ಕಳವು ಒಂದು ಕಲೆಯು, ಕಂಡಕಂಡವರಿಗೆ ಕದಿಯುವದು ಸಾಧಿಸುವದಿಲ್ಲ. ಕೆಲವರು ಹೊಟ್ಟೆಬಟ್ಟೆಗಾಗಿ ಕದಿಯುವರು. ಕೆಲವರು ಕದಿಯುವ ಚಟದ ಸಲುವಾಗಿ ಕದಿಯುವರು. ಕೆಲವರು ವಿನೋದಕ್ಕಾಗಿ ಕದಿಯುವರು.
ಬ್ರಿಟಿಶ್ ಕೋಲಂಬಿಯಾದಲ್ಲಿ ಕೆಲವು ಕಳ್ಳರು ಸಮಯ ಸಾಧಿಸಿ ಜೇಲಿನಿಂದ ಕೆಲವು ವಸ್ತುಗಳನ್ನು ಕದ್ದರು. ವಿಚಿತ್ರ ! ವಸ್ತುಗಳನ್ನು ಕದಿಯದೇ, ಜೈಲಿನಲ್ಲಿದ್ದ ಕೆಲವು ಕಳ್ಳರನ್ನೇ ಕದ್ದು ಒಯ್ದಿದ್ದರೆ ಎಷ್ಟು ನೆಟ್ಟಗಾಗುತ್ತಿತ್ತು !
* * * * *
ಇಂಗ್ಲಂಡದಲ್ಲಿ ಕಳುವಿನ ಆರೋಪದ ಮೇಲೆ ಓರ್ವ ಸ್ತ್ರೀಗೆ ಆರುತಿಂಗಳ ಶಿಕ್ಷೆಯಾಯಿತು. ಆಗ ಗಂಡನು ಹೆಂಡತಿಯ ಬದಲು ತನ್ನನ್ನು ಜೈಲಿಗೆ ಕಳಿಸಬೇಕೆಂದು ಪರಿಪರಿಯಾಗಿ ಬೇಡಿಕೊಂಡನು. ನ್ಯಾಯಾಧೀಶರು ಕಿವಿಗೊಡಲಿಲ್ಲ. ನಿಜ, ಉದರಪೋಷಣೆಯನ್ನು ಸಾಗಿಸುವ ಹೆಂಡತಿಯೇ ಸೆರೆಮನೆ ಸೇರಿದರೆ ತನ್ನನ್ನೂ ತನ್ನ ಮಕ್ಕಳನ್ನೂ ಯಾರು ಜೋಪಾನ ಮಾಡಬೇಕೆಂದು ಗಂಡನ ಚಿಂತೆ !
****
ನಮ್ಮ ಒಬ್ಬ ಮಿತ್ರನು ಮುಂಬೈಯಲ್ಲಿ ಅಡ್ಡಾಡುತ್ತಿದ್ದಾಗ ಒಬ್ಬ ತುಡುಗನು ಕಿಸೆ ಕತ್ತರಿಸಿದನು. ಕಿಸೆಯಲ್ಲಿ ಎರಡೆಂದರೆ ಎರಡೇ ದುಡ್ಡು ಇದ್ದವು ! ತುಡುಗನು ಪಶ್ಚಾತ್ತಾಪ ಪಟ್ಟು ಎರಡೂ ದುಡ್ಡು ಗಳನ್ನು ಕಿಸೆಯಲ್ಲಿಯೇ ಬಿಟ್ಟು ಹೊರಟನು. ಇಷ್ಟರಲ್ಲಿ ನಮ್ಮ ಮಿತ್ರನಿಗೆ ಅರಿವಾಯಿತು. ಕಿಸೆಯೊಳಗಿಂದ ಆ ಎರಡೂ ದುಡ್ಡು ತೆಗೆದು, ಹೋಗಹತ್ತಿದ್ದ ತುಡುಗನನ್ನು ಕರೆದು, ಆತ “ಕಿಸೆ ಕತ್ತರಿಸಿ ಶ್ರಮಬಟ್ಟಿರುವಿ. ನಿನ್ನ ದುರ್ದೈವ. ಸಿಕ್ಕ ಎರಡು ದುಡ್ಡುಗಳನ್ನಾದರೂ ಏಕೆ ಬಿಡುವಿ ? ತೆಗೆದುಕೊ” ಎಂದು ಕೊಡಹೋದನು, ತುಡುಗನು ಹೌಹಾರಿ ಸುಮ್ಮನೆ ನಿಂತನು. ಆಗ ತುಡುಗನಿಗೆ ನನ್ನ ಸ್ನೇಹಿತ ಹೇಳಿದ : “ಇಲ್ಲವಾದರೆ ನಿನ್ನ ಹತ್ತರ ಎರಡು ದುಡ್ಡು ಇದ್ದರೆ, ಕೊಟ್ಟುಬಿಡು, ಅಂದರೆ ಮನೆಗೆ ತಿರುಗಿ ಟ್ರಾಮಿನಲ್ಲಿ ಹೋಗುವೆನು. ನಡೆಯುವ ಶ್ರಮವು ನನಗೆ ತಪ್ಪುವದು, ನಿನ್ನಂಥ ಕಿಸೆ ಕತ್ತರಿಸುವವರಿಗೂ ನಾನು ನಡೆಯುವಾಗ ಕಿಸೆ ಹಾದಿಸುವ ಶ್ರಮವೂ ಉಳಿಯುವದು.”
