ಮೂಲ: ವಿಲಿಯಂ ಬಟ್ಲರ್ ಏಟ್ಸ್
೧
ಶಾಲಾಕೊಠಡಿಯೊಳಗೆ ನಡೆಯುತ್ತಲಿದ್ದೇನೆ ಪ್ರಶ್ನಿಸುತ್ತ;
ಉತ್ತರಿಸುತ್ತಿದ್ದಾಳೆ ಬಿಳಿಯುಡಿಗೆಯಲ್ಲಿರುವ ಕ್ರೈಸ್ತ ಸನ್ಯಾಸಿನಿ ಜೊತೆ ಬರುತ್ತ;
ಕಲಿಯುತ್ತಿವೆ ಮಕ್ಕಳು ಸೊನ್ನೆ ಸುತ್ತುವುದನ್ನು ಹಾಡು ಹೇಳುವುದನ್ನು
ಓದು ಹೊತ್ತಗೆ ಮತ್ತು ಚರಿತ್ರೆ ಪುಸ್ತಕಗಳ ಅಧ್ಯಯನ ಕ್ರಮವನ್ನು
ಬಟ್ಟೆ ಕತ್ತರಿಸಿ ಹೊಲಿಯುವುದನ್ನು ಆಧುನಿಕ ಬಗೆಯಲ್ಲಿ ಚೊಕ್ಕವಾಗಿರುವುದನ್ನು,
ದಿಟ್ಟಿಸುತ್ತವೆ ಬೆರಗುಗಣ್ಣಲ್ಲಿ ಮಕ್ಕಳು ಕ್ಷಣಕಾಲ ಎದುರಿರುವ ಮುದುಕನನ್ನು,
ಅರವತ್ತು ಕಳೆದಿರುವ, ನಗುಮುಖವ ತಳೆದಿರುವ
ಸಾರ್‍ವಜನಿಕ ವ್ಯಕ್ತಿಯೊಬ್ಬನನ್ನು.
೨
ನೆನಪಾಗುತಿದೆ ಆರುತ್ತಿರುವ ಉರಿಗೂಡು, ದೇವಮೋಹಕ ಕಾಯ
ಮೇಲೆ ಬಾಗಿದೆ. ಮೆಲ್ಲಗುಸುರುತಿದೆ ಕಿವಿಯೊಳಗೆ ತನ್ನ ವ್ಯಥೆಯ
ಏನೊ ಕಟುಗದರಿಕೆ, ಕ್ಷುದ್ರಘಟನೆ ಅದೇನೊ, ಬಾಲ್ಯದಿನದೆಲ್ಲ ಮುಗ್ಧತೆಯ
ಕದಡಿ ನೂಕಿದ ದುರಂತಕ್ಕೆ; ಕಥೆ ಕೇಳುತ್ತ ಅನಿಸುತ್ತಿದೆ:
ನಮ್ಮ ಪ್ರಕೃತಿಗಳೆರಡೂ ಹರೆಯದ ಸಹಾನುಭೂತಿ
ವೃತ್ತದಲ್ಲಿ ಬೆರೆತು ಒಂದಾಗುತ್ತಿವೆ. ಪ್ಲೇಟೋನ
ದೃಷ್ಟಾಂತವನ್ನೆ ತುಸು ಬದಲಿಸುವುದಾದರೆ
ಒಂದೆ ತತ್ತಿಯ ಹಳದಿ ಬಿಳಿಗಳಂತೆ ಕೂಡಿ ನೆರೆಯುತ್ತಿವೆ.
೩
ಆ ವ್ಯಥೆಯ ಉಮ್ಮಳಿಕೆ, ರೋಪಗಳ ನೆನೆಯುತ್ತ
ಮಕ್ಕಳೆಡೆ ತಿರುಗಿ ಒಂದೊಂದನ್ನೆ ನೋಡುತ್ತೇನೆ.
ಆ ಪ್ರಾಯದಲ್ಲಿ ಅವಳೂ ಅಲ್ಲಿ ಹಾಗೆಯೇ
ನಿಂತಿದ್ದಳೋ ಎಂದು ಬೆರಗಾಗುತ್ತೇನೆ – ಯಾಕೆ ?
