ಅಲ್ಲದಂತ್ತೀಗೆ, ಬೆಲ್ಲದಂತ ನಾದೂನಿ
ನೆಲ್ಲಿಕಾಯಂತ ನೆಗೆಣ್ಣಿ | ಕೂಡಾಡಿ
ಕಲ್ಯಾಣ ತವರ ಮರತೇನ ||
ಅತ್ತೀಯ ಮನಿಯಾಗ, ಹತ್ತೆಂಟು ಬೇದಾರ
ಹಚ್ಚಿಕೋ ಬ್ಯಾಡ ನನ ಮಗಳ | ಜನವೆಲ್ಲ
ಗಂಗವ್ವನೆಂದು ಕರೆದಾರ ||
ಗಂಡನ ಈ ಮನೆಯು, ಗಂಡಗಾರಿಯ ಮುಳ್ಳ
ಕುಂಡರಗೊಡರ ನಿಲಗೊಡರ | ಬೇಗಿಗೆ
ಕಂದಗ ಮಲೆಯ ಕೊಡಗೊಡರ ||
ಹುಚ್ಚನಂತ ಗಂಡ, ಹುಲಿಯಂತ ಮೈದೂನ
ನಿಚ್ಚಪಂಡಿತಳು ನೇಗೆಣ್ಣಿ | ಕೈಯಾಗ
ಹುಚ್ಚಿ ನಾ ಹ್ಯಾಂಗ ನಡಿಯಾಲಿ ||
ಮಾರಾಯ ಬೇದಾರ, ಬಾರಾವು ಕಣ್ಣೀರು
ಮಾರಾಯ್ರ ತಮ್ಮ ಮೈದೂನ |ಬೇದಾರ
ಮಾಡಿಲ್ದ ಮಳೆಯು ಸುರಿದ್ಹಾಂಗ ||
*****

















