ಕೊಲ್ಲಿ ದೇಶಗಳು ಅ೦ದ ತಕ್ಷಣ ನಮ್ಮ ಕಣ್ಣು ಮುಂದೆ ಬಂದು ನಿಲ್ಲುವ ಚಿತ್ರಗಳೆ೦ದರೆ, ಕುಣಿದಾಡುತ್ತ ನೆಲದೊಡಲಾಳ- ದೊಳಗಿಂದ ಪುಟಿದೇಳುವ ತೈಲ ಹಾಗೂ ಅಷ್ಟೇ ಸುಸ್ತಾಗಿ ಮೈಸುಟ್ಟುಕೊಂಡು ಉಸಿರು ಹಾಕುತ್ತ ಬಿದ್ದಿರುವ ಮಹಾ
ಮರುಭೂಮಿಗಳು.
ಸೌದಿ ಅರೇಬಿಯದ ಉತ್ತರ ಭಾಗಕ್ಕೆ ನಾಫೂದ್ ಮರುಭೂಮಿಯಲ್ಲಿ ತಿಳಿಗುಲಾಬಿ ಮಿಶ್ರಿತ ಬಣ್ಣದ ದೊಡ್ಡ ದೊಡ್ಡ ಉಸುಕಿನ ದಿನ್ನೆಗಳೇ ಬಿದ್ದಿದ್ದರೆ ದಕ್ಷಿಣ ಪೂರ್ವ ಮಧ್ಯಭಾಗದಲ್ಲಿ ಜಗತ್ತಿನಲ್ಲಿಯೇ ಅತಿ ದೊಡ್ಡ ವಿಶಾಲವಾದ ಮರುಭೂಮಿ ಎಂದು ಹೆಸರು ಪಡೆದಿರುವ “ರಬ್ ಅಲ್ ಖಾಲಿ” ಧಗ ಧಗಿಸುತ್ತ ದೇಶದ 1/4 ಭಾಗವನ್ನು ಆಕ್ರಮಿಸಿ- ಕೊಂಡು ವಿರಾಜಿಸುತ್ತಿದೆ. ಪಶ್ಚಿಮದೆಡಗೆ ಸುತ್ತೆಲ್ಲ ಅಲ್ಲಲ್ಲಿ ಮರುಭೂಮಿ ಪ್ರದೇಶಗಳಿದ್ದರೂ ಜನವಸತಿ ಸಾಕಷ್ಟಿದೆ
ಸೌದಿಯ ಎರಡು ದೊಡ್ಡ ಮರುಭೂಮಿಗಳ ಬಗ್ಗೆ ಹಿಂದೆ ಪ್ರಸ್ತಾವಿಕವಾಗಿ ಮಾತಾಡಿದ್ದೇವೆ. ಆದರೆ ಸೌದಿಯಲ್ಲೇ ಇದ್ದುಕೊಂಡು ಈ ಮರುಭೂಮಿಯನ್ನು ನೋಡಲಿಕ್ಕೆ ನಮಗೆ ಸಾಧ್ಯವಾಗಲಿಲ್ಲ. ಭಾರತದಲ್ಲಿಯೇ ಇದ್ದುಕೊಂಡು
ರಾಜಸ್ತಾನದ ಮರುಭೂಮಿಗಳನ್ನು ನೋಡದ ಹಾಗೆ. ಅಥವಾ ಕರ್ನಾಟಕದಲ್ಲಿಯೇ ಇದ್ದುಕೊಂಡು ಐಹೊಳೆ, ಪಟ್ಟದಕಲ್ಲು, ಅಥವಾ ಹಳೆಬೀಡು, ಬೇಲೂರು, ನೋಡದ ಹಾಗೆ. ಇವುಗಳಾದರೋ ಐತಿಹಾಸಿಕ, ಕಲಾತ್ಮಕ ಸ್ಥಳಗಳು. ಒಮ್ಮೆಯಾದರೂ ನೋಡು ತ್ತೇವೆ. ಆದರೆ ಈ ಮರುಭೂಮಿಗಳನ್ನು ಏನಂತ ನೋಡವುದು? ನೋಡಲೇ ಬೇಕೆಂದರೆ ಸಮೀಪದ, ಊರು ಹೊರಗಡೆಯ 20-30ಕಿ.ಮೀ. ದೂರದಲ್ಲಿರುವ ಮರಭೂಮಿಗೆ ಹೋಗಿ ನೋಡಿ ಆನಂದಿಸಿ-ಮಜಾಮಾಡಿ ಬರಬಹುದು.
ನಾವೂ ಹೀಗೇ ಆಗೀಗ ಹೋಗುತ್ತಿದ್ದೆವು. ಮರುಭೂಮಿಗಳಲ್ಲಿ ಅಡ್ಡಾಡುವುದು, ಒಳಹೊಕ್ಕು ನೋಡುವದೇ ಒ೦ದು ಥ್ರಿಲ್. ತಿಳಿನೀರಿನಿಂದ ಅಲ್ಲಲ್ಲಿ ಜುಳು ಜುಳೆನ್ನುವ ಓಯಾಸಿಸ್‌ಗಳು, ಗುಂಪು ಗುಂಪುಗಳಂತಿರುವ ಮಣ್ಣಿನ ಮನೆಗಳು, ತಿರುಗಾಡುವ ಒ೦ಟೆಗಳು, ಕರ್ಜೂರಗಿಡಗಳು, ಕುರಿಕಾಯುವ ಹಾಗೂ ಒಂಟೆಗಳ ಹಾಲು ಹಿಂಡುವ ಬುರ್ಕಾ ಮಹಿಳೆಯರು, ಮನೆಗಳ ಮುಂದೆ ಕಟ್ಟೆಗಳ ಮೇಲೆಯೋ ಹೊರಸಿನ ಮೇಲೆಯೋ ಹುಕ್ಕಾ ಸೇದುತ್ತ ಒಗ್ಗಾಲಿಯಂತೆ ವಿಶ್ರಮಿಸಿಕೊಂಡಿರುವ ಗಂಡಸರು, ಮರುಭೂಮಿಯಲ್ಲಿ ಎತ್ತನೊಡಿದತ್ತೆಲ್ಲ ವಿಚಿತ್ರ ಹೂವು ಕಾಯಿಗಳನ್ನು ಹೊ೦ದಿದ ಕ್ಯಾಕ್ಟಸ್‌ಗಳು; ಮರುಭೂಮಿಯಲ್ಲಿ ಹೂವೇ? ಹೌದು, ಕೆಲವು ಹೂಗಳ೦ತೂ ಮರುಭೂಮಿಗಳಲ್ಲೆ ಬೆಳೆಯುತ್ತವೆ. ಓಯಾಸಿಸ್‌ನ ಸ್ಪಟಿಕ ಸದೃಶ ಜಲ, ಮಗ್ಗುಲಲ್ಲಿ ಅರಳಿದ ವರ್ಣರ೦ಜಿತ ಹೂಗಳನ್ನು ನೋಡಿದಾಗ ನನಗೆ ಥಟ್ಟನೆ ಒಮ್ಮ ನಮ್ಮ ಲಕ್ಷ್ಮಿನಾರಾಯಣ ಭಟ್ಟರ ಕವಿತೆಯೊಂದರ ಸಾಲುಗಳು ನೆನಪಾದದ್ದು೦ಟು.
ಹಮ್ಮ ಬಿಮ್ಮುಗಳ ಮರುಳುಕಾಡಿನಲ್ಲಿ
ಎಲ್ಲೋ ಥಣ್ಣನೆ ಚಿಲುಮೆ
ತಾಪವ ಹರಿಸಿ ಕಾಪಾಡುವುದು
ಒಳಗೇ ಸಣ್ಣಗೆ ಒಲುಮೆ.
ಇಲ್ಲಿನ ಹಲವು ನೋಟಗಳನ್ನು ನೋಡುವಾಗ ಒಳ್ಳೆ ಸಿನೇಮೀಕ ದೃಶ್ಯಗಳ೦ತೆ ಕಾಣುತ್ತವೆ.
ಮರುಭೂಮಿಯಲ್ಲಿ ಪ್ರವಾಸ ಮಾಡುವದೆಂದರೆ ಮೊದಲು ಕೆಲವು ವಿಷಯ ಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು. ಎರಡು-ಮೂರು ಕುಟುಂಬಗಳ ಕಾರುಗಳು ಒ೦ದರ ಹಿ೦ದೊ೦ದು ಇರಲೇಬೇಕು. ಕುಡಿಯುವ ನೀರು ಸಾಕಷ್ಟು ಇಟ್ಟು ಕೊಳ್ಳಲೇಬೇಕಾಗುತ್ತದೆ. ಮನೆಯಿಂದ ಹೊರಡುವಾಗ ಯಾವ ಭಾಗ ಅಥವಾ ಯಾವ ಸ್ಥಳಕ್ಕೆ ಹೋಗು- ತ್ತೇವೆಂದು ಅಕ್ಕ ಪಕ್ಕದವರಿಗೆ ಅಥವಾ ಸ್ನೇಹಿತರಿಗೆ ಹೇಳಿ ಹೋಗುವದ೦ತೂ ತುಂಬ ಒಳ್ಳೆಯದು. ಅದರಂತೆ ಸಾಕಷ್ಟು ಪೆಟ್ರೋಲ್, ಕಾರಿನ ರಿಪೇರಿ ಸಲಕರಣೆಗಳು, ಸಲಿಕೆ (ಉಸುಕು ಸರಿಸಲಿಕ್ಕೆ ಇವನ್ನು ಎಚ್ಚರಿಕೆಯಿಂದ ಮೊದಲು ಇಟ್ಟುಕೊಳ್ಳಬೇಕಾಗುವುದು. ಜೊತೆಗೆ ನಕಾಶೆ ಇಟ್ಟುಕೊಳ್ಳುವದಂತೂ ಮರೆಯಲೇ ಬಾರದು. ಇಷ್ಟೆಲ್ಲ ಇದ್ದಮೇಲೆ ಅರಾಮವಾಗಿ ಮರುಭೂಮಿಯಲ್ಲಿ ಅಡ್ಡಾಡಿ ಸಂತೋಷಿಸಬಹುದು. ಇಷ್ಟಲ್ಲಾ ಅನುಕೂಲತೆಗಳಿಟ್ಟುಕೊಂಡು ಹೋದರೂ ಆಕಸ್ಮಿಕವಾಗಿ ಮತ್ತೇನೇನೋ ಸಮಸ್ಯೆಗಳು ಬರುತ್ತವೆ.
ಮರುಭೂಮಿಯ ಸೌ೦ದರ್ಯ ನೋಡುತ್ತ ನೋಡುತ್ತ ದಿನ್ನೆಗಳನ್ನೇರಿ ಹಿಂದಿನ ರಸ್ತೆ ಮರೆತದ್ದೇ ಅದರ ತಪ್ಪಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಅಥವಾ ಕಾರು ಉಸುಕಿನಲ್ಲಿ ಹುಗಿದುಹೋದರೆ, ಅಷ್ಟೇ ಅಲ್ಲದೆ ಉಸುಕಿನ ಬಿರುಗಾಳಿ ಬೀಸ- ತೊಡಗಿದರ೦ತೂ ದೊಡ್ಡ ಸಮಸ್ಯೆಯೇ ಆಗುತ್ತದೆ. ‘ಇಂತಹ ಅನೇಕ ಘಟನೆಗಳನ್ನು ಓದಿದ್ದು, ಕೇಳಿದ್ದು ನೆನಪಿಗೆ ಬರುತ್ತದೆ. ಒಂದು ಸೌದಿ ಕುಟು೦ಬ ತಮ್ಮ ಮೂರು ಮಕ್ಕಳ ನ್ನೊಳಗೊಂಡು ತಂದೆ ತಾಯಿ ಹೀಗೆ ಪ್ರವಾಸಕ್ಕೆ ಹೊದಾಗ ಮರುಭೂಮಿಯಲ್ಲಿ ಮಜಮಾಡುತ್ತ, ನೊಡುತ್ತ, ಅಡುತ್ತ ದೂರ ಹೊಗಿದ್ದಾರೆ. ಎಷ್ಟೋ ಸಮಯದ ನಂತರ ಮರಳ ಬೇಕೆಂದರೆ ಹಾದಿಯೆ ಕಾಣಿಸಲಿಲ್ಲ, ಕಾರೂ ಕಾಣಿಸಿಲಿಲ್ಲ. ಯಾವ ದಿಕ್ಕಿನಿಂದ ಬ೦ದಿದ್ದೆವೆ ಅನ್ನುವದೂ ಗೊತ್ತಾಗಲಿಲ್ಲ. ಆ ದಿನ್ನೆ ಹತ್ತಿ ನೊಡುವದು, ಈ ದಿನ್ನೇ ಹತ್ತಿ ನೊಡುವುದು ಸುರುವಾಯ್ತು. ಎಲ್ಲೂ ವಾಹನಗಳ ಸಪ್ಪಳವೆ ಇಲ್ಲ. ರಾತ್ರಿಯೂ ಆಯಿತು. ನಿರಾಶ್ರಿತರಾಗಿ ಹೆದರುತ್ತ ಅಲ್ಲಿಯೇ ರಾತ್ರಿಕಳೆದರು. ಮರುದಿನ ಕೂಡಾ ಬೆಳಗಿನಿಂದ ರಾತ್ರಿಯವರೆಗೆ ನೀರಿಲ್ಲ, ತಿಂಡಿಯಿಲ್ಲ, ಮೆಲೆ ಉರಿಬಿಸಿಲು, ಮರುಭೂಮಿಯಲ್ಲಿ ಬಿಸುವ ಬಿಸಿ ಬಿರುಗಾಳಿ! ಅಬ್ಬಬ್ಬಾ- ತತ್ತರಿಸಿ ಹೋಗಿರಬೇಕು ಅವರು.
