Home / ಕವನ / ಕವಿತೆ / ಹಿಂದಿನ ಕಾಲದ ಒಂದು ಚಿತ್ರ

ಹಿಂದಿನ ಕಾಲದ ಒಂದು ಚಿತ್ರ

(ಕಥಾ ಕವನ)


ಏಳಲಿಕಾರದೆ, ಮರಣದ ಶಯ್ಯೆಯೊ-
ಳೊರಗಿಹನೋರ್ವನು ಹಳೆ ಮುದುಕ
ಕಳೆದಿದೆ ಪ್ರಾಯದೊಳೆಪ್ಪತ್ತರ ಗಡಿ
ಸಾಯುವ ಸಮಯವು ಸನಿಯಕಿದೆ.
ಬಳಿಕಾ ಮುದುಕನು ಒಂದು ದಿನ
ಅಳಿಯಲು, ಬರಡಾಯಿತು ಪ್ರಾಣ


ಒಂದರ ಮೇಲೊಂದಾಗುತ ನಾಲುಕು
ಸ೦ದಿವೆ ಮುದುಕಗೆ ಮದುವೆಗಳು
ಪೂಂದಿರೆ ಮರಣವ ನಾಲ್ಕನೆ ಹೆಂಡತಿ,
ಮುಂದಕೆ ಮದುವೆಯ ನಿಶ್ಚೈಸಿ,
ಎಂಟೇ ವರ್ಷದ ಹುಡುಗಿಯನು
ಮುದುಕನು ಮುದದಲಿ ವರಿಸಿಹನು


ಮುದುಕನ ಸಾವಿನ ಸಮಯದಿ ಹುಡುಗಿಯು
ಬೀದಿಯೊಳೋರಗೆಯವರೊಡನೆ
ಮುದದಲಿ ಮಣ್ಣಿನೊಳಾಟವನಾಡುತ-
ಲಿದ್ದಳು ಚಿಂತೆಗಳಿಲ್ಲದೆಯೆ!
ಆಗಲೆ ಅಲ್ಲಿಗೆ ಅವಳ ಪಿತ
ಬೇಗನೆ ಬಂದನು ದುಃಖಿಸುತ


ಅಂಧಾಚಾರವನೆಲ್ಲವ ತಪ್ಪದೆ
ತನ್ನಯ ನಿಯಮಾವಳಿಗಳಲಿ
ಒಂದಿಸಿಯಾಚರಿಸುವ ಕರ್ಮಿಷ್ಟ
ಶ್ರೋತ್ರಿಯ ಬ್ರಾಹ್ಮಣನವಳ ಪಿತ.
ಅದರಿಂದಾ ಎಳೆ ಹುಡುಗಿಯನು
ಬಾಲ್ಯ ವಿವಾಹಕೆ ತೆತ್ತಿಹನು


ಗಂಡನು ಸತ್ತರು, ಕ೦ಬನಿ ಕರೆಯಲು
ತಿಳಿಯದ ತನ್ನ ಕುಮಾರಿಯನು
ಕಂಡನು ತಂದೆಯು ಬಳಿಕವಳೊಡನೆ
ಹೇಳಿದನಾಗಲೆ ನಯ ನುಡಿಯ.
ತಂದೆಯ ಮಾತನು ಕಿವಿಗೊಟ್ಟು,
ಕೇಳಿದಳವಳಾಟವ ಬಿಟ್ಟು!


“ಮಗಳೇ! ನೀನೊಂದತಿ ಶುಭ ಕಾರ್ಯವ-
ನಿಂದೆಸಗಲೆ ಬೇಕದರಿಂದ
ಸೊಗದಲಿ ನಿನ್ನಯ ಪತಿಯೊಂದಿಗೆ ನೀ-
ನತಿಹಿತದಲಿ ಬಾಳಲು ಬಹುದು.
ಅಲ್ಲದೆ ನಿನ್ನಿ೦ದೇಳುತಲೆ-
ಯವರನು ನೀನುದ್ಧರಿಸುವೆಲೆ! ”


ಎ೦ದುದ ಕೇಳುತಲೊಪ್ಪುತ ಹುಡುಗಿಯು
ಬ೦ದಳು ಮುದದಲಿ ಮನೆಯೆಡೆಗೆ
ಅಂದವಳನು ಬಳಿಕಂದದಿ ಮೀಯಿಸಿ,
ಹೊಸ ಹೊಸ ಉಡುಗೆಯನುಡಿಸುತ್ತ,-
ಬಗೆವಗೆಯಾಭರಣಾದಿಗಳ
ತೊಡಿಸುತ, ಸಿಂಗರಿಸಿದರವಳ


ಬಂಧುಗಳೊಂದಿಗೆ ಮೆರವಣಿಗೆಯಲಿ
ಮುದುಕನ ಶವವನು ಮಸಣದೆಡೆ
ತಂದರು; ಆಗಲೆ ತಂದೆಯು ಹುಡುಗಿಯ-
ನಲ್ಲಿಗೆ ಕರೆಯುತ ಕೊಂಡೊಯ್ದ.
ಏನೂ ಅರಿಯದ ಆ ಕನ್ನೆ
ನಡೆದಳು ದಿಬ್ಬಣವೆಂದೊಡನೆ.


ಚಿತೆಯನು ವಿರಚಿಸಿ, ಮುದುಕನ ಶವವನು
ಮಲಗಿಸಿ ಬಿಟ್ಟರು ಅದರಲ್ಲಿ
ಜೊತೆಯಲಿ ಹಡುಗಿಯನೊಡನೆಯೆ ಮಲಗುವ
ತೆರದೊಳಗೆಸಗಿ ಪುರೋಹಿತರು,
ಮಂತ್ರಗಳೇನನೊ ಹೇಳಿದರು.
ತಂತ್ರದಿ ಕ್ರಿಯೆಗಳ ಮಾಡಿದರು.

೧೦
ಬಳಿಕಾ ಹುಡುಗಿಯ ತಂದೆಯೆ ಕಲ್ಮನ-
ದಿಂದಲಿ ತನ್ನಯ ಕೈಮುಟ್ಟಿ,
ಜ್ವಲಿಸಿದನಾಗಳೆ ಕಾಷ್ಠದ ನಾಲುಕು
ಮೂಲೆಗಳಾಪರಿಯೇನೆಂಬೆ!
ಬೆಂಕಿಯು ಮೈಯನು ಮುದ್ದಿಸಲು
ಕನ್ನೆಯು ಕಿಟ್ಟನೆ ಕಿರಿಚಿದಳು!

೧೧
ಹುಡುಗಿಯು ಚಿತೆಯಿಂ ದುಮುಕುತಲೋಡಲು.
ಬಾಂಧವರವಳನು ಬೆದರಿಸುತ,
ಹಿಡಿದಾ ಕಾಷ್ಠಕೆ ದೂಡಿದರಾಗಲೆ
ಒಡನೆ ಪುರೋಹಿತ ಶೀಘ್ರದಲಿ-
ಪ್ರಾಯಶ್ಚಿತ್ತವ ಮಾಡಿದನು.
ಬೆಂಕಿಯ ಬಿರುಸಾಗುರಿಸಿದನು

೧೨
ಬಾಲೆಯು ಬೆಂಕಿಯ ಬೇಗೆಯ ಸಹಿಸಲಿ-
ಕಾಗದೆ ಕೂಗುತಲಿರುತಿರಲು,
ಆಲಿಸಿ, ರೋದಿಪ ದನಿಯದು ಕೇಳದ
ತೆರದಲಿ ಡೋಲು-ನಗಾರಿಯನು-
ಕಿವಿ ಕಿವುಡಾಗುವ ರೀತಿಯಲಿ
ಮೊಳಗಿಸಿ ಬಿಟ್ಟರು ಬೇಗದಲಿ

೧೩
ತಿರುಗಾ ಬಾಲಿಕೆ ಬಾರದ ತೆರದಲಿ
ಬಿದಿರಿನ ಉದ್ದದ ಕೋಲಿನಲಿ
ಉರಿಯುವ ಕಿಚ್ಚಿಗೆ ದೂಡುತಲೊತ್ತಿ,
ಹಿಡಿದರು ಕೆಲವರು ಬಂಧುಗಳು
ಹುಡುಗಿಯ ಮೆಲ್ಲೊಡಲಗ್ನಿಯಲಿ
ಐಕ್ಯವದಾಯಿತು ಶೀಘ್ರದಲಿ

೧೪
ಆ ಸುಡುಗಾಡಿನ ಸುತ್ತಿನೊಳೆಲ್ಲಿಯು
ನಟ್ಟಿರುಳಿನ ನೀರವತೆಯಲಿ,
ಬೀಸುವ ಗಾಳಿಯ ಹೊಯ್ಲಿನೊಳೀಗಲು
ಕೇಳಿಸುತಿರುವುದು ಕೀರುದನಿ!
ಕನ್ಯೆ ಪಿಶಾಚಿಯ ರೂಪಾಂತು
ತಿರುಗುವಳೆಂದೊರೆಯುವರಿಂತು!
*****
೧೯೩೭

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...