ಸರಸತಿಯು ಕರುಣೆಯಿಂದೆನಗಿತ್ತ ಮುರಲಿಯನು ನುಡಿಸಿರಲು ರಾಗವಾಗಿ
ತುಳುಕಿರುವ ಗಾನದ ವಿತಾನದಲ್ಲಿ ಮೂಡಿತ್ತು ನನ್ನಿರವು ಯೋಗವಾಗಿ.
ವಿಶ್ವಮೋಹಿನಿ ತೋರಿದಂಥ ಮಾಣಿಕ ಮುತ್ತುಗಳನು ಪರಿಕಿಸಲು ನಡೆದು
ಒರೆದು ನೋಡಿದೆ ನನ್ನ ತಿಳಿವೆಂಬ ಚಿನ್ನವನ್ನೆಸೆಯಲದು ಕಾಂತಿವಡೆದು.
ಶಿಶುವಿನೆಳೆನೋಟದಲ್ಲಿಂಬುಗೊಳ್ಳುತ ಕೊನೆಗೆ ಮುನಿವರರ ದೃಷ್ಟಿಯಲ್ಲಿ
ತುಂಬಿ ಹೊಳೆಯುತಿಹ ಸೆಳಮಿಂಚುಗಳನಾಡಿಸಿದೆ ನಿನ್ನಮೃತವೃಷ್ಟಿಯಲ್ಲಿ.
ಘನರ ಚಾರಣನೆಂದು ಲೇಖನಿಯ ಕೆಳಗಿಡಲು ನಿಜದಯಾಘನನ ಕಂಡೆ.
ಸಂಕ್ರಾಂತಿಪುರುಷರನು ಗೀತಿಸುತ ವಿರಮಿಸಲು ಕ್ರಾಂತಿದರ್ಶನವನುಂಡೆ.
ನಿನ್ನ ಆಶೀರ್ವಚನವಹುದೆನ್ನ ಜಿಂದಿಗೆಯು; ಜೀವಬಿಂದಿಗೆಯ ತುಂಬಿ,
ನಿಂದೆ ಶ್ರಮಣೋತ್ತಮನೆ! ಬಂದು ಶ್ರಾವಣದಂತೆ. ನೀನೆನ್ನ ಕಣ್ಣಗೊಂಬಿ.
ಬಾಳ ದೇಗುಲದಲ್ಲಿ ಕೈ ಮುಗಿದು ನಿಂತಿದ್ದ ಇರವಿಗರಿವಾಗಲೆಂದು;
ಕಂಡೆ ಮಾನವಕುಲವೆ ಕಡಲಿನಂತೈ ತಂದುದನು ಬಾಳಿಗೆರಗಲೆಂದು.
ಜನನ-ಮರಣಕೆ ನೊಂದು ಸಂಸಾರವೊಡ್ಡಿರುವ ತಾಪತ್ರಯಗಳಿಗೆ ಬೆಂದು,
ಕುಲಕೆ ಕುಲವೇ ಮುಂದುಗಾಣದಲೆ ಮೊರೆಯಿಟ್ಟಿತಿದರಿಂದ ಮುಕ್ತಿಯೆಂದು?
ದೇಗುಲದ ಪ್ರಾಕಾರವೆಮಗೆ ಹೊರತಾಗಿರಲು ದೈವತವ ಕಾಣ್ವುದೆಂತು?
ಉದರವು ಬಕಾಸುರನ ತೆರದಿ ಬಾಯ್ಬಿಡುತಿರಲು ಮಿಕ್ಕುದನು ನೆನೆವುದೆಂತು?
ಕಂಡರೂ ಕಾಣಲು ಸೋಗಿನಲಿ ಗುಂಗಿನಲಿ ಗರ್ಭಮಂದಿರದೊಳಿದ್ದು.
ಬಾಳ್ ಬರಳು ಹೊರಗಿಲ್ಲಿ. ಬುವಿಯ ವಿಪರೀತಗಳಿಗವಳ ಬರವೊಂದೆ ಮದ್ದು.
