Home / ಕವನ / ಕವಿತೆ / ಬೆಳೆದು ಬಂದ ಬಯಕೆ

ಬೆಳೆದು ಬಂದ ಬಯಕೆ

೧
ದಿವಸ ದಿವಸ ಕಳೆದು ಇಂದು ವರುಷ ತುಂಬಿ ನಿಂತಿದೆ
ನೂರು ನೋವನೆಣಿಸಿ ಗುಣಿಸಿ ಮನಕೆ ಮಂಕು ಕವಿದಿದೆ
ಹಗಲು ಇರುಳು ನೆನವೆ ಬುತ್ತಿ
ಹೃದಯದೊರತೆಯಲ್ಲ ಬತ್ತಿ
ದೇಹವೆಲ್ಲ ಕರಗಿ ಸೊರಗಿ ಬಾಳು ಬೇಸರೆನಿಸಿದೆ.
ಜೀವ ಮೌನ ತಾಳಿದೆ.
೨
ಇಂದು ನಗುವೆ ಇಲ್ಲವಾಯ್ತು
ಮೌನ ಭಾರದಿಂದ ಸೋತು
ದೇಹ ಭೂಮಿಗಿಳಿದಿದೆ
ಧೂಳಿಯಲ್ಲಿ ನರಳಿದೆ;
ನನ್ನ ಸುತ್ತು ಮುತ್ತಲೇನು
ಮುಖವನೆತ್ತಿ ನೋಡಲೇನು
ಚಣ ಚಣಕೂ ಕರುಳ ಕೆಣಕಿ ಕಣ್ಣಿರಿಯುವ ಕತ್ತಲೆ
ಅದರ ಕುಣಿತ ಬತ್ತಲೆ!
೩
ದುಃಖ ಅತಿಥಿಯಂತೆ ಬಂದು
ಮನೆಯ ಹೊಸ್ತಿಲಾಚೆ ನಿಂದು
ನನ್ನ ಕೂಗಿ ಕರೆದರೆ
ಬಾಗಿಲನ್ನು ಬಡಿದರೆ
ಕರುಣೆ ಇಲ್ಲದವರ ತೆರದಿ ಅದಕೆ ಬೇಡವೆನ್ನಲೆ?
ನನ್ನತನವ ಮರೆಯಲೆ?
೪
ತಾಳ್ಮೆ ಬಾನ ಬಿತ್ತರ
ಹಿಮಾಲಯಕು ಎತ್ತರ
ಅದರ ಪೂರ್ವ ಪುಣ್ಯವೇನೊ
ಸೌಭಾಗ್ಯದ ಚಿಹ್ನೆಯೇನೊ
ಹೃದಯದಾಳದಲ್ಲಿ ಮೌನ ಗರ್ಭಧರಿಸಿದಂತಿದೆ.
ಬೆಳಕಿಗಾಗಿ ತಪಿಸಿದೆ.
೫
ನನ್ನ ಎದೆಯ ಮೂಡಲಲ್ಲಿ
ಕನಸು ಮನಸು ಕೂಡುವಲ್ಲಿ
ಇಂದು ಇಲ್ಲವಾದರೂ
ಮುಂದೆ ಒಮ್ಮೆಯಾದರೂ
ಹಾಲು ಹಣ್ಣು ಹೂವು ಜೇನು ಹೊತ್ತು ಬರನೆ ಚಂದಿರ
ಕಣ್-ಮನಕೂ ಸುಂದರ!
೬
ಪೂರ್ಣಕಲಾ ಪುಣ್ಯಮಾಯಿ
ಬೆಳುದಿಂಗಳ ಹಾಲ ತಾಯಿ
ಇರುಳ ಜೋಗುಳನ್ನು ಹಾಡಿ
ಕಣ್ಣು ತುಂಬುವಂತೆ ನೋಡಿ
ಈ ಚಂದ್ರಮ ಈ ಸಂಭ್ರಮ-ನಿನಗೆ ಇರಲಿ ಎನ್ನಳೆ?
ಉಡಿಯ ತೆರೆದ ಕರೆಯಳೆ!
*****
Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...