[ರವೀಂದ್ರ ಗುರುದೇವನ “ಅಂತರ ಮಮ ಬಿಕಸಿತ ಕರ” ಎಂಬ ಗೀತದ ಅನುವಾದ.]
ಅಂತರಂಗವನು ಅರಳಿಸು ಹರಿಯೇ,
ಅಂತಃಕರಣದ ಒಳ-ದೊರೆಯೇ!
ನಿರ್ಮಲಗೊಳಿಸೈ, ಉಜ್ಜ್ವಲಗೊಳಿಸೈ!
ಸುಂದರೆಗೊಳಿಸೈ ಶ್ರೀ ಹರಿಯೇ!
ಎಚ್ಚರವಿರಿಸೈ, ಕೆಲಸವನಿರಿಸೈ!
ಅಂಜಿಕೆಯೆಂಬುದ ಕತ್ತರಿಸೈ!
ಅಲಸಿಕೆ ಕಳೆಯೈ ಸಂಶಯ ಕಳೆಯೈ
ಅಂಗದಿ ಮಂಗಲ ಬಿತ್ತರಿಸೈ!
ಸಕಲರೊಡನೆ ನನ್ನನು ಜೊತೆಗೊಳಿಸೈ!
‘ಜೊತೆಯೇ ಮುಕುತಿಯು’ ಇದ ಕಲಿಸೈ!
ಸಕಲ ಕರ್ಮದಲಿ ನೀ ಸಂಚರಿಸೈ!
ಶಾಂತ ಸಮರಸದಿ ನೀ ನಿಲಿಸೈ!
ಚರಣ ಪದ್ಮನನು ಚಿತ್ತದೊಳಿರಿಸೈ
ಆತ್ಮದಿ ಆನಂದವ ಸುರಿಸೈ!
ಆಹಾ ಓಹೋ ಆ ಆನಂದದ
ಮಹಾಪ್ರವಾಹವ ನೀ ಹರಿಸೈ!
*****