ಬಾಳಾದರೂ ಬರಲಿ; ನಾವಾದರೂ ನಿಲಲಿ ಬಾಳ ಬಿಳಿಗೊಡೆಯ ಕೆಳಗೆ;
ಬಾಳ ಹೃದಯದಲಾವು; ಇಲ್ಲ ಬಾಳಿರಲೆಮ್ಮ ಹೃತ್ಚಿತ್ತದೊಳಗೆ ಒಳಗೆ.
ಇಂತು ಪ್ರಾರ್ಥಿಸಿ ನಿಂತೆ ಲೋಕದಾರ್ತಸ್ವರವು ತುಂಬಿರಲು ಕರ್ಣಗಳನು.
ಆಗ ಜನಸಂದಣಿಯ ನಡುವೆ ಕಂಡೆನು ಸುಳಿಯುತಿಹ ವಿವಿಧ ವರ್ಣಗಳನು.
ಮಾದರಿಯ ಮಾನವರು ತಮ್ಮಾಟಗಳ ಹೂಡಿ ನಿಂತಿಹರು ಗುಡಿಯ ಮುಂದೆ;
ಅವರ ನಾಗಸ್ವರವ ನಲುಮೆಯಿಂದಾಲಿಸಲು ಕೋಟಿ ಮಾನವರು ಹಿಂದೆ.
ನಾವ್ ಬಳಿಗೆ ಸುಳಿದಂತೆ ಗರ್ಭಮಂದಿರದಲ್ಲಿ ಬೆಳಕು ಕಳೆಯೇರುತಿಹುದು.
ನಾವು ಶುಚಿಯಾದಂತೆ ಮಾಯೆ ಮರೆಯಾಗುತ್ತ ತಾಯ ಮೊಗ ತೋರುತಿಹುದು.
ಕಣ್ಣಿನಳವಿದ್ದಂತೆ ಮೂರುತಿಯ ಸುಳುವಿಹುದು; ಕಂಗಳಿರೆ ಭಿನ್ನ ಭಿನ್ನ
ದರ್ಶನವು ಭಿನ್ನವಿದೆ; ಭಿನ್ನ ವಿರಲೇನಂತೆ? ಅವರವರಿಗದುವೆ ಚಿನ್ನ.
ಎಲ್ಲ ದರ್ಶನಗಳಾ ಸಾರಸಂಗ್ರಹವೆ ನಾನರ್ಚಿಸುವ ಸತ್ಯವೆಂದೆ.
ಈ ಯುಗದ, ಈ ಜಗದ ಕಾಣ್ಕೆಗಳ ಮೊಗಸಾಲೆ ಕವನಮಂದಿರವಿದೆಂದೆ.
ಮಗುವು ಬಂದಾಡಿತ್ತು ಗುಡಿಯ ಪ್ರಾಂಗಣದಲ್ಲಿ ಮುಗ್ಧನಯನಗಳ ತೆರೆದು;
ವಾತ್ಸಲ್ಯ- ಪ್ರಕೃತಿಯೈಸಿರಿಯಲ್ಲಿ ಮುಕ್ತಿಯನು ಕಂಡುಳಿದುದನ್ನು ತೊರೆದು.
ಕೈಗೆ ಬಳೆ ತೊಡಿಸುತ್ತ ಜೀವ ಬುದ್ಧಿಗಳನ್ನು ಸಂಕೋಲೆಯಿಂದ ಬಿಗಿದು,
ಬಾಳ್ವ ನರನಾಧಿಪತ್ಯವನಲ್ಲಗಳೆಯುವ ಕುಮಾರಿ ತಾ ಕರವ ಮುಗಿದು
ನುಡಿದಳೀ ಶತ್ರುಸಮ ಜಗದಲ್ಲಿ ಮಿತ್ರನಂತಾತ್ಮನುದಯಿಸಲು ಬೇಕು.
ಸ್ವಾತಂತ್ರ್ಯ ತಲೆದೋರಿ ಸಮತೆ ಸಕಲರಿಗಾಗಿ ಸ್ನೇಹ ಪಲ್ಲವಿಸಬೇಕು.
ಮದುವಣಿಗ ತನ್ನ ಕಾರ್ಯೋತ್ಸಾಹ, ಬುದ್ಧಿ ವೈಭವದ ಪ್ರೋತ್ಸಾಹಗಳನು.
ಬದಿಗಿರಿಸುವುದ ಕಂಡೆ ಕನ್ನೆಯೋರ್ವಳಿಗಿತ್ತು ತನ್ನ ಮನ-ಪ್ರಾಣಗಳನು.
ಮದುವೆಯಾ ಮಂಟಪವೆ ಬಾಳ ದೇಗುಲವೆಂದು ಮದುಮಗಳೆ ದೇವಿಯೆಂದು.
ಸದ್ಭಕ್ತನಿವ ಕಂಡ ಸವಿಗನಸನೊಂದು ಕ್ಷಣ ತಾನೆ ಸುಖಜೀವಿಯೆಂದು.
ಪತಿಯು ಸತಿಯೇ ದೈವವೆಂದು ನುಡಿದನು ತನ್ನೊಳತಿ ಮೋಹಿಸಿದ್ದ ರತಿಗೆ.
ತಾಯಿ ಕೇಳ್ವಳು: ತನ್ನ ತಾಯ್ತನವ ಕಾಣದಿಹ ಹೆಣ್ಣಿಳಿವಳಾವ ಗತಿಗೆ?
ತಂದೆಯನುವನು: ತಾನು ಸಾಕಿ ಸಲುಹಿದ ಕುವರರೇಳಿಗೆಗೆ ತನ್ನ ಜೀವ
ಸವೆದು ಸಣ್ಣಾಗಿರಲು ಹೊಸ ಜಗವು ಬರಲೆಂದು ತಾಳ್ವುದೆಂದದರ ನೋವ.
ಕಾದಲನು ಪ್ರೀತಿಯಲಿ ಪರಮಾರ್ಥವನು ಕಾಣುತಳವಡಿಸಿ ಬದುಕನೆಲ್ಲ,
ಗತಿಸಿರಲು ಕಾದಲಳು, ಕಣ್ಗೆ ಕತ್ತಲೆಗವಿದು, ಶೂನ್ಯವಿರೆ ಭುವನವೆಲ್ಲ-,
ಕಣ್ಣಿನೊಳಗಣ್ ತೆರೆದು ಬೇರೆ ಲೋಕವ ಕಂಡ:- ಜೋತಿದೇಹಿಗಳ ಲೋಕ ;
ಅಲ್ಲಿ ಪ್ರಿಯತಮ ತಾನು ಸುಳಿದಾಡುವುದ ಕಂಡು, ಹಿಗ್ಗಿನಲಿ ಕಳೆಯೆ ಶೋಕ.
ಇಂತಿಹುದು ದಾಂಪತ್ಯದಾದರ್ಶ, ಸಂಸಾರದಲ್ಲಿ ದರ್ಶನದ ರೀತಿ;
ಇಂತಿಹುದು ಭೂತಳದೊಳೊಂದು ಮನೆಯನು ಹೂಡಿ ಮನದ ಮಡಿ ಕಾಯ್ವ ನೀತಿ.
ಕನ್ನಡಿಗ ತಾನೆಂದ : ಕನ್ನಡದ ಜನಮನದಿ ಜಗವೆ ಪಡಿಮೂಡಬೇಕು;
ಬೆಳೆದೊಂದು ಸೀಮೆಯಲಿ ನಿಃಸೀಮದಾ ಸಸಿಯ ನಡಲಾವು ಹೆಣಗಬೇಕು.
ಆರ್ಯಮಾತೆಯ ಪುತ್ರನೆಂದ: ಭಾರತಕೆಂದು ತನ್ನಸುವು ಮೀಸಲೆಂದು.
ಕ್ರಾಂತಿಕಾರನು: ರಕ್ತ ಹೊಳೆಯಾಗಿ ಹರಿದಿರಲಿ ಶಾಂತಿ ಹೊರಸೂಸಲೆಂದು.
ತ್ಯಾಗಿಯೆಂದನು : ನಾವ್ ಅನಂತತೆಯನನುಭವಿಸಲೆಲ್ಲವನು ತ್ಯಜಿಸಬೇಕು.
ದಾನಿಯೆಂದನು: ದಾನವೇ ಜ್ಞಾನಕಿಹ ದಾರಿಯೆಂದದನು ಭಜಿಸಬೇಕು.
ನುಡಿದನು ಸದಸ್ಯ: ಜನಶಂಕರಿಯ ಯುಗದಲ್ಲಿ ಜನಿಸಿರುವ ವಿಷವ ನುಂಗಿ
ನಾವ್ ನೀಲಕಂಠರಿರೆ ಹೊರಹೊಮ್ಮುತೈತರುವದಮೃತ, ಭಯ-ಭೀತಿ ಹಿಂಗಿ.
ನುಡಿದ ಸಮತಾವಾದಿ : ವಿಷಮತೆಯ ಕಿತ್ತೊಗೆದು ಸರ್ವರು ಸಮಾನರೆಂದು
ಧ್ವಜವ ನಿಲ್ಲಿಸಿದೊಡನೆ ಗರ್ಭಮಂದಿರದಲ್ಲಿ ದೇವಿ ಮೊಗ ತೋರ್ವಳಂದು.
ಇಳೆಯ ಪಾದಾಕ್ರಾಂತವಾಗಿಸಲು ಪಣ ತೊಟ್ಟ ಅಸುರ ಕೈಯೂರಿ ನಿಂತು
ಸೋಲನೊಪ್ಪಿದ. ಬಾಳ ಹೊಂಚೆ ಭಿನ್ನವು. ಅವನ ಬಯಕೆ ಕಡೆಗಾಣ್ವುದೆಂತು?
ಇಂತೀ ಸಮಾಜವನು ವಿಧವಿಧದಿ ಹದಗೊಳಿಸೆ, ಬಾಳ ಸುಭಗತೆಯ ಬೆಳಗಿ,
ಹವಣಿಸಿದರೀ ಸಾಹಸಿಗಳು ತಮ್ಮೊಲವಿನುಜ್ಜೀವನದ ಪಥದಿ ಪಳಗಿ.
ಸತ್ಯಾಗ್ರಹಿಯು ತಾನು ಋತದ ದಾರಿಯ ತುಳಿದು ಕಹಿಯೆ ಸಿಹಿಯಿರುವದೆಂದ.
ಕರ್ಮಯೋಗಿಯು ನುಡಿದ: ಕಣ್ಣೆದುರು ಬಂದುದಕೆ ಸಜ್ಜುಗೊಳುತಿಹುದೆ ಚೆಂದ.
ಕರ್ಮಕುಶಲರು ತಾವು ತಮತಮಗೆ ತಿಳಿದಂತೆ ಬಾಳನಳೆದಿರುವರಿಂತು ;
ಸೀಳುದಾರಿಯ ನಡೆದು ರಹದಾರಿಯನು ಕೂಡಿ ದೇಗುಲಕೆ ಬಂದು ನಿಂತು.
ಹಿರಿಯರೊರೆದಿಹ ಕರ್ಮಕಾಂಡದಂತೆಯೆ ನಮ್ಮ ಬಾಳನಳವಡಿಸಬೇಕು :-
ಇಂತಾ ಸನಾತನಿ. ವಿನೂತನಿಯು ತಾನೆಂದ: ಈ ಹಳೆಯ ರಗಳೆ ಸಾಕು;
ಧರ್ಮ-ಮತವಲ್ಲ ಬುಡಮೇಲಾಗಿರಲು ಮುಂದೆ ಬೇರೆ ಯುಗದುದಯವಾಗಿ
ವ್ಯಕ್ತಿ ಕಂಗೊಳಿಸುವನು ವಿಶ್ವಮಂದಿರಕಿಟ್ಟ ಹಿರಿಯ ಹೊಂಗಳಸವಾಗಿ.
ಆದಿಶೇಷನ ಮೆಯ್ಯೆ ಜಗ; ಹೆಡೆಗಳೇ ವ್ಯಕ್ತಿ; ಹೆಡೆಯಲಿಹ ರತ್ನ,-ಬುದ್ದಿ;
ನುಡಿದನು ಸುಧಾರಕನು : ಬುದ್ದಿ ವೈಭವವೊಂದೆ ನಾವ್ ಪಡೆಯಲಿರುವ ಸಿದ್ಧಿ.
ಮಿಂಚಿನಾರತಿ ಎತ್ತಿ ವಿಜ್ಞಾನಿಯೆಂದ: ಈ ಪಂಚಭೂತಗಳ ಮಣಿಸಿ,
ಅಂಕಿತದಲ್ಲಿಟ್ಟು ಸುಖದಿಂಗಿತವ ಬೀರುವೆನು ಮನುಕುಲವನೆಲ್ಲ ತಣಿಸಿ.
ಇಂತು ಜ್ಞಾನೋಪಾಸನೆಯಲಿ ಕಳೆಗೊಂಡವರು ತಾವ್ ಕಂಡ ಪ್ರಭೆಗೆ ಬಾಗಿ
ಅದರ ಕರುಣೆಯ ಕಿರಣದಲ್ಲಿ ಬಾಳನು ಕಾಣ್ವುದೆಂದಿಹರು ಗುಡಿಗೆ ಹೋಗಿ.
ರಸಿಕನೆಂದನು : ಪ್ರೀತಿ-ನೀತಿ ಸಂಗಮಿಸುತ್ತ ಸೆಳೆಯುವವು ಹಿಗ್ಗಿನೆಡೆಗೆ.
ಚೆಲುವಿನಾರಾಧಕನು ನುಡಿದ : ಚೆಲುವೇ ನಮ್ಮ ದೈವತವು ಕಟ್ಟ ಕಡೆಗೆ.
ಕವಿಯೆಂದ: ಬಣ್ಣಬಣ್ಣಗಳಾಟವಾಡುತ್ತ ರಾಗಭೋಗದಲಿ ಸಿಲುಕಿ
ಧರೆಯ ವಿವಿಧತೆಯನ್ನು ಕಂಡ ಮೇಲಿರಬೇಕು ಶುಭ್ರ ಜ್ಯೋತಿಯನು ನಿಲುಕಿ.
ಆಟಗಾರನು ನುಡಿದ : ಬಾಳೆಂದರೇ ಲೀಲೆ; ಧಾರುಣಿಯೊಳಾಟವಾಡಿ
ರಂಗಸಾಲೆಯ ಹಿಂದಿನಿಂದ ಕರೆ ಬಂದಾಗ ಸರಿಯುವೆನು ಸಮಯ ನೋಡಿ.
ಪ್ರಮಥನೆಂದನು: ಬರುವ ಯುಗದ ನಾಯಕನಾಗಿ ಬಾಳನಾಹ್ವಾನಿಸುವೆನು;
ಅದರ ಬರವನು ಕಾಯುತಗ್ನಿ ಕುಂಡದ ಮೇಲೆ ನಿಂತಲ್ಲಿ ಧೇನಿಸುವೆನು.
ಸಾಕ್ಷಿತತ್ಪರ ತನ್ನ ಬಾಳನ್ನೆ ಹೋಮಿಸಿದ; ವಿಶ್ವಚೈತನ್ಯ ಆಡಿ
ಪ್ರಕಟವಾಗುವ ಬಗೆಯ ಕಾಣ್ವುದೊಂದೇ ಮುಕ್ತಿಯೆಂದದಕೆ ಮನವ ನೀಡಿ.
