Home / ಕವನ / ಕವಿತೆ / ದೇಗುಲದ ದಾರಿಯಲ್ಲಿ

ದೇಗುಲದ ದಾರಿಯಲ್ಲಿ

ಎಲುಬಿನಾ ಹಂದರೋ
ಎಲುಬಿನಾ ಹಂದರ!
ಕಣ್ಣೀರಿನ ಬಂದರೋ
ಕಣ್ಣೀರಿನ ಬಂದರ!
ಬೆಮರುಹನಿಯ ಕಂದರ
ನೋಡೆ ನೀ ವಸುಂಧರಾ!
ಎಲುಬಿನಾ ಹಂದರಾ!

ಲಕ್ಷಾವಧಿ ಜನರದೇಕೆ
ಹೊಳಲ ಬಿಟ್ಟು ಬಂದರು?
ಮಕ್ಕಳು ಮರಿ ಹೆಣ್ಣು ಮಣ್ಣು-
ಗಡಿಗೆಗಳನು ತಂದರು?
ದುವಡು ಬಂತು ದಿಳ್ಳಿಗೆ
ಜನವು ಬಂತು ಹಳ್ಳಿಗೆ.
ಹಳ್ಳಿಯಲ್ಲಿ ತಿನ್ನಲು
ಕೂಳೆ ಇಲ್ಲವೆನ್ನಲು
ಕೂಳಿಲ್ಲದೆ ಕೊಳೆವುದೇನು?
ಬಾಂಬು ತರಲು ಸಾವನು.
ಪಟ್ಟಣದಲ್ಲಿ ಸುಟ್ಟುಕೊಂಡು
ಸಾಯ್ವುದೆ ಲೇಸೆನುವಎನು!
ಎಲುಬಿನಾ ಹಂದರೋ
ಎಲುಬಿನಾ ಹಂದರ!

ನಿಲ್ಮನೆಯಲ್ಲಿ ನಿರಾಶ್ರಿತರು
ನಿಂತ ನಿಲುವ ನೋಡಿಯೂ
ಗಂಡು-ಹೆಣ್ಣು ಹಿರಿಯ-ಕಿರಿಯ
ರೆಲ್ಲ ಸುತ್ತುಗೂಡಿಯೂ
ಇಲ್ಲ ಹಿಂದೆ ಇಲ್ಲ ಮುಂದೆ
ಇಲ್ಲ ತಾಯಿ ಇಲ್ಲ ತಂದೆ!
ನೆಲಗಡಲೆಯು ಹೊಟ್ಟೆಗೆ;
ಶಯನ ರೈಲುಗಟ್ಟಿಗೆ.
ಕುಡಿಯಲು ಹಾಲಿರದ ಕೂಸು
ಕ್ರಂದಿಸಿ ಆಕ್ರಂದಿಸಿ
ಒರಲುತಿರಲು ನೋಡಲಾರೆ
ದೇವ! ಎಂದೆ ವಂದಿಸಿ.
ಎಲುಬಿನಾ ಹಂದರೋ
ಎಲುಬಿನಾ ಹಂದರ!

ಬೇಡ ಚಿರಂಜೀವಿಪದವು
ಬೈಗು ಬೆಳಗು ಮೂಡಿಸಿ
ಕಾವ್ಯದಲ್ಲಿ; ರಂಭೆಯರನು
ಕರೆದು ನಾಟ್ಯವಾಡಿಸಿ.
ಗಂಧರ‍್ವರ ಗಾನ ಪಾಪ
ಅಮೃತದುಣಿಸದೆಂಥ ಶಾಪ!
ಹೊನ್ನಿನ ಮಳೆ ಬೇಕದಿಂದು
ಜನಜಂಗುಳಿ ಕಾಯಲೆಂದು.
ಅಂಗೈಯಿದು ಅಕ್ಷಯವಿರೆ
ತೆರದ ಬಾಯಿಗನ್ನವು
ಉದ್ಭವಿಸುವ ವರವ ಪಡೆಯೆ
ಕಳೆವುದೆನ್ನ ಬನ್ನವು.
ಎಲುಬಿನಾ ಹಂದರೋ
ಎಲುಬಿನಾ ಹಂದರ!

ಅಗ್ನಿ ರಥವೆ ಇವರ ಭಗ್ನ-
ಮನೋರಥವದಾಯಿತು
ಬಡವರಶ್ರುಧಾರೆಗೆ ಧರೆ
ಅಂದಮಾನವಾಯಿತು.
ಇವರು ಕುಳಿತ ರೈಲುಗಾಡಿ
ದಿಕ್ಕುಗಳನು ಮಿಕ್ಕುತೋಡಿ
ಮುಗಿಲಿನಾಚೆಗುರುಳಲಿ
ನಿರ‍್ವಯಲಿಗೆ ತೆರಳಲಿ!
ಬುವಿಯ ದುಃಖದಿಂದ ದೂರ-
ವಿಹುದೆ ಸ್ವರ‍್ಗ ಸುಖವೆನೆ
ದೇವನಾದ ನಿರುತ್ತರನು;
ಮುಚ್ಚಿಕೊಂಡ ಮುಖವನೆ!
ಎಲುಬಿನಾ ಹಂದರೋ
ಎಲುಬಿನಾ ಹಂದರ!

ಗಾಡಿ ಬೆಟ್ಟಿಬೆನಕವೆನಿಸಿ
ಸುತ್ತುವೀ ಧರಾಂಗನೆ
ನೋಡಬೇಕು ತಾ ಚವಂಗ-
ವೆಂತೊಗೆವಳೊ ಚಂಗನೆ
ತಾರೆಗಳಾ ಚಕ್ರವ್ಯೂಹ-
ದಲ್ಲಿ ಮರೆತು ದೇಹ-ದಾಹ-
ಗಳನು, ಸುತ್ತು ತಿರುವಳು.
ಕೈಯನೆತ್ತುತಿರುವಳು.
ನಮ್ಮ ಕುಲಗಳಾಗುಹೋಗು
ಅವಳಾಟಕೆ ಜೋತಿವೆ.
ಅವಳ ಕಣ್ಣಲಿರುವ ಕಳೆಗೆ
ನಮ್ಮ ಹೃದಯ ಸೋತಿವೆ.
ಎಲುಬಿನಾ ಹಂದರೋ
ಎಲುಬಿನಾ ಹಂದರ!

ಮೂಜಗವನೆ ಮೂದಲಿಸುತ
ಮುನ್ನಡೆಯುವ ಯೋಧರು
ಗವಿಯ ಸೇರುತಿಂದ್ರಪದವಿ-
ಗಾಸೆಬಡುವ ಸಿದ್ಧರು,
ಜನರ ಕೊಲುವ ಕ್ರುದ್ಧರು,
ಹಿಂಸಿಸುವ ಪ್ರಬುದ್ಧರು,
ಆಗಲೆಳಸಿ ಬ್ರಹ್ಮಜ್ಞಾನಿ
ಕಾಳನಾದ ವಿಜ್ಞಾನಿ:-
ಇವರನಾಡಿಸುವಳದೆಂತು
ತಾಯಿ ನೋಡುವಂತಿದೆ:
ಇವರ ಹುಗಿವ ನೆಲದ ಮೇಲೆ
ಜನತೆಯಾಸೆ ನಿಂತಿದೆ.
ಎಲುಬಿನಾ ಹಂದರೋ
ಎಲುಬಿನಾ ಹಂದರಾ!
*****

Tagged:

Leave a Reply

Your email address will not be published. Required fields are marked *

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...