ಆಕಾಶ ಹೆಗಲೆಲ್ಲಾ ಉರಿದುರಿದು
ಭುವಿಯಲ್ಲಿ ಬೇಸಗೆಯ ಬೇಗೆ-
ಅಂತರಂಗ ತುಂಬ ಅತೃಪ್ತಿಯೆ ಧಗೆ
ತಪ್ತವಾಗಿರೆ ಜೀವ ಭಾವ ಒಳಗೆ.
( ದೊಡ್ಡ ರಂಗೇಗೌಡ)
-ಇತ್ತ ಅವರ ಸಂಬಂಧಿಗಳ ಹುಡುಕಾಟ. ಪೋನ್ ಮುಖಾಂತರ ಸಂಬಂಧಿಕರು, ಪರಿಚಯದವರೊಡನೆ ಎಲ್ಲ ಕಡೆಗೂ ಸಂಪರ್ಕ; ಎಲ್ಲಿಯೂ ಸುಳುವಿಲ್ಲ. ಪೋಲಿಸರ ಮುಖಾಂತರ ಹುಡುಕಾಟ ಸುರುವಾಯಿತು. ಅವರು ಪ್ರವಾಸಿಸಿದ ಮಾರ್ಗ ತಿಳಿದ ನಂತರ ಅಲ್ಲೆಲ್ಲ ಹುಡುಕಾಡಿದರು. ಈ ತರಹ ಆ ದೇಶದಲ್ಲಿ ಮೇಲಿಂದ ಮೇಲೆ ಆಗುತ್ತಿರಬೇಕು. ಅಂತೆಯೇ ತಕ್ಷಣ ತುರ್ತು ಹೆಲಿಕಾಫ್ಟರ್ ಮರುಭೂಮಿಯ ಮೇಲೆ ಹಾರಾಡತೊಡಗಿತು. ಮೂರು ದಿನಗಳಿಂದ ಸುಟ್ಟುಹೋದ ಜೀವಿಗಳು ಹಾದಿ ಹುಡುಕುವ ಪ್ರಯತ್ನದಲ್ಲಿ ಬೀಳುತ್ತ ಏಳುತ್ತ ಅಳುತ್ತ ಅಡ್ಡಾಡುತ್ತಿದ್ಧರು. ಹೆಲಿಕ್ಯಾಪ್ಟ- ದವರು ಇವರನ್ನು ಹುಡುಕಿ ಕೆಳಗಿಳಿದಾಗ ಅವರಿಗದೆಷ್ಟೋ ಖುಷಿಯಾಗಿರ ಬೇಕು. ಆದರೆ ಅವರಿಗೆ ಅದನ್ನೆಲ್ಲಾ ವ್ಯಕ್ತಪಡಿಸಲು ತ್ರಾಣ ಇರಲಿಲ್ಲ. ಎಲ್ಲರನ್ನೂ ಆ ಯಂತ್ರಪಕ್ಷಿಯ ಒಡಲೊಳಗೆ ಹಾಕಿ ಸ್ವಲ್ಫ ಸಮಯದಲ್ಲಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲು ಮಾಡಿದರು.
ನಮ್ಮ ಕಡೆಗೆ ಅರಣ್ಯಗಳಲ್ಲಿ ಮುಂದಿನ 10-15 ಅಡಿಗಳಲ್ಲಿರುವುದು ಕಾಣಿಸದೇ ತಪ್ಪಿಸಿಕೊಂಡರೆ, ಇಲ್ಲಿ ಸಾವಿರಾರು ಅಡಿ ದೂರ ಕಾಣಿಸಿದರೂ ತಪ್ಪಿಸಿಕೊಳ್ಳುತ್ತಾರೆ. ಸಮುದ್ರದ ನಡುವೆ ಇದ್ದಂತೆಯೇ ಯಾವ ಕಡೆಗೆ ಏನಿದೆ ಅನ್ನುವುದೇ ತಿಳಿಯುವುದಿಲ್ಲ.
ಮರುಭೂಮಿ ಪ್ರವಾಸಿಗರು ಮತ್ತೂ ಒ೦ದೆರಡು ವಿಷಯ ನೆನಪಿನಲ್ಲಿಟ್ಟು ಕೊಳ್ಳುವುದು ಒಳಿತು. ಹಾದಿ ತಪ್ಪಿಸಿ- ಕೊಂಡಾಗ ಹೆಲಿಕ್ಯಾಪ್ಟರ್‌ನವರು ಹಾರಾಡುತ್ತಿದ್ದರೆ, ತಮ್ಮ ಕಾರಿನ ಕನ್ನಡಿಯನ್ನೇ ಕಿತ್ತು (ಮಧ್ಯಾನ್ಹದಲ್ಲಾದರೆ) ಬೆಳಕನ್ನು ಪ್ರತಿಫಲಿಸ ಬಹುದು. ರಾತ್ರಿಯಾದರೆ ಕಾರಿನಲ್ಲಿ ಅಳಿದುಳಿದ ಸಾಮಾನುಗಳಿಗೆ ಒಂದಿಷ್ಟು ಪೆಟ್ರೋಲ್ ಹಾಕಿ ಬೆಂಕಿ ಬೆಳಕು-ಹೊಗೆ ಎಬ್ಬಿಸಿದರೆ ಸಹಾಯಕ್ಕೆ ಬರುವವರಿಗೆ ಬೇಗನೆ ತಿಳಿಯುತ್ತದೆ.