ಕಾವ್ಯಗುರು ತಾನಿಲ್ಲಿ ಪಾರ್ಥಿವರ ಮರ್ತ್ಯತೆಗೆ ತೊಳಲಾಡಿ ಗಾಸಿಗೊಂಡು
ಧರೆಯನ್ನೆ ದಿವ್ಯ ಲೋಕವನಾಗಿಸುವದೆಂದು ಬಗೆದಿದ್ದ ಸ್ಫೂರ್ತಿಗೊಂಡು.
ಯೋಗಜೀವಿಯುದಾರಚರಿತನೊಡನುಡಿದಿದ್ದ : ತಪ ಕೊನೆವ ಕಾಲ ಬರಲು
ತಾಯಿ ಕಾಣುವಳೆಮಗೆ; ಆ ನಸುಕು ಹರಿವನಕ ಸಂಗೀತಿಸಿರಲಿ ಕೊರಲು
ಇಂತು ರಸ-ಭಾವ-ಚಿಂತನದ ಪಂಥವ ಹಿಡಿದು ಮುಖ್ಯರುದ್ಘೋಷಿಸಿದರು;
ದೇಗುಲದ ದಾರಿಯಲ್ಲಿ ಬೆಳಕುಹೂಳೆಯನು ಹರಿಸಿ ಜನಮನವ ತೋಷಿಸಿದರು.
ಆನುಭಾವಿಯಂದಿದ್ದ: ಲೋಕದೀ ಬಣ್ಣಗಳು ಬರಿ ನೀರು, ಮಂಜಿನಾಟ;
ಕುಂಡಲಿನಿ ಹೆಡೆಯತ್ತಲರಳಿ ನಿಲ್ಲುವ ಕಮಲದಾ ನೋಟವೊಂದೆ ನೋಟ.
ಕನಸಿಗನು ತನ್ನಿಂದ್ರದೀವಿಗೆಯು ಕಳೆದಿರಲು, ನಿಂತಿದ್ದ ಮನದಿ ನೊಂದು;
ಬೇರೆ ಲೋಕದ ಬಿದ್ದಣಕೆ ಕರೆವ ದಿವ್ಯ ಪ್ರಭೆ ಮತ್ತೆಂದು ಬರುವದೆಂದು.
ದುಃಖಿಯೆಂದನು: ದುಃಖ-ಸುಖವ ಮೀರಿದ ಪಂಥವೇ ಕೊನೆಗೆ ಗೆಲುವ ಪಂಥ.
ನಿರ್ಲಿಪ್ತನೆಂದ: ಹಿಗ್ಗಹುದು ಓದಿನ ತಿರುಳು; ಸೃಷ್ಟಿಯೆ ಪ್ರಮಾಣಗ್ರಂಥ.
ಭಕ್ತನಾಲಾಪಿಸಿದ : ಭೌಮದಾರಾಧನೆಯೆ ಜೀವಿತದ ಸೂತ್ರವೆಂದು;
ಭೌಮವನ್ನರಿತು ಬೆರೆತೊಂದಾಗುವದಕೆಂದೆ ಮಾನವನ ಪಾತ್ರವೆಂದು.
ಅನುಭಾವ-ರಾಜಯೋಗದ ಪ್ರಜ್ಞೆಯಿರಲು ಲೋಕಾಲೋಕಗಳನು ಕುರಿತು
ಚಿಂತಿಸಿದರಿವರು ತಾವ್ ತಮತಮಗೆ ಹೊಳೆದಂತ ಬಾಳಿನೊಳ ತಿರುಳನರಿತು.
ಉರಿವ ಪಾಂಡಿತ್ಯದುಸುಬಿನ ಬಯಲಿನಲಿ ತಿರುಗಿ ಬಿನ್ನಣದ ನಂದನವನು
ಶೋಧಿಸಿದ ರೀತಿಯನು ವಿವರಿಸಿದನಾ ಜ್ಞಾನಿ ನೆನೆಸುತ್ತ ಚಿದ್ಘನವನು.