ಹಂಸಸಂತತಿ ಕೂಡ ಹೇಂಟೆಯ ಪರಂಪರೆಯ ಜೊತೆ ಪಾಲು ಪಡೆದೀತು
ಕೆನ್ನೆಗೂ ಕುರುಳಿಗೂ ಅದೆ ಬಣ್ಣ ಬಂದೀತು –
ಹೀಗನಿಸಿ ಹೃದಯ ಹುಚ್ಚೆದ್ದು ಹಾಯುತ್ತದೆ.
ಅವಳೀಗ ಜೀವಂತ ಎಳೆಹುಡುಗಿ, ಆ ರೂಪ ಕಣ್ಣಕಾಡುತ್ತದೆ.
೪
ಅವಳ ಸದ್ಯದ ರೂಪ ತೇಲಿ ಬರುತಿದೆ ನನ್ನ ಕಣ್ಣಮುಂದೆ-
ಆ ‘ಡವಿಂಚಿಯ’ ಕುಶಲಿ ಬೆರಳುಗಳೆ ಆ ಶಿಲ್ಪ ರೂಪಿಸಿದುವೊ?
ಗಾಳಿ ಕುಡಿದಂತೆ, ಬರಿ ನೆರಳನುಂಡಂತೆ ಒಳಕುಸಿದಿರುವ ಗಲ್ಲ;
ನಾನೇನೂ ಬಲು ಚೆಲುವನಲ್ಲ, ಆದರೂ ಹಿಂದೆ
ತಕ್ಕ, ಚಂದದ ಗರಿಗಳಿದ್ದವನು – ಸಾಕು ಅದೀಗ,
ನಗುವುದೆಲ್ಲವ ನೋಡಿ ನಗುವುದೆ ಸಲೀಸು, ನೆಮ್ಮದಿಯ ಕೊಡುವ
ಮುದಿ ಬೆದರುಗೊಂಬೆ ಇಂಥದು ಒಂದು ಇದೆಯೆಂದು
ತೋರುವುದೇ ಲೇಸು.
೫
ರಾಗಸುಖರಸದ ವಂಚನೆಯಿಂದ ಹೊರಬಂದ,
ಹಳೆನೆನಪಿಗೋ ಅಥವ ಕೊಟ್ಟ ಔಷಧದ ಪ್ರಭಾವಕ್ಕೋ ಸಂದ
ನಿದ್ದಿಸುವ, ಅಳುಗರೆವ, ಪಾರಾಗಲೆಳಸುವ ಮುದ್ದುಕಂದ.
ಅದನ್ನು ತೊಡೆಯಲಿಟ್ಟು ರಮಿಸಿದ್ದ ತಾಯಿ ಯಾರೇ ಇರಲಿ, ಈಗ
ಅರವತ್ತು ಶಿಶಿರಗಳ ಹೊರೆಯನ್ನದು ತಲೆಯಲ್ಲಿ ಹೊತ್ತಿರುವುದನ್ನು
ಇಲ್ಲವೇ ಅದರೊಂದು ಕಟ್ಟಕಡೆ ಯಾನದ ಅನಿಶ್ಚಿತತೆಯನ್ನು
ಕಂಡಲ್ಲಿ ಹೇಗೆ ಭಾವಿಸಿಯಾಳು ತನ್ನೆಲ್ಲ ಹೆರಿಗೆ ವೇದನೆಗೆ
ಪ್ರತಿಯಾಗಿ ಪಡೆದಂಥ ಪರಿಹಾರವೆಂದು ತಾ ಹೆತ್ತಮಗನನ್ನು?