ಹೀಗೇನಾದರೊ ಅದಲ್ಲಿ ಮನಸ್ಥೈರ್ಯಮಾತ್ರ ಬಹಳಬೇಕು. ಧ್ಯೆರ್ಯಕ್ಕಿಂತ ದೊಡ್ಡ ಓಯಸಿಸ್ ತಾನೆ ಯಾವುದು?
ಮರುಭೂಮಿಯನ್ನು ಇಡಿಯಾಗಿ ನೋಡುವುದೇ ಒ೦ದು ವಿಚಿತ್ರ ಅನುಭವ. ಉಸುಕಿನ ಏರಿಳಿತಗಳನ್ನೊಳಗೊಂಡ ದಿನ್ನೆಗಳ ಅಮೋಘ. ದಿನ್ನೆಗಳ ಏರಿಳಿತಗಳು ಅದೆಷ್ಟು ಸುಂದರ! ಪ್ರತಿಯೊಂದು ದಿನ್ನೆಯಲ್ಲೂ ಒಂದೊಂದು ಬಗೆಯ ದೃಶ್ಯ. ಅನೆ-ಒ೦ಟೆಗಳ೦ತೆಯೋ ಒಳ್ಳೆ ಬಾಕ್ಸರ್‌ಗಳು ನಿಂತಂತೆಯೋ, ಸುತ್ತೆಲ್ಲ ಮಕ್ಕಳನ್ನೆಲ್ಲ ಕರೆದುಕೊಂಡು ಹೋಗುವ ಅರಬಿಯರ ಕುಟುಂಬಗಳಂತೆಯೋ ಸಣ್ಣ ಮಗು ಬೆತ್ತಲೆಮಲಗಿದಂತೆಯೋ, ಪಿರ್ಯಾಮಿಡ್‌ಗಳಂತೆಯೋ ಏನೇನೊ? ಅನೇಕಾನೇಕ ರೂಪಗಳು. ಊಹೆಗೊ ಮೀರಿದಂತಹವುಗಳು. ಸಣ್ಣನೆಯ ಸುಂಯ್ ಗಾಳಿಗೆ ಉಸುಕು
ನೀರು ಹರಿದಂತೆ ಒಮ್ಮೆ ಈ ಕಡೆಗೆ ಒಮ್ಮೆ ಅ ಕಡೆಗೆ ಓಡಾಡುತ್ತಿರುತ್ತೆದೆ. ನೋಟದಲ್ಲಿ ರಸ್ತೆ ಮೇಲೆ ಜುಳು ಜುಳು ನೀರು ಹರಿದಂತೆಯೇ. ಅದಷ್ಟು ನೋಡಿದರೆ ‘ಸ್ಥಿತ್ಯಂತರವೆಷ್ಟುವುದು ಇಷ್ಟೊಂದು ಸುಲಭವೇ?’ ಎ೦ದು ವಿಸ್ಮಯವಾಗುತ್ತೆದೆ. ಈ ಉಸುಕಿನ ತೆರೆಗಳ ಮೇಲೆ ಹೆಸರುಗಳು ಬರೆಯುವುದು, ಮೊಳಕಾಲುಗಳವರೆಗೆ ಕಾಲು ಹುದುಗಿಸಿಕೊಂಡು ಕಿತ್ತಾಡುತ್ತ ಓಡಾಡುವವುದು, ಬಣ್ಣ ಬಣ್ಣದ ಸಣ್ಣ ಮಿಂಚುವ ಹರಳುಗಳನ್ನು ಕೂಡಿಸಿಕೊಳ್ಳುವದರಲ್ಲಿ ನಾವೂ ಹುಡುಗರೊಂದಿಗೆ ಖುಷಿಪಡು ತ್ತಿದ್ದೆವು. ಎಷ್ಟೋ ಸಲ ದೊಡ್ಡ ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ತಂದು ನಮ್ಮ ಗಾರ್ಡನ್‌ನಲ್ಲಿ ಸ್ಯಾ೦ಡ್ ಪಿಟ್ (ಉಸುಕನ್ನು 20-25-30 ಸ್ಕ್ವೇರ್‌ಫೂಟುಗಳಷ್ಟು ಕಟ್ಟಿಗೆಯ ಚೌಕಾಕಾರದ ಭದ್ರತೆಯಲ್ಲಿ ಕೂಡಿಹಾಕುವುದು) ದಲ್ಲಿ ತಂದುಹಾಕಿ ಮಕ್ಕಳಿಗೆ ಅಡಲಿಕ್ಕೆ ಅನುವು ಮಾಡಿದ್ದೆವು. ಎಷ್ಟೋ ಸಲ ಸಮುದ್ರಕ್ಕೆ ಹೋದಾಗ ಕೂಡಾ ಉಸುಕು-ಸಿ೦ಪೆ-ಕವಡಿಗಳನ್ನೂ ತಂದು ಸ್ಯಾಂಡ್ ಪಿಟ್‌ನಲ್ಲಿ ಹಾಕಿದ್ದೆವು. ನಮ್ಮ ಹುಡುಗರಷ್ಟೇ ಅಲ್ಲದೆ ನೆರೆಮನೆಯ ಅಮೇರಿಕನ್-ಜರ್ಮನ್ ಮಕ್ಕಳೂ ಬಂದು ಖುಷಿಪಡುತ್ತಿದ್ದವು.
ಈ ಉಸುಕಿನ ಗುಣವೇ ವಿಚಿತ್ರ). ದಿನದ ಉರಿಬಿಸಿಲಿನ ಹೊಡತಕ್ಕೆ ಉಸುಕು ಮೃದುವಾಗುವದು. ರಾತ್ರಿಯಾಗು- ತ್ತಿದ್ದಂತೆಯೇ ಉಸುಕಿನ ಕಣಗಳು ತ೦ಪಾಗುತ್ತ ಮತ್ತೆ ಬಿರುಸಾಗುವವು. ಅಂತೆಯೇ ಇರಬೇಕು, ಕಾರುಗಳು ಮಧ್ಯಾನ್ಹದಲ್ಲೇನಾದರೂ ತೇವಾಂಶ ಭರಿತ ಉಸುಕಿನಲ್ಲಿ ಸಿಕ್ಕಿಹಾಕಿಕೊಂಡರೆ ಹೊರಬರುವುದು ಕಷ್ಟ. ಇಂತಹ ಸಮಯದಲ್ಲಿ ಹೆಚ್ಚಿನ ತೊಂದರೆ ತೆಗೆದುಕೊಳ್ಳದೆ ಸುಮ್ಮನೆ ರಾತ್ರಿಯಿಡೀ ಕಾಯ್ದು ಬೆಳಿಗ್ಗೆ ಕಾರು ಹೊರತೆಗೆಯುವ- ದೊಳತು.
ಅದರೆ ಎಲ್ಲರೂ ರಾತ್ರಿಯಿಡೀ ಕಾಯಲು ಸಾಧ್ಯವಿಲ್ಲ. ಅ೦ಥದರಲ್ಲಿ ಏನಾದರೂ ಪ್ರಯತ್ನ ಮಾಡಿ ಹೊರಬರಲೇಬೇಕು. ಯಾರಿಗಾದರೂ ಈ ತರಹದ ಅನುಭವಗಳು ಈ ಮೊದಲಾಗಿದ್ದರೆ ಅ೦ಥವರು ಕಟ್ಟಿಗೆಯ ಫಳಿಗಳು ಅಥವಾ ಗಟ್ಟಮುಟ್ಬಾದ ನಿಚ್ಚಣಿಕೆಗಳನ್ನಿಟ್ಟುಕೊಂಡಿರುತ್ತಾರೆ. ದಪ್ಪನೆಯ ಅರಿವೆಗಳನ್ನು ಇಟ್ಟು ಒಂದನೆಯ ಗೇರ್‌ನಲ್ಲಿ ಮಾತ್ರ ಕಾರು ಶುರು ಇಟ್ಟು ಉಳಿದವರು ನುಗಿಸುತ್ತ ಫಳಿಯ ಮೇಲೆ ಗಾಡಿ ಏರುವ೦ತೆ ಮಾಡಬೇಕಾಗುವುದು. ಅದೇ ವೇಳೆಗೆ ಎಲ್ಲರೂ ನುಗಿಸುತ್ತ ಸ್ವಲ್ಫ ದೂರ ಒಡುತ್ತ ಗಟ್ಟಿನೆಲದೆಡಗೆ ಕಾರುಬರುವಂತೆ ನೋಡಿಕೊಳ್ಳಬೇಕು. ಅಷ್ಟೋಗಾಗಲೇ
ಸಾಕಷ್ಟು ಸುಸ್ತು! ಅಷ್ಟೇ ಅಲ್ಲದೆ ಮೇಲೆ ಬಿಸಿಲಿನ ಹೊಡೆತ ಬೇರೆ. ಈ ತರಹದ ಅನುಭವಗಳು ನಮಗೆ ಮೊದ ಮೊದಲು ಸಾಕಷ್ಟಾಗಿದ್ದವು.
ಇಂತಹ ಬಿಸಿಲಿನ ಹೊಡೆತಗಳ ಮರುಭೂಮಿಯಲ್ಲಿ ಸಿಕ್ಕುಹಾಕಿಕೊಂಡವರಿಗ೦ತೂ ನರಕಸದೃಶ್ಯವೇ. ಇಂಥಲ್ಲೇನು ತಂಪುಪಾನೀಯದಂಗಡಿಗಳು, ಹೋಟೆಲ್‌ಗಳು ಇರುವುದಿಲ್ಲ. ಹೊರಡುವಾಗ ಸಾಕಷ್ಟು ತಿ೦ಡಿ-ನೀರು ಒಯ್ದರೆ ಮಾತ್ರ ಒಳ್ಳೆಯದು. ಆಕಸಸ್ಮಿಕವಾಗಿ ಅವೆಲ್ಲ ತೀರಿಹೋಗಿ ಮರುಭೂಯಲ್ಲಿ ಭಣ ಭಣ ಅಡ್ಡಾಡತೊಡಗಿದರೆ ಸನ್‌ಸ್ಟ್ರೋಕ್ಸ್ (ಬಿಸಿಲಿನ ಹೊಡೆತಗಳು) ದಿಂದಾಗಿ ಮೈಯೆಲ್ಲಾ ಬಿಸಿಯಾಗಿ ‘ನೀರು ನೀರು’ ಎಂದು ತಪಿಸಿ ಸಾಯಲೂಬಹುದು.
ಈ ಎಲ್ಲ ಮುಖ್ಯ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡೇ ನಾವು ಅದೆಷ್ಟೋ ಸಲ ಮರುಭೂಮಿಯಲ್ಲಿ ಪ್ರವಾಸಮಾಡಿ ಸಾಕಷ್ಟು ಖುಷಿ ಅನುಭವ ಸಾಕಷ್ಟು ಹಾದಿಗಳನ್ನು ಕಲಿಸಿತು.
ಮರುಭೂಮಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ದಾಟಿಹೋಗಿವೆ. ಬಿರುಗಾಳಿಗಳು ಎದ್ದಾಗ ಈ ಹೆದ್ದಾರಿಗಳು ಅಲ್ಲಲ್ಲಿ ಮುಚ್ಚಿಹೋಗುತ್ತವೆ. ಇಂತಹ ಸಮಯದಲ್ಲಿ ರೋಡ್ ಕ್ಲೀನರ್‌ಗಳನ್ನು ಬಳಸಿ ಅಂದರೆ ಸ್ವಚ್ಛ ಮಾಡುವ ವಾಹನಗಳೇ ಬೇರೆ ಇರುತ್ತವೆ. ಅದಕ್ಕೆ ಕೆಳಗಡೆ ಬ್ರಷ್‌ಗಳಿದ್ದು, ಉಸುಕು ಸರಿಸಲು ಗಟ್ಟಿಮುಟ್ಬಾದ ಕಬ್ಬಿಣ ಸಲಿಕೆಗಳ ತರಹ ಇರುತ್ತದೆ. ಡ್ರೈವರ್ ಕಂಟ್ರೋಲ್ ಮಾಡುತ್ತಿದ್ದಂತೆಯೇ ಆಯಾ ಭಾಗಗಳು ಬಿಡಿ ಬಿಡಿಯಾಗಿ ಕೆಲಸ ಮಾಡುತ್ತವೆ. ಯುರೋಪಿನಲ್ಲಿ ರಸ್ತೆಯ ಮೇಲೆ ಹಿಮ ಬಿದ್ದರೆ ಅದನ್ನು ದಂಡೆಗೆ ಸರಿಸುವ ವಾಹನಗಳಂತೆ ಇಲ್ಲಿ ಮರುಭೂಬುಗೆ ತಕ್ಕ
ಉಸುಕು ಸರಿಸುವ ವಾಹನಗಳಿರುತ್ತವೆ. ವಾಹನಗಳು ಓಡಾಡಲಿಕ್ಕೆ ಬೇಗನೆ ಕ್ರಮ ತಗೆದುಕೊಳ್ಳುವರು.
