ಆಗಮ
ಹಗಲೂ ಅಲ್ಲ ಇರುಳೂ ಅಲ್ಲದ ಹೊತ್ತು
ಮುರಿದ ಹುಬ್ಬು ಹುರಿದ ಕಣ್ಣು ಅರ್ಧ ಜಾಗ್ರದಾವಸ್ಥೆ
ಪಡುಕೋಣೆಯ ರಂಗಮಹಲಿನ ಮೇಲೆ
ದೇವಾನುದೇವತೆಗಳ ಅರೆನಗ್ನ ನರ್ತನ
ಪೂರ್ವದೇಗುಲದಲ್ಲಿ ಘಂಟೆ ಜಾಗಟೆ ಮದ್ದಲೆಗಳ ಮೇಳ
ಲೋಪ
ಬಡ ಹೊಟ್ಟೆಯ ಮೇಲರಳಿದ ಕಮಲದ
ತಲೆ ತುಂಬ ತುