ನೀರು ಸೇದಲು ಬಾವಿಗೆ ಹೋದಾಗ ಬುದ್ಧಿ ಹೇಳಿತು-
“ಮನದ ಕಾಟ ನಿನಗೆ ಬಹಳ ಆಯಿತಲ್ಲವೇ?”
“ಅಹುದು, ಅದು ಅನವರತ ನನ್ನನ್ನು ಕಾಡುತ್ತಿದೆ. ನಾನು ಮನದಿಂದ ದೂರ ಇರಲು ಬಯಸುತ್ತೇನೆ”
“ಹಾಗಾದರೆ ಒಂದು ಕೆಲಸಮಾಡು, ನಿನ್ನ ಖಾಲಿ ಬಿಂದಿಗೆಯಲ್ಲಿ ಮನವನ್ನು ಇಟ್ಟು, ಕುತ್ತಿಗೆಗೆ ಹಗ್ಗ ಬಿಗಿದು ಬಾವಿಯ ಆಳದಲ್ಲಿ ಬಿಡು, ಮನವು ಬಾವಿಯ ತಳ ಸೇರುತ್ತದೆ. ಕೊಡವು ನೀರು ತುಂಬಿ ಬರುತ್ತದೆ” ಎಂದಿತು ಬುದ್ಧಿ.
“ಭೇಷ್! ಒಳ್ಳೆಯ ಆಲೋಚನೆ”
ಬಿಂದಿಗೆಗೆ ಬೇಗನ ಹಗ್ಗ ಬಿಗಿದು ಮನವನ್ನು ಅದರ ಹೊಟ್ಟೆಯಲ್ಲಿಟ್ಟು ಬಾವಿಯೊಳಗೆ ನೂಕಿ ಬಿಟ್ಟೆ. ಅತಿ ಸಂತೋಷವಾಯಿತು. ಎರಡು ತೋಳು ಜಗ್ಗಿ ಜಗ್ಗಿ ತುಂಬಿದ ಬಿಂದಿಗೆಯನ್ನು ಮೇಲೆ ಏಳೆದೆ.
ಕೊಡದ ಕಂಠದಿಂದ “ಹಾಯ್!” ಎಂದು ಒಂದು ದನಿ ಬಂದಿತು. ಕಣ್ಣು ಪಿಳಿ ಪಿಳಿ ಬಿಟ್ಟು ನೋಡಿದೆ. ಎದೆ ಢಭ ಢಭ ಎಂದಿತು. ನೋಡಿದರೆ ಮತ್ತೆ ಮರಳಿತ್ತು ನನ್ನ ಮನ ನನ್ನೊಳಗೆ.
*****








