Home / ಕವನ / ಕವಿತೆ / ವಿದ್ಯಾಲಯ

ವಿದ್ಯಾಲಯ

ಈ ವಿದ್ಯಾಲಯದುತ್ಸವ ಸಮಯದಿ
ಕಾಣಿಕೆಯಿದನೊಪ್ಪಿಸುವೆನು ವಿನಯದಿ
ಸವಿನೆನಪಿನ ಕಂಪಿಡಿದೀ ನುಡಿಯ
ಹಾಸುವೆ ನಾ ವಾಣಿಗೆ ನಡೆಮಡಿಯ.

ಅಲ್ಲಿ ಮೂಡಿತೀ ಕವಿಚೈತನ್ಯ
ಅದಕಾಯಿತು ಪರಭಾಷಾಸ್ತನ್ಯ
ನಾಡತಾಯಿ ನಿರ್ಬಲೆ ನಿರ್ದುಗ್ಧೆ
ಆಂಗ್ಲವಾಣಿ ವಿಜ್ಞಾನಸುದುಗ್ಧೆ
ತಾಯ ಮಗುವಿಗೀ ದಾದಿಯ ಹಾಲು
ನೀಡಿದನಿತುಂಡು ಬಳೆಯಿತು ಬಾಳು
ಪ್ರಾಣದಾತೆ ವಾತ್ಸಲ್ಯವಿಹೀನೆ
ವಾತ್ಸಲ್ಯಪೂರ್ಣೆಯೋ ಬಹುದೀನೆ
ಧಾತ್ರೀಮಾತೆಗಳಿಂತಿರೆ ಹಸುಳೆ
ಅಂತೂ ಬೆಳೆಯಿತು ಆ ಇರಕಿನೊಳೆ.

ಇಂತಾಯಿತು ಕವಿಬಾಲ್ಯಚಿಕಿತ್ಸೆ
ತಾನಾರೆನೆ ಆತ್ಮದ ವಿಚಿಕಿತ್ಸೆ
ಅಲ್ಲಿದ್ದೆನು ನಾ ವಿದೇಶಿಯಂತೆ
ಎನ್ನರಾರಿಲ್ಲಿ ಎಂಬುದೆ ಚಿಂತೆ
ಮನೆಗುಡಿಯಂಗಡಿ ಚೌಕಗಳಲ್ಲಿ
ಕಾಣದ ಕೇಳದ ನಡೆ ನುಡಿಯಿಲ್ಲಿ

ಮರದೊಳು ಸೊಗಸುವ ಬಂದಿಳಿಕೆಯ ತೆರ
ತೋರಿತು ವಿದ್ಯಾಶಾಲೆಯ ವಿವರ
ಋಷಿಕವಿಸಂತರ ತಪದಿಂ ಮೂಡಿದ
ಮನದ ಮೇಲೆ ಪರ ತಾಂಡವವಾಡಿದ.

ಸೊರಗಿದೆ ನೀ ವಿಧ್ವಂಸಕ ನೃತ್ಯಕೆ
ನಮ್ಮಹಮ್ಮ ಪುಡಿಮಾಡುವ ಕೃತ್ಯಕೆ.

ಭಾರತಸ್ವಾಂತನಿರ್ವಂಶತೆಗೆ
ಜ್ಞಾತವ್ಯಜ್ಞಾನದ ಖರ್ವತೆಗೆ
ಜನಶಿವಸಂಕಲ್ಪದ ಪರವಶತೆಗೆ
ಪರಾನುಕರಣದ ಸರ್ವತ್ರತೆಗೆ
ಎಡೆಯಾದೀ ವಿದ್ಯೆಯ ನೆಲೆವನೆಯೊಳು
ನಾನಿದ್ದೆನು ಮಲತಾಯಿಯ ಮಗನೊಲು.

ಕಿವಿಯಿದ್ದೂ ಮನವಿಲ್ಲದ ಬಗೆಗೆ
ಬರಿ ಸದ್ದಾದುವು ಪಾಠಗಳೆನಗೆ.

ಎಲ್ಲ ಅಪರಿಚಿತ ಎಲ್ಲ ನವೀನ!
ಇಲ್ಲದಿರಲಿಲ್ಲವಿಲ್ಲಿ ಸುಮಾನ.
ಶಾಲೆಯೊಳಾತ್ಮಕೆ ಸ್ವಪ್ನದ ಮೌನ
ಪುಸ್ತಕಭಾಂಡಾಗಾರದಿ ಧ್ಯಾನ
ಹುಲ್ಲುಗಾವಲಿನ ಹೂತ ಮರಗಳ
ಎಲೆಗಳು ಬಿಡಿಸುವ ಬಾನ ಬಿಂದುಗಳ
ಲೆಕ್ಕದೊಳಾಯಿತು ನನ್ನಾಸಕ್ತಿ
ಪ್ರಕೃತಿಯೊಳಾಯಿತು ರಸದಭಿವ್ಯಕ್ತಿ.

ಬಗೆದಂತಪ್ಪುದಲಾ ಜಡಲೋಕ
ಅದರಿಂ ಭಾವುಕಗಲ್ಲಿಯೆ ನಾಕ.
ಸ್ವದೇಶನಿರ್ಮಿತದೀ ಪರದೇಶದಿ
ಕೆಳೆಪಡೆದೆನು ನಾನಿವುಗಳ ಸನಿಯದಿ.

ಕೊಟ್ಟಷ್ಟನೆ ಮರಳಿಯು ಪಡೆವೀಪರಿ-
ಸೊಗದಿಂದಾತ್ಮದ ವೃದ್ಧಿಯೇಪರಿ?
ಚೇತನದಿಂ ಚೇತನದುಜ್ಜೀವನ
ಜೀವಿಯಿಂದ ಜೀವನದುತ್ತೇಜನ.
ತನ್ನನು ತಾನೇ ಮರೆಹೊಗುವಾಟಕೆ
ಬೇಸತ್ತೆನು ನಾ ಬಯಲಿನ ಬೇಟಕೆ.
ಮನವರಿಯುವ ನುಡಿ ಎದೆಮೆಚ್ಚುವ ನಡೆ
ಶುದ್ಧಾಂತರ್ಯದೊಳಿರವಿನ ಬಿಡುಗಡೆ
ನುಡಿಗೆ ಬರದ ಬಯಕೆಗಳಿಗೆ ಸಾಕ್ಷಿ
ಕಾಣೆ ಬರದ ಕನಸನೋಡುವಕ್ಷಿ
ಪರಸ್ಪರಾಶ್ರಯವಿಂತಾಗುವ ನೆಲೆ
ಈ ಜಗವೆಮ್ಮದು ನೋಡೆನ್ನುವ ಕೆಳೆ
ಈ ತೆರ ಸಾಧರ್ಮ್ಯದ ಸೌಹೃದಕೆ
ಕಾಲದೊಳೆನಗಾಯಿತು ಹಂಬಲಿಕೆ.

ಆವನೆಲದೊಳೆನ್ನಾತ್ಮದ ಬೇರು
ಮನದೀ ಬೆಳೆಗೆ ಕೃಷೀವಲರಾರು
ಅರಿವರದಾರೀ ಬಾಳಿನ ಬೆಲೆಯ
ಕುದುರಿಸುವವರೀ ಜೀವದ ಕಳೆಯ?-
ಈ ತರ ಕಾತರಗೊಂಡಿರೆ ಜೀವ
ಸಂಸ್ಕೃತವಿತ್ತಿತು ಮಮತೆಯ ತಾವ.

