊಳಿಸಿ ೧೯೬೯ ರಲ್ಲಿ “ದಿ ಇಂಡಿಯನ್ ಓತ್ ಆಕ್ಟ್’ ಅನ್ನು ಜಾರಿಗೆ ತಂದಿದೆ. ಸದರಿ ಕಾರ್ಯದಲ್ಲಿ ಪ್ರಮಾಣವಚನದ ಬಗ್ಗೆ ಮಾಹಿತಿ ಇದ್ದು ಸಾಕ್ಷಿಗಾರ, ನ್ಯಾಯಾಧೀಶ, ಪ್ರಮಾಣಪತ್ರಿಕೆ ಹಾಜರ್ಪಡಿಸುವವನು, ದುಭಾಷಿ ಇವರುಗಳು ಯಾವ ಯಾವ ರೀತಿ ಪ್ರಮಾಣವಚನ ಸ್ವೀಕರಿಸಬೇಕು ಎಂಬುದನ್ನು ಆಯಾಯ ರಾಜ್ಯಗಳ ಉಚ್ಚ ನ್ಯಾಯಾಲಯಗಳಿಗೆ ನಿಗದಿಪಡಿಸಲಾಗಿದೆ.
ನಮ್ಮ ಭಾರತದ ಸಂವಿಧಾನದಲ್ಲಿ ಪ್ರಮಾಣವಚನದ ಬಗ್ಗೆ ಪ್ರಸ್ತಾಪವಿದೆ, ಯಾರು ಯಾರು ಯಾವ ರೀತಿಯಲ್ಲಿ ಪ್ರಮಾಣವಚನ ತೆಗೆದುಕೊಳ್ಳಬೇಕೆಂಬುದನ್ನು ಸಂವಿಧಾನದ ೬೦ ನೇ ಪರಿಚ್ಛೇದದಲ್ಲಿ ರಾಷ್ಟಪತಿಗೆ, ೬೯ ನೇ ಪರಿಚ್ಛೇದದಲ್ಲಿ ಉಪರಾಷ್ತ್ರಪತಿಗೆ, ೯೯ನೇ ಪರಿಚ್ಚೇದದಲ್ಲಿ ಲೋಕಸಭಾ ಸದಸ್ಯರಿಗೆ ೧೫೯ ನೇ ಪರಿಚ್ಚೇದದಲ್ಲಿ ರಾಜ್ಯಪಾಲರಿಗೆ, ೧೮೮ನೇ ಪರಿಚ್ಛೇದದಲ್ಲಿ ಶಾಸಕರಿಗೆ, ೨೧೯ ನೇ ಪರಿಚ್ಛೇದದಲ್ಲಿ ನ್ಯಾಯಾಧೀಶಗರುಗಳಿಗೆ ಇತ್ಯಾದಿನಿಗದಿಪಡಿಸಲಾಗಿದೆ. ಅಲ್ಲದೆ ಸಂವಿಧಾನದ ಮೂರನೆ ಅನುಸೂಚಿಯಲ್ಲಿ ಪ್ರಮಾಣವಚನದ ಮಾದರಿಯನ್ನು ಸಹ ಕೊಡಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯ, ನ್ಯಾಯಾಲಯಗಳಲ್ಲಿ ಸಾಕ್ಷ್ಯ ನೀಡಲು ಬರುವ ಸಾಕ್ಷಿಗಳಿಗೆ ಈ ಕೆಳಕಂಡಂತೆ ಪ್ರಮಾಣವಚನವನ್ನು ನಿಗಧಿಪಡಿಸಿದೆ.
“ದೇವರ ಮುಂದೆ ಪ್ರಮಾಣಮಾಡಿ ಸತ್ಯವಾಗಿ ಹೇಳುತ್ತೇನೆ. ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ, ಹೇಳುವುದೆಲ್ಲಾ ಸತ್ಯ”
ಹಾಗೆ ಮತ್ತೊಂದು ಮಾದರಿಯಲ್ಲಿ “ಸತ್ಯವಾಗಿ ಹೇಳುತ್ತೇನೆ. ಸತ್ಯವಲ್ಲದೆ ಬೇರೇನೂ ಹೇಳುವುದಿಲ್ಲ. ಹೇಳುವುದೆದಲ್ಲಾ ಸತ್ಯ” ಇದೆ. ಈ ಮಾದರಿಯಲ್ಲಿ ಇಂಗ್ಲೀಷ್‌ನ ಮಾದರಿಯಲ್ಲಿರುವ “ಶ್ರದ್ದಾಪೂರ್ವಕವಾಗಿ ಮತ್ತು ಪ್ರಾಮಾಣಿಕವಾಗಿ” ಎನ್ನುವ ಪದವನ್ನು ಕನ್ನಡದಲ್ಲಿ ಸೇರಿಸಿರುವುದಿಲ್ಲ. ಅದಕ್ಕೆ ಕಾರಣ ತಿಳಿಯದು.
