Home / ಕವನ / ಕವಿತೆ / ಹೊಗೆಯ ಸೊಪ್ಪು

ಹೊಗೆಯ ಸೊಪ್ಪು

ಹೊಗೆಯಸೊಪ್ಪಿನ ಮೇಲೆ ಪದ್ಯವ
ಬರೆವ ನನ್ನನು ಹಳಿಯದೆ
ಸಾವಧಾನದೊಳದರ ಮಹಿಮೆಯ
ಕೇಳಿರಯ್ಯಾ ಮುಳಿಯದೆ!

ಜಗದೊಳೆಷ್ಟೋ ಸೊಪ್ಪು ಸದೆಗಳು
ಬೆಳೆದು ಮಡಿಯುತಲಿವೆ ನಿಜ
ಪೇಳಿರೈ ನಿಮಗಾವುದೀವುದು
ಹೊಗೆಯಸೊಪ್ಪಿನ ಈ ಮಜ!

ಹಳಿವರೆಲ್ಲರ ತೃಪ್ತಿಗೋಸುಗ
ಇದರ ಜನನವನಿಲ್ಲಿಯೆ
ಬಣ್ಣಿಪೆನು ನಾ. ಇದುವು ಜನಿಸಿತು
ಶಿವನ ಸಮ್ಮುಖದಲ್ಲಿಯೆ!

ಒಮ್ಮೆ ಶಿವನಿಗೆ ಗಂಗೆ ತಲೆಯೊಳು
ನೆಲಸಿ ನೆಗಡಿಯು ಹಿಡಿದಿತು
ನಾರದನ ಜೊತೆಯಲ್ಲಿ ಯೋಚಿಸೆ
ಹೊಗೆಯಸೊಪ್ಬಿದು ಜನಿಸಿತು!

ಇದರ ಫಲವನು ಕಂಡ ಶಂಕರ
“ತಿರೆಯೊಳೂ ಇದ ಸೃಷ್ಟಿಸಿ
ಜನರಿಗುಪಕಾರವನು ಗೈವೆನು”
ಎಂದ ಗೌರಿಯ ದೃಷ್ಟಿಸಿ!

ಅಂದಿನಿಂ ಮೊದಲಾಯಿತಹಹಾ
ಹೊಗೆಯ ಸೊಪ್ಪಿನ ಮೋಹವು!
‘ಮೋಹ’ ವೆಂದೆನೆ? ತಪ್ಪು ನುಡಿದೆನು.
ಮೋಹವಲ್ಲವು, ನೇಹವು!

ಕೆಲರು ಸೊಪ್ಪನು ಎಲೆಯ ಜೊತೆಯೊಳು
ಜಗಿದು ಸುಖಿಸುತ ನಲಿದರು!
ಮತ್ತೆ ಕೆಲವರು ಪುಡಿಯ ಮೂಗಿಗೆ
ತುರುಕಿ ಮೂಗೊಳೆ ಉಲಿದರು!

ಇನ್ನು ಕೆಲವರು ಸುರುಳಿಗೈಯ್ಯುತ
ಅದಕೆ ಬೆಂಕೆಯನಿಟ್ಟರು!
ಬಂದ ಹೊಗೆಯನು ಶ್ವಾಸಕೋಶಕೆ
ಕಳುಹಿ ಉಸುರನು ಬಿಟ್ಟರು!

ಇಂತು ವಿಧವಿಧ ರೀತಿಯೊಳು ಜನ
ಹೊಗೆಯಸೊಪ್ಪನು ಬಳಸುತ
ನಲಿಯುತಿರಲದ ಮಾತ ಬಹುಜನ-
ರಿದ್ದರಲ ಹಣ ಗಳಿಸುತ!

ಒಳ್ಳೆ ಸುಣ್ಣದ ತೆಳ್ಳನೆಯ ಲೇ-
ಪವನು ಧರಿಸಿಹ ಚಿಗುರೆಲೆ
ಘಮ್ಮನಡಕೆಯು, ಜೊತೆಗೆ ಸೊಪ್ಪಿರೆ
ತಿರೆಯ ಜೀವನ ಹಗುರೆಲೆ!

ಅಡಕೆಲೆಯ ಜಗಿದಿಂತು ಬಿಡದಲೆ
ಕೆಂಪಗಾಗಿರೆ ತುಟಿಗಳು
ಬೆರಳ ಮಧ್ಯದಿ ರಸವ ಪಿಚ್ಚನೆ
ಉಗುಳ್ವರಹಹಾ ಸುಟಿಗಳು!

ಬೆರಳುಗಳ ನಡುವಿಂದ ಬುಗ್ಗೆಯ
ತೆರದಿ ಝಗ್ಗನೆ ನುಗ್ಗುತ
ಬಗೆಬಗೆಯ ತುಂತುರನು ರಚಿಪುದು
ಅರುಣ ರಸ ನೆರೆ ಹಿಗ್ಗುತ!

