ಎಲ್ಲಿಂದ ಬರ್ತೀಯೊ ಯಾವ ಗಳಿಗೆ ಬರ್ತೀಯೊ
ಯಾವ್ಮಾತ್ನಾಗೆ ಹೊಳಿತಿಯೊ ತಿಳಿಯದಲ್ಲಾ
ಹೊರಗೆಲ್ಲ ಹುಡುಕಿದ್ದೆ ಹುಡುಹುಡುಕಿ ದಣಿದಿದ್ದೆ
ಯಾವಾಗ್ಲೋ ಒಳಬಂದು ಕುಂತಿಯಲ್ಲಾ ||೧||
ಹೆಣದಾಗೆ ಚೈತನ್ಯ ಮೈತುಂಬಿ ನಿಂತಂಗೆ
ತುಂಬ್ಕೊಂಡೆ ಬಂದಿತ್ತು ಯಾವ್ದೋ ಶಕ್ತಿ
ಬರಡಾದ ಭೂಮಿಗೆ ಸ್ವರ್ಗಾನೆ ಇಳಿದಿತ್ತು
ಮಂತ್ರ ಹಾಕಿದಂತೆ ಯಾವ್ದೋ ಯುಕ್ತಿ ||೨ ||
ಮರುಭೂಮ್ಯಾಗೆ ಚಿಲುಮೆದ್ದು ಚಿಮ್ದಂಗೆ ಮ್ಯಾಲಕ್ಕೆ
ಎಲ್ಲಿತ್ತೊ ಒಳಸೆಲೆ ಕಾಣ್ಲೆ ಇಲ್ಲ
ಒಣಗಿದ್ದ ಮರದಾಗೆ ಒಮ್ಮಿಂದೊಮ್ಗೆ ಹಸಿರು
ಉಸಿರಾಡಿ ಉಡಿಯಾಗೆ ತುಂಬಿತಲ್ಲ ||೩||
ಆಲಸ್ಯ ಅಡಗ್ಹೋತು ಭಯವೆಲ್ಲ ಕಡೆಗಾಯ್ತು
ಕೋಪ ತಾಪವೆಲ್ಲ ತಣ್ಣಗಾಯ್ತು
ನಿದ್ದೆಲ್ಲ ಎಚ್ರಾತು ಎಚ್ರಾನೆ ಮುದ್ದಾಯ್ತು
ಕಲ್ಲಾಗೆ ಕಣ್ಣೀರು ಬಂದಂಗಾಯ್ತು ||೪||
ಒಬ್ಬನೆ ಇದ್ದವಗೆ ನೂರ್ ಜನ ಬಲಬಂತು
ನಾನೊಬ್ನೆ ಅಲ್ಲಂತ ಧೈರ್ಯ ಬಂತು
ರಾತ್ರೆಲ್ಲ ಬೆಳಕಾತು ಹಗಲೆಲ್ಲ ಬಯಲಾತು
ಹುಚ್ಚೆದ್ದು ಕುಣಿವಂಥ ಸ್ಫೂರ್ತಿ ಬಂತು ||೫||
ನೆಲದಲ್ಲಿ ನಿಂತವ್ಗೆ ಗಗನದ್ಹೂ ಸಿಕ್ಕಿತ್ತು
ಆಳಕ್ಕೆ ಬೇರುಗಳು ಹಬ್ಬಿದ್ದವು
ಒಳಗೆಲ್ಲಾ ಬೆಳೆದಂತೆ ಕೊಂಬೆಗಳು ಬೆಳೆದಿದ್ದು
ವಿಶ್ವಾನೆ ಹಬ್ಬಿದಂತೆ ಚಾಚಿದ್ದವು ||೬||
ಕಷ್ಟಗಳ ಗುಡ್ಡಗಳು ಬಿಳಿ ಮೋಡಗಳಾದವು
ಚಿಂತೆಲ್ಲ ಸಂತೆಲ್ಲ ಬಯಲಾಯಿತು
ದುಃಖಾದ ನೀರಲ್ಲು ಸುಖ ತುಂಬಿ ಕಣ್ಣೀರು
ಸಂಕಟದ ನೋವೆಲ್ಲ ಸಯವಾಯಿತು ||೭||
ನಂಗೊತ್ತು ಈ ಸೊಗಸು ಒಂದೇ ಕ್ಷಣಂಬೋದು
ಜೀವಾ ಹಿಡಿಯಾಕೊಂದೆ ಬೊಗಸೆ ಸಾಕು
ವಿಷಯ ಸಾಗರದಾಗ ಈಜಾಡ್ತಾ ಸಾಗಿದ್ರು
ಒಂದೆ ಹನಿ ಅಮೃತಾವು ಸಾಕೆ ಸಾಕು ||೮||
ಭೂಮಿ ಸೀಮೀ ಬಿಟ್ಟು ಬರಿ ಬಾನು ಬೇಕಿಲ್ಲ
ಬಾನ್ನ್ಯಾಗೆ ಸ್ವರ್ಗಾನೆ ಇರವೊಲ್ದ್ಯಾಕೆ
ಆಕಾಶ್ದಾಗ ಹಾರ್ವಂಥ ಹಕ್ಕೀನೆ ಆಗ್ಬೇಕೆ
ಮಣ್ಣಾಗಿನ ಮಣಿಯಾಗಿ ಇರಬಾರ್ದ್ಯೇಕೆ ||೯||
***