ಮನುಷ್ಯ ತಾನು ತೊಡಗುವ ವೃತ್ತಿಯ ಪಾವಿತ್ರ್ಯಕ್ಕೆ ಧಕ್ಕೆ ಬರದಂತೆ ಅವನ ಅಂತಃಸಾಕ್ಷಿಯನ್ನು ಜಾಗೃತಗೊಳಿಸಿ ವೃತ್ತಿಗೌರವಕ್ಕನುಗುಣವಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಈ ಪ್ರಮಾಣವಚನವನ್ನು ತೆಗೆದುಕೊಳ್ಳಬೇಕೆಂಬ ನಿಯಮವಿದೆ. ವಕೀಲರಿಗೆ ವೈದ್ಯರಿಗೆ, ಇತರ ವೃತ್ತಿ ನಿರತರಿಗೆ ಅವರವರು ನೊಂದಾಯಿಸಿಕೊಂಡ ವೃತ್ತಿಯ ಅನುಮತಿಪತ್ರ ಪಡೆಯುವಾಗ ಪ್ರಮಾಣವಚನ ಬೋಧಿಸುವ ಕ್ರಮದ ಎಲ್ಲರೂ ಅದರಂತೆ ನಡೆದರೆ ಮಾನವಕುಲ ಸತ್ಯದ ಸನಿಹಕ್ಕೆ ಸಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಹಣ, ಆಸ್ತಿ, ಅಧಿಕಾರ, ಸ್ವಾರ್ಥ, ಜಾತಿ ಮತ ಕುಲಗೋತ್ರಗಳ ಅನಿಷ್ಟ ಅಮರಿಕೊಂಡು ಇಡೀ ವ್ಯಕ್ತಿತ್ವವನ್ನೇ ನುಂಗಿ ನೊಣೆಯುತ್ತಿದೆ. ಇದರ ಭಾರದಡಿಯಲ್ಲಿ ಸಿಕ್ಕಿ, ಅಂತಃಸಾಕ್ಷಿಯನ್ನು ಜಾಗೃತಗೊಳಿಸಬೇಕಾಗಿದೆ. ಪ್ರಮಾಣವಚನ ನಲುಗಿಹೋಗಿದೆ.
ವಕೀಲನ ವೃತ್ತಿಗೆ ಹೋಲಿಸಿದಾಗ ವರ್ತಕನ ವೃತ್ತಿಯಲ್ಲಿ ನ್ಯಾಯ ಸುಲಭ ಮತ್ತು ಅವನ ಹಸ್ತಸಿದ್ದ. ಸಮಾಜ ವರ್ತಕನ ಮೇಲೆ ಇಟ್ಟಿರುವ ಗೌರವ ಅಭೂತ ಪೂರ್ವ. ವಕೀಲ ಕಕ್ಷಿಗಾರನ ಪರ ವಾದ ಮಾಡಬಹುದು. ಅದರೆ ನ್ಯಾಯಾನ್ಯಾಯ- ಗಳ ತೀರ್ಪು ಅವನ ಕೈಲಿರುವುದಿಲ್ಲ. ಅದು ನ್ಯಾಯಾಧೀಶರಿಗೆ ಸೇರಿದ್ದು. ವರ್ತಕನ ವೃತ್ತಿ ಹಾಗಲ್ಲ. ನ್ಯಾಯವನ್ನು ನೀಡುವ ಪೂರ್ಣ” ಅಧಿಕಾರವನ್ನು ಸಹ ಸಮಾಜ ಅವನಿಗೆ ಕೊಟ್ಟಿದೆ. ಆದ್ದರಿಂದ ವರ್ತಕನ ಅಂತಃಸಾಕ್ಷಿಯೂ ಕೂಡ
ಅಷ್ಟೇ ಜಾಗೃತವಾಗಿರಬೇಕು. ನ್ಯಾಯದ ತ್ರಾಸು ಅಥವಾ ತಕ್ಕಡಿ (ನ್ಯಾಯ) ಅವನ ಕೈಯಲ್ಲಿ ಇರುತ್ತದೆ ಬಂದರೆ ವರ್ತಕ ಒಂದು ದೃಷ್ಟಿಯಲ್ಲಿ ನ್ಯಾಯಾಧೀಶಕೂಡ ಹೌದು. ಅ ಸ್ಥಾನ ವಕೀಲನಿಗೆ ಇಲ್ಲ. ಹೀಗಾಗಿ ಸಮಾಜಕ್ಕೆ ವರ್ತಕನ ನ್ಯಾಯವಿತರಣೆ ನೇರವಾದದ್ದು, ಅಷ್ಟೇ ಜವಾಬ್ದಾರಿಯುತವಾದದ್ದು. ಕಲಬೆರಕೆ ಇಲ್ಲದ ಅಳತೆ, ತೂಕದಲ್ಲಿ ವ್ಯತ್ಯಾಸವಿರದ ಪ್ರಾಮಾಣಿಕ ನ್ಯಾಯ ವಿತರಣೆಯ ನ್ಯಾಯಾಧೀಶ ವರ್ತಕ. ಈ ಗೌರವವನ್ನು ಮಾನ್ಯ ಮಾಡುವ ಅಂತಃಸಾಕ್ಷಿ ಎಷ್ಟು ವರ್ತಕರಲ್ಲಿದೆ? ಅವರವರ ಸ್ಥಾನ ಗೌರವವನ್ನು ಮನ್ನಣೆ ಮಾಡುವ ಅಂತಃಸಾಕ್ಷಿ ಎಷ್ಟು ಜನ ವೈದ್ಯರಿಗಿದೆ?’ ವಕೀಲರಿಗಿದೆ? ನ್ಯಾಯಾಧೀಶರಿಗಿದೆ? ಆಯಾಯ ವೃತ್ತಿಯಲ್ಲಿರುವವರಿಗಿದೆ? ಇದನ್ನು ಇಂದು ನಾವು ಅತ್ಯಂತ ಹೆಚ್ಚಿನ ಗುರುತರ ಜವಾಬ್ದಾರಿಯಿಂದ ಆಲೋಚಿಸಬೇಕಾಗಿದೆ.