ಇತ್ತೀಚೆಗ ಮರುಭೂಮಿಯಲ್ಲಿ ದೊಡ್ಡ ದೊಡ್ಡ ದಿನ್ನೆಗಳ ಮೇಲಿಂದ ಜರಿದಾಡುವ ಹೊಸ ಆಟ ಯುರೋಪಿಯನ್ನರು, ಅಮೇರಿಕನ್ನರು ರೂಢಿಸಿಕೊಳ್ಳು ತ್ತಿದ್ದಾರೆ. ಇದು ಕೆಲವು ಸಾಹಸಿಗಳ ಕೆಲಸ ಎಂದು ಹೇಳಬೇಕಷ್ಟೆ. ಹಿಮಪರ್ವತದಲ್ಲಿ
ಆಡುವ ಅನುಭವ ಬೇರೆ, ಉಸುಕಿನ ದಿನ್ನೆಗಳಲ್ಲಿ ಆಡುವ ಅನುಭವವೇ ಬೇರೆ. ಸೌದಿ ಅಮೇರಿಕನ್ ಕೋ-ಅಪರೇಟಿವ್ ಪ್ರೋಗ್ರಾಂದವರು ಈ ಕ್ರೀಡೆಯ ತರಬೇತಿ ನೀಡುತ್ತಾ ಓಡಾಡುತ್ತಿರುತ್ತಾರೆ.
ಹಿಮದಲ್ಲಿ ಜರಿದಾಡುವದಕ್ಕಿಂತ ಉಸುಕಿನಲ್ಲಿ ಜರದಾಡುವದು ಸ್ವಲ್ಫ ನಿಧಾನ ವಾಗಿಯೇ ಇರುವುದು. ಉಸುಕಿನ ಕಣಗಳಿರುವದರಿಂದ ಬಿರುಸಾಗುತ್ತದೆ. ಅದೇ ಹಿಮ ಅಂದರೆ ನೀರಿನ ಮೇಲೆ ಹರಿದಾಡಿದಂತೆ. ಈ ಮರುಭೂಮಿಯಲ್ಲಿ ಜರಿದಾಡುವ ಸಾಮಗ್ರಿಗಳೇ ಬೇರೆ. ಕಾಲಿನ ಬೂಟುಗಳಿಗೆ ಹೊಂದಿಕೊಂಡೇ ಉದ್ದನೆಯ ಜಾರಿಕೆಯ ಪಟ್ಟಿಗಳು, ಕೈಯಲ್ಲಿ ಸ್ಟೀಲಿನ ಅಥವಾ ಅಲ್ಯುಮಿನಿಯಂದ ಕೊಕ್ಕೆಯ ಬಡಿಗೆಗಳಿದ್ದು ತಮ್ಮನ್ನು ತಾವೇ ಮುಂದಕ್ಕೆ ನುಗಿಸಿಕೊಂಡು ಹೋಗಲು ಅನುಕೂಲವಾಗುವಂತಿರುತ್ತವೆ.
ಸುಮಾರು 500 ಅಡಿಗಳಷ್ಟು ಎತ್ತರದ ಉಸುಕಿನ ದಿನ್ನೆಗಳ ಮೇಲಿಂದ ಕೆಳಗೆ ಜಾರುವದು ನಿಜಕ್ಕೂ ಒಂದು ಮೋಜಿನ ಆಟವೇ ಅನ್ನಬೇಕು. ಸೌದಿಗಳಂತೂ, ಅದರಲ್ಲೂ ಯುವ ಜನಾ೦ಗವ೦ತೂ ನೋಡಿದ್ದೆಲ್ಲ ಮಾಡುವರು. ಇದರಷ್ಟೇ ಖುಷಿಪಡುವ ಅವರ ಇನ್ನೊಂದು ಮೋಜಿನ ಅಟ-ಸ್ಕೂಟರ್‌ಗಳನ್ನು ಜೋರಾಗಿ ಶಬ್ದಮಾಡುತ್ತ ಕೊನೆಯ ಗೇರಿನಲ್ಲಿಟ್ಟು ಓಡಾಡಿಸುವುದು, ದಿನ್ನೆಗಳ ಮೇಲಿಂದ ಜಿಗದಾಡಿಸುವುದು ಮಾಡುತ್ತಾರೆ. ಈಗಷ್ಟೇ ಶುರುವಾದ ಈ ಜಾರು ಉಸುಕಿನ ಆಟ ಬೇಗನೆ ಪ್ರಸಿದ್ದಿಯಾಗುವದರಲ್ಲಿ ಸಂಶಯವೇ ಇಲ್ಲ.
