ನನ್ನ ಹಾಡು ಹಕ್ಕಿಯಾಗಿ ಹಾರಿ ಹೋಗಲೀ
ನನ್ನ ಹಾಡು ಗೂಡು ಗೂಡು ಸಾಗಿ ಹೋಗಲೀ ||ಪ||
ಮಹಡಿ ಮನೆಯ ಪಂಜರದಲಿ ಸಿಕ್ಕಿ ಹಿಕ್ಕಿ ಹಾಕಧಾಂಗೆ
ಪಟ್ಟಣಗಳ ಬೆಂಕಿ ಪೊಟ್ಟಣಗಳ ಕಡ್ಡಿ ಆಗಧಾಂಗೆ
ಬೊಜ್ಜುಗಳ ಮುಖದ ಮೀಸೆ ಮೇಲೆ ಕುಳಿತು ಕಿಸಿಯಧಾಂಗೆ
ಕಲಿತ ಮಾತ ಮಾರಿಕೋಂತ ಬೀದಿಗಿಳಿಯು ಆಗಧಾಂಗೆ ||೧||
ನೋಟುಗಳನು ಚುಂಚದಿಂದ ಗುಟ್ಟಾಗಿ ಎಣಿಸಧಾಂಗೆ
ವಾರ ನಾರಿಹಂಗೆ ವಾರೆ ನೋಟ ಮೋಡಿ ಮಾಡಧಾಂಗೆ
ಅಂಗಿ ಸಂದುಗಳಲಿ ತೂರಿ ಮಂಗನಾಟ ಆಡಧಾಂಗೆ
ಅಲ್ಲಿ ಇಲ್ಲಿ ಬೆಲ್ಲ ಮಾಡಿ ಬೇಳೆ ಬೇಯ್ಸಿಕೊಳ್ಳಧಾಂಗೆ ||೨||
ಬೂಟುಗಾಲು ನೆಕ್ಕಧಾಂಗೆ ತುಳಿಯೋ ಕಾಲ್ಗೆ ಸಿಕ್ಕಧಾಂಗೆ
ತಾಟಗಿತ್ರಿ ತಂತ್ರದಿಂದ ತೂತು ತೂತು ತೂರಧಾಂಗೆ
ಪೇಟೆ ಬಸವಿಹಂಗೆ ಹಣದ ವಿಟನಿಗಾಗಿ ಕಾಯಧಾಂಗೆ
ಮೇಲೆ ಮೇಲೆ ಹಾರಿಕೋಂತ ಮುಗಿಲು ಚಿಕ್ಕಿ ಆಗಧಾಂಗೆ
ಕೆಳಗೆ ಕೆಳಗೆ ಕುಪ್ಪಳಿಸುತ ನೆಲಗುಮ್ಮ ನಾಗಧಾಂಗೆ ||೩||
ಹರಕು ಮುರುಕು ಗುಡಿಸಲಲ್ಲಿ ಬರಿಯ ಎಲುಬು ಗೂಡುಗಳಲಿ
ಬದುಕುಬಲದ ಭಾವಗೀತೆ ಸೆಲೆಯ ಚಿಮ್ಮಿ ಹೊಮ್ಮಿಸಲಿ
ಸಾವು ನೋವು ನರಳುಗಳಿಗೆ ಉಪಶಮನದ ಗಾಳಿಯಾಗಿ
ಬತ್ತಿದ ಕಣ್ಣಿನ ಕುಳಿಗಳ ಬೆಳಕ ಬಲ್ಬು ಹೊತ್ತಿಸಲಿ ||೪||
ಬರಗಾಲದ ಬಿರುಕುಗಳಲಿ ಛಲದ ಜಲವನುಕ್ಕಿಸಲಿ
ಮಾತು ಕೋತಿ ಕುಣಿಸಧಾಂಗೆ ಮೌನರಾಗ ಮೀಟಲಿ
ಸತ್ತನರರ ನರಕೆ ದಿಟ್ಟ ಸತ್ವದೆಳೆಯ ಕಸಿ ಮಾಡಲಿ ||೫||
ಹರಿವಿಯೊಳಗೆ ಕೊಳೆತ ನೀರ ಶುದ್ದಿ ಮಾಡೋ ತಿಳಿವಾಗಲಿ
ಮಣ್ಣ ಮರ್ಮವರಿತು ಮಣ್ಣ ಬಣ್ಣದೊಳಗೆ ಮುಳಿಗೇಳಲಿ
ತಾನೆ ತಾನೆ ತನನವಾಗಿ ಬದುಕಗೂಡ ಮುದವಾಗಲಿ ||೬||
*****