ಬರಿಯ ಪಾಮರನಾಗಿ ಜನಿಸಿ ಪಂಡಿತನಾಗಿ ನೋವನುರವಣಿಸಿಕೊಂಡು,
ದುರುಳರಾ ಮರುಳ್ಗುಣಿತದಿಂದ ವಿಹ್ವಲನಾಗಿ ನೂರು ಸಲ ಬವಣಿಗೊಂಡು,-
ಬಾಳೆಲ್ಲ ಹಾಳೆಂದು ವಿಭ್ರಮಿಸಿದಾಳ್ವಾರ ಕೊನೆಗೊಮ್ಮೆ ಶರಣು ಹೋಗಿ,
ಗುರುವಿನಡಿಯನು ಕಂಡು ರಾಜಿಸಿದ ದೇಗುಲದ ದೇವಿಗಿಹ ಮುಕುಟವಾಗಿ.
ಮುಕ್ತಜೀವಿಗಳಿವರು, ಬಾಳ್ಮೊದಲ ಬಲ್ಲವರು, ಲೋಕಪಾಲಕರು ತಾವು.
ಅವರ ಪದಪದ್ಮಗಳ ನಂಬಿರುವ ಮಾನವನ ಮುಟ್ಟಬಹುದೆಂತು ನೋವು?
ಗರ್ಭಗುಡಿಯಲ್ಲಿಹುದು ದಿವ್ಯ ತೇಜಃಪಿಂಡ; ಅಮೃತಪ್ರಭೆಗಿರುವ ಹುಟ್ಟು;
ಎಲ್ಲ ಜೀವಿತದೆಲ್ಲ ಸಾರಸಂಗ್ರಹದಲ್ಲಿ ಶಕ್ತಿ-ಪ್ರತಿಭೆಗಳ ಗುಟ್ಟು.
ತುಂಬುಜೀವಿಗಳಿವರು ಸರ್ವಸ್ವವನ್ನು ನೀಡುತಮೃತಸನ್ನಿಧಿಯು ಕೂಡಿ,
ತುಂಬಿವಿಂಡಂತಲೆಯುತಿಹರು ಮೂಜಗದಿ ತುಂಬುರಗೀತಗಳನು ಹಾಡಿ.
ಇವರ ಪಙ್ತಿಯಲಿ ನಿಲ್ಲಿಸುವಂಥ ಬಿನ್ನಾಣವಿನ್ನೆಂದಿಗೆನ್ನ ಸೊತ್ತು?
ಆ ಸುಪ್ರಭಾತ ಸುಳಿವನಕ ಘನರಡಿದಾವರೆಯ ಹಿರಿಮೆಯೊಂದೆ ಗೊತ್ತು.
ಸಂಸಾರಸಾರೋದಯದಿ ಬಾಳಿ ಸೊಗದಿಂದ ಮನಕೆ ಮಂಗಲವ ತಂದು,
ಪ್ರೀತಿ-ವಾತ್ಸಲ್ಯಗಳು ಸಂಗಮಿಸುತಿರಲೆನ್ನ ರಸಗಂಗೆಗಿರಲು ದುಂದು;
ಪ್ರಾಂತ-ದೇಶ-ವಿದೇಶ-ಖಂಡ-ಧಾರುಣಿಗೆಲ್ಲಖಂಡ ಕಲ್ಯಾಣವೆಂದು
ಕರ್ಮಕ್ಷೇತ್ರದಿ ನನ್ನ ದೇಹವನು ಸವೆಸಿರಲು, ಬೆಳೆಯುತಿರೆ ಜೀವಬಿಂದು;
ಜ್ಞಾನಸಿದ್ಧಿಯ ಹೊಂದಿ, ಸೃಷ್ಟಿಯದ್ಭುತಗಳನ್ನು, ಲೋಗರಾಚಾರಗಳನು
ಕೈನೆಲ್ಲಿಯಾಗಿಸುತ, ಜೀವಾತ್ಮಗನುರೂಪವಾಗಿಸಿ ವಿಚಾರಗಳನು;
ಚೆಲುವಿನರ್ಚನೆ, ಹೃದಯಸಂಪತ್ತು, ಭಕ್ತಿಯಿಂದೆಲ್ಲ ಕೊರತೆಯನು ತುಂಬಿ,
ಬಾಳುತಿರೆ ಶರಣೆಂದು ಶರಣರೆತ್ತಿರುವಭಯಕರದ ಕರುಣೆಯನು ನಂಬಿ:-
ಹಣೆಗಣ್ಣು ಎವೆಯೆತ್ತಿ ವಿವಿಧ ವಿಸ್ತಾರದಾ ವಿಶ್ವಗಳ ನೋಡಬಹುದು;
ಶಿರವು ಸಾಸಿರದಳದ ಕಮಲವಾಗರಳುತ್ತ ಜ್ಞಾನರವಿ ಮೂಡಬಹುದು.
ಪ್ರಕೃತಿ ದೇವನಿಗಿತ್ತ ನಲ್ಗಾಣಿಕೆಯ ರತ್ನ ಶಾರದಾ ಸುಳಿವು ಹಿಡಿದು
ಶಬ್ದಸೃಷ್ಟಿಯಲೊಂದು ಹಾರವನು ಪವಣಿಸಿದೆ ಗುರುವಿಗೆನೆ ತೊದಲು ನುಡಿದು.
ಕಾಣದೊಡೆಯನಿಗೆಂದು ಕನಸುಮನಸಿನಲಿರದೆ ಕಟ್ಟಿರುವ ಕವನಗಳನು-
ನೊಂದು ಸೋತಿಹ ಜೀವ ತನ್ನ ದೇವಗೆ ಮೀಸಲೆಂದಿಟ್ಟ ಸುಮನಗಳನು-
ಸ್ವೀಕರಿಸಿ ಕೈ ಹಿಡಿದೆ, ಹೃದಯವೇದಿಕೆಯಲ್ಲಿ ಕುಳಿತಿರಲು ಜೀವಕನ್ನೆ
ಅಂಜುತಳುಕುತ ನಾಚುತೆದುರು ನೋಡುತ ನಲ್ಲನೈತರುವ ದಾರಿಯನ್ನೆ!
ಉಷೆಯಂತೆ ರೋಮಹರ್ಷಿತನಾದೆ ನೀ ಬಂದು ನಿಲ್ಲಲನಿರುದ್ಧನಂತೆ,
ಯಾವ ಯೋಗಾಯೋಗ ನಿನ್ನ ನೊದಗಿಸಿತೆಂದು ಬೆಸಗೊಳುತ ಮುಗ್ಧನಂತೆ.
ನನ್ನ ಪುಣ್ಯವೊ ನಿನ್ನ ಕಾರುಣ್ಯವೋ ತಿಳಿಯೆ. ಅಹುದು ಕಾರುಣ್ಯ, ಬಲ್ಲೆ!
ಇಲ್ಲದಿರೆ ನಿನ್ನ ಗುರುತಿಸಲಳವೆ? ನಿನ್ನನ್ನು ಕರೆಯುವುದು ನನ್ನ ಸೊಲ್ಲೆ?
ನಾಳನಾಳದಿ ನೆಲಿಸುತಂತರಂಗವ ಚಲಿಸು, ಗೆಲಿಸೆನ್ನ, ಪುಣ್ಯಪುರುಷ!
ನಿನ್ನಾಣತಿಯೆ ನನ್ನ ಗುರಿ; ದರ್ಶನವೆ ಸುಖವು; ನಿನ್ನ ಸನ್ನಿಧಿಯೆ ಹರುಷ.
ನಿನ್ನ ಪಂಚವಿರಾಟರೂಪವನು ತಿಳಿವಂಥ ಮಾಟ ನೋಟಕ್ಕೆ ಬರಲಿ;
ಕಿವಿಗೆ ದಿವ್ಯಾಮೋದಗಳ ನಾದ,-ಸಾರಂಗಿ, ವೀಣಾ, ಮೃದಂಗ, ಮುರಲಿ.
*****








