ಅಳಬೇಡ ಅಳಬೇಡ ನನ್ನಾತ್ಮವೇ-
ನೀನತ್ತರೇನು ಫಲ
ವ್ಯರ್‍ಥವೈ ನಿನ್ನ ಛಲ
ಅಳುವುದೇ ನಿನ್ನ ಬಲವಾಯಿತೇಕೋ
ಅಳಬೇಡ ಅಳಬೇಡ ನನ್ನಾತ್ಮವೇ.
ಬಗೆಬಗೆಯ ತಿನಿಸುಗಳ ತಿನ್ನು ನಾಲಗೆ ತಣಿಯೆ,
ಅನ್ನ ಪಾನಗಳುದರ ತುಂಬುವಷ್ಟಿವೆ ಕೋ,
ನೆರೆಯವರು ಕರುಬುವಂತುಡಿಗೆಕೊಡಿಗೆಗಳಿವೆ ಕೊ
ನಿನ್ನ ಸತಿಸುತರೆಲ್ಲ ನಕ್ಕುನಲಿವಂತೆ.
ದಿನದಂತೆ ದಿನವಿಹುದು ಇರುಳಂತೆ ಇರುಳಹುದು
ಇಂದಿನಂದದಿ ನಾಳೆ ಎಂದಿನ೦ತಯ್ಯ
ಸೃಷ್ಟಿಯಿಂತೀ ತೆರದಿ ನಿನಗಾಗಿ ಸಮತೆಯಿಂ
ನಡೆಯುತಿರಲೇಕೆ ನೀ ರೋದಿಸುವೆಯಿಂತು?
ನಿನ್ನೆಲ್ಲ ಕಾಮಗಳ ಕೆರಳಿಸಲು ತಣಿಸಲೂ
ಪರಕೀಯ ವಸ್ತುಚಯವಿಹುವೆಟುಕುವಂತೆ
ಚಲನ ಚಿತ್ರದ ತಾರೆ ತಳುಕಿನೊಳು ನಗುತಿಹಳು
ಕೋವಿದರು ಹಾಡುತಿಹರಯ್ಯ ನಿನಗೆಂದೆ.
ನಿನ್ನ ಮತಿಯುದ್ದೀಪ್ತಿಗವರಿವರ ಕೃತಿಗಳಿಕೊ
ನಿನ್ನನನುರಂಜಿಸಲು ನಿನ್ನ ಗೆಯ್ಮೆಯಿವೆ,
ನಿನ್ನ ನಗೆಯುಕ್ಕಿಸಲು ನಿನ್ನ ಜನತೆಯೆ ಇದಿಕೊ
ನಿನ್ನಿಚ್ಛೆಗಳ ಸಲಿಸಲಲ್ಪಕಾಮರಿಕೊ,
ಜಗದೆಲ್ಲ ಕರ‍್ಮಗಳ ಫಲವಿನಿಸು ನಿನಗಾಗೆ
ಹಣ್ಣಿನೊಳು ಹುಳುವಂತೆ ಹದುಳದಿಂದಿರದೆ
ನನ್ನಂತರಾತ್ಮವೇ ರುಜೆಯಡಸಿದೆಳೆಯನೊಲು
ಆವಗಂ ಕುಸುಕುಸನೆ ರೋದಿಸುವೆಯೇಕೆ?
“ಹೀನದೀನರು ಎಂದು ಹಮ್ಮಿಲ್ಲದವರೆಂದು
ಹಿಂದುಮುಂದಿಲ್ಲದಿಹ ಕುಲಹೀನರೆಂದು
ಸೋತವರು ಜೀತಕ್ಕೆ ತಕ್ಕರೆ”ನ್ನುವ ನಿಂದೆ
ನಿನ್ನ ನುಳಿದನ್ಯರಿಗೊ-ನಿನಗಲ್ಲ. ಜಾಣ!
ಆಳುವರು ಆಳಲಿ ಬಾಳುವರು ಬಾಳಲಿ
ಬೇಳ್ವವರು ಬಾಳುವೆಯ ಬೇಳುತ್ತಲಿರಲಿ
ಪರರಸೂಯಾಗ್ನಿಯೊಳು, ನಿನಗೆ ಸೆಕೆ ತಟ್ಟದೊಲು
ಸ್ವಾರ್‍ಥವನು ಹೊದ್ದಿರಿದೊ-ಅಳಬೇಡವಯ್ಯ.
ಏನು ಗೈಯಲಿ ನಾನು, ಏ ಮದ್ದನುಣಿಸಲ
ಆವ ರುಜೆಯಡಸಿಹುದೊ ಕಾಣೆನಮ್ಮಯ್ಯ
“ಅಮ್ಮ ನಾಡೇ” ಎಂದು “ಅಮ್ಮ ನಾಡೇ” ಎಂದು
ಸತತವಳುವೆನ್ನಾತ್ಮ ಹಗುರಪ್ಪುದೆಂದೋ?
ಅಳಬೇಡ ನನ್ನಿನಿಯ, ಅಳಬೇಡ ನನ್ನೊಲವೆ
ಅಳಬೇಡವೋ ಹಗೆಯೆ, ನನ್ನೊಡಲ ದಗೆಯೇ
ನೀನಳಿಯಬಾರದೇ ಎಂದು ಶಪಿಸುವೆ ನಾನು
ಆಳಬೇಡವೆನ್ನಯ್ಯ ನನ್ನೊಳಗಿನೊಳಗೇ.
*****








