ನದಿನೇರದಿ ಸರಿವಂದದಿ
ವನಸಲೆಯಲಿ ಮುಗುಳಂದದಿ
ಗಿರಿಗಗನದಿ ಗೆಲುವಂದದಿ
ಭುವಿಬಯಲಲಿ ಬಲುನಯದಲಿ
ಮೆರೆಯುವ ಮೃದುಮಾಯಾ!
ಬೆರೆಸಿಹೆ ಸವಿ ಛಾಯಾ!
ಪಡುಬಾನಲಿ ಗೆಲುಹರುಷದಿ
ಖಗಕುಕಿಲದ ಸವಿರಾಗದಿ
ಝರಿಜಾಣ್ಮೆಯ ತಡಿಎಡೆಯಲಿ
ಹೊಲಹಸುರಿನ ಸರಿಜತೆಯಲಿ
ಮೆರೆಯುವ ಮೃದುಮಾಯಾ!
ಬೆರೆಸಿಹೆ ಸವಿ ಛಾಯಾ!
ಮರನೆರಳಿನ ಸುಳಿಗೆಲುವಲಿ
ಬನಸೊಗಸಿನ ಸೊಗಸೊ೦ಪಲಿ
ರವಿರೇಣಿನ ದೆಸೆಎಸೆಯಲಿ
ಚಲುಬಣ್ಣದ ತಿಳಿ ಹೊಳೆಯಲಿ
ಮೆರೆಯುವ ಮೃದುಮಾಯಾ!
ಬೆರೆಸಿಹೆ ಸವಿ ಛಾಯಾ!
ಅಣುಚುಕ್ಕಿಯ ಮಿರುಮೆರುಗಲಿ
ಮಡುಮುಬ್ಬಿನ ಎಡೆಪಥದಲಿ
ನಿಡುರಾತ್ರಿಯ ಕರಿಮೇಘದಿ
ಸರಿನೀರವ ಸೆಳೆದೆಳೆತದಿ
ಮೆರೆಯುವ ಮೃದುಮಾಯಾ!
ಬೆರೆಸಿಹೆ ಸವಿ ಛಾಯಾ!
*****


















