ಕರೆಯೂ ಬಂದದ ಕಾಣೇ ಅವ್ವ ಕೇಳು ಬಾರೆ ಕೇಳೆ ಅವ್ವ
ಮಲಗಿದವನ ಎಬ್ಬಿಸಿ ಬಿಡ್ತು ಕುಂತಿರುವವನ ಕುಲುಕಿ ಬಿಡ್ತು
ನಿಂತಿರುವವನ ಏರಿಸಿ ಬಿಡ್ತು ಏರಿಹಾರಿ ಕುಣಿವಂಗಾಯ್ತು
ಯಾವುದೋ ಲೋಕದಾಗ ಸುತ್ತಿದಂಗಾಯ್ತು
ಯಾವ್ದೊ ಸೀಮೇ ಸೇರಿದಂಗಾಯ್ತು
ಯಾವುದೋ ಜೇನು ಕುಡಿದಂಗಾಯ್ತು
ಯಾವ್ದೊ ಮಾತು ಕೇಳಿದಂಗಾಯ್ತು
ಗೋಪಾಲಕೃಷ್ಣನ ಕೊಳಲಿನ ಗಾನಾ | ಸರಸೋತಮ್ಮನ ವೀಣೆ ಗಾನಾ
ನಾರದ ರಾಯರ ತಂಬೂರಿ ಗಾನಾ | ದೇವಕನ್ನೇರ ಇಂಪಾದ ಗಾನಾ
ಏನೋ ಏನೋ ಕೇಳಿದಂಗಾಯ್ತು | ಹಾಲು ಬೆಲ್ಲ ಕುಡಿದಂಗಾಯ್ತು
ಏನೋ ಏನೋ ಕಂಡಂಗಾಯ್ತು | ಸವಿಸವಿ ಊಟ ಉಂಡಂಗಾಯ್ತು
ಗಂಗಿ ಉತ್ಯುಕ್ಕಿ ಹರದಂಗಾಯ್ತು
ತುಂಬಿ ತುಂತುಂಬಿ ಹಾಡಿದಂಗಾಯ್ತು
ಹೂವೂ ಗಮಗಮ ನಾರಿದಂಗಾಯ್ತು
ಸೀಯಾದ ಹಣ್ಣು ತಿಂದಂಗಾಯ್ತು
ಮಕ್ಳು ಸಕ್ರಿ ನಕ್ಕಂಗಾಯ್ತು | ಚಂದ್ರ ನಕ್ಕು ನಗಿಸಿದಂಗಾಯ್ತು
ಮೈಯಾಗೇನೋ ಹೊಕ್ಕಂಗಾಯ್ತು | ಇಮ್ಮಡಿ ಶಕ್ತಿ ಬಂದಂಗಾಯ್ತು
ಎಲ್ಲೆಲ್ಲೂ ರಸ ತುಂಬಿದಂಗಾಯ್ತು | ಕಸಾ ಕೂಡಾ ರಸವೆ ಆಯ್ತು
ಕಲ್ಲಿನ್ಯಾಗ ಸೆಲೇ ಉಕ್ಕಿದಂಗಾಯ್ತು | ಹೆಣದಾಗ ಜೀವ ಬಂದಂಗಾಯ್ತು
ಬೆಕ್ಕು ಕಣ್ಣು ಹೊಡೆದಂಗಾಯ್ತು| ಹೂವು ಹಾಡು ಹೇಳಿದಂಗಾಯ್ತು
ಎಲೆಗಳೇನೋ ನುಡಿದಂಗಾಯ್ತು| ಹುಲ್ಲೆ ಪಿಸುಮಾತಾಡಿದಂಗಾಯ್ತು
ಸೃಷ್ಟಿ ಸೆಡವು ಬಿಟ್ಟಂಗಾಯ್ತು| ಕೆಟ್ಟದ್ದಲ್ಲ ಸುಟ್ಟಂಗಾಯ್ತು
ಕಂಡೂ ಕಂಡೂ ತೋರ್ಸಾಕಾದ್ದು | ಕೇಳಿ ಕೇಳೀ ಹೇಳಾಕಾಗ್ದು