[ವಂಗ ಗೀತಾಂಜಲಿಯ ೭ನೆಯ ಪದ್ಯವಾದ “ತುಮಿ ನಬ ನಬ ರೂಪೆ ಎಶೊ ಪ್ರಾನೇ” ಎಂಬ ಹಾಡಿನ ಕನ್ನಡ ರೂಪವಿದು.]
ನವ ನವ ರೂಪದಿ ಬಾರೈ ಪ್ರಾಣದಲಿ!
ವಿಧ ವಿಧ ವರ್ಣದಿ ಗಂಧದಿ ಗಾನದಲಿ! ||ಪಲ್ಲ||
ಬಾರೈ ಅಂಗದಿ ಪುಲಕದಿ ಸ್ಪರ್ಶಿಸುತ
ಬಾರೈ ಚಿತ್ತದಿ ಅಮೃತವ ವರ್ಷಿಸುತ
ಬಾರೈ ನಯನದಿ ಮುಗ್ಧ ಮುದದಲಿ
ತೋರೈ ತೆರೆತೆರೆ ಹೃದಯ-ಹ್ರದದಲಿ!
ಬಾರೈ ಸುಂದರ ಸ್ನಿಗ್ಧ ಪ್ರಶಾಂತಾ
ಬಾರೈ ನಿರ್ಮಲ ಉಜ್ಜ್ವಲ ಕಾಂತಾ
ಬಾರೈ ಸುಖದಲಿ ದುಃಖದಿ ಮರ್ಮದಲಿ
ತೋರೈ ನಿತ್ಯದ ಜೀವನಕರ್ಮದಲಿ!
ಚಿತ್ರಚಿತ್ರವಹ ವಿವಿಧ ವಿಧಾನದಲಿ
ಕೃತ್ಯಕೃತ್ಯಗಳ ಆ ಅವಸಾನದಲಿ
ನವ ನವ ರೂಪದಿ ಬಾರೈ ಪ್ರಾಣದಲಿ
ವಿಧ ವಿಧ ವರ್ಣದಿ ಗಂಧದಿ ಗಾನದಲಿ!
*****





