ಬೆಳ್ದಿಂಗ್ಳ ಬಿದ್ದಿತ್ತು ಅಂಗಳ ತುಂಬ
ಅಂಗಳ ತುಂಬಿತ್ತು ಬೆಳ್ದಿಂಗ್ಳದಿಂದ
ಇದರಾಗ ಅದೇ ಬಿತ್ತೊ
ಅದೇನೆ ಇದರಾಗಿತ್ತೊ.
ಕನಸಿನೊಳಗೆ ನಾನಿದ್ದೆ
ಅಲ್ಲೆ ನೀನು ಹೊರಬಿದ್ದೆ.
ರೆಕ್ಕೆಯಾಗಿ ಬಯಲಾಗ
ಹುಡುಕಾಡಿದೆ.
ನನ್ನೊಳಗೆ ಕಂಡನೇನೋ
ಕಂಡೊಳಗ ಇದ್ದನೇನೋ
ಇದ್ದಾಂಗ ಇತ್ತು ಎಲ್ಲಾ
ಇದಲ್ಲೆ ಅಲ್ಲೆ.
ತಿಳಿನೀರ ತಳಾ ಕಂಡು
ತಿಳಿದಿದ್ದೆ ನಾನು ಬಲ್ಲೆ-
ಎಲ್ಲೆ ನೀರ? ಎಲ್ಲೆ ನಲ್ಲೆ?
ಅನುಭವದ ಕಲ್ಪದಲ್ಲೆ
ಅಂದುಕೊಂಡಿದ್ದೆ.
ಸತ್ಯದ ನೆರಳೊಂದು
ಸುಳ್ಳೀನ ತಿರುಳಿನ್ಹಾಂಗ
ಮೆರಿದಾಡತಿತ್ತು ನಾನು
ಹರಿದಾಡಿದಾಗ.
ತೋರಿಧಾಂಗ ಹೊಳೀತಽದ
ನೋಡಿದಾಗ ಮೂಡಿ ಭಾವ
ಮೂಢ ಭಾವ ಅಂದರೇನೊ
ತಿಳಿಯದ ಮಾತು.
*****

















