
ನೀವೆ ಹೇಳಿರಿ ಇದು ಯಾವ ಸೀನು?
ನವ್ಯಕ್ಕು ಬಲು ನವೀನು-ನಾವೆಲ್ಲು!
ಓ! ಇದು ಹಳೆಯ ಜೊಲ್ಲು
ಆದರೂ ಈ ಸೊಲ್ಲು
ಅಲ್ಲ-ಗುಲ್ಲು-
****
ಪ್ರಾಸ ಜೋಡಿಸಬೇಡ
ಹೊಡಿ ಮುಂದೆ ಗಾಡಿ
ಊರ ಮುಂದಿದೆ ಹಳ್ಳ
ಅಲ್ಲಿ ತೊಳೆ ರಾಡಿ!
****
ನೆಗಡಿ ಜೋರಾಗಿತ್ತು
ಮೂಗು ಬಿಗಿ ಹಡಿದು
ಮನೆಗೆ ಬಂದವ ಸೀನನು
ಅವನೆದುರು ಅವನ ಹೆಂಡತಿ ಸೀತಳು-!
ಒಂಟಿ ಸೀತಳು-ವಿರಹ ಕಾಲವನು
ಕುಂಟಿಗೋ ಕೂರಿಗೋ ಹಲಹಲ ಎಂದು.
ಕಳೆದು ಕಂಡದ್ದಾಯ್ತು ಬೆಳುದಿಂಗಳು
‘ಆನೆ ಸೀನದು’ ಎಂದು ತಾ ಬುದಿಂಗನೆ ಬಂದು
ಎದುರು ನಿಂದಿರೆ ಕಂಪ!
ಖಂಬ-ದೀಪಸ್ತಂಭ!
ಸೀತಳಿಗೆ ಶೀತ ವಿಪರೀತ
ಆದರೂ ಜ್ವರವು-ಕಾವು
‘ಸೀನ-ಸೀತ’
ಇಬ್ಬರೇ ಇಬ್ಬರು ತಾವು
ಆದರೆ, ಸೀನನೇ ಸೀತ
ಒಂದು! ಎರಡು!
ಇದು ಕ್ಷೇಮ-ದಾಂಪತ್ಯ ಮಿಲನದ ಯೋಗ
ಜರ್ರನೇ ಜ್ವರವಿಳಿದು
ತಪತಪನೆ ತೊಳೆದು ಹೋಯಿತು ತಾಪ
ಪಾಪ!
ಭೀತ ಸೀತಳ ಮೈಯ್ಯು ಹಗುರಾಯ್ತು
ಶೀ-ನೀ!?
ಎಂದು ಒಡನುಡಿದಿತ್ತು
ಉಸಿರಿನ ಧೂಪ.
*****
