೬
ಸ್ವರ್‍ಗದ ಪದಾರ್‍ಥ ಮಾದರಿಯನ್ನು ಆಧರಿಸಿ ಆಡುವಂಥ
ಬರಿ ಒಂದು ಬುರುಗುನೊರೆ ಈ ಪ್ರಕೃತಿಯೆಲ್ಲವೂ ಎಂದ ಪ್ಲೇಟೊ;
ದೃಢಮತಿ ಅರಿಸ್ಟಾಟಲ್ ರಾಜಾಧಿರಾಜನ ಕುಂಡಿಯ ಮೇಲೆ
ಚಾಟಿಯನ್ನಾಡಿಸಿದ; ವಿಶ್ವ ವಿಖ್ಯಾತ ಹೊಂದೊಡೆಯ ಪೈಥಾಗೊರಸ್
ಆಡಿಸಿದ ವಯೊಲಿನ್ ತಂತಿಗುಚ್ಛದ ಮೇಲೆ ಬೆರಳನ್ನೊಮ್ಮೆ,
ಎಂಥ ತಾರಾಗಾನ, ಲಕ್ಷ್ಯವಿಲ್ಲದ ಕಲಾದೇವಿಯರಿಗೂ ಕೂಡ ಅಮೃತಪಾನ:
ಆದರೂ ಕಡಗೆಲ್ಲ ಒಣಕೋಲಿಗಾನಿಸಿದ ಹಳೆಯ ಅಂಗಿಗಳು,
ಹಕ್ಕಿಯೋಡಿರಲೆಂದು ಎತ್ತಿ ನಿಲ್ಲಿಸಿದಂಥ ಬೆದರುಗೊಂಬೆಗಳು.
೭
ತಾಯಿ ಸನ್ಯಾಸಿನಿಯರಿಬ್ಬರೂ ಪ್ರತಿಮೆಗಳ ಪೂಜಿಸುವರು,
ಆದರೂ ಮೋಂಬತ್ತಿ ಬೆಳಗಿಸುವ ಬಿಂಬಗಳು
ತಾಯ ಕಣಸುಗಳನ್ನು ಉಜ್ಜೀವಿಸುವುದಲ್ಲ, ಬೇರೆ ರೀತಿಯವು,
ಕಂಚಿನಲಿ, ಅಮೃತ ಶಿಲೆಯಲ್ಲಿ ಕಡೆದಿಟ್ಟಂಥ ಶಾಂತರೂಪಗಳು.
ಎದೆ ಬಿರಿಸುವುವು ಅವೂ – ಭಕ್ತಿಗೆ, ಗಾಢಾನುರಕ್ತಿಗೆ, ಪ್ರೀತಿಗೆ
ಗ್ರಹಿಸಬರುವಂಥ ಓ ಸನ್ನಿಹಿತ ಶಕ್ತಿಗಳೆ,
ಸ್ವರ್‍ಗೀಯ ವೈಭವವನೆಲ್ಲ ಪ್ರತಿಮಿಸುವಂಥ ಹಿರಿಯ ಸತ್ವಗಳೆ-
ಓ ಮರ್‍ತ್ಯಸಾಹಸದ ಸ್ವಯಂಜನಿತ ಅಣಕಗಳೆ;
೮
ಎಲ್ಲಿ ಆತ್ಮಾನಂದಕ್ಕಾಗಿ ಎಷ್ಟೂ ಕಾಯ ನೋಯಬೇಕಿಲ್ಲವೋ,
ಎಲ್ಲಿ ಸೌಂದರ್‍ಯ ಸ್ವಂತದ ಹತಾಶೆಯೆ ಹೆತ್ತ ಸೃಷ್ಟಿಯಾಗಿಲ್ಲವೋ,
ಮಬ್ಬುಗಣ್ಣ ವಿವೇಕ ನಟ್ಟಿರುಳ ಅಧ್ಯಯನದಿಂದ ಹುಟ್ಟಿಲ್ಲವೋ,
ಅಲ್ಲಿ ಶ್ರಮ ಹೂ ಚಿಮ್ಮಿ ಕುಣಿದು ಕುಕಿಲಿರಿಯುತ್ತದೆ.
