ಕೈಯಲ್ಲಿ ಕೋವಿ ಹಿಡಿದವರು
ನನ್ನ ಜನಗಳಲ್ಲ ಸ್ವಾಮಿ
ಭತ್ತದ ಗದ್ದೆಯಲಿ ನಡು ಬಗ್ಗಿಸಿ
ಕುಡುಗೋಲು ಹಿಡಿದವರು ಅವರು.
ನನ್ನವರ ಎದೆಯಲ್ಲಿ ಕಾವ್ಯವಿದೆ
ಎತ್ತಿನ ಗೆಜ್ಜೆನಾದ, ಹಂತಿ ಹಾಡುಗಳಿವೆ
ನೋವು ಮರೆತು ಹಾಡುತ್ತಾರೆ.
ಸಂಘರ್‍ಷದ ಬದುಕು ಬದುಕುತ್ತಾರೆ.
ಮನದಲ್ಲಿ ಛಲ ಹೊತ್ತ ನನ್ನವರ
ಎದೆ ತುಂಬ ಗಾಯಗಳು.
ಹರಿದು ಸೋರಿದ ಕೀವು ರಕ್ತ
ಹಾಡಿನ ಹೊನಲಾಗಿ ಹರಿಯುವವು.
ದೀಪವಿಲ್ಲದ ಕತ್ತಲ-ಹಳ್ಳಿಗಳಲ್ಲಿ
ಅಜ್ಞಾತ ಬದುಕು ಬದುಕುತ್ತಿರುವವರು
ಕೊಡ ನೀರಿಗಾಗಿ ಮೈಲು ನಡೆದವರು.
ಅವರು ಆತ್ಮವಿಶ್ವಾಸದ ಪರ್‍ವತಗಳು ಸ್ವಾಮಿ
ನನ್ನ ಜನಗಳು ಕನಸುಗಾರರು
ಪ್ರಾಮಾಣಿಕ ಬದುಕು ಬದುಕುತ್ತಿರುವವರು
ಸರಳತೆಯ ಜೀವನ ಸಾಗಿಸುತ್ತಿರುವವರು.
ನವಿಲ ಗರಿಯಂಥ ಹುಲ್ಲ ಗರಿಕೆಗಳ
ಹೊತ್ತ ಗುಡಿಸಲುಗಳ ಹೊದಿಕೆಗಳ ಕೆಳಗೆ
ಸಂತರ ನಡೆನುಡಿಗಳು ಅವರದು ಸ್ವಾಮಿ,
ಕನಸಿನ ಲೋಕಕ್ಕೆ ಅವರು
ಮೆಟ್ಟಿಲುಗಳ ಕಟ್ಟಿದವರು
ಕನಸು ಕಮರಿದರೂ,
ಸ್ವಾಭಿಮಾನದ ಉನ್ನತ ಬದುಕು
ಪ್ರೀತಿಸಿದವರು.
ನನ್ನವರ ಬೇಡಿಕೆಗಳು ಸೀಮಿತ
ಮಣ್ಣ ಹಣತೆಯ ಆಯುಷ್ಯ ಅವರದು
ಆದರೂ ಬೆಳಕು ಅನಂತಕಾಲ ಸ್ವಾಮಿ.
*****