ಮರುಳು ಮಾಡಾಕ ಹೋಗಿ ಮರುಳಸಿದ್ಧನ ನಾರಿ
ಮರುಳಾಽಗ್ಯಾಳ ಜಂಗಮಯ್ಯಗ
ಕಿನ್ನರಿ ಆಗ್ಯಾಳ ಕೈಯ್ಯಾಗ
ನುಡಿದಾಳ ಬಂದ್ಹಾಂಗ ಮೈಯ್ಯಾಗ ॥ಪಲ್ಲ॥
ಆಡುತಾಡುತ ಬಂದು ಸಿಂಗಾರಸೊಳ್ಳೀ ಹಾಂಗ
ಹಾಡಿಲೆ ಕಿವಿಗಲ್ಲ ಕಡಿದ್ಯೇನ
ಹಾದಿ ತಪ್ಪಿಸಿಕೊಂಡ ಗುಂಗಿಯ ಹುಳಧಾಂಗ
ಗುಣುಗುಣು ಗೊಣಗುಟಿ ನುಡಿದ್ಯೇನ
ತನ್ನೊಡೆಯನ ಕೂಡ ಚಿನ್ನಾಟ ನಡಿಸೀದ
ಕುನ್ನಿ ಕುಞ್ ಗುಡುವಾಟ ಹಿಡಿದ್ಯೇನ
ಮುಟ್ಟಿದರ ಮುರುಕುವ ವಯ್ಯಾರ ಕಲಿತೆಲ್ಲಿ
ಸುಳ್ಳಽತನ ಸಿಡಿಮಿಡಿ ಸಿಡಿದ್ಯೇನ
ಎದಿಗೊತ್ತಿ ಹಿಡಿದರು ಮುತ್ತಿಟ್ಟು ಮತ್ತಿಷ್ಟು
ಮುಳುಮುಳು ಸುಮ್ಮನೆ ಅತ್ತೇನ
ಕೈಯಾಡಿಸಿದಂತೆ ಮೈಕದ್ದು ನಡುಗುವಿ
ಇದು ಹೊಸ ಗಮಕದ ಗತ್ತೇನ
ಮೊದಲ ಬೆಟ್ಟಿಗೆ ಬಂದ ಮಳ್ಹೆಣ್ಣು ಮಾಡಿಧಾಂಗ
ತುಟಿಕಚ್ಚಿ ತಡವರಿಸಿ ತಡದೇನ
ತಂತ್ಯಲ್ಲ; ಜೀವದ ತಂತು ನೀ, ಅಂತಽನ
ಶ್ರುತಿ ಹಿಡಿದು ಜತಿ ಹಿಡಿದು ನಡದೇನ
ಕಂಕಣ ಕಾಲುಂಗರಕ ಮೆಲ್ಲುಸಿರ-ಛಂದಕ
ಕುಣಿತಾನ ನಡೆಧಾಂಗ ಕಾಲಾಽಗ
ಕರಗಿ ಬಾ, ಅರಗಿ ಬಾ, ಎರಗಿ ಬಾ, ಸಣ್ಣಾಗಿ
ಸಕ್ಕರಿ ಬೆರೆಧಾಂಗ ಹಾಲಾಽಗೆ
ನಂಬಿಸಿ, ರಂಬಿಸಿ, ಚುಂಬಿಸಿ, ಎದೆಗೊಂಬಿ
ಬಿಂಬೀಸಿ ಎದೆಯೊಳಗೆ ಅಂಧಾಂಽಗ
ಝಣಣ ಮಿಡಿದಾವ ತಂತಿ; ಗೆಜ್ಜಿ ಪೈಜಣ ಕಟ್ಟಿ
ಮಾಯೆಯೆ ಮೈಯೊಳಗ ಬಂಧಾಂಽಗ
ಅಗಲಿದ ಇನಿಯನ ಫಕ್ಕನೆ ನೋಡುತ
ಬಸಿರ ಹೂ ಕುಲು ನಕ್ಕ್ಹಾಂಗ
ನಲ್ಲ ಮುಟ್ಟಿದ ಗಲ್ಲ, ನಲ್ಲೆಯ ಮೈಯೆಲ್ಲ
ಹಿಗ್ಗಿನ ಮುಳ್ಳಿಗೆ ಸಿಕ್ಕ್ಹಾಂಗ
ಜುಮ್‌ಜುಮು ರುಮುಜುಮಮು ಗುಂಗುಣು ದುಮುದುಮು
ನಾದದ ನದಿಯೊಂದು ನಡೆಧಾಂಗ
ಗಲಗಲ್ಲಕೆ ಹಚ್ಚಿ ನಲನಲ್ಲೆಯರಿರುಳು
ಗುಜುಗುಜು ಗುಲುಗುಲು ನುಡಿಧಾಂಗ
ಸಂಜೀಯ ಮುಗಿಲಾಗ ರೊಞಬಿಲ್ಲ ಪಟವೊಂದು
ಗಾಳಿ-ಸುಳಿಗೆ ಶ್ರುತಿ ಹಿಡಿಧಾಂಗ
ಗಗನಸಂಚಾರದ ನಾರದನ ವೀಣೆಯ
ಹಾಡೀನ ತೆರಿತೆರಿ ಬಡಿಧಾಂಗ
ಮಂಕಾಗಿ ಮೂಕಾದ ಮನದ ಮಿಡುಕಾಟದ
ಮೊಗ್ಗಿಗೆ ಬಾಯಿಲ್ಲಿ ಒಡಿಧಾಂಗ
ಹೆಣ್ಗಂಡು ಜೇನ್ನೊಣ ಮುದ್ದಾಡಿ ಕಚ್ಚಾಡಿ
ಹೂಜೇನ ಹನಿಹನಿ ಕುಡಿಧಾಂಗ
ಆತನೀತನವಂತ ಯಾತನದ ಯಾತನೆಯ
ಯಾತ ಕಿರುಗುಟ್ಟೋದು ನಿಂಧಾಂಗ
ನಾನೀನ ನುಡಿ ನುಂಗಿ ತಾನೀನ ತಾನೆ ತಾ
ತಾನಾಗಿ ತನನಽನ ಬಂಧಾಂಗ
ರಂಗೊಂದು ದಂಗೊಂದು ಗುಂಗೊಂದು ಒಂದಕ್ಕೊಂದು
ಹತ್ತಾಗಿ ಜತ್ತಾಗಿ ಸುಳಿಧಾಂಗ
ದಣಿದ ಜೀವದ ಮ್ಯಾಲೆ ಜೇನಿನ ಸುರಿಮಳಿ
ಜೇಂಗುಟ್ಟಿ ಹನಿಹನಿ ಇಳಿಧಾಂಗ
ಪ್ರಕೃತಿ ಫುರುಷಗೆ ಸೋತು ಪ್ರಾಣಂದ್ಹಜಿಯೆ ನೂತು
ಅನುಭವದ ಕಿವಿಮಾತು ಆಧಾಂಗ
ಹಾಸಾದ ಹಾಡೀಗೆ ಹೊಕ್ಕಾತು ಕಿನ್ನರಿ
ನೆಯ್ಗಿಯೊಳಗ ನೂಲು ಹೋಧಾಂಗ
ಜೀವದ ರಸ ಹಿಂಡಿ ತುಂತೂರು ಮಳೆಯಾಗಿ
ತಂತಿಯ ತುಂಬೆಲ್ಲ ಸಿಡಿಧಾಂಗ
ಮರುಳ ಸಿದ್ದನ ಕೈಯ್ಯ ಕಿನ್ನರಿಯಾಗಿ ಸಿಕ್ಕ
ಮಾಯೆಯೆ ಮೈಗೆ ಮೈ ನುಡಿಧಾಂಗ
*****








