ಲೆಫ್ಟ್ ರೈಟ್ ಲೆಫ್ಟ್ ರೈಟ್ ಎನು ಗೆಣೆಯಾ,
ಕಾಳೆಗಕ್ಕೆ ಮನ ಮಾಡಿ ಮರೆ ಮನೆಯಾ!
ರಮು ರಮು ರಮು ಝುಣ ರಮಢೋಲು
ಕೈ ಬೀಸ್ತಾ ಪದ ಹೇಳ್ತಾ ಇಡು ಕಾಲು
ಲೋಕದೊಳಗೆ ಏನೈತೊ ಇದಕು ಮೇಲು-(ತಮ್ಮ)
ದೊರ ಇಚ್ಛೆ ಶಿವನಿಚ್ಛೆ ಎನುತ ಬಾಳು.
ಲೆಫ್ಟ್ ರೈಟ್…
ಮನೆಯೊಳಗೆ ಏನೈತೊ ಬರಿಗೋಳು
ಉಣ್ಣೊದಕ್ಕೆ ಇಲ್ಲವಲ್ಲೋ ಹಿಡಿ ಕೂಳು
ಕುಯ್ಯೊ ಮೊರೆಯೊ ಅಳುತಾರೆ ಮಡದಿ ಮಕ್ಕಳು
ನೋಡಿ ಅಯ್ಯೊ ಅಂತಾರೆ ನೆರೆಯೊಕ್ಕಲು.
ಲೆಫ್ಟ್ ರೈಟ್…
ಇಕ್ಕೊ ಇಕ್ಕೊ ಹೆಂಗೈತೆ ಈ ದ್ರಿಸ್ಸು
ಇಕ್ಕಿದರೇನೆ ಉಕ್ತೈತೆ ಹುಮ್ಮಸ್ಸು
ಕಂಡ ಜನಕಾಗುತೈತೆ ಎದೆಯಳುಕು-(ತಮ್ಮ )
ನಮ್ಮೂರ್ನಾಗೆ ಯಾರ್ಗೈತೆ ಈ ತಳುಕು.
ಲೆಫ್ಟ್ ರೈಟ್…
ಬೈಗು ಬೆಳಗು ಕವಾಯಿತ್ತು ಎಡ ಬಲ
ದಳವಾಯಿ ಅಂತಾನೆ ಭಲ ಭಲ
ಕೈಕಾಲ್ಗೋಳ ಬೀಸಾಡ್ತಾನೆ ನಮಗೆ ಸಂಬಳ
ಎಲ್ಲಾರಂಜೋ ಸರ್ಕಾರಾನೆ ನಮಗೆ ಬೆಂಬಲ.
ಲೆಫ್ಟ್ ರೈಟ್…
ನೇಗಿಲ ಮೊನೆಯಾಗೇನೈತೆ ಬರೀ ಮಣ್ಣು
ಭರ್ಜಿಕೊನೆಯಾಗ್ಹೊರವಾಗ್ಯತೆ ಹೊನ್ನಿನ್ಹಣ್ಣು
ಹಂಗೆ ಹಿಂಗೆ ಕುಲುಕಿಸ್ತಿದ್ರೆ ಗಳಿಗ್ಗೊಂದ್ಸಲ
ಮಂತ್ರಿಸ್ದಾಗೆ ಹರೀತೈಕೆ ಅಪ್ಪನ್ಸಾಲ.
ಲೆಫ್ಟ್ ರೈಟ್…
ಹೊತ್ತಿಗ್ಹೊತ್ತಿಗನ್ನ ವುಂಡು ಕಸರತ್ ಮಾಡಿ
ಕಂಡಾಗ್ಲೆಲ್ಲಾ ನಾಯಕರಿಗೊಂದು ಸಲಾಂ ಹೊಡಿ
ಎದುರ್ಗಾಡ್ದೆ ಬದಲ್ಮಾಡ್ದೆ ಹೇಳಿದ್ ಕೇಳು
ಇಲ್ಲದಿದ್ದರೆ ಆಗತೈತೆ ನಿನಗೆ ಜೈಲು.
ಲೆಫ್ಟ್ ರೈಟ್ …
ಹೊಡಿ ಎಂದರೆ ಹೊಡಿಯಬೇಕು ನಿಮ್ಮ ನಾಯಕ
ಹಿಡಿ ಎಂದರೆ ಹಿಡಿಯಬೇಕು ನಿಮ್ಮ ನಾಯಕ
ಆರ್ಡರ್ ಮಾಡ್ವಾಗ್ ನೋಡಬೇಕು ಅವನ್ ಸೆಡುಕ
ಉಹು ಎಂದರೆ ತಾಳ್ಬೈದ ಅವನ್ ಸಿಡುಕ,
ಲೆಫ್ಟ್ ರೈಟ್ …
ರಮುಝಣ ರಮುಝಣ ರಮಢೋಲು
ಕೈ ಬೀಸ್ತಾ ಪದ ಹೇಳ್ತಾ ಇಡು ಕಾಲು
ಲೋಕದೊಳಗೆ ಏನೈತೋ ಇದಕು ಮೇಲು
ದೊರೆ ಇಚ್ಛೆ ಶಿವನಿಚ್ಛೆ ಎನುತ ಬಾಳು.
ಲೆಫ್ಟ್ ರೈಟ್ ಲೆಫ್ಟ್ ರೈಟ್ ಎನು ಗೆಣೆಯಾ
ಕಾಳೆಗಕ್ಕೆ ಮನ ಮಾಡಿ ಮರೆ ಮನೆಯಾ!
*****








