Home / ಕವನ / ಕವಿತೆ / ಅಂದೊಂದು ದಿನದಲ್ಲಿ

ಅಂದೊಂದು ದಿನದಲ್ಲಿ

ಅಂದೊಂದು ದಿನದಲ್ಲಿ,- ನಿಶಿಯ ನೀರವದಲ್ಲಿ-
ಇಂದುವಿನ ತಿಳಿಯಾದ ಬೆಳದಿಂಗಳಲ್ಲಿ-
ಒ೦ದಿಯಾನಂದವನು ಬಗೆಯ ಬೇಸರ ಕಳೆಯೆ,
ಮಂದಿರದ ಹೊರಜಗಲಿಯಲ್ಲೊರಗಿದೆ


ಮೇಲೆ ನೀಲಾಕಾರವನ್ನ ದಿಟ್ಟಿಯನಟ್ಟೆ-
ಲೀಲೆಯಿಂದಲಿ ಚಂದ್ರ ಸಾಗುತಿಹನು.
ಹಲಕೆಲವು ತಾರೆಗಳು ತಮ್ಮ ಪತಿ ವಿರಹವನು,
ತಾಳಲಾರದೆ ಮೆಲ್ಲಿನಡಿಯಿಡುವುವು


ಬಂಧು ಬಳಗವನೆಲ್ಲ ಬಿಟ್ಟು, ಕಾಲನಗಾಧ
ಕಂದರದಿ ಮರೆಯಾಗುತಿರುವ ನರರಂತೆ.
ಅಂದು ಕೆಲ ತಾರೆಗಳು ತಮ್ಮ ಸಹಚರರನ್ನು
ಹಿಂದುಳಿದು, ಕೆಳ ಬಿದ್ದು ಮರೆಯಾಗುತಿಹವು


ನೀಲಿಮೆಯ ನಭದಲ್ಲಿ ರಜತ ಚಂದ್ರನ ಕಿರಣ-
ಮಾಲೆ ಸಾಲಿಟ್ಟೆಸೆಯೆ ತೆರೆಯ ತೆರದಲ್ಲಿ,
ಹಾಲ ಕಡಲಿನ ಪೆಂಪ ಲೀಲೆಯಿಂದೊಳಗೊ೦ಡು
ಮೇಲೆಯಾಗಸವಿಂದು ತೊಳಗುತಿಹುದು


ಎತ್ತಲೂ ಪ್ರಕೃತಿಯದು ಮೌನ ರಾಜ್ಯದ ಮರೆಯೊ-
ಳೊತ್ತರದಿ ಮಲಗಿ ನಿದ್ದೆಯ ಗೈಯುತಿರಲು,
ಸುತ್ತಲಿರುತಿಹ ಬೆಡಗ ನೋಡಿಯರೆಚಣ ಸರಿಯೆ
ಎತ್ತಣಿಂದಲೊ ಬ೦ತು ನಿದ್ದೆಯಾವರಿಸಿ,


ರಾತ್ರಿಯೆಲ್ಲವು ಸವೆಯೆ ಸವಿಯಾದ ಕನಸಿನಲಿ,
ಮತ್ತೆನ್ನನೆಬ್ಬಿಸಿತು ಮೈದಡವುತ-
ಹತ್ತಿರದ ಮರ-ಬಳ್ಳಿ-ಗಿಡಗಳೆಲೆಯೆಡೆಯಲ್ಲಿ
ಸುತ್ತಿ ಸುಳಿಯುತಲಿದ್ದ ತಂಗಾಳಿಯು


ತಂಬೆಲರು ತನ್ನ ಸುವಿಲಾಸದಿಂದೆಸೆಯುತ್ತ,
ತುಂಬಿ ನವಶಕ್ತಿಯನು ಅಂಗಾ೦ಗದಲ್ಲಿ,
ಬೆಂಬಿಡದೆ ಮೆಯ್ಯನ್ನು ಹಾದು ಹೋಗಲು, ನವಿರು
ಬಿಂಬಿಸಿತು; ನಲವೊಲಿಯಿತೆನ್ನ ಮನಕೆ


ಎಂದಿಗೂ ಬಾರದಿಹ ಹೊಸ ಹುರುಪು ಬಗೆಯೊಳಗೆ
ಬಂದು ಶಾ೦ತಿಯ ಕೊಡಲು, ಎದ್ದು ಕುಳಿತೆ.
ಮುಂದೆ ನಾ ಸುತ್ತಲೂ ಸರಿಯಿಸಲು ನೋಟವನು,
ಸುಂದರದ ದೃಶ್ಯವದು ಕಂಡಿತೆನಗೆ-


ಉಷೆಯು, ಹೊಸ ಮಿರುಗು ಮೈವೆತ್ತು ರಂಜಿಸುತಿರುವ
ಹೊಸ ವಸ್ತ್ರವುಡಿಸಿಹಳು ಪ್ರಕೃತಿರತಿಗೆ.
ಮಿಸುನಿ ಬಣ್ಣವನದಕೆ ಹಚ್ಚುತಿದ್ದನು ಮೂಡು-
ದೆಸೆಯೊಳರುಣನ ಕೂಡಿ ಬರುವ ರವಿಯು

೧೦
ಉದಯಿಸುವ ನೇಸರಿಗೆ ಸ್ವಾಗತವನೀವಂತೆ,
ಉದಯ ಗಾನವನೆಲ್ಲ ವಿಹಗ ತತಿಯು
ಮುದದಿ ಮಾಡುತಲಿದ್ದುವಲ್ಲದೇ ಬಳ್ಳಿಗಳು
ಇದಿರಿನಲಿ ಹಿಡಿದಿದ್ದುವಲರುಗಳನು

೧೧
ಇಂತೆಸೆವ ನೋಟವನು ಮನದಣಿಯೆ ನೋಡುತ್ತ,
ಸಂತಸವನಾ೦ತೆದ್ದು, ಈ ತಿರೆಯನು
ಇಂತು ಕಂಗೊಳಪಂತೆ ಗೈದ ದೇವಗೆ ನಾನು
ಅಂತರಂಗದಿ ಧನ್ಯವಾದವರ್ಪಿಸಿದ್ದೆ.
*****
೧೯೩೫

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...