“ಬಾಳಿನುದ್ದಕ್ಕೂ ಅನಿಷ್ಟ, ಕುತ್ತು, ಸಂಕಟ, ಎಡರು, ಅಡೆ-ತಡೆ ಇವುಗಳೊಡನೆ ಒಂದೇಸಮನೇ ಹೋರಾಟ ನಡೆದಿರುತ್ತದೆ. ಅನಿಷ್ಟವಿಲ್ಲದ ಒಂದೇ ಒಂದು ಗಳಿಗೆ ಬೇಡ, ಕ್ಷಣ ಇಲ್ಲವೆ ಒಂದು ನಿಮಿಷವಾದರೂ ದೊರೆತೀತೇ ಎನ್ನುವುದು ಸಹ ಸಂಶಯಾಸ್ಪದವೇ ಆಗಿದೆ. ಆದ ಕಾರಣ ಅನಿಷ್ಟದೊಡನೆ ನಡೆಯುವ ಈ ಹೋರಾಟವು ಅನಿವಾರ್ಯವೇ? ಅದನ್ನು ತಪ್ಪಿಸಲು ಸಾಧ್ಯವಿಲ್ಲವೇ? ಸಾಧ್ಯವಿದ್ದರೆ ಅದಕ್ಕೆ ದಾರಿಯೇನು?–ಇದನ್ನೆಲ್ಲ ತಿಳಿಪಡಿಸಿ ನಮ್ಮ ಸರ್ವಸಂದೇಹಗಳನ್ನು ಪರಿಹರಿಸಬೇಕೆಂದು ಬೇಡುತ್ತೇವೆ” ಎಂದು ಜೀವ ಜಂಗುಳಿಯೊಳಗಿಂದ ಒಂದು ದನಿಯು ಕೇಳಿಸಿ ಬಂದಿತು.
” ಇದೊಂದು ಮಹಾಪ್ರಶ್ನೆ” ಎಂದು ಸಂಗನುಶರಣನು, ಸಮಾಧಾನದ ಮಾತುಗಳನ್ನು ಆರಂಭಿಸುವನು–
” ಇದು ಮಹಾಪ್ರಶ್ನೆ ಇಷ್ಟೇ ಅಲ್ಲ, ಮುಖ್ಯಪ್ರಶ್ನೆಯೂ ಅಹುದು. ಈ ಪ್ರಶ್ನೆಗೆ ಉತ್ತರ ಹುಡುಕುವುದಕ್ಕೆ ಸಾವಿರಗಟ್ಟಳೆ ವರ್ಷಗಳು ಕಳಿದಿವೆ ಉಪಾಯ ದೊರೆತ ಬಳಿಕ, ಅದರ ಪ್ರಯೋಗದಿಂದ ಪ್ರಯೋಜನ ಪಡೆಯುವದಕ್ಕೆ ಇನ್ನೆಷ್ಟು ಸಾವಿರವರುಷ ಬೇಕಾಗುವವೋ ಎಂದು ಕೈ-ಕಾಲು ಕಳಕೊಳ್ಳುವ ಕಾರಣವಿಲ್ಲ. ಯಾಕಂದರೆ ಅನಿಷ್ಟದೊಡನೆ ಹೋರಾಡುವದೆಂದರೆ ತೀರ ಪ್ರಬಲವೈರಿಯೊಡನೆ ಹಣಾಹಣಿಗೆ ನಿಂತಹಾಗೆ. ಅಲ್ಲದೆ ಆ ವೈರಿಯನ್ನು ಸೋಲಿಸ- ಬೇಕಾಗುವದೇ ಹೊರತು, ಆತನನ್ನು ಕೊಂದು ಒಗೆಯ ಬೇಕಾಗಿಲ್ಲ. ಈಲು ಮಾಡಿಕೊಳ್ಳಬೇಕಾಗಿದೆಯೇ ಹೊರತು ಕೈ-ಕಾಲು ಮುರಿದು ಕೆಡವಬೇಕಾಗಿಲ್ಲ.
ಅನಿಷ್ಟವೆಂದರೆ ಇಷ್ಟವಿಲ್ಲದ್ದು. ಇಷ್ಟಾನಿಷ್ಟಗಳು ಪ್ರಾಣಾತ್ಮಕ ಗುಣ ಧರ್ಮಗಳಾಗಿವೆ ಪ್ರಾಣವು ತನ್ನ ಅಭಿರುಚಿಯನ್ನು ಅನುಸರಿಸಿ ಏನಾದರೂ ಬಯಸುತ್ತದೆ ಅದನ್ನು ಸೃಷ್ಟಿಯು ಒಪ್ಪುವದಿಲ್ಲ. ನೈಸರ್ಗಿಕವಾದುದನ್ನು ಸಲ್ಲಿಸಬರುತ್ತದೆ. ಪ್ರಾಣವು ಅದನ್ನು ಹೊರಗೈಹೊಡೆದು, ತನ್ನ ಇಷ್ಟವಾದುದಕ್ಕೆ ಬಾಯಿಹಾಕಲು ಮುಂಬರುತ್ತದೆ. ಆಗ ಸೃಷ್ಟಿಯು ಅದಕ್ಕೊಂದು ಏಟು ಕೊಡುತ್ತದೆ. ಇದೊಂದು ಬಗೆಯಹೊಡೆತ, ಅದೇ ಅನಿಷ್ಟ.
ಪ್ರಾಣವು ಕಚ್ಚಾಡಿ ಕಾದಾಡಿ ತನ್ನ ಇಷ್ಟವನ್ನು ಸಾಧಿಸಿಕೊಂಡು ಬಂದರೆ, ಅದು ಮೈಗೆ ಹಿತವಲ್ಲ; ಮನಕ್ಕೆ ನೆಮ್ಮದಿಯಲ್ಲ. ಆದರೆ ಪ್ರಾಣಮಾತ್ರ ಇಷ್ಟವನ್ನು ಭೋಗಿಸುತ್ತ ಕೊಬ್ಬಿ ಬಿಡುತ್ತದೆ; ಆದರೆ ಮೈಸೋತು ಒರಗುತ್ತದೆ.
ಮನಸ್ಸು ಬೀತು ನೆಲಹಿಡಿಯುತ್ತದೆ. ಪ್ರಾಣನೆಂಬ ಕೋಣಕ್ಕೆ ದೇಹವು ಕೊರಳ ಗುದ್ದೆಯಾಗಿ ಅದು ಜಿಗಿದತ್ತ ಜಿಗಿದು, ಬಡಕೊಂಡು ಬಡಕೊಂಡು ತೀರ ಕೈಜೋಳಿಗೆಗೆ ಬರುತ್ತದೆ. ಮನಸ್ಸು ದುರ್ಬಲವಾಗಿದ್ದರಿಂದ ಪ್ರಬಲವಾದ ಪ್ರಾಣದ ಅಪೇಕ್ಷೆ ಸರಿಯಾದುದೆಂಬ ವಿಚಾರದ ಆಧಾರ ಸಿದ್ಧಾಂತನನ್ನು ದೊರಕಿಸಿಕೊಡುತ್ತದೆ. ಈ ಕ್ರಮದಿಂದ ಪ್ರಾಣವು ಕೊಬ್ಬುತ್ತ ಸಾಗಿದರೂ ಶರೀರಮನಗಳು ಅನಿಷ್ಟದಿಂದ ಬರುವ ಫಲಗಳನ್ನು ಅನುಭವಿಸಬೇಕಾಗುತ್ತದೆ.
ದೇವನು ಕಾಣದ ಕೈಯಿಂದ ಮಾನವನನ್ನು ಪ್ರಗತಿಮಾರ್ಗದಲ್ಲಿ ಬೆಳೆಸುತ್ತಿರುವ ಎತ್ತುಗಡೆಯೆಲ್ಲ ಪ್ರಾಣದ ಹುಂಬತನ- ದಿಂದ ಹಾಳಾಗಿ ಹೋಗುತ್ತದೆ. ಅದನ್ನು ತಿದ್ದುವುದಕ್ಕೆ ಆ ಬಳಿಕ ಕಾಸಬೇಕಾಗುತ್ತದೆ; ಬಡಿಯ ಬೇಕಾಗುತ್ತದೆ; ಮುರಿಯ ಬೇಕಾಗುತ್ತದೆ; ಮುರಸಿಗೊಗಿಯಬೇಕಾಗುತ್ತದೆ; ಕಂಬಚ್ಚಿನಲ್ಲಿಟ್ಟು ಎಳೆಯಬೇಕಾಗುತ್ತದೆ. ಅದು ಪ್ರಾಣದಿಂದ ಬಂದ ಅನಿಷ್ಟ. ಜೀವಿಯು ಅದನ್ನು ಸಹಿಸಬೇಕಾಗುತ್ತದೆ.
ಪ್ರಾಣವು ತನ್ನಿಷ್ಟವನ್ನು ಬದಿಗಿರಿಸಿ, ಪರಮಾತ್ಮನ ಇಷ್ಟದಂತೆ ವರ್ತಿಸುವದನ್ನು ಕಲಿಯುತ್ತ ಹೋದಂತೆ ಈ ಹೋರಾಟವು ಕಡಿಮೆ ಆಗುತ್ತದೆ. ಕರ್ತಾರನ ಕಮ್ಮಟವಿದ್ದರೂ ದೊಡ್ಡ ಸುತ್ತಿಗೆಗಳ ಬದಲು ಸಣ್ಣ ಸುತ್ತಿಗೆಗಳ ಏಟು, ಅಗ್ನಿಕುಂಡದಲ್ಲಿ ಕರಗಿ ನೀರಾಗುವಂತೆ ಕಾವಿಗೀಡಾಗುವ ಬದಲು, ಕಾವು ತಗಲುವಷ್ಟು ಬೆಂಕಿಯ ಸ್ಪರ್ಶ; ಹೀಗೆ ಜೀವಿಯು ತ್ರಿಗುಣಾತ್ಮಕ ಸ್ವಭಾವ ಧರ್ಮವನ್ನು ಬಿಟ್ಟು, ಪರಮಾತ್ಮ ಶಿಶುವಾಗುವದೆಂದರೆ ದೇವರಾಯನ ಸಡಗರದ ಒಡವೆಯಾಗುತ್ತ ಬಂದಂತೆ ಏಟು ಕಾವುಗಳು ಕಡಿಮೆ ಆಗುವವು. ಮುಂದೆ ಮುಂದೆ ತೀರ ಇಲ್ಲದಂತಾಗಿಬಿಡುವವು.
ಈ ಲೋಕವು ಕರ್ತಾರನ ಕಮ್ಮಟವೇ ಆಗಿರುವದರಿಂದ ಅನಿಷ್ಟದೊಡನೆ ಕಾದಾಟ ಹೋರಾಟಗಳು ಅನಿವಾರ್ಯ- ವಾಗಿ ಬರುವವು. ಅವಿಲ್ಲದೆ ಲೋಕ ದಾಟವೇ ನಡೆಯಲಾರದು. ಅಜ್ಞಾನ-ಅಹಂಕಾರಗಳಿಂದ ತುಂಬಿದ ಮಾಯೆಯ ಕಾಲುಚಂಡು, ಮಾರ್ಪಾಡುಗೊಂಡು ಪರಮಾತ್ಮನ ಕೈಯೊಳಗಿನ ಮುದ್ದಿನ ಉಂಡೆಯಾಗಬೇಕಾಗಿದೆ. ಒಲ್ಲಿನೆಂದು ಒರಲುವ ಕಾಲುಚಂಡು ಸಹ ದೇವನ ಮುದ್ದಿನುಂಡೆ ಆಗಿಯೇಬಿಡುವುದು ಅನಿವಾರ್ಯ. ಅದಕ್ಕೆ ಕಾಲವು ಬಹಳ ಹಿಡಿಯಬಹುದು. ಆದರೆ ಮುದ್ದಿನುಂಡೆಯಾಗುವದಕ್ಕೆ ಆತುರಪಡುವ ಕಾಲುಚಂಡು ಸಹಜವಾಗಿ, ಸುಲಭವಾಗಿ, ತೀವ್ರವಾಗಿ ಮುದ್ದಿನುಂಡೆ ಆಗಬಲ್ಲದು. ಆದರೆ ನಡೆಯುತ್ತ ಹೋದರೂ, ಮಂದ ವೇಗದಿಂದ ಇಲ್ಲವೆ ತೀವ್ರ ವೇಗದ ವಾಹನದಲ್ಲಿ ಕುಳಿತು ಸಾಗಿದರೂ ಹತ್ತುವ ಮ್ಮೆಲುಗಳನ್ನೆಲ್ಲ ದಾಟಲೇ ಬೇಕಾಗುತ್ತದೆ. ಬರುವ ನಿಲ್ದಾಣವನ್ನು ತಪ್ಪಿಸಲು ಸಾಧವೇ ಇಲ್ಲ. ಆದರೇನು? ಅನಿಷ್ಟಗಳು ತಪ್ಪಿ ಇಷ್ಟ ಸಿದ್ಧಿಯು ಪ್ರಾಪ್ತವಾಗುವದು ಖಂಡಿತ.
ಗಂಗೆಯೊಡನಾಡಿದ ಗಟ್ಟಬೆಟ್ಟಂಗಳು ಕೆಟ್ಟ ಕೇಡ ನೋಡಯ್ಯ.
ಅಗ್ನಿಯೊಡನಾಡಿದ ಕಾಷ್ಟಗಳು ಕೆಟ್ಟಕೇಡ ನೋಡಯ್ಯ.
ಜ್ಞಾನಿಯೊಡನಾಡಿದ ಅಜ್ಞಾನ ಕೆಟ್ಟ ಕೇಡ ನೋಡಯ್ಯ.
ಇಂತೀ ಪರಶಿವಮೂರ್ತಿ ಹರನೇ,
ನಿಮ್ಮ ಜಂಗಮಲಿಂಗದೊಡನಾಡಿ ಎನ್ನ ಭವಾದಿ
ಭವಂಗಳು ಕೆಟ್ಟಕೇಡ ನೋಡಾ -ಚೆನಮಲ್ಲಿಕಾರ್ಜುನ.
ಉದ್ದಾರಗೊಂಡ ವಸ್ತುವನ್ನಾಗಲಿ, ಕಲ್ಯಾಣಗೊಂಡ ಜೀವವನ್ನಾಗಲಿ ನೋಡುವುದು ಚೆನ್ನ. ಅದು ಪಟ್ಟ ಪಾಡು, ಉಂಡ ಕೇಡು ನೆನಸಲಿಕ್ಕಾಗದು. ಮೊದಲೇ ಮಾಯೆಯ ಕಾಲುಚೆಂಡು! ಅಜ್ಞಾನದ ಮೊಟ್ಟೆ! ಅಹಂಕಾರದ ಬೆಟ್ಟ! ಅದರ ಗೋಳಾಟ ಹೇಳಲಿಕ್ಕಾಗದು. ಕೇಳಲಿಕ್ಕಾಗದು. ನೋಡಲಿಕ್ಕಂತೂ ಆಗಲೇ ಆರದು.
ಅಡವಿಯ ಹೊಗಿಸಿತ್ತು. ನೀರಲದಿದ್ದಿತ್ತು.
ಜಡೆಗಟ್ಟಿ ಭಸ್ಮವ ತೊಡಿಸಿತ್ತು.
ಹಿಡಿದೆತ್ತಿ ಕೇಶದ ಕೀಳಿಸಿತ್ತು.
ಹುಡಿಹುಚ್ಚುಗೊಳಿಸಿತ್ತು ಊರೊಳಗೆಲ್ಲ.
ಬೆಡಗಿನ ಮಾಯೆಗೆ ನಾಚುವೆನೆಂದ
ಅಂಬಿಗರಚೌಡಯ್ಯ..
ಮಾಯೆ ಕಾಯಕ್ಕೆ ನೆಳಲಾಗಿ ಕಾಡಿದರೆ, ಪ್ರಾಣಕ್ಕೆ ಮನವಾಗಿ ಕಾಡುವದು. ಅಷ್ಟಕ್ಕೇ ಬಿಡದೆ ಮನಕ್ಕೆ ನೆನಹಾಗಿ ಕಾಡುವದು; ನೆನಹಿಂಗೆ ಅರಿವಾಗಿ ಕಾಡುವದು; ಅದೇ ಮಾಯೆ ಜಗದಜಂಗುಳಿಗಳಿಗೆ ಬೆಂಗೊಲನೊತ್ತಿ ಕಾಡುವದು. ಆದರೆ ಈ ಮಾಯೆಯನ್ನು ಒಡ್ಡಿದವರಾರು? ಚೆನ್ನಮಲ್ಲಿಕಾರ್ಜುನ ದೇವನು. ಆದ್ದರಿಂದ ಅವನಲ್ಲದೆ ಇನ್ನಾರಿಂದಲೂ ಅದನ್ನು ಗೆಲ್ಲಲಿಕ್ಕೆ ಸಾಧ್ಯವಾಗಲಾರದು.
ಕೊಲ್ಲುವುದಕ್ಕಾಗಿಯೇ ಕೊಲ್ಲುವುದು ಮಾಯೆಯ ಕೆಲಸವಲ್ಲ. ಬದುಕಿಸುವೆನೆಂದು ಹೇಳಿ ಕೊಲೆಮಾಡುವದು ಮಾಯೆಯ ಕೈಚಳಕ. ಹಸಿವು ಹಿಂಗಿಸುವೆನೆಂದು ಹೇಳಿ, ಹೊಟ್ಟೆ ತುಂಬ ಉಣ್ಣಿಸಿ, ಹೊಟ್ಟೆಯೊಡೆಸುವುದು ಮಾಯೆಯ ಜಾಣ್ಮೆ ನೀರಡಿಸಿದಾಗ ಕುಡಿಯಲು ನೀರುಕೊಟ್ಟು ಕಂಗೆಡಿಸುವುದು ಮಾಯೆಯ ಚಾಪಲ್ಯ. ಕುಡಿಯುನ ನೀರು ಮಾಯೆಯ ಕೈಯಲ್ಲಿ ಕೊಲೆಯ ಕೋಲು. ಉಣ್ಣುವ ಅನ್ನ ಮಾಯೆಯ ಕೈಯಲ್ಲಿ ಸಾವಿನ ಬಡಿಗೆ. ಲಲ್ಲೆಯ ಮುದ್ದು ಮಾಯೆಯ ತುಟಿಯಲ್ಲಿ ಮದ್ದಿನ ನಂಜು. ಅಕ್ಕರೆಯ ಮೈದಡವು ಮಾಯೆಯ ಅಂಗೈಯಲ್ಲಿ ಮೋಡಿಮಾಟದ ಗುಂಜು.
ಕುಡಿವ ನೀರೆನ್ನಬಹುವೇ ನೀರಲದ್ದುವಾಗ?
ಆಡುವ ಕಿಚ್ಚೆನ್ನಬಹುದೇ ಮನೆಯ ಸುಡುವಾಗ?
ಒಡಲು ತನ್ನದೆನ್ನಬಹುದೇ ಪುಣ್ಯ-ಪಾವವನುಂಬಾಗ?
ಜೀವ ತನ್ನದೆನ್ನಬಹುದೇ ಮಿಕ್ಕು ಹೋಹಾಗ?
ಇವನೊಡೆ ಬಡಿದು ಕಳೆ ಎಂದಾತನು-
ಅಂಬಿಗರ ಚೌಡಯ್ಯ.
ಇದರಿಂದ ಉಳಿಯುವ ದಾರಿ ಎಲ್ಲಿಯಾದರೂ ಉಂಬೇ? ಮಾಯೆ ಯಿಂದ ಪಾರಾಗುವದಕ್ಕೆ ಮಾಯೆಯನ್ನು ಒಡ್ಡಿದವನ ಆಶ್ರಯಪಡೆಯ ಬೇಕಾಗುತ್ತದೆ. ಅಷ್ಟರಲ್ಲಿ ಮಾಯೆಯ ಮದಗಜವು ಮೈಮನಗಳನ್ನು ತೊತ್ತಳಿದುಳಿದು ಹಸಗೆಡಿಸಿರು- ತ್ತದೆ. ಸರ್ವ ವಿಕಾರಗಳೂ ಅಲ್ಲಿ ನೆರೆದು ಜೀವವನ್ನು ಕಂಗೆಡಿಸಿರುತ್ತವೆ ಮಾಯೆಯ ಬಾಯಿಗೆ ತುತ್ತಾಗಬೇಕು, ಇಲ್ಲವೆ
ದೇವನ ಕೈಗೆ ಮುತ್ತಾಗಬೇಕು. ಈ ಎರಡು ದಾರಿಗಳನ್ನುಳಿದು, ಮೂರನೆಯ ದಾರಿಯೇ ಇಲ್ಲವೆಂದು ಹೇಳಬಹುದು.
ವಿಕಳನಾದೆನು ಪಂಚೇಂದ್ರಿಯ ಧಾತುವಿನಿಂದ.
ಮತಿಗೆಟ್ಟೆನು ಮನದ ವಿಕಾರದಿಂದ.
ಧ್ಯತಿಗೆಟ್ಟಿನು ಧನದ ವಿಕಾರದಿಂದ.
ಗತಿಗೆಟ್ಟಿನು ಕಾಯ ವಿಕಾರದಿಂದ.
ಶರಣುಹೊಕ್ಕೆನು ಕೂಡಲಸಂಗಮದೇವಯ್ಯ.
ಇಂಥ ಶೋಚನೀಯಸ್ಥಿ ತಿಗೀಡಾದರೂ ‘ತಂದೇ’ ಎಂದು ಕೂಗಿದರೆ ಆಣೆ! ಅದೆಂಥ ಉರುಲು ಬಿಗಿಯುತ್ತಿದ್ದರೂ ‘ ಅಂಬಾ ’ ಎಂದು ಹಂಬಲಿಸಿ ದರೆ ಕುಲಕ್ಕೆ ಕಲಂಕ! ತನುನಷ್ಟ, ಮನನಷ್ಟ, ನೆನಹುನಷ್ಟ, ಭಾವನಷ್ಟ , ಜ್ಞಾನನಷ್ಟ. ಆ ಐದರೊಡನೆ ತಾನೂ ನಷ್ಟಗೊಳ್ಳುವನಲ್ಲದೆ, ದೇವನೂ ನಷ್ಟ ವಾಗಿ ಬಿಟ್ಟಿದ್ದಾನೆಂದು ತಿಳಿದಿರುತ್ತಾನೆ. ಅಂತೆಯೇ ಆತನನ್ನು ಕುರಿತು ಹಲುಬುವದಿಲ್ಲ, ಹಂಬಲಿಸುವದಿಲ್ಲ. ಕನಸುಕಂಡ ನಾಯಿಯಂತೆ ದಿಗ್ಗನೆದ್ದು ಓಡುವುದು; ಇಲ್ಲನೆ ಸುತ್ತಿಸುತ್ತಿ ಒರಗಿ ಕಳ್ಳನಿದ್ದೆ ಮಾಡುವದು. ಆದರೆ ಇದರಿಂದ ಯಾವ ಫ್ರಯೊಕೆಜನವೂ ಆಗಲರಿಯದು.
ದೇಶ ಗುರಿಯಾಗಿ ಲಯವಾಗಿ ಹೋದವರ ಕಂಡೆ.
ತಮಂಧ ಗುರಿಯಾಗಿ ಲಯವಾಗಿ ಹೋದವರ ಕಂಡೆ.
ಕಾಮ ಗುರಿಯಾಗಿ ಬೆಂದು ಹೋದವರ ಕಂಡೆ.
ನೀ ಗುರಿಯಾಗಿ ಹೋದವರ ಕಾಣೆ ಗುಹೇಶ್ವರಾ.
ರೋಗ ಫ್ರಬಲವಾಗುವ ಮೊದಲೇ ವೈದ್ಯನನ್ನು ಆಶ್ರಯಿಸದ ರೋಗಿಯು ರೋಗ ಅಸಾಧ್ಯವಾದಾಗಲೂ ವೈದ್ಯನ ಬಳಿಗೋಡುವನೋ ಇಲ್ಲವೋ. ಆಗಲಾದರೂ ವೈದ್ಯನ ಬಳಿಗೆ ಹೋಗುವದು ಕಲ್ಯಾಣಕರವೇ. ಆದರೆ ವೈದ್ಯನನ್ನು
ಕಂಡಕೂಡಲೇ ಸರ್ವರೋಗಗಳೆಲ್ಲ ಪರಿಹಾರವಾಗಿಯೇ ಬಿಡುವವೆಂದು ತಿಳಿಯಲಾಗದು. ರೋಗದ ನೋವಿಗಿಂತ ವೈದ್ಯನ ಉಪಚಾರವೇ ಬೇಸರಿಡಬಹುದು. ಬೇನೆಯ ಬಳಲಿಕೆಗಿಂತ ಔಷಧದ ತೊಳಲಿಕೆ ಕೀಸರಿಡಬಹುದು. ರೋಗದಿಂದ ಸಾವಿಗೀಡಾಗುವದಕ್ಕಿಂತೆ ಪಧ್ಯದಿಂದ ನಿರ್ಜೀವವಾಗುನದು ತೀರ ಅಸಹ್ಯವಾಗಬಹುದು. ಮಾಯೆಯ ಕೈತಪ್ಪಿಸಿಕೊಂಡು ಶಿವನನ್ನು,ಮೊರೆಹೊಕ್ಕರೆ ಅವನಾದರೂ ಒಳ್ಳೆಯವನೇ? ಅವನ ಕಾಟವೇನು ಕಡಿಮೆಯದಲ್ಲ. ಒಮ್ಮೆ ನಗಿಸುವನೆಂದರೆ ನಾಲ್ಕುಸಾರೆ ಅಳಿಸುವನು. ಅವನ ಕಣ್ಣಿಗೆ ಕಣ್ಣು ಬೆರೆಯಿಸುವ ಎದೆಗಾರಿಕೆಯು ಸಹ ಮಾಯೆ ಕುಣಿಸುನ ಈ ಬೊಂಬೆಗಿರುವದಿಲ್ಲ. ಆದರೂ ಧೈರ್ಯಮಾಡಿ, ಅಡಿಗೆ ಬಿದ್ದರೆ ತನುವನಲ್ಲಾಡಿಸಿ ನಾಡೀಪರೀಕ್ಷೆಮಾಡು
ವನು; ಮನವನಲ್ಲಾಡಿಸಿ ಬುದ್ಧೀಪರೀಕ್ಕೆ ಮಾಡುವನು; ಉಪಚಾರದ ಬೆಲೆ ಹೆಚ್ಚಿಗೆ ಹೇಳಿ ಧನಪರೀಕ್ಷೆಮಾಡುವನು.
ಅಡಿಗೆ ಬಂದ ಭಕ್ರರನ್ನು ನುಗ್ಗುಮಾಡುವನು; ನುಸಿಯಮಾಡುವನು. ಮಣ್ಣುಮಾಡುವನು; ಮಸಿಯಮಾಡುವನು. ಹರನು ತನ್ನ ಭಕ್ತರನು ತಿರಿವಂತೆ ಮಾಡುವನು. ಚಿನ್ನದಂತೆ ಒರೆದು ನೋಡುವನು. ಚಂದನದಂತೆ ಅರೆದು ನೋಡುವನು. ಕಬ್ಬಿನ ಕೋಲಿನಂತೆ ಅರೆದು ನೋಡುವನು. ಇಷ್ಟೆಲ್ಲ ವೈದ್ಯ ಪರೀಕ್ಷೆಯಾಗಬೇಕು. ಅವಶ್ಯವಾದರೆ ಶಸ್ತ್ರ ಚಿಕಿತ್ಸೆಯೂ ನಡೆಯಬಹುದು. ಅ ಬಳಿಕ ಕೊನೆಯಲ್ಲಿ ಭವರೋಗಿಯಾದ ಭಕ್ತನು ಬೆಚ್ಚದೆ ಬೆದರದೆ, ತೊತ್ತುತನ ಮಾಡಿದರೆ ದೇವದೇವನು ತನ್ನನ್ನೇ ಅವನಿಗೆ ಕೊಟ್ಟುಕೊಳ್ಳುವನು. ಭಕ್ತನು ತನ್ನ ಅದೆಂಥ ಕಠೋರ ಪರೀಕ್ಷೆಗೂ ಅಂಜದಿದ್ದರೆ ತಾನೇ ಭಕ್ತಕಂಪಿತ ನಾಗುವನು. ದೇವನು ಅದೆಷ್ಟು ನಂಬುಗೆಗೆಡಿಸಿದರೂ ಭಕ್ತನು ಆತನನ್ನು
ನೆರೆನಂಬಿದವನಾದರೆ ಕಡೆಗೆ ತನ್ನಂತೆ ಮಾಡುವನು. ಅನಿಷ್ಟಗಳಿಗೆಲ್ಲಕ್ಕೂ ಬೆದರದೆ ಬೆಚ್ಚದೆ ಇದ್ದರೆ ಪರಮಾತ್ಮ ಕರವಿಡೆದೆತ್ತಿಕೊಳ್ಳುದನು. ಕೊಲುವನೆಂಬ ದೇವನಭಾಷೆ ಹುಸಿಯಾಗಿ ಗೆಲುವೆನೆಂಬ ಭಕ್ತನಭಾಷೆಯು ದಿಟವಾಗಿ ನಿಲ್ಲುವದು
ಚಂದನವ ಕಡಿದು, ಕೊರೆದು ತೇದಡೆ
ನೊಂದೆನೆಂದು ಕಂಪಬಿಟ್ಟೀತೆ?
ತಂದು ಸುವರ್ಣವ ಕಡಿದೊರೆದಡೆ
ಬೆಂದು ಕಳಂಕ ಹಿಡಿದಿತ್ತೇ?
ಸಂದು ಸಂದು ಕಡಿದು ಕಬ್ಬನು ತಂದು ಗಾಣದಲಿಕ್ಕಿ
ಬೆಂದ ಪಾಕಗಳು ಸಕ್ಕರೆಯಾಗಿ
ನೊಂದೆನೆಂದು ಸವಿಯ ಬಿಟ್ಟಿತ್ತೇ?
ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು
ಮುಂದಿಳುಹಲು ನಿಮಗೆ ಹಾನಿಯೆ?
ನನ್ನ ತಂದೆ ಚೆನ್ನಮಲ್ಲಿಕಾರ್ಜುನ ದೇವಯ್ಯ
ಕೊಂದಡೆ ಶರಣೆಂಬುದ ಮಾಣೆ.
ಇದೀಗ ನಿಶ್ವಯವಾಗಿ ತೆರ್ಗಡೆಹೊಂದುವ ಜೀವಿ. ಮಾಯೆಯಾಡಿಸುವ ಕಪ್ಪಡದ ಕೈಗೊಂಬೆಯಾಗಾಗುವದಕ್ಕಿಂತ ವ್ಯಂಗನಾಗಿ ಬದುಕುವದು ಒಳ್ಳೆಯದೆಂದು ಇಂಥ ಜೀವಿಯು ಬಗೆಯುವದು. ಮಾಯೆಯೋಡಿಸುನ ಕೋಲು
ಕುದುರೆಯಾಗುವದಕ್ಕಿಂತ ಹೆಳವನಾಗಿ, ಕುರುಡನಾಗಿ ಬದುಕುವದು ಒಳ್ಳೆಯ ದೆಂದು ಇಂಥ ಜೀವಿ ಭಾವಿಸುವದು. ಯಾಕಂದರೆ ಹಲವು ವಿಷಯಗಳಿಗೆ ಎಳಸುತ್ತ ಮರ್ಕಟನಂತೆ ರೆಂಬೆಯಿಂದ ರೆಂಬೆಗೆ ಜಿಗಿಯುತ್ತ ಜೀವಿಸುವದಕ್ಕಿಂತ
ಊನವಾಗಿ ಶರಣರ ಪಾದ-ಕಮಲಗಳಲ್ಲಿ ತುಂಬಿಯಾಗಿ ಎರಗಿಕೊಂಡಿರುವುದು ಸುಖಕರನಲ್ಲವೇ?
ಅತ್ತಲಿತ್ತ ಸಾಗದಂತೆ ಹೆಳೆವನ ಮಾಡಯ್ಯ ತಂದೇ.
ಸುತ್ತಿಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೇ.
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೇ.
ನಿಮ್ಮ ಶರಣರ ಪಾದವಲ್ಲವೆ ಅನ್ಯವಿಷಯಕ್ಕೆ
ಎಳಸದಂತಿರಿಸಯ್ಯ ಕೂಡಲಸಂಗಮದೇವಾ.
ಎಂದು ಪ್ರಾರ್ಥಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ದೇವ ಧನ್ವಂತರಿಯ ಕೈಗೆ ಸಿಕ್ಕ ಭವರೋಗಿಯ ಮೂರು ಪ್ರಕೃತಿಗಳು ಒಳಹೊರಗೆ ನಿರೋಗಿಯಾಗಿಬಿಡುವದು ತಡವಾಗಬಹುದಾದರೂ ಅಶಕ್ಯವಾಗಲಾರದು. ತನುವಿನ ಆಲಸ್ಯ, ಪ್ರಾಣದ ಆಶೆ-ಆಕಾಂಕ್ಷೆ, ಮನದ ತರ್ಕವಿತರ್ಕಗಳು ಮಾರ್ಪಾಡುಗೊಳ್ಳುವದೆಂದರೆ -ಮೊದಲಿದ್ದವುಗಳು ಹಾಳಾದಂತೆಯೇ ಸರಿ. ಹಳೆಯ ರೋಗವೇ ಆಗಿರಲಿ, ಅನುವಂಶಿಕ ರೋಗವೇ ಆಗಿರಲಿ ಕರ್ಮದಬೆಟ್ಟವಾಗಿ ಕುಳಿತಿದ್ಧರೆ ಅದೂ ಕರಗಿಹೋಗುವದು.
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ತನು ಹಾಳಾಯಿತಯ್ಯ.
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಮನ ಹಾಳಾಯಿತಯ್ಯ.
ಅಯ್ಯಾ, ನಿಮ್ಮ ಅನುಭಾವದಿಂದ ಎನ್ನ ಕರ್ಮ ಛೇದವವಾಯಿತಯ್ಯ..
ನಿಮ್ಮವರು ಅಡಿಗಡಿಗೆ ಹೇಳಿ ಭಕ್ತಿಯೆಂಬ ಒಡವೆಯನು
ದಿಟವ ಮಾಡಿ ತೋರಿದ ಕಾರಣ,
ಅಲ್ಲಿ ಮಾಡುವರು, ಮಾಡಿಸಿಕೊಂಬವರು ನೀವೇ
ಕೂಡಲಸಂಗಮದೇವಾ.
ಸಣ್ಣಗಾಗುವಂತೆ ಅರೆದಾಗ ಸಣ್ಣಗಾಗಿ, ಬಣ್ಣಬರುವಂತೆ ಒರೆದಾಗ ಬಣ್ಣದೊಟ್ಟರೆ ಕಾಸಿಬಡಿಯುವದು ಕಡಿಮೆ- ಯಾಯಿತೆಂದು ತಿಳಿಯಬೇಕು. ಭಕ್ತಿಯೆಂಬುದು ಕರಗಸವಿದ್ದ ಹಾಗೆ. ಅದು ಹೋಗುತ್ತಲೂ ಕೊರೆಯುವದು; ಬರುತಲೂ ಕೊರೆಯುವದು ಘಟಸರ್ಪದಲ್ಲಿ ಕೈದುಡುಕಿದರೆ ಕೈಹಿಡಿಯದೆ ಬಿಡಲಾರದು. ಅರ್ಥವನರ್ಥವಮಾಡಿ ಕೋಲಾಹಲ- ಗೊಳಿಸಬಹುದು. ಹುಟ್ಟಿದ ಮಕ್ಕಳನ್ನು ನವಖಂಡಮಾಡಿ ಕಡಿದೊಗೆಯಬಹುದು. ಮುಟ್ಟಿದ ಸ್ತ್ರೀಯ ಕಣ್ಣಮುಂದೆ ಅಭಿಮಾನಂಗೊಂಡು ನೆರೆಯಬಹುದು. ಇವೆಲ್ಲ ಹೊರಗಿನವಾದವು. ಅಂಗದ ಮೇಲೆ ಬರಬಹುದು. ಇಕ್ಕುವ ಶೂಲಪ್ರಾಪ್ತವಾಗ ಬಹುದು. ಹಿಡಿ ಖಂಡವಮಾಡಿ ಕಡಿಯಬಹುದು. ಆದರೆ ಈ ಎಲ್ಲ ಕಷ್ಟ-ಕೋಲಾಹಲಗಳಲ್ಲಿ ತೇರ್ಗಡೆಹೊಂದಿದಾಗ ತಲುವುವ ಗುರಿಯ ಬೆಲೆಯನ್ನು ಮನಸ್ಸಿನಲ್ಲಿ ತಂದರೆ ನಾವುಣ್ಣುವ ಅನಿಷ್ಟಗಳು ಯಾವ ಬೆಲೆಯವೂ ಆಗ ಲಾರವು.
ಅನಿಷ್ಟಗಳು ಕಲ್ಯಾಣಕಾರಿಯೆಂದೂ ಮಂಗಲಪ್ರದವೆಂದೂ ಭಾವಿಸುವ ಭಕ್ತನು ಮಾಯೆಯು ತಂದೊಡ್ಡವ ಅಡೆ- ತಡೆಗಳನ್ನಾಗಲಿ, ತೊಂದರೆ-ಗಂಡಾಂತರರಳನ್ನಾಗಲಿ, ನಿಂದೆ-ತೆಗಳಿಕೆಗಳನ್ನಾಗಲಿ ತನ್ನದೇ ಆದ ಕಲ್ಯಾಣ
ದೃಷ್ಟಿಯಿಂದ ಮಂಗಲದೃಷ್ಟಿಯಿಂದ ಕಾಣಬಲ್ಲನು.
ಇದಿರೆನ್ನ ಹಳಿಯುವನರು ನುಡಿಯ ಬೆಳಗುವರು.
ಮನದ ಕಾಳಿಕೆಯ ಕಳೆವವರೆನ್ನ ನಂಟರು,
ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ,
ಹೇಯೋಪಾಯವ ತೋರುವರು.
ಇದು ಕಾರಣ ಅನ್ಯದೇಶಕ್ಕೆ ಹೋಗಲೊಲ್ಲೆ.
ಸಕಳೇಶ್ವರದೇವರ ತೋರುವರೊಳರಿಲ್ಲಿಯೇ.”
ಆ ಬಳಿಕ ಜಗಜ್ಜನನಿಯು ಉದ್ಘೋಷಿಸಿದ ಧೈರ್ಯದ ನುಡಿಗಳು ಯಾವವೆಂದರೆ-
” ಮಕ್ಕಳೇ, ಅನಿಷ್ಟಕ್ಕೆ ಬೆದರಬೇಡಿರಿ. ಅದು ಮೇಲುಪದರಿನ ಫ್ರತಿಕ್ರಿಯೆ ಮಾತ್ರ. ಅನಿಷ್ಟದಿಂದ ಇಷ್ಟವನ್ನು ಪಡೆಯುವದಕ್ಕೆ ಪ್ರಚೋದನ ದೊರೆಯುತ್ತದೆ. ದೋಷಯುಕ್ತ ಅಂಶವನ್ನು ಕಳೆದರೆ, ಹುದುಗಿದ ಅಂತರಾತ್ಮನನ್ನು ಮೇಲಕ್ಕೆ ತರುವುದು -ಹಗುರವಾಗುತ್ತದೆ. ಸಹೃದಯರಾಗಿರಿ. ಅದರಿಂದ ಪ್ರಾಣಶಕ್ತಿಯನ್ನು ಈಲುಮಾಡಿಕೊಳ್ಳಲು ಬರುತ್ತದೆ. ಪ್ರಾಣವು ಈಲಾದರೆ ಅನಿಷ್ಟ ನಿವಾರಣೆ ವೂರ್ಣಗೊಳ್ಳುವದಲ್ಲದೆ, ಅದರಿಂದ ಅಂತರಾತ್ಮನ ಫ್ರಕಟನೆಗೆ ಸಹಾಯಸಿಗುತ್ತದೆ.”
***