೧
ಹೊತ್ತು ಮುಳುಗಲು ನಿತ್ಯ ನಿತ್ಯದಿ
ಕತ್ತಲಾಯ್ತಿನ್ನೇನು ಗತಿಯೆಂ-
ದತ್ತು ಸತ್ತರೆ ಸತ್ತು ಸುಣ್ಣಾಗುವದೆ ಮತ್ತೇನು?
ಕತ್ತಲೆಯ ಹೊಟ್ಟೆಯೊಳು ಹುಟ್ಟುವ
ಮುತ್ತಿನಂತಹ ಹಗಲಿನೊಳಗಿನ
ಸತ್ಯತೆಯ ಗಂಧವನು ತಿಳಿಯದೆ ಅತ್ತರೇನಹುದು?
೨
ಒಂದು ಒಂದೇ ವಸ್ತುವದು; ಆ
ಒಂದೆ ವಸ್ತುವಿನಿಂದ ಅಂದವು!
ಒಂದೆ ಒಂದದು! ಒಂದುಗೂಡುತ ಒಂದೆಯಾಗಿಹುದು!
ಒಂದು ತೋರುವ ತೆರದಿ ತೋರುತ
ಒಂದೆ ಇದ್ದರು ಒಂದೆ ಇರದಲೆ
ಒಂದೆ ಒಡವೆಯು ಬಗೆಗಳಿಂದಲಿ ಬೇರೆ ತೋರುವುದು!
*****








