Home / ಕವನ / ಕವಿತೆ / ರವದಿ

ರವದಿ

ಸೂಚನೆ: ನನ್ನ ಮನಸನು ನಾನು ಕುಳಿತು ರಂಜಿಸುತಿರಲು
ತನ್ನ ಮನವಿಯನಿಡಲು ಬಂದ ಬಡವನ ಹಾಗೆ
‘ಮನ್ನಣೆಯು’ ಎಂದೆನುತ ಪಡುವಲದ ಗಾಳಿಯೊಡ
ಬಂದಿತೆನ್ಮುಂದೆಯೇನೋ!
ಕಸದಂತೆ ಬಿದ್ದ೦ಥ ರವದಿ ಕಂಡೆನು ನಾನು
ಕಸವೆಂದು ಒಗೆದಂಥ ರವದಿ ಕಸವಾಗಿತ್ತು
ಕಸವಲ್ಲವೆಂದು ನಾನೆತ್ತಿದೆನು; ಅಂತೆಯೇ
ಕಸವಾಗಲಿಲ್ಲ ರವದಿ
“ಕಸಕಡ್ಡಿಗಳ ಕೂಡ ಬಿದ್ದಂಥ ರವದಿಯೇ!
ಹೊಸಹಾಡುಗಳು ನಿನ್ನವೆಲ್ಲಿ ಹೋಗಿಹವೀಗ?
ಹೊಸಹಾಡುಗಳ ಹಾಡು, ಹೊಸನಾಡುಗಳ ನೋಡು-
ದತೆ ಮನಸು ಓಡುದೀಗ
ಭವದ ಬಂಧಗಳನ್ನು ತಿಳಿಯದೇ ಸಡಲಿಸುವ
ರವದೆ! ನಿನ್ನಯ ರವವ ಕೇಳಿ ಕುಣಿದೆನು ದಣಿಯೆ;
ನವನವಾನಂದವನ್ನೀಯ್ದ ನಿನಗಾಗ್ಗೆ ಮಾ-
ಧವನ ಕೊಳಲೊಂದೆ ಸಮವು”
ರವದಿಯನ್ನೆತ್ತಿ ತುಟಿಹಚ್ಚುತೂದಿದೆನು ನಾ;
ರವವು ಹೊರಡದು ಒಮ್ಮೆ ಹೊರಟಂತೆ ಈಗೇಕೊ?
ಹವಣಿಸುವೆನಿಷ್ಟೊತ್ತು, ಹೊರಚಲ್ಲಬಾರದೇ
ಒಮ್ಮೆ ಹೊರಟಂತೆ ಸ್ವರವು!
ಬಕ್ಕನೇ ಬತ್ತಲೇ ಹಗಲಿರುಳು ತಿರುಗಿದೆನು
ದಿಕ್ಕುದಿಕ್ಕಿಗೆ ಚಿಕ್ಕ ಗೆಳೆಯಂದಿರೊಂದಿಗೇ
ಚಿಕ್ಕಂದಿನೊಳು ನಾನು ನಿನ್ನನ್ನು ಊದುತ್ತ
ಬಾಯಿಂದ ‘ಊ, ಊ’ ಎಂದ;
ಹಕ್ಕಿಹಾಡದಗಾಲ, ಚಳಿಗಾಲವಿದ್ದರೂ
ಲೆಕ್ಕಿಸದೆ ಹಾಡುವೆವು ಹಗಲಿಲ್ಲ ಇರುಳಿಲ್ಲ;
ಹಕ್ಕಿ ಇಂಥವು ನೋಡಿ ನಕ್ಕವಾಗೂ ಕೂಡ
ದಿಕ್ಕು ಚಕ್ಕಂದದಿಂದ.
ನಡಿಗೆಯೊಳಗಿನ ಡೌಲು ಕಂಡು ನಾಚಿತು ನವಿಲು;
ನಡದೊಳನುಡದಾರದಿಂದೆದ್ದ ಗಿಲಗಿಲವು
ಕಡಗ ಗೆಜ್ಜೆಗಳೆರಡು ಅಡಿಗಡಿಗೆ ಅಲೆದಾಡಿ
ರುಮುಝುಮೆಂದೆದ್ದ ಸರವು
ನುಡಿಗೆ ಬಂದದ್ದಂದು ನಗುವ ಹುಡುಗರ ಕಂಡು
ನಡು ಊರಿನೊಳು ಕೂಡ, ಜನರಿಗನಿಸಿತೊ ಆಗ-
ಬಡಗ ಹುಡುಗರು ಏನು ಕೊಳಲೂದುತಿರುವರೋ
ನೀಲಗಿರಿ ದರಿಗಳೊಳಗೆ!
ಹರಿವ ಮನಸಿಗೆ ಕಾಣುವಂಥ ಗೊಂಬೆಗಳನ್ನು
ಹಿರಿಹಿರೀ ಹಿಗ್ಗುತದರಂತೆ ಪಾಟಿಯಮೇಲೆ
ಬರೆಯ ಹೋಗಲು ಕೀಚಿ ಚೀರಿದಂತಾಗೆ,
ಬಾಲಕರ ಮೈನಡುಗುವಂತೆ
ಮರೆತು ನಿನ್ನನ್ನೂದ ಹೋಗಲೊಡ ಹಾಗಾಗಿ
ಝರಿಗೆ ನೀರಡಿಸಿ ಬಂದದನು ಬರಿ ಕಂಡಂತೆ
ಭರದಿ ಬೆಳೆಯುವ ಗಿಡಕೆ ಸಿಡಿಲು ಬಡಿದಂತೆ ಆಹ!
ಮನವು ದಶಖಂಡವಾಯ್ತು
ಇನ್ನೂವಿರಾಜಿಪಿರುಳಿನ ಹೆರಳುಭಂಗಾರ
ಇನ್ನುಮೆಲ್‌ ನೆರೆಸುರಿವ ಶೀತಲ ಮರೀಚಿಗಳ
ಜೊನ್ನು ಸಹ ನನ್ನ ಸೊಗಸಿನ ಹೂವು ಬಾಡುತಿರೆ
ವಿರಸವೆಂದೆನಿಸದಿರದೇ?
ಭಿನ್ನನಾದೆನು, ನನಗೆ ತೋಚದಾಯಿತು ಹಾದಿ;
‘ಛಿನ್ನ ಮನವನು ತಿರುಗಿ ಹೇಗೆ ಬೆಸೆಯಲಿ?’ ಎಂದು
ನನ್ನ ಮನಸಿಗೆ ನಾನು ಕೇಳುವನಿತರೊಳೆನಗೆ
ರವದಿಯುತ್ತರವು ಬಂತು:
ಮಧುಮಾಸದೇರ್ಗೆಂಪು ಪೋಪುದಷ್ಟೇ ಅಲ್ಲ
ಮಧುರ ಕಂಠವು ಅದರ ಕೂಡ ಬತ್ತುವದಿತ್ತ
ವಿಧುರನಂತೀ ಜಗವು ಬಳಲುವದು ಸುಖವಿಂಗು-
ತಾಗ ಅರಜೀವವಾಗಿ
ವಿಧಿಚಕ್ರ ದಿನರಾತ್ರಿ ತಿರುತಿರುಗಿ ಸುಗ್ಗಿ ಬರೆ
ಬಧಿರ ಜಗದಂತೆನಗೆ ಹರ್ಷವಿಮ್ಮಡಿಯಾಯ್ತು
ಮಧುರತರಸ್ವರ ಕೇಳಿ ಸಾಂದ್ರ ಆನಂದದಿಂದಲಿ
ಹರಿದಂಥ ಕೂಗುಗಳನು
ಆಗ ಉನ್ಮನನಾಗಿ ರವದೆಯನ್ನೂದುತ್ತ
ಆಗ ಮರಿಮರುತನೊಲು ಸುಖದ ಗೀತಗಳನ್ನು
ಜಾಗುಮಾಡದೆ, ಜಗವ ತೂಗಿಸುತ ಹಗಲಿರುಳು
ಹೊರಟೆ ನಾ ಮುಗಿಲಿನೊಳಗೆ
ಆಗ ಆನಂದ ಪರಮಾವಧಿಯನೇರಿತೈ!
ಯೋಗ ಹೊಂದಿತು ಮನಸು ತನ್ನ ಕನಸುಗಳಲ್ಲಿ;
ಭೋಗಿಸಿದೆನೋ ನಿದ್ರೆಯಲ್ಲಿ ಮರೆತಿದ್ದ ಜ-
ನ್ಮಾಂತರದ ಸುಖಗಳನ್ನು!
*****
Tagged:

Leave a Reply

Your email address will not be published. Required fields are marked *

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...