ಒಮ್ಮೆ ಹಸಿದ ಇಲಿ ಒಂದು ಆಹಾರವನ್ನು ಹುಡುಕಿಕೊಂಡು ಹೊರಟಿತು. ‘ಇದೇನು? ಒಂದು ಆಹಾರದ ಪುಟ್ಟ ಮನೆಯೇ ಇಲ್ಲಿದೆ’ ಎಂದು ಮೂಗು ತೂರಿಸಿ, ತಲೆ, ದೇಹವನ್ನು ನುಗ್ಗಿಸಿತು. ದುರದೃಷ್ಟವಶಾತ್ ಇಡೀ ದೇಹ, ಆಹಾರದ ಪೆಟ್ಟಿಗೆ ಎಂದು ಇಲಿ ತಿಳಿದಿದ್ದ ಬೋನಿನ ಒಳಗೆ ಹೋಯಿತು. ಹೋದ ಕೂಡಲೇ ಬಾಗಿಲು ದೊಪ್ಪನೆ ಬಿದ್ದು ಬಿಟ್ಟಿತು. “ಇದೇನು ಈ ಸುಡುಗಾಡು ಬಾಲ ಬೇಗ ಒಳಗೆ ಬಾರದೇ ಹೊರಗೆ ಸೆರೆಯಾಗಿ ಬಿಟ್ಟಿದೆ? ನನ್ನ ಕಣ್, ಮನ, ದೇಹದಷ್ಟು ಈ ಬಾಲವೇಕೆ ಚುರುಕಾಗಿಲ್ಲ. ಈಗ ನೋಡಿದರೆ ಕಷ್ಟಕ್ಕೆ ಒಳಗಾಗಿದೆ” ಎಂದು ಗೊಣಗಾಡಿತು.
ಬಾಲ ಹೇಳಿತು “ಜಾಲದಲ್ಲಿ ಸೆರೆಯಾಗಿರುವುದು ನೀನು, ನಾನಲ್ಲ. ನಾನು ಹೊರಗೆ ಹಾಯಾಗಿ ಇದ್ದೇನೆ. ನೀನು ಬಂಧನದಲ್ಲಿದ್ದೀಯ”- ಎಂದು ಅರಿವು ಮೂಡಿಸಿತು.
ಆದರೂ ಇಲಿ ಒಪ್ಪಿಕೊಳ್ಳಲಿಲ್ಲ. “ನನಗೆ ಇಲ್ಲಿ ತಿನ್ನಲು ಘಮ ಘಮ, ರುಚಿರುಚಿ, ಆಹಾರವಿದೆ. ಉಸಿರಾಡಲು ಕಿಡಕಿ ಇದೆ. ಮೇಲೆ ಸೂರು ಇದೆ. ಪುಟ್ಟ ಅರಮನೆಯೇ ನನ್ನದಾಗಿದೆ. ನೀನು ಯಾವುದೂ ಇಲ್ಲದೆ ಹೊರಗೆ ಬಂಟನಂತೆ, ನನ್ನ ಅರಮನೆಯ ಹೆಬ್ಬಾಗಿಲಲ್ಲಿ ಬಿದ್ದಿರುವೆ” ಎಂದಿತು ಇಲಿ.
ಅಷ್ಟರಲ್ಲಿ ಮನೆಯೊಡೆಯ ಜಾಲದಿಂದ ಇಲಿಯನ್ನು ಬಾಲದಲ್ಲಿ ಹಿಡಿದು ಹೊರ ತೆಗೆದು ಬಂಡೆಗೆ ಬಡದು ಸಾಯಿಸಿದ. ಸಾಯುವ ಮುನ್ನ ಇಲಿ ತನ್ನ ಬಂಧನದ ಪರಿವೆ ಇಲ್ಲದೆ ಬಾಲದ ಬಗ್ಗೆ ಚಿಂತಿಸುತಿತ್ತು. ಬಾಲ, ಇಲಿಯ ಅಜ್ಞಾನದ ಬಗ್ಗೆ ಚಿಂತಿಸುತ್ತಿತ್ತು.
*****