ಇಂತು ಜಗಿದರೆ ಹಲ್ಲಹುಳುಕಿಗೆ
ಪರಮ ಔಷಧವೆಂಬರೈ!
ಮದ್ದಿದೀಯದೆ ಹಲ್ಲಕೀಳುವ
ವೈದ್ಯರೆಲ್ಲರು ಹುಂಬರೈ!

ಬೇಸ್ತಿನಾಟದಿ, ಸುತ್ತುಮುತ್ತಿನ
ಗೆಳೆಯರೆಲ್ಲರು ಬಳಿಯಿರೆ
ಕಾಯುತೆನ್ನಿಳಿತವನೆ ಭಯದೊಳು
ಸದ್ದ ಮಾಡೆ ಕುಳಿತಿರೆ,

“ನೈಲ ತೂರಲೊ ತೂರದಿರಲೋ”
ಎಂಬ ಪೇಚೊಳು ನಾನಿರೆ
ಒಂದೆ ಚಿಟಿಕೆಯ ಮೂಗಿಗೇರಿಸೆ
ಹರಿವುದಹ ಮಂಕಿನ ಪೊರೆ!

ಠೀವಿಯೊಳು ಬಲಗಾಲ ತುದಿ ಎಡ-
ಗಾಲ ಮಂಡಿಯೊಳಾಡುತ
ತೂಗುತಿರೆ, ಘೃತ ಸುಣ್ಣ ಬೆರೆಸಿದ
ಮಡ್ಡಿ ನಶ್ಯವ ತೀಡುತ,

ಕುಳಿತು-ಸಗ್ಗದ ಮರಿಗಳಂದದ
ಗುಳಿಗೆ ಕೈಯೊಳು ನಿಂದಿರೆ
ಅದನೆ ನೋಡುತ ಪಡುವ ಸುಖವಿರೆ
ಏಕೆ ನನಗಾ ಇಂದಿರೆ?

ನೇವಿಕಟ್ಟನೊ ಗೋಲ್ಡುಫ್ಲ್ಯಾಕನೊ
ಬಾಯಲಿಡುತಲಿ ಬೆಂಕಿಯ
ಹಚ್ಚಿ ನೋಡಿರಿ! ನನ್ನ ಮಾತೊಳು
ನೀವು ಕಳೆವಿರಿ ಶಂಕೆಯ!

ತನಗೆ ತಾನೇ ಬಾಯಿ ಗೊಣಗುತ-
ಲಿರಲು ಹಾಡಿನ ಗುಂಗನು
ಕಣ್ಣ ತೇಲಿಸಿ, ದಮ್ಮನೊಂದನು
ಎಳೆದು ಬಿಡುತಲಿ ರಿಂಗನು,

ಅದನೆ ದಿಟ್ಟಿಸಿ ಮನದ ಪಾತ್ರೆಗೆ
ಸ್ವಪ್ನಮಧುವನು ತುಂಬಿಸಿ
ನಲಿಯದೀ ಜನ ಬರಿದೆ ಬೈವರು
ಮೂರ್ಖತನವನು ಬಿಂಬಿಸಿ!

ಉಗಿಯ ಬಂಡಿಗೆ ಆವಿಯೆಂತೋ
ಮತ್ತದೆಂತೋ ಸುರೆಯೊಳು
ನಿದ್ದೆಗೊಳ್ಳೆಯ ಕನಸದೆಂತೋ
ಅಂತೆ ಸಿಗರೇಟ್‌ ತಿರೆಯೊಳು!

“ಹೊಗೆಯ ಸೊಪ್ಪಿದು ಕೆಡುಕನೀವುದು”
ಎನುವರೆಲ್ಲರು ಪೆದ್ದರು
ತಿರೆಯೊಳುತ್ತಮ ಸೃಷ್ಟಿಯೆನಿಸಿದ
ನರನ ಕುಟಿಲತೆ ಮರೆವರು!

ನಿದ್ದೆವೆಣ್ಣಿನ ಕನಸ ಸೀರೆಯ
ಅವಳ ನೆರವೊಂದಿಲ್ಲದೆ
ಕಾಣಬಹುದಹ ಹೊಗೆಯಸೊಪ್ಪೊಳು
ಏನು ಮಾಯೆಯಿದಲ್ಲದೆ!

ಅದರಿನೆಲ್ಲರು ನನ್ನ ಮಾತೊಳು
ನಂಬಿ ಸೊಗವನು ಕಾಣಿರಿ
ಪ್ರಾಣಿಗಳು ಸಹ ನಾಚಿಕೊಳುವಂ-
ತಿರುವ ಬೈಗಳ ಮಾಣಿರಿ.
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...