೩೮ ನಲ್ಲೆಯ ನೆನಪು
ಪಲ್ಲವಿ
ನಲ್ಲೆ! ಎಂದೈತರುವಿಯೊ?
ಬಗೆಗೆ ಸೊಗವನ್ನೀವೆಯೊ?
೧
ಯಾವ ಕಜ್ಜನ ಗೈಯ ಹೋದರು
ನಿನ್ನ ನೆನಪೇ ಸುಳಿವುದು
ಅಚ್ಚುಗಟ್ಟಿನೊಳಾವ ಕಾರ್ಯವ-
ನೆಸಗಲಿಚ್ಛೆಯೆ ಬಾರದು
೨
ಪ್ರಕೃತಿ ರ೦ಗದೊಳೆಲ್ಲಿ ನೋಡಲು
ನಿನ್ನ ನೆನಪಿದೆ ನಲ್ಲೆಯೆ!
ಆವ ವಸ್ತುವ ಕಾಣ ಹೋದರು
ನಿನ್ನ ಪಡಿನೆಳಲಲ್ಲಿಯೆ
೩
ಸಂಜೆಗೆಂಪನು ನೋಡಿ, ಮನವನು
ಬಿನದಗೊಳಲೆಳಸಿದ್ದರೂ,
ನಿನ್ನ ಚೆಂದುಟಿಗೆ೦ಪಿನ ಸ್ಮೃತಿ
ಬಂದು ಚಿತ್ತವ ಕವಿವುದು
೪
ನೇಸರಿನ ಎಳೆಬಿಸಿಲನಂತೆಯ
ತಿ೦ಗಳಿನ ಬೆಳ್ದಿ೦ಗಳ
ನೋಡು ನೋಡುತ ನೆನಪು ನಲಿವುದು,
ನಿನ್ನ ನಗು ಮಲ್ಲಿಗೆಗಳ
೫
ಮಾಮರದ ಮರೆಯಲ್ಲಿ ಕುಕಿಲುವ
ಕೋಗಿಲೆಗಳಿನಿದನಿಯನು
ಆಲಿಸುತ್ತಿರೆ ನಿನ್ನ ಮಧುರಾ-
ಲಾಪವನು ನಾ ನೆನೆವೆನು
೬
ಬಳ್ಳಿಯಲಿ ಮಲರಿರುವ ಹೂಗಳ
ಚೆಲುವಿಕೆಯ ದಿಟ್ಟಿಸುತಿರೆ,
ನಿನ್ನ ನಗೆಗಣ್ಣಗಳು ಬಗೆಯಿದಿ-
ರಲ್ಲಿ ಕುಣಿವಂತೆನಿಪುದು
೭
ಕತ್ತಲೆಯ ಕಾಳಿಮೆಯ ನಿಟ್ಟಿಸೆ,
ನಿನ್ನ ಸುಳಿಗುರುಳೋಳಿಯ
ಕಾರ್ಷ್ಣ್ಯ ಕಣ್ಣಿಗೆ ಕಟ್ಟಿದಂತೆಯೆ
ನಲ್ಲೆ! ಸವಿನೆನಪೆಸೆವುದು
ನಲ್ಲೆ! ಎಂದೈತರುವೆಯೋ?
ಬಗೆಗೆ ಸೊಗವನ್ನೀವೆಯೋ?
*****
ಹೆಂಡತಿಯು ತಾಯಿಮನೆಗೆ ಹೋಗಿದ್ದಾಗ
೧೯೪೧