ಮಾನವ ಇತಿಹಾಸದ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ ಈ ಪ್ರಮಾಣವಚನ ಪ್ರಯೋಜನಕಾರಿ ಎನಿಸಿಲ್ಲ. ಅಂತಃಸಾಕ್ಷಿಯನ್ನು ಕಳೆದುಕೊಂಡ ಯಾವ ವ್ಯಕ್ತಿಗೂ ಸತ್ಯ ನುಡಿಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಕಾನೂನುಗಳು ನಿರುಪಯುಕ್ತ. ಹೀಗಾಗಿ ಕಾನೂನುಗಳು ಮನುಷ್ಯನ ಸ್ವಾಭಾವಿಕ ಅಂತಃಕರಣಕ್ಕೆ ವಿರುದ್ಧವಾಗಿ ಅನುಕೂಲಕ್ಕಿಂತ ಹೆಚ್ಚಾಗಿ ಅನಾನುಕೂಲಕ್ಕೆ ಕಾರಣವಾಗಿವೆ. ಪ್ರಮಾಣವಚನ ಒಂದು ಯಾಂತ್ರಿಕ ಕ್ರಿಯೆಯಾಗಿ ಉಳಿದಿದೆ. ಅಂತಃಸಾಕ್ಷಿಯನ್ನು ಹಿಡಿಯ ಹೊರಟಿರುವ ಈ ಮರಳುಗಾಡಿನಲ್ಲಿ ಪ್ರಮಾಣವಚನದ ಪರಿಣಾಮ ಕೈಹಿಡಿಯಷ್ಟು ಮಾತೃ. ಧರ್ಮಗ್ರಂಥಗಳಿಂದ ಸಾಧ್ಯವಾಗದೆ, ಕಾನೂನುಗಳ ಹಿಡಿತಕ್ಕೆ ಧಕ್ಕದ ಈ ಅಂತಃಸಾಕ್ಷಿ ಎಂಬ ಪಾದರಸವನ್ನು ಹಿಡಿಯಲು ಯಾವ ಮಾರ್ಗದಲ್ಲಿ ದುಡಿಯಬೇಕು? ಇದು ಮಾನವ ಕುಲ ಬದುಕುಳಿಯಬೇಕಾದರೆ ತಾನು ಎದುರಿಸಬೇಕಾದ ಸವಾಲು!
ಒಟ್ಟಾರೆ ಸಾಮಾಜಿಕ ಜೀವನದ ಸತ್ಯ ಸಾಕ್ಷಾತ್ಕಾರಕ್ಕಾಗಿ, ಶುದ್ಧಿಗಾಗಿ, ಪಾವಿತ್ರತೆಗಾಗಿ ಮನುಷ್ಯನ ಅಂತಃಸಾಕ್ಷಿಯ ಜಾಗೃತಿ ಅನಿವಾರ್ಯ. ಅದನ್ನು ಜಾಗೃತಿಗೊಳಿಸುವಲ್ಲಿ ನಡೆದಿರುವ ಪ್ರಯತ್ನಗಳೂ ಅಪಾರ. ಅಂತಹ ದೀರ್ಘ ಪಯಣದ ಮೈಲಿಗಲ್ಲುಗಳಲ್ಲಿ ನಾವೀಗ ಕ್ರಮಿಸುತ್ತಿರುವುದು ಈ ಪ್ರಮಾಣವಚನ. ಇನ್ನು ಮುಂದೆ ನಾವು ಕ್ರಮಿಸಬೇಕಾಗಿರುವ ಮೈಲಿಗಲ್ಲುಗಳ ಕಡೆಗೆ ಎಚ್ಚರಿಕೆಯಿಂದ ಪಯಣಿಸೋಣ.
0:0