* * * *
ಅಮೇರಿಕೆಯಲ್ಲಿ ತುಡುಗರನ್ನು ಹಿಡಿಯಲು ಹೊಸ ಹೊಸ ಸಾಧನಗಳನ್ನು ಪೋಲೀಸರು ಹುಡುಕಿ ತೆಗೆದಿದ್ದಾರೆ. ಈ ಹೊಸ ಸಾಧನಗಳನ್ನು ತಪ್ಪಿಸಲು ತುಡುಗರು ಸಿದ್ಧರಿರುತ್ತಾರೆ. ಉದಾಹರಣೆ : ಮನೆಯ ಬಾಗಿಲಿಗೆ ಇಲೆಕ್ಟ್ರಿಕ್ ಕೀಲಿಗಳನ್ನು ಹಾಕುತ್ತಾರೆ. ಹುಡುಗರು ಕೀಲಿ ತೆಗೆಯಬೇಕೆಂದಾಗಲಿ ಮುರಿಯಬೇಕೆಂದಾಗಲಿ ಅದನ್ನು ಹಿಡಿದರೆ ಕೈ ಗಟ್ಟಿಯಾಗಿ ಆಂಟಿಕೊಳ್ಳುತ್ತವೆ. ಆದರೆ ಹೀಗೆ ಅಂಟಿಕೊಳ್ಳಬಾರದೆಂದು ತುಡುಗರು ಒಂದು ತರಹದ ಕೈಚೀಲವನ್ನು ಹಾಕಿಕೊಳ್ಳುತ್ತಾರೆ.
* * * *
ಅಮೇರಿಕೆಯ ಬ್ಯಾಂಕುಗಳ ಕಂಪೌಂಡಿನಲ್ಲಿ ಅದೃಶ್ಯ ಇಲೆಕ್ಟಿಕ್ ಕಿರಣಗಳು ಪಸರಿಸಿರುತ್ತವೆ. ರಾತ್ರಿ ಯಾರಾದರೂ ಕಂಪೌಂಡಿನಲ್ಲಿ ಹಾಯ್ದರೆ ಕೂಡಲೆ ಚೌಕಿದಾರನ ಖೋಲಿಯಲ್ಲಿ ಮ್ಯಾನೇಜರನ ಬಂಗ್ಲೆಯಲ್ಲಿ ಮತ್ತು ಪೋಲೀಸ ಚೌಕಿಯಲ್ಲಿ ಗಂಟೆ ಬಾರಿಸಲಿಕ್ಕೆ ಹತ್ತುತ್ತವೆ. ಆದರೆ ತುಡುಗರು ಇದರ ಪ್ರತಿಕಾರವಾಗಿ ಒಂದು ತರಹದ ಪೋಷಾಕು ಧರಿಸುತ್ತಾರೆ. ಇದರಿಂದ ಎಲ್ಲಿಯೂ ಗಂಟೆ ಬಾರಿಸುವದಿಲ್ಲ. ತುಡುಗರು ಸರಳವಾಗಿ ಬ್ಯಾಂಕು ಹೊಕ್ಕು ತಮ್ಮ ತುಡುಗಾದದ್ದನ್ನು ನೋಡಿ ಗಂಟೆ ಬಾರಿಸು ಕೂಡ್ರುತ್ತಾನೆ.
*****






