Home / ಕವನ / ಕವಿತೆ / ಶಾರದ ಯಾಮಿನಿ

ಶಾರದ ಯಾಮಿನಿ

ಓ ತಾರಾಪಥ ಗಾಮಿನಿ
ಶಾರದ ಯಾಮಿನಿ
ನಕ್ಷತ್ರೋದ್ದೀಪಿಕೆ
ಶೋಭನೆ ಕಾರ‍್ತಿಕೆ
ಕಾಂತಿಮಯೀ ಶಾಂತಿಮಯೀ
ದಯಗೈ ತಾಯೀ.

ಕ್ಷೀರಪಥದೊಳಗೆ ಧೂಳನೆಬ್ಬಿಸುತ
ತೇರು ಹರಿದು ಬರೆ, ನಿನ್ನನೀಕ್ಷಿಸುತ
ತಾರೆ ಬಳಗ ಹೆದ್ದಾರಿಯಿಕ್ಕೆಲದಿ
ತುದಿಯ ಕಾಲಿನೊಳು ನಿಲ್ಲೆ ಕೌತುಕದಿ,
ಹೊಸಿಲನೇರಿ ಸುಸ್ವಾಗತವೆನುತೆ
ಕುಡಿಯಾಡಿಸುತಿರೆ ಸಾಸಿರ ಹಣತೆ,
ಇದುವೇ ತಿರೆ ನಾವಿಲ್ಲಿಹೆವೆಂದು
ಸನ್ನೆಗೈವರೋ ನಿನಗೆನುವಂದು
ಮದ್ದಿನ ಸದ್ದೊಳು ನಗೆಗದ್ದಲದೊಳು
ಬಣ್ಣದ ಬಾಣದಿ ತಿಣ್ಣನೆ ಹುಯಿಲೊಳು
ಬೀದಿಯೊಳೆಳೆಯರು ನಿನಗುತ್ಸವಿಸೆ,
ಈ ದನಿ ಎನ್ನಾಸೆಯನೆಚ್ಚರಿಸೆ,
ಹೊರಗೆ ಬಂದು ನಾನಂಬರ ತಲಕೆ
ಮೊಗವೆತ್ತುವೆನೌ ಸಂದರ‍್ಶನಕೆ.
ಆದೊಡಹಾ ಮುಂಬರಿದಿಹೆ ನೀನು
ದಿನದಿನವೂ ತುಸ ತುಸ ತಡ ನಾನು
ನಿನ್ನ ತೇರು ನನ್ನಾಸೆಗು ಚುರುಕು
ನೀ ಮಿಗಿಲೆನ್ನಯ ಹಂಬಲಕು
ಓ ದಿಗಂತಪ್ರಯಾಣೆ
ಚಾರುಶಶಿಯಾನೆ!

ಇರುಳಿಗೆ ಮುಂಬೆಳಗಿನ ತೆರೆ ಬೀಳೆ
ರಂಗಕಿಳಿಯೆ ಚೆನ್ನುಡೆಯುಷೆ ಬಾಲೆ
ಮಂಜುಳ ರವ ಮೌನವನಚ್ಚರಿಸೆ,
ಸಂಜೀವನ ಮಂತ್ರವನುಚ್ಚರಿಸೆ
ಕುಳಿರು ಗಾಳಿ, ಬೆಳ್ಳನೆ ದಳ ತೆರೆದು
ಸೇವಂತಿಗೆ ಹೊನ್ನೊಳಗನು ತೋರೆ,
ನಿನ್ನ ನೆರಳೂ ಎನೆ ಬೆರಗನು ಪಡೆದು
ನಾನಾ ಹೂಗಳ ಸನಿಯಕೆ ಸಾರೆ,
ಹಸುರೊಳು ಹನಿ ನನ್ನೂಹೆಗೆ ಹ್ಞೂಗೊಡೆ,
ಕಂಡೆನೆಂಬೆ ನಾ ನಿನ್ನ ನಾಯೆಡೆ.
ಆದೊಡಹಾ, ನೀ ಮುಂಬರಿದಿರುವೆ,
ಎಂದಿನಂತೆಯೇ ನನ್ನನು ಮರೆವೆ,
ಓ ನಿರ‍್ಜಿತ ಗಗನವಿಷಾದೆ
ವಿಕಸಿತಾಹ್ಲಾದೆ!