ನೀಳ ಚಂಪಕ ಮಹಾವೃಕ್ಷವೆ, ಹೆಬ್ಬೇರ ನೆಮ್ಮಿ ಎದ್ದಿರುವ ಸುಮಜಾಲವೆ,
ನೀನೇನು ಎಲೆಯೆ, ಹೂದೇ, ಇಲ್ಲ ಕಾಂಡವೆ?
ಗಾನಕ್ಕೆ ತುಯ್ಯುತ್ತಲಿರುವ ಮೈಮಾಟವೆ, ಹೊಳೆವ ಕಣ್ನೋಟವೆ,
ನೃತ್ಯದಿಂದ ನರ್‍ತಕನನ್ನು ಬೇರ್‍ಪಡಿಸಿ ನೋಡುವುದು ಸಾಧ್ಯ ಹೇಗೆ?
*****
ಏಟ್ಸ್ ಸೆನೆಟರ್ ಆಗಿದ್ದ ಅವಧಿಯಲ್ಲಿ ಐರಿಷ್ ವಿದ್ಯಾಭ್ಯಾಸ ಕ್ರಮವನ್ನು ಪರಿಶೀಲಿಸುವ ಸರ್‍ಕಾರಿ ಸಮಿತಿಯೊಂದರ ಸದಸ್ಯನಾಗಿದ್ದ. ೧೯೨೬ರಲ್ಲಿ ಅವನು ಸುಧಾರಿತ ಪದ್ಧತಿಗಳನ್ನು ಜಾರಿಗೆ ತಂದಿದ್ದ ಆಧುನಿಕ ರೀತಿಯ ಶಾಲೆಯೊಂದಕ್ಕೆ ಭೇಟಿಕೊಟ್ಟ ಆ ಸಂದರ್‍ಭವೇ ನೆಪವಾಗಿ ಸೃಷ್ಟಿಯಾದ ಪದ್ಯ ಇದು.
(೨೬) ಡವಿಂಚಿ : ಲಿಯನಾರ್‍ಡೋ ಡವಿಂಚಿ. ೧೫ನೆಯ ಶತಮಾನದಲ್ಲಿ ಫ್ಲಾರೆನ್ಸ್‌ನಲ್ಲಿ ಇದ್ದ ಮಹಾನ್ ಚಿತ್ರಕಾರ.
(೪೧-೪೫) ಸ್ವರ್‍ಗದಲ್ಲಿರುವ ಒಂದು ಮೂಲಮಾದರಿಯನ್ನು ಆಧರಿಸಿ ಈ ಸೃಷ್ಟಿಯಲ್ಲಿರುವ ಎಲ್ಲ ವಸ್ತುಗಳೂ ಸೃಷ್ಟಿಯಾಗಿವೆ ಎಂದು ಪ್ಲೇಟೋ ಪ್ರತಿಪಾದಿಸಿದ. ಅರಿಸ್ಟಾಟಲ್ ಅಲೆಕ್ಸಾಂಡರನಿಗೆ ವಿದ್ಯೆ ಕಲಿಸಿದ ಗುರು. ವಿಶ್ವವಿಜೇತನಾದ ಆ ಚಕ್ರವರ್‍ತಿಯನ್ನೂ ಅರಿಸ್ಟಾಟಲ್ ದಂಡಿಸಿದ್ದ. ಪೈಥಾಗೊರಸ್ ಒಬ್ಬ ಗ್ರೀಕ್ ತತ್ವಶಾಸ್ತ್ರಜ್ಞ. ವಿಶ್ವದ ಸ್ವರೂಪವನ್ನು ಗಣಿತದ ತಳಹದಿಯ ಮೇಲೆ ವಿವರಿಸಬಹುದು ಎಂದು ಪ್ರತಿಪಾದಿಸಿದವನು. ಜ್ಯೋತಿಕಾಯಗಳ ನಡುವಿನ ಅಂತರವು ವಿಶ್ವಸಂಗೀತ ಸಾಮರಸ್ಯದ ತತ್ವಗಳನ್ನು ಆಧರಿಸಿ ರೂಪುಗೊಂಡಿದೆ ಎಂದು ಭಾವಿಸಿದ್ದವನು.