ರವಿಕಿರಣ ತಿಳಿಬೆಳಕು
ಬಾನಿನಲಿ ಬೆಳಗುತಿರೆ,
ಮೇಘಮಯ ಮುಗಿಲಲ್ಲಿ
ಚಲುರಶ್ಮಿ ಬೆಳಗುತಿರೆ,
ಮೂಡಲಿನ ನಾಡಿನಲಿ
ವೈಭವವು ನಲಿಯುತಿರೆ,
ಮುಂಜಾನೆ ಮೆರೆಯಿತು
ನಿಶಿದೆಸೆಯ ನೆರೆದಾಟೆ.
ತೆಂಕಲಿನ ತಂಗಾಳಿ
ತೀಡುತಿರೆ ಇಂಪಾಗಿ,
ಮೋದದಲಿ ಹಾಡುತಿರೆ
ಹಕ್ಕಿಗಳು ಗುಂಪಾಗಿ,
ಹಚ್ಚನೆಯ ಹೊಲದಲ್ಲಿ
ತೆನೆಹಸುರು ತೂಗುತಿರೆ,
ಮುಂಜಾನೆ ಮೆರೆಯಿತು
ನಿಶಿದೆಸೆಯ ನೆರೆದಾಟಿ.
ಒಕ್ಕಲಿನ ಕೊಪ್ಪಲಲಿ
ಜೀವಸಸಿ ಬೆಳಗುತಿರೆ,
ಸೃಷ್ಟಿಯಾತೆರೆಯಲ್ಲಿ
ಕೊನೆಅಂಚು ಮಿನುಗುತಿರೆ,
ವೈಭವದ ಉದಯದಲಿ
ಸಂಭ್ರಮವು ತೀಡುತಿರೆ,
ಮುಂಜಾನೆ ಮೆರೆಯಿತು
ನಿಶಿದೆಸೆಯ ನೆರೆದಾಟ.
*****


