ಮರು ಭೂಮಿಯಲ್ಲಿ ಹಾಯ್ದಿರುವ ಹೆದ್ದಾರಿಗಳಿಗೆ ಅಲ್ಲಲ್ಲಿ ಸೇತುವೆ ಕಟ್ಟಿದ್ದಾರೆ. ಮರುಭೂಮಿಯಲ್ಲಿ ಸೇತುವೆಗಳಿಗೆಂದರೆ ಅಶ್ಚರ್ಯವಾಗದೇ ಇರದು. ಹೌದು, ವರ್ಷಕ್ಕೊಮ್ಮೆ ಆಗುವ ಮಳೆಯಿಂದ ನೀರು ಹರಿದು ರಸ್ತೆಯ ಮೇಲೆ ಬರುವ ಸಾಧ್ಯತೆಗಳು ಹೆಚ್ಚು ಮರಭೂಮಿ ಪ್ರದೇಶವಾದುದರಿಂದ. ಅದರಂತೆ ಜೆಡ್ಡಾ, ಟೈಪ್, ಅಭ ಪ್ರದೇಶಗಳಲ್ಲಿ ಕಲ್ಲುಪಡಿಗಳ ಬರಡು ಭೂಮಿ ಇರುವದರಿಂದ ನೀರು ನೆಲದಲ್ಲಿ ಇಂಗುವುದಿಲ್ಲ. ಸ್ವಲ್ಫ ಹಸಿಯಾದರೆ ಮುಗಿಯಿತು. ಉಳಿದ ನೀರೆಲ್ಲ ಇಳಿಜಾರು ಪ್ರದೇಶಕ್ಕೆ ಧಾವಿಸುತ್ತದೆ. ಇಲ್ಲಿ ವರ್ಷಕ್ಕೆ ಒಂದೇ ಭಾರೀ ಮಳೆ. ನಂತರ ಮುಗಿದೇ
ಹೋಯ್ತು. ಈ ನೀರಿನ ತೊರೆ ಹರಿದುಹೋಗಲು ಅಲ್ಲಲ್ಲಿ ನೀಟಾಗಿ ಗಟ್ಟಿಮುಟ್ಟಾದ ಕಾಲುವೆಯಂತೆ (ನೋಡಿದರೆ ಗೊತ್ತಾಗುವುದು) ಕಟ್ಟಿರುತ್ತಾರೆ. ನಮ್ಮಲ್ಲಿ ವರ್ಷಪ್ರತಿ ಮಹಾಪೂರಗಳು ಬರುವುದು ಗೊತ್ತಿದ್ದರೂ ಭಧ್ರವಾದ ಬ್ರಿಜ್ ಕಟ್ಟುವದಿಲ್ಲ. ಹಣಕಾಸಿನ ಅಭಾವ ಎಂದು ಒಪ್ಪಿಕೊಂಡರೂ ಒದಗಿಸಿದ ಹಣದಲ್ಲಿ ನುಂಗುವುದು ಬೇರೆ,
ನಮ್ಮಲ್ಲಿ ಚಿಕ್ಕದರಲ್ಲಿಯೇ ಚೊಕ್ಕಾಗಿರುವ ಅವಕಾಶಗಳು ಎಲ್ಲರಿಗೂ ಇದೆ. ಆದರೆ ದ್ರೋಹಿಗಳು, ಇದ್ದ ಚಿಕ್ಕ ಚೊಕ್ಕ ವ್ಯವಸ್ಥೆಗೂ ಅಡ್ಡಬರುವರಲ್ಲ 1 ನಮ್ಮ ಹಿರಿಯ ಕವಿ ಜಿ.ಎಸ್. ಶಿವರುದ್ರಪ್ಪನವರ ಕವಿತೆಯೊಂದರ ಸಾಲುಗಳು ಮತ್ತೆ
ಮತ್ತೆ ನೆನಪಾಗುತ್ತದೆ.
ಆಯ್ಯಾ ನನ್ನ ದೇಶವೇ
ಏನಾಗಿದೆ ನಿನಗೆ?
ಯಾಕೆ ಹೀಗೆ ಹೊಯ್ಡಾಡುವೆ
ಅಸ್ವಸ್ಥತೆಯೊಳಗೆ?
………..
………..
ತೊಂಡುಗೂಳಿ ತುಳಿಯುತಲಿವೆ
ಬೆಳೆದ ಹೊಲದ ಹಸುರನು
ಇಲಿ-ಹೆಗ್ಗ ಣ ಮುಕ್ಕುತಲಿವೆ
ಹಳೆ ಪಣತದ ಕಾಳನು.
ಇದರಿಂದ ಬಿಡುಗಡೆ ಎಂದು?
ಮರುಭೂಮಿಯಲ್ಲಿ ದೊಡ್ಡ ದೊಡ್ಡ ದಿನ್ನೆಗಳಿದ್ದಷ್ಟೇ ತೆಗ್ಗುಗಳೂ ಇರುತ್ತವೆ.
ಕೆಲವು ತೆಗ್ಗುಗಳೆಂದರ ಕೆಳಗೆ ತೆಗ್ಗಿದ್ದರೂ ಮೇಲೆ ಬಿರುಗಾಳಿಯಿಂದ ಸಣ್ಣನೆಯ ಉಸುಕಿನ ಕಣಗಳು ತುಂಬಿಕೊಂಡು ಇಲ್ಲಿ ತೆಗ್ಗಿದೆಯೆಂದು ಗೊತ್ತೇ ಆಗದ೦ತೆ ಇರುತ್ತವೆ. ಕೃತಕವಾಗಿ ಮುಚ್ಚಿದ ಖೆಡ್ಡಾಗು೦ಡಿಯ ಹಾಗೆ. ಎಷ್ಟೋ ಸಲ ಮರುಭೂಮಿ ಪ್ರವಾಸಿಗರ ಒಂಟೆಗಳು, ಜೊತೆಗೆ ಅವರೂ ಅದರೊಳಗೆ ಸಿಕ್ಕಿಹಾಕಿಕೊಂಡು ಬಿಡುತ್ತಾರೆ. ಓದಿದ, ಕೇಳಿದ ಇಂತಹ ಘಟನೆಗಳಷ್ಟು ನೆನಸಿಕೊಂಡು ಹೆದರಿಕೆಯೂ ಅಗುತ್ತಿತ್ತು.
