ಕಾಡುತಿದೆ ಭೂತ
ಅನೇಕ ರೂಪಗಳಲ್ಲಿ
ಅನೇಕ ಪರಿಗಳಲ್ಲಿ
ಮನೆ ಬಾಗಿಲು ಕಿಟಕಿಗಳ
ಕೊನೆಗೆ ಕೋಣೆ, ಮೆಟ್ಟಲುಗಳ
ದಿಕ್ಕ ದೆಸೆಗಳ ನಿರ್ಧರಿಸುತ್ತದೆ
ಸಾಯುವ ಹುಟ್ಟುವ
ಕ್ಷಣ ಗಣನೆಗಳ ಗುಣುಗುಣಿಸಿ
ಪೂಜೆ ಬಲಿದಾನಗಳ ಮಾಡಿಸುತ್ತದೆ
ಗಂಡು ಹೆಣ್ಣು ಕೂಡಿಸಲು
ಓಡಿ ಹೋದ ದಿಕ್ಕು
ಮುಹೂರ್ತಗಳ ಗುರುತಿಸುತ್ತದೆ
ಕೆಲಸ ಮಾಡಲು ಕೆಲಸಕ್ಕೆ ಸೇರಲು
ಕೆಲಸ ಶುರು ಮಾಡಲು
ಎಲ್ಲ ಸಮಯಗಳಲ್ಲಿ
ಭೂತ ಆಳುತ್ತದೆ
ಹಲ್ಲಿಗಳ ಬೀಳಿಸುತ್ತದೆ
ಬೆಕ್ಕುಗಳ ಅಡ್ಡ ಬರಿಸುತ್ತದೆ
ಬಿಕ್ಕಳಿಕೆ ಆಕಳಿಕೆಗಳಲ್ಲೂ
ಧ್ವನಿ ಮಾಡುತ್ತದೆ
ಸೀನುಗಳ ಸಂಖ್ಯೆಗಳಿಗೆ ಅರ್ಥ ಕೊಡುತ್ತದೆ
ಕಣ್ಣು ಅದುರಿದರೂ ಬೆದರುತ್ತದೆ ಜೀವ
ಗುಡಿಗಳ ಕಟ್ಟಿಸುತ್ತದೆ ಮೂರ್ತಿಗಳ ಸ್ಥಾಪಿಸುತ್ತದೆ
ಮಂತ್ರ ತಂತ್ರ ಪುರಾಣಗಳ ಕಟ್ಟುತ್ತದೆ
ಷೋಡಶೋಪಚಾರಗಳ ನೇಮಿಸುತ್ತದೆ
ಮೌಢ್ಯದ ಬಂಡವಾಳ ವ್ಯಾಪಾರದ ಸರಕು
ಭಕ್ತರ ಸಾಲು ಸಾಲು
ಅಡ್ಡ ಬೀಳುತ್ತವೆ ತಲೆ ಬೋಳಿಸಿಕೊಳ್ಳುತ್ತವೆ
ದಿಂಡುರುಳಿ ದೇಹ ದಂಡಿಸುತ್ತವೆ
ಕಾಣದ ಕೈವಾಡಕ್ಕೆ ಶರಣಾಗುತ್ತವೆ
ಕಾವಿ ಗಡ್ಡ ನಾಮ ವರದ ಹಸ್ತಗಳ ಮುಂದೆ
ಸಾವಿರ ಸಾವಿರ ಸನ್ನಿಬಡಕ ತಲೆಗಳು
ಬಾಗಿ ನೆಲ ಮುಟ್ಟುತವೆ
ಅವರ ನೋಡಿ ಇವರು ಮತ್ತಿವರ ನೋಡಿ ಅವರು
ಎಲ್ಲರೂ ನೆಲಕಪ್ಪಚ್ಚಿ ಬಕ್ಕ ಬಾರಲು
ಬುದ್ದಿ ಜೀವಿಗಳು ಕೂಡಾ ಅರಲು ಬರಲು
ವರ್ತಮಾನದ ದೀಪ ಭವಿಷ್ಯದ ತಾಪ
ತಣ್ಣಗಾಗಿ ಭೂತದ ಪೆಡಂಭೂತ ತೆಕ್ಕೆಯೊಳಗೆ
ನಲುಗುತ್ತದೆ ಮುಲುಮುಲುಗಿ
*****