“ಗುರುಗಳೇ! ಕಣ್ಣಿನ ರೆಪ್ಪ ಕಣ್ಣಿನ ಕಿಡಕಿ. ಅದನ್ನು ನಮ್ಮ ಇಚ್ಛೆಯಂತೆ ಮುಚ್ಚಬಹುದು. ಬಾಯಿಗೆ ತುಟಿಗಳು ಬಾಗಿಲುಗಳು. ಬೇಡವೆಂದಾಗ ನಾವು ತುಟಿಪಿಟಿಕೆನ್ನದೆ ಬಾಯಿ ಬಾಗಿಲು ಮುಚ್ಚಬಹುದು. ಮೂಗನ್ನು ಕುಂಭಕದಲ್ಲಿ ಉಸಿರು ನಿಲ್ಲಿಸುವುದ ಮೂಲಕ ಸ್ಥಗಿತ ಮಾಡಬಹುದು. ಆದರೆ ಕಿವಿಗೆ ಯಾವ ಬೀಗ?” ಎಂದು ಶಿಷ್ಯ ಕೇಳಿದ. “ಎರಡು ಕಿವಿಗೆ ಎರಡು ರಂಧ್ರಗಳಿವೆ. ಅದು ಒಂದು ಸುರಂಗದಂತೆ ಬೇಡದ ನಾದ ತರಂಗಗಳು ತಾವೇ ತಾವಾಗಿ ಸುರಂಗದಿಂದ ಜಾರಿಕೊಳ್ಳುತ್ತವೆ. ಕೆಲವೊಮ್ಮೆ ಒಳಹೋಗುವುದೂ ಇಲ್ಲ.
ಕಿವಿಯ ಬೀಗ ಮುದ್ರೆ ಮನದಲ್ಲಿ ಮನದ ಅರಿವಿನಲ್ಲಿ ನಾದದ ತನ್ಮಯತೆ. ಇಲ್ಲದಿದ್ದರೆ ಕಿವಿ ಇದ್ದರೂ ಕಿವಿಡು ಒಮ್ಮೊಮ್ಮೆ ಕಣ್ಣಿದ್ದರೂ ಕುರುಡಾಗುವುದಿಲ್ಲವೇ?
ಮನವು ವಸಂತ ಋತುವಿನಲ್ಲಿದ್ದರೆ ಕೋಗಿಲೆ ಹಾಡು ಕೇಳುತ್ತದೆ. ಮನವು ಹೆಪ್ಪುಗಟ್ಟಿದ್ದರೆ ಕಿವಿ ಮುಚ್ಚಿರುತ್ತದೆ. ಕಿವಿಗೆ ಬಾಗಿಲು ಮನದ ತನ್ಮಯತೆಯಲ್ಲಿ ಅಲ್ಲವೇ? ಅಂದಾಗ ಶಿಷ್ಯನಿಗೆ ಕಿವಿಯ ಬೀಗಕ್ಕೆ ಕೀಲಿಕೈ ದೊರೆತಂತಾಯಿತು.
*****