ಒಂದು ಕಾಲಕ್ಕೆ ಮರುಭೂಮಿಯಲ್ಲಿ ಒಂಟೆಯ ಮೇಲೆ ಪ್ರವಾಸಿಸುವದು, ಅಲ್ಲಲ್ಲಿ ಡೇರೆ ಹಾಕಿ ರಾತ್ರಿ ಕಳೆಯುತ್ತ, ಸರಕು ಸಂಜಾಮಗಳನ್ನು ಸಾಗಾಟಮಾಡುತ್ತ ತಿಂಗಳು ತಿಂಗಳುಗಟ್ಟಲೆ ಹೋಗುವುದು ಸರಳವಾದ ಮಾತೇನಿರಲಿಲ್ಲ. ಅದರೆ
ಇಂದು, ಕೇವಲ 15-20 ವರ್ಷಗಳಲ್ಲಿ, ಮಹಾ ಬದಲಾವಣೆಯಾಗಿ ಯಾವೊಬ್ಬನೂ ಮರುಭೂಮಿಯಲ್ಲಿ ವಸತಿಮಾಡಿ ಸಾಮಾನು ಸಾಗಿಸುವ ಪ್ರಯತ್ನ ಮಾಡುವದೇ ಇಲ್ಲ. ದೇಶದ ತುಂಬ ಸುಂದರ ವಿನ್ಯಾಸದಲ್ಲಿ ಭಧ್ರವಾಗಿ ಹರಿದಾಡಿದ ರಸ್ತೆಗಳ ಮೇಲೆಲ್ಲ ಒಳ್ಳೆ ವಾಹನ, ಟ್ರಕ್‌ಗಳಲ್ಲಿ ಸ್ಟೀರಿಯೋ ಹಚ್ಚಿಕೊಂಡು, ಕೋಲ್ಡ್ ಡ್ರಿಂಕ್ಸ್ ಕುಡಿಯುತ್ತ ಕೆಲವೇ ತಾಸುಗಳಲ್ಲಿ ತಾವು ತಲುಪಬೇಕಾದ ಸ್ಥಳ ತಲುಪಿ ಒಳ್ಳೆಯ ಪಂಚತಾರಾ ತ್ರಿತಾರಾ ಹೋಟೆಲ್‌ಗಳಲ್ಲಿರಲು ಬಯಸುತ್ತಾರೆ ಇಂದಿನ ವ್ಯಾಪಾರಿಗಳು.
‘ಮರುಭೂಮಿಯ ಹಡಗು’ ಎಂದು ಖ್ಯಾತಿ ಇರುವ ಒ೦ಟೆಗಳು ಇಂದು ಮಾಲಿಕನ (ಸಾಕುವವನ) ಪ್ರೀತಿ ಇಲ್ಲದೆ ಅನಾಥವಾಗಿ ಮರುಭೂಮಿಯಲ್ಲಿ ತಿರುಗಾಡುತ್ತಿವೆ. ನಮ್ಮ ಕತ್ತೆಗಳ ಹಾಗೆ. ಆದರೂ ಅವುಗಳಿಗೆ ಮಾಲಿಕರಿದ್ದಾರೆ. ಅವುಗಳ ಕಾಲಿಗೆ ರೇಡಿಯ೦ (ರಾತ್ರಿ ಸ್ವಲ್ಪ ಬೆಳಕಿನಲ್ಲಿ ಮಿಂಚುವ ಧಾತು) ಬೆಲ್ಟ್ ಕಟ್ಟಿರಲೇಬೇಕು. ರಾತ್ರಿ ಹೆದ್ದಾರಿಗಳ ಮೇಲೆ ಪ್ರವಾಸ ಮಾಡುವ ವಾಹನದಾರರಿಗೆ (ಅಪಘಾತ ಗಳಾಗದಿರಲೆಂದು) ದೂರದಿಂದಲೇ ಒಂಟೆಗಳು ಹೋಗು- ತ್ತಿವೆ ಎಂದು ಗೊತ್ತಾಗುತ್ತದೆ. ರೇಡಿಯ೦ ಬೆಲ್ಟ್‌ಗಳಿಲ್ಲದ ಒಂಟೆಗಳನ್ನು ಯಾವುದಾದರೂ ದೂರ ಪ್ರದೇಶಕ್ಕೆ (ಜನ ಸಂಚಾರ ಇರದ) ಸಾಗಿಸಿ ಅವುಗಳ ಮಾಲಿಕರಿಗೆ ದ೦ಡ ಹಾಕುತ್ತಾ ರ. ಹೀಗಾಗಿ ಮಾಲಿಕ ನಾದವ ದೂರದ ಊರಿಗೆ ಹೋಗಿ ಮೊದಲು ರೇಡಿಯ೦ ಗೆಜ್ಜೆ ತಂದು ಹಾಕಿ ಉಸಿರು ಬಿಡುತ್ತಾನೆ. ಕಾರಣ-ಒ೦ಟೆಗಳಿಗೂ ಸಾವಿರ ಸಾವಿರ ರೂಪಾಯಿಗಷ್ಟು ಬೆಲೆಯಿರುತ್ತದೆ. ಯಾಕೆಂದರೆ- ಒಂಟೆಯ ಇಡಿಯಾದ ಹೊಟ್ಟೆಯ ಊಟ ಅರಬರಿಗೆ ಬಹಳ ಪ್ರೀತಿ.
ನಾ ಆಗಾಗ ಜೆಡ್ಡಾದಲ್ಲಿ ಕುಳಿತು ನನ್ನ ದಿನಚರಿಯಲ್ಲಿ ಬರೆದಿಟ್ಟಿದ್ದ ಕವಿತೆಗಳಲ್ಲಿ ಒಂದನ್ನು ಇಲ್ಲಿ ಕಾಣಿಸುತ್ತಾ ಈ ಅಧ್ಯಾಯವನ್ನು ಮುಗಿಸುತ್ತಿದ್ದೇನೆ.
ಮರುಭೂಮಿಯಲ್ಲಿ …. ..
ಉರಿಬಿಸಿಲಿನಡಿ
ಸುಡುವ ಮರುಭೂಮಿಯಲ್ಲಿ
ಬಿಸಲ್ಗುದುರೆ ಸಾಮ್ರಾಜ್ಯ.
ಕಟ್ಟಿಹಾಕಲು ಆಲೆದಲೆದಾಡಿ
ಅಲೆಮಾರಿಗಳಾಗಿ ಸೋಮಾರಿಗಳಾಗಿದ್ದಾರೆ.
ಒಂಟೆಗಳೂ ಸುಸ್ತುಹೊಡೆದಿವೆ.
ಹನಿ ಹನಿ ನೀರಿಗೆ ಬೆನ್ನುಹತ್ತಿ
ಓಯಾಸಿಸ್‌ದಂಡೆಗುಂಟ ಬೀಡುಬಿಟ್ಟ
“ಬುಡ್‌ವಿನ್”ಗಳ ಮುಖದಲ್ಲಿ
ನಗುವಿಲ್ಲ.
ಹಕ್ಕಿ ಹಕ್ಕಿ ತೆಗೆದಷ್ಟೂ
ಮರಳುಗಾಡಿನಲ್ಲಿ ಹೆಜ್ಜೆಹೂಳುತ್ತವೆ
ಮಾತು ಮೌನವಾಗುತ್ತದೆ.
***