ಆ ತಾಯ್ನೆಲದೊಳು ತಳವೂರಿತು ಮನ
ಅಲ್ಲಿ ದೊರೆಯಿತೆನಗೊಬ್ಬನ ಕೆಳೆತನ
ಸರಳಹೃದಯ ಸಹೃದಯ ಮೇಧಾವಿ
ಧ್ಯೇಯೋಪಜೀವಿ ಸಹಾನುಭಾವಿ
ವಿದ್ಯಾವಿಪ್ಲವದಾ ಶಾಲೆಯೊಳು
ನನಗಾಯ್ತೀ ನೇಹವೆ ಹರಿಗೋಲು
ಮುಂದಿನ ಕತೆಯೀ ದೋಣಿಯ ಬಿನದ
ಗುರುಸಾನ್ನಿಧ್ಯದ ಕ್ಷೇಮದೀಪದ
ಬೆಳಕೊಳು ಹದುಳದ ಹರ್ಷವ ತಳೆದು
ಹೊರನಾಡೆನ್ನುವ ಶಂಕೆಯ ಕಳೆದು
ತನ್ನತನದಿ ಹೀನಾಯವೆಣಿಸದೆ
ಮಿಕ್ಕುದರೊಳು ವಿಶ್ವಾಸವಳಿಯದೆ
ಅನ್ಯದೇಶ್ಯರಾನಂದವನೆಂತು
ಗಳಿಸಿಹರೆಂಬ ಕುತೂಹಲವಾಂತು
ಎಂತಾವಲೆದೆವು ಭಾವಲೋಕದಿ
ಚಿತ್ತಚಮತ್ಕೃತವಪ್ಪಾಲೋಕದಿ!

ಸಂಜೆ ರಂಜಿಸಿರೆ ರಂಗಿನ ಬೆಳಕೊಳು
ನಮ್ಮೊಳಗನೆ ಅದು ಬಿಂಬಿಸುತಿರುವೊಲು
ಹಾರ್ಡಿಯ ಕತೆಗಳ ಸುಂದರಿಯರಿಗೆ
ಪರಿವೇಷವಿದೋ ಎನೆ ಬಾನ್‌ತೊಳಗೆ
ಸಂಘದ ಕೊನೆ ಕಿರುಮನೆಯೊಳು ಕುಳಿತು
ನಾವೆಲ್ಲಿಹೆ ವೆಂಬುವನೇ ಮರೆತು
ಮಾತಿಲ್ಲದ ಮಾತೊಳು ನುಡಿದಾಡಿ
ಇರುಳಿಗಾಗೆ ಬಲು ಚುಕ್ಕಿಯ ಮೋಡಿ
ಮನವಲ್ಲುಳಿಸುತ ಸುಯ್ದಗಲಿದ ಪರಿ

ಮರುಕೂಟವೆ ದಿನದಾದಿಯೆಂದ ಪರಿ
ಈ ಭಾವದಾವಿ ಹನಿಯೊಡೆದ ಪರಿ
ನುಡಿಯಲೆಯಿಡುತಾ ರಸ ಹರಿದ ಪರಿ
ಈ ಝರಿ ಮತ್ತೊಬ್ಬನ ಸೆಳೆದ ಪರಿ
ಈ ಸಂಗಮ ಹಿರಿ ಹೊನಲಾದ ಪರಿ
ಈ ತೆರ ನಮ್ಮೀ ಸ್ನೇಹತ್ರಿವೇಣಿಯ
ಮರ್ಮರದಂತಿರುವೆನ್ನಯ ವಾಣಿಯ
ಪ್ರಥಮೋದ್ಗಮ ಚರಿತೆಯ ಮಧುರಸ್ಮೃತಿ
ಈ ಶಾಲೆಗೆ ನಾನರ್ಪಿಸುವ ಸ್ತುತಿ.

ನೆಲೆಯಾಗಲಿ ಸರಸತಿಗೀಶಾಲೆ
ಸುತರಿಡಲೀಕೆಗೆ ಸುಯಶೋಮಾಲೆ
ಈಕೆಗಳಿಯಲೀ ಪರಾಭಿಭೂತಿ
ಹೊರಹೊಮ್ಮಲಿ ಸ್ವಾಂತಾತ್ಮವಿಭೂತಿ
ಹೊಳೆ ಹೊಳೆಸುತ ಸದ್ವಿದ್ಯಾರುಚಿಗಳ
ನಮ್ಮೀ ಶಾಲೆಯ ಗುರುಶಿಷ್ಯರುಗಳ
ತೇಜವಾಗೆ ಪರಚಿತ್ತಗ್ರಸಿಷ್ಣು
ಹರಸಲಿದನು ಶ್ರೀ ವಿಕ್ರಮ ವಿಷ್ಣು.
*****

Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...