ಮೃದು ಪದ ಪಾತಕ ತೆನೆ ನಸು ಬಾಗಿದೆ
ಉಯ್ಯಲನಾಡಿಹೆ ಎನೆ ಲತೆ ತೂಗಿದೆ
ಬಂದ ಪರಿಯನೀ ಹಕ್ಕಿ ಹಾಡಿದೆ
ಸಂದ ವರವನೀ ಹಸುರು ತೋರಿದೆ
ಸರಸಿ ಮಿಂಚಿಹುದು ನಕ್ಕೆಯೋ ಎನೆ
ನಿನ್ನ ನಂತು ನಾ ಕಾಣೆ ಶೋಭನೆ.
ನನ್ನ ಮನಕೊ ನೀನೊಂದನುಮಾನ-
ನನ್ನೆದೆಗೋ ನಿನ್ನರಿತ ಸುಮಾನ
ಓ ತರಂಗ ತಾರಾಭರಣೆ
ಸಂಮೋದ ಕಿರಣೆ!

ನಡುಬಾನೊಳು ದಿನಪನು ಸೊಕ್ಕಿರಲು,
ತಿಳಿನೀಲಕೆ ನೀಲಿಮೆ ಮಿಕ್ಕಿರಲು,
ಬಿಳಿಮೋಡವು ಪುಳಿನದ ತೆರನಾಗೆ,
ನಡುವೊಳು ತಣ್ಣನೆ ತಿಳಿಗೊಳವಾಗೆ

ನೀನಾ ತೀರದೊಳಾಡಿ
ಕೊಳದೊಳು ಜಳಕವ ಮಾಡಿ
ಹಿಂದಿರುಗುವೆಯಾ ನಿನ್ನ ಸದನಕೆ
ಸಂಜೆಯ ಮೆರವಣಿಗೆಯ ಹಸದನಕೆ.
ಓ ಅಂಬುದ ಪುಳಿನ ವಿಹಾರಿಣಿ,
ನಭಸ್ತಾಪ ಹಾರಿಣಿ!

ನೀ ಮರಳಲು ನಿನ್ನಂತಃಪುರಕೆ
ಮರಳುವೆ ನಾ ನಿತ್ಯದ ಬೇಸರಕೆ.
ಹಗಲೊಳಾಸೆ ಮನದೊಳು ತೀರಿಹುದು
ಸಂಜೆಯುತ್ಸವಕೆ ಎದೆ ಹಾರಿಹುದು.
ಅಹ, ಇದಿಗೋ! ಚೆಂಬೊನ್ನಿನ ಬೆಳಕಾಯ್ತು
ನನ್ನಯ ಮನೆ ಸೆರೆಯಂಗಳದೊಳಗೆ,
ಹಕ್ಕಿಯ ಕಲರವ ಕಲಕಲವಾಯ್ತು
ಸರಸಿಯ ಮುಂದಣ ತೋಪುಗಳೊಳಗೆ
ಬಾನ ಬೀದಿಯೊಳು ಚೆನ್ನೆಲರೆರಚಿ
ಸಂಜೆ ನಡೆವಳು, ಹೋ ಎಂದರಿಚಿ
ಬಿನದಿಸೆ ಮಕ್ಕಳು ಜಗಲಿಯ ಮೇಲೆ
ಬಾ ಹೊರಗೆನ್ನುವಳೆನ್ನೆಳಬಾಲೆ,
ಮರಳಿಯಿಂತು ಜಗ ನಿನ್ನುತ್ಸವಕೆ
ಹಾರೈಸಿರೆ ನಾನಂಬರತಲಕೆ
ಮೊಗವೆತ್ತಿಹೆನೌ‌ ಸಂದರ‍್ಶನಕೆ
ಓವೋ ತಾರಾಪಥಗಾಮಿನಿ
ಶಾರದ ಯಾಮಿನಿ
ನಕ್ಷತ್ರೋದ್ದೀಪಿಕೆ
ಶೋಭನೆ ಕಾರ್‍ತಿಕೆ
ಕಾಂತಿಮಯೀ
ಶಾಂತಿಮಯೀ
ಬಗೆವೊಗು ತಾಯೀ.
*****

Tagged:

Leave a Reply

Your email address will not be published. Required fields are marked *

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...