ನಾಡ ಕಟ್ಟ ಬನ್ನಿ ನಾಡ ಗುಡಿಯ ಕಟ್ಟ ಬನ್ನಿ
ನಾಡ ಜನತೆ ಕರೆಯುತಿಹುದು ಸೇವೆಗಾಗಿ ಬನ್ನಿ ||ಪ||
ಮೇಲು ಕೀಳು ಭೇದ ತೊಡೆದು ಸಮಾನತೆಯು ನೆಲೆಸಲು
ನೂರು ಜಾತಿ ಪಂಥ ಬೇದಗಳನು ಮರೆತು ಬೆರೆಯಲು
ಭಾರತೀಯ ಧರ್ಮ ಸಾರುವಂಥ ನೀತಿ ನಡೆಸಲು
ನವೋದಯದ ಸರ್ವೋದಯ ಕರೆಯುತಿಹುದು ಬನ್ನಿ ||೧||
ಹೊಲ ಮನೆಗಳು ಇಲ್ಲದಂಥ ಬಡವರವನು ಪಡೆಯಲಿ
ಸಾಲ ಶೂಲವಿಳಿಸಿ ಅವರು ಬಿಡುಗಡೆಯನು ಪಡೆಯಲಿ
ಹಳ್ಳಿಗಳಲಿ ವಿವಿಧ ಕೆಲಸ ಮಾಡಿ ತಿಂಬ ದೇಸಿಗರಿಗೆ
ಅಲ್ಲೇ ಅಲ್ಲೇ ನೆರವು ನೀಡಿ ಎತ್ತಿರವರ ಸುಖದ ಗುರಿಗೆ ||೨||
ನೂರು ಮಂದಿ ಬೆಳೆದ ಫಲವನೊಬ್ಬಿಬ್ಬರು ತಿನ್ನದಂತೆ
ಸೇರುತಿರಲಿ ಅವರ ಅವರ ನ್ಯಾಯಭಾಗ ಗೆಮ್ಮೆಯಂತೆ
ಕುಳಿತು ತಿಂಬ ಮೈಗಳ್ಳರ ಹಿಡಿದು ದುಡಿಯ ಹಚ್ಚಿರಿ
ಲಂಚಕೋರರನ್ನು ಹಿಡಿದು ಮಣ್ಣು ತಿನ್ನ ಹಚ್ಚಿರಿ ||೩||
ಕಳ್ಳ ಮಾಲು ಕಳ್ಳ ನೋಟು ಹಿಡಿವ ಕೈಯ ಕಳೆಯಿರಿ
ಸುಳ್ಳು ದಾರಿಯಿಂದ ಪಡೆವ ನೀಚರನ್ನು ತುಳಿಯಿರಿ
ಪೊಳ್ಳು ರಾಜಕೀಯ ಮಾಡಿ ಹೊರೆವ ಬೊಜ್ಜ ಇಳಿಸಿರಿ
ಶ್ರದ್ಧೆಯಿಂದ ಕೆಲಸಗೈದವರನು ಹೊಗಳಿ ಬೆಳೆಸಿರಿ ||೪||
ಅಂಧ ಸಂಪ್ರದಾಯಗಳನು ಜ್ಞಾನಗಂಗೆ ತೊಳೆಯಲಿ
ಬಂಧಿಸಿರುವ ಜಡ ಬುದ್ದಿ ಮಸೆದು ಮಸಗಿ ಹೊಳೆಯಲಿ
ವಿಜ್ಞಾನವು ಪರರ ಹೆಜ್ಜೆ ತುಳಿಯದಂತೆ ಬೆಳಗಲಿ
ನಾಗರೀಕತೆ ಹಳ್ಳಿಗಳನು ತಿನ್ನದಂತೆ ಬೆಳೆಯಲಿ ||೫||
ಕಾಂಬ ಬನ್ನಿ ಕಟ್ಟ ಬನ್ನಿ ದುಡಿಮೆ ದೈವ ದೇಗುಲ
ನಾಡಕಟ್ಟ ಬನ್ನಿ ಕರೆಯುತಿಹುದು ತೆರೆದು ಬಾಗಿಲ ||೬||
******************