Home / ಲೇಖನ / ಪುಸ್ತಕ / ಕವಿ: ಕಾವ್ಯ

ಕವಿ: ಕಾವ್ಯ

ಗುಲಿಸ್ತಾನ್ ಕತೆಗಳು – ಪುಸ್ತಕದ ಕುರಿತು
೧
ಗುಲಿಸ್ಥಾನ್ ಪರ್ಷಿಯನ್ ಸಾಹಿತ್ಯದಲ್ಲಿ ಪ್ರಸಿದ್ಧವಾದ ಗ್ರಂಥ. ಇದನ್ನು ಬರೆದ ಕವಿ ಷೇಕ್ ಮಸ್ಲಹುದ್ದೀನ್ ಸಾದಿ. ಇವನ ಕಾಲ ಕ್ರಿಸ್ತಶಕ ಸುಮಾರು ೧೧೮೪ರಿಂದ ೧೨೯೨ರ ವರೆಗೆ. ಅಷ್ಟು ವರ್ಷ ಬದುಕಿ ಬಾಳಿದ ಎಂದು ಹೇಳುತ್ತಾರೆ. ಇವನು ಹುಟ್ಟಿದ ಊರು ದಕ್ಷಿಣ ಪರ್ಷಿಯಾದ ಮುಖ್ಯಸ್ಥಳವಾಗಿದ್ದ ಷೀರಾಸ್. ಪ್ರಸಿದ್ಧರಾದ ಕವಿಗಳ ಜನ್ಮಸ್ಥಳವೆಂದು ಈ ಪಟ್ಟಣಕ್ಕೆ ಪರ್ಷಿಯನ್ ಸಾಹಿತ್ಯದಲ್ಲಿ ಒಂದು ಪ್ರಾಶಸ್ತ್ಯವಿದೆ. ಹಾಫಿಸ್ ಕವಿಯೂ ಈ ಊರಿನವನೆ.
ಸಾದಿಯ ತಂದೆಗೆ ಷೀರಾಸಿನ ದೊರೆಗಳ ಬಳಿಯಲ್ಲಿ ಕೆಲಸವಿತ್ತು. ಸಾದಿ ಇನ್ನೂ ಚಿಕ್ಕವನಾಗಿರುವಾಗಲೇ ತಂದೆ ತೀರಿಕೊಳ್ಳಲು ದೊರೆಯಾದ ಸಾದ್-ಬಿನ್-ಜಂಗಿ ಇವನನ್ನು ಕೈ ಹಿಡಿದು ಮುಂದಕ್ಕೆ ತಂದನೆಂದು ಗೊತ್ತಾಗುತ್ತದೆ. ದೊರೆಯ ನೆನಪಿಗಾಗಿಯೇ, ಕವಿ ಸಾದಿ ಎಂಬ ಹೆಸರನ್ನು ಇಟ್ಟುಕೊಂಡುದು ; ಮೊದಲು ಇವನಿಗೆ ಮಸ್ಲಹುದ್ದೀನ್ ಎಂದು ನಾಮಕರಣವಾಗಿತ್ತು.
ಸಾದಿಯ ಹೆಚ್ಚಿನ ವಿದ್ಯಾಭ್ಯಾಸವೆಲ್ಲ ಬಾಗ್ದಾದಿನ ನಿಜಾಮಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆಯಿತು. ಅವನು ವಿದ್ಯಾಲಯದ ಆವರಣದ ಹೊರಗಿದ್ದ ಹಿರಿಯ ಸಾಹಿತಿಗಳನ್ನೂ ಅನುಸರಿಸಿ ಅನೇಕ ವಿಷಯಗಳನ್ನು ಸಂಗ್ರಹಿಸಿ, ಅರಬ್ಬಿ ಪಾರಸಿ ಭಾಷೆಗಳಲ್ಲಿ ವಿಶೇಷ ಪಾಂಡಿತ್ಯ ಸಂಪಾದಿಸಿ ಪಾರಸಿ ಸಂಸ್ಕೃತಿಯ ವೈಶಿಷ್ಟವಾದ ಸೂಫಿ ಮತವನ್ನು ಚೆನ್ನಾಗಿ ಮನನ ಮಾಡಿಕೊಂಡು ವಿದ್ಯಾಭ್ಯಾಸದ ಕಾಲದಲ್ಲಿಯೇ ಪರ್ಷಿಯದ ಪಶ್ಚಿಮದ ಗಡಿಯಿಂದ ಪೂರ್ವದ ಗಡಿಯವರೆಗೆ ಆಗಾಗ ಸಂಚಾರಮಾಡಿ ಒಳ್ಳೆಯ ಬರಹಗಾರನೆಂದೂ ವಾಗ್ಮಿಯೆಂದೂ ಹೆಸರು ಗಳಿಸಿದನು.
ಸಾದಿಯ ವಿದ್ಯಾಭ್ಯಾಸದ ಕಾಲ ಮುಗಿಯುವ ವೇಳೆಗೂ, ಪರ್ಷಿಯದ ಮೇಲೆ ಟಾರ್ಟರರ ದಾಳಿಗಳು ಪ್ರಾರಂಭವಾಗುವ ವೇಳೆಗೂ ಸರಿಯಾಯಿತು. ಈ ಗೊಂದಲವನ್ನು ನೋಡಿ ಅವನು ಬೇರೆ ಬೇರೆ ದೇಶಗಳಲ್ಲಿ ತಿರುಗಿಕೊಂಡಿರುವುದೇ ಮೇಲೆಂದು ಹೊರಟುಬಿಟ್ಟನು. ಹಿಂದೂಸ್ಥಾನದಲ್ಲಿ ಗುಜರಾತ್ ದೆಹಲಿಗಳವರೆಗೂ ಬಂದಿದ್ದು ಪಶ್ಚಿಮದಲ್ಲಿ ಈಜಿಪ್ಟ್ ಅಬಿಸೀನಿಯಾಗಳವರೆಗೂ ಸಂಚಾರಮಾಡಿ ಅಲ್ಲಿ ಸ್ವಲ್ಪ ಕಾಲ ಇಲ್ಲಿ ಸ್ವಲ್ಪ ಕಾಲ ಇದ್ದು ಷೀರಾಸಿಗೆ ಬಂದು ನೆಲಸುವವೇಳೆಗೆ ಇವನಿಗೆ ೭೦ ವರುಷ ವಯಸ್ಸಾಗಿತ್ತು. ಆಗ ಸಾದ್ – ಬಿನ್ ಜಂಗಿಯ ಮೊಮ್ಮಗನಾದ ಅಬೂಬಕರ್ – ಬಿನ್ – ಸಾದ್ ಅಲ್ಲಿ ಆಳುತ್ತಿದ್ದನು. ಸಾದಿ ತನ್ನ ಗುಲಿಸ್ತಾನ್ (ಹೂಗಳ ತೋಟ) ಮತ್ತು ಬೋಸ್ತಾನ್ (ಪರಿಮಳದ ಉದ್ಯಾನ) ಗ್ರಂಥಗಳನ್ನು ಬರೆದುದು ಆಗಲೇ.
ಪರ್ಷಿಯದ ನಾನಾ ಭಾಗಗಳಲ್ಲಿ ಎಷ್ಟು ರಾಜಕೀಯ ಬದಲಾವಣೆಗಳಾದಾಗ್ಯೂ ಮಂತ್ರಿಗಳೂ ಶ್ರೀಮಂತ ಅಧಿಕಾರಿಗಳೂ ಸಾದಿಯನ್ನು ಪೂಜ್ಯಭಾವದಿಂದ ಕಂಡುಕೊಂಡಿದ್ದರೆನ್ನುವುದರಲ್ಲಿ ಸಂದೇಹ ಕಾಣುವುದಿಲ್ಲ. ತಬ್ರೀಸ್ ನಗರದಲ್ಲಿ ರಾಜಧಾನಿಯನ್ನು ಮಾಡಿಕೊಂಡ ಟಾರ್ಟರ್ ದೊರೆಗಳ ಬಳಿ ಮುಖ್ಯ ಅಧಿಕಾರಗಳಲ್ಲಿದ್ದ ಜೂ-ಆನಿ ಸಹೋದರರು ಸಾದಿಗೆ ಬಹಳ ಸಹಾಯ ಮಾಡಿದರು. ಟಾರ್ಟರರ ಕಾಲದಲ್ಲಿ ಪರ್ಷಿಯಾಕ್ಕೆ ಎಷ್ಟೋ ಹಾನಿ ತಟ್ಟಿತಾದರೂ ಪರ್ಷಿಯನ್ ಸಾಹಿತ್ಯ ಅಳಿಯಲಿಲ್ಲವೆನ್ನುವುದಕ್ಕೆ ಆಗಿನ ಕಾಲದಲ್ಲಿ ಸಾದಿ ಮೊದಲಾದ ಕೆಲವು ದೊಡ್ಡ ಕವಿಗಳು ಇದ್ದುದೇ ನಿದರ್ಶನವೆಂದು ವಿಮರ್ಶಕರು ಹೇಳುತ್ತಾರೆ.
ಸಾದಿಯ ಬರಹಗಳು ಸುಮಾರು ೨೦-೨೨ ಹೊತ್ತಗೆಗಳಷ್ಟಾಗುತ್ತವೆ. ಗುಲಿಸ್ತಾನ್ ಬೋಸ್ತಾನ್ ಮುಂತಾದ ಮೂರು ನಾಲ್ಕು, ಸುಲಭವಾಗಿ ಎಲ್ಲ ಜನರೂ ಮೆಚ್ಚುವ ಗ್ರಂಥಗಳಾಗಿವೆ ; ಮಿಕ್ಕವು ಸ್ವಲ್ಪ ಪಂಡಿತ ಗ್ರಾಹ್ಯವಾಗಿವೆ. ಹಾಸ್ಯ ರೀತಿಯಿಂದ ಗುರಿಯಿಟ್ಟು ಹೇಳುವ ಶಕ್ತಿ ಸಾದಿಯ ಮಾತುಗಳಲ್ಲಿದೆಯೆಂದು ವಿಮರ್ಶಕರು ಒಪ್ಪುತ್ತಾರೆ. ಸಾದಿಯ ಸ್ವದೇಶ ಬಂಧುಗಳು ಇವನಿಗೆ ಷೇಕ್ ಸಾದಿ ಎಂಬ ಮರ‍್ಯಾದೆಯ ಹೆಸರನ್ನು ಸಲ್ಲಿಸಿದ್ದಾರೆ. ಹಣತೆ ಹೊತ್ತಿಸುವ ಪ್ರತಿಯೊಂದು ಮನೆಯಲ್ಲಿ ಸಾದಿಯ ಮಾತುಕತೆಗಳ ಒಂದು ಸಂಗ್ರಹ ವಿರಬೇಕಂತೆ.
೨
ಸಾದಿ ತನ್ನ ಗುಲಿಸ್ತಾನ್ ಗ್ರಂಥಕ್ಕೆ ತಾನೇ ಒಂದು ಸ್ವಾರಸ್ಯವಾದ ಪೀಠಿಕೆ ಬರೆದಿದ್ದಾನೆ. ಆ ಪೀಠಿಕೆಯ ಕೆಲವು ಭಾಗಗಳು ಹೀಗೆ ಇವೆ :
ದೇವನ ಕರುಣೆ :
‘ದೇವನು ಬೆಳಗಿನ ಸುಳಿಗಾಳಿ ಎಂಬ ತನ್ನ ಮಂತ್ರಿಗೆ ಹೇಳಿದ ಹಸುರು ಹುಲ್ಲಿನ ಹಾಸಿಗೆಯನ್ನು ಹರಡು ಎಂದು. ವಸಂತದ ಮುಂಗಾರ ಮುಗಿಲು ಎಂಬ ದಾದಿಗೆ ಅಪ್ಪಣೆ ಮಾಡಿದ, ಭೂಮಿಯೆಂಬ ತೊಟ್ಟಿಲಲ್ಲಿ ಎಳೆಸಸಿಗಳೆಂಬ ಮಕ್ಕಳನ್ನು ತೂಗಿ ಸಲಹು ಎಂದು. ಹೊಸವರುಷದ ಉಡುಗೊರೆ ಎಂದು ಗಿಡಗಳಿಗೆ ಹಸುರಾದ ಎಲೆಗಳನ್ನು ತೊಡಿಸಿದ. ಚಿಗುರುಗೊಂಬೆಗಳೆಂಬ ಮಕ್ಕಳಿಗೆ ನಗುವ ಹೂವುಗಳ ದಂಡೆಗಳಿಂದ ಆಲಂಕರಿಸಿದ. ಹುಲ್ಲಿನೊಳಗಿನ ರಸ ಅವನ ಶಕ್ತಿಯಿಂದ ಜೇನು ರಸದಂತೆ ಸವಿಯಾಯಿತು. ಅವನ ಪಾಲನೆಯಿಂದಲೆ ಹುಟ್ಟಿ ಹಾಕಿದ ಬೀಜ ಖರ್ಜೂರದ ಮರವಾಗಿ ಬೆಳೆಯಿತು.’
ಸಾದಿಗೆ ತನ್ನ ಊರಿನ ಮೇಲೆ ಬಹಳ ಮಮತೆ. ‘ಉನ್ನತೋನ್ನತನಾದ ದೇವನು ಪರಮ ಪಾವನ ಭೂಮಿ ಷೀರಾಸ ರಾಜ್ಯವನ್ನು ಕಡೆಯ ಕಾಲದವರೆಗೆ ಸುಖದೊಳಿರಿಸಿರಲಿ!’ ಎಂದು ಹೇಳುತ್ತಾನೆ.
ಮಾತನಾಡಬೇಕಾದ ಸಂದರ್ಭದ ವರ್ಣನೆ ಹೀಗೆ ಬರುತ್ತದೆ.
‘ಬಾಯೊಳಗೆ ನಾಲಗೆಯು ಇಹುದೆಂದರೇನಯ್ಯ,
ಮತಿಯೆಂಬ ಭಂಡಾರಕದು ಬೀಗದಾ ಕೈಯಿ
ಮುಚ್ಚಳವು ಮುಚ್ಚಿರಲು ಹೇಳಲೀಗಹುದೆಂತು
ಒಡವೆ ಇಹುದೋ ಒಳಗೆ ಏನಿಹುದೊ ಮಾರಲ್ಕೆ?
ಬುದ್ದಿವಂತರ ಮುಂದೆ ಮನ ಲೇಸಿರಬಹುದು,
ಅಭಿಮತವ ಕೊಡು ಎಂದು ಬಿಚ್ಚಿ ಆಡಲುಬೇಕು.
ತಿಳಿವಿಗಿದು ಕತ್ತಲೆಯು, ಮೌನದಾ ಕಾಲದಲಿ
ಮಾತು, ಮಾತಿನ ವೇಳೆ ಮನವನು ಧರಿಸಿಹುದು.’
ಸಾದಿಯ ತೋಟ:
‘ಏನು ಸೊಬಗಿನ ಬೀಡು!
ಹೃದಯವನು ಅರಳಿಸುವ ವೃಕ್ಷಗಳು ಮೇಲೆಲ್ಲ ಹೆಣೆದು ಹಬ್ಬಿಹವು,
ನೆಲವೆಲ್ಲ ಸ್ಫಟಿಕಮಣಿಮಯವು.
ವನವೆಲ್ಲ ಜಿಗಿಜಿಗಿಸುವಾ ಹಣ್ಣುಗಳ ತೋರಣವು !
ಅಲ್ಲಿ ಕುಡಿಯಲಿ ನಿಂತು ನೋಡಲು ರಂಗುರಂಗಿನ ಪುಷ್ಪವು,
ಇಲ್ಲಿ ಗೊಂಚಲು ಗೊಂಚಲಾಗಿಹ ಹಣ್ಣು ಹಣ್ಣಿನ ಸುಗ್ಗಿಯು,
ನೆಳಲು ಬೆಳಕಿನ ಆಟವಾಡುತ ಗಾಳಿ ಸುಳಿಯುತಲಿರುವುದು,
 ಚಿತ್ರ ಚಿತ್ರದ ರತ್ನಗಂಬಳಿ ಹಾಸಿ ತೋರು ತಲಿರುವುದು.’
ದೊರೆಯ ಒಪ್ಪಿಗೆ :
‘ದೊರೆಯ ಮನಕಿದು ಬ೦ದಿತಾದೊಡೆ ಚೀಣ ದೇಶದ
ಚಿತ್ರದಾಲಯವಾಗಿ ಮೆರೆಯುವುದಲ್ಲವೆ!
ಜನರ ಮನಕಿದು ಬರದೆ ಹೋಗುವುದೆಂತೊ ಕಾಣೆನು
ಹೂಗಳೆಡೆಯೊಳು ಮನಗಳರಳುವವಲ್ಲವೆ!
ಸಅದ ದೊರೆಯಾ ಪಾವನಾಂಕಿತ ಮೊದಲೊಳಿರುತಿರೆ
ಗ್ರಂಥದೇಳಿಗೆಗೊಳಿತು ಶಕುನವಿದಲ್ಲವೆ!’
ಮಂತ್ರಿಯ ಒಪ್ಪಿಗೆಯನ್ನು ಕೋರುತ್ತಾ ಕವಿ, ‘ರಾಜಾಧಿರಾಜ ಸಂಮಾನ್ಯ ಅಬೂಬಕರ್ ಬಿನ್ ಅಬೂನಸರನ ಒಪ್ಪಿಗೆಯೆಂಬ ಒಡವೆಯನು ಧರಿಸಿದಲ್ಲದೆ ತನ್ನ ಸೊಬಗಿನ ಕುಂದು ತಾನರಿತ ಎನ್ನ ವಾಣಿಯೆಂಬ ಹಸೆಮಣೆಯ ಹೆಣ್ಣು ಕಿರುದನಿಯಲ್ಲಿ ನಾಚಿ ಹಾಡುವುದನ್ನು ಬಿಟ್ಟು ತಲೆಯೆತ್ತಿ ಅರಳಿದ ಮೊಗದಿಂದ ಚೆಲುವಿನ ಸಂದಣಿಗೆ ಬರಲು ಅಂಜುತಿಹಳು’ ಎನ್ನುತ್ತಾನೆ.
ಕವಿಗೆ ತನ್ನ ಮಾತಿನಲ್ಲಿ ನಮ್ರತೆಯ ಜೊತೆಗೆ ನಂಬಿಕೆಯಿದೆ. ಕಡೆಯಲ್ಲಿ ಹೇಳುತ್ತಾನೆ:
‘ಎನ್ನ ಮೈ ಕಣಕಣವು ಹುಡಿಯಾದರೇನಂತೆ,
ಜೀವಿಪವು ಕಾಲ ಕಾಲಕ್ಕೆ ಈ ಬರಹಗಳು;
ಎನ್ನ ಜೀವದ ನೆನಪು ಈ ಚಿತ್ರವಾಗಿಹುದು,
ಎನಿತು ಕಾಲದವರೆಗೆ ಉಳಿಯುವುದೊ ನಾ ಕಾಣೆ,
ಉಳಿವಿದಕೆ ಹೃದಯದ ವಿಶಾಲತೆಯೊಳೊಬ್ಬಾತ
ಬಡವನಾ ಕೃತಿಗಾಗಿ ಪ್ರಾರ್ಥನೆಯ ಗೈದಂದು.
ಆಗ ಹಬ್ಬದ ಕಾಲ ಮುಗಿಯಿತೀ ಹೊತ್ತಗೆಯು
ಆರ್‍ನೂರ ಐವತ್ತು ಮತ್ತಾರು ಹಿಜರಿಯಲಿ.
ನೀತಿಯನ್ನು ಹೇಳುವಾಶಯವಿತ್ತು, ನುಡಿದಾಯ್ತು,
ನುಡಿಗಳನು ದೇವರಿಚ್ಛೆಗೆ ಬಿಟ್ಟು ನಡೆದಾಯ್ತು.’
೩
ಈ ಗುಲಿಸ್ತಾನ್ ಗ್ರಂಥದಿಂದ ಆಯ್ದ ಕೆಲವು ಕತೆಗಳನ್ನು ಈ ಪುಸ್ತಕದಲ್ಲಿ ಕೊಟ್ಟಿದೆ. ಈ ಕತೆಗಳಲ್ಲಿ ಹಲವನ್ನು ಹಿಂದೆ ‘ಕನ್ನಡ ನುಡಿ ‘ಯಲ್ಲಿ ಪ್ರಕಟಿಸಲಾಗಿತ್ತು. ಸಂಪಾದಕರ ಸಹೃದಯತೆಯನ್ನು ನೆನೆಯಬೇಕಾದದ್ದು ಕರ್ತವ್ಯ….
ಅನುವಾದಕ.
*****
Tagged:

Leave a Reply

Your email address will not be published. Required fields are marked *

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...