ಹರಿಗೆ ಎಂದು ಗುಡಿಯನೊಂದ
ಕಟ್ಟುತಿರುವೆಯಾ ?
ಹರಿಯ ಒಲುಮೆ ಪಡೆದು ಪುಣ್ಯ
ಗಳಿಸುತಿರುವೆಯಾ?
ಹುಚ್ಚ, ನೀನು ಹಳ್ಳಿಗೋಡು;
ದೀನ ಜನರ ಪಾಡ ನೋಡು;
ಇರಲು ಗುಡಿಲು ಇಲ್ಲವಲ್ಲ !
ಹೊಟ್ಟೆ ತುಂಬ ಅನ್ನವಿಲ್ಲ !
ಹರಿಗೆ ಎಂದು ಗುಡಿಯನೊಂದ
ಕಟ್ಟುತಿರುವೆಯಾ?
ಹರಿಯ ವಿಶ್ವರೂಪವನ್ನು
ಮರೆತು ಬಿಟ್ಟೆಯಾ ?
ಜಗಕೆ ಗೋಡೆ ಹಾಕಿ ಗುಡಿಯ
ಕಟ್ಟ ಬಲ್ಲೆಯಾ?
ದೀನಗೊಂದು ಗೂಡು ಸಾಕು;
ದೇವಗೊಂದು ವಿಶ್ವ ಬೇಕು;
ಮಣ್ಣ ಹುಲ್ಲ ಸಣ್ಣ ಗೂಡು-
ಬಡವಗದುವೆ ಸಿರಿಯ ಬೀಡು.
ಹರಿಗೆ ಎಂದು ಗುಡಿಯನೊಂದ
ಕಟ್ಟುತಿರುವೆಯಾ ?
ದೀನಗಿಂತ ದೇವ ಬಡವ
ನೆಂದು ಬಗೆದೆಯಾ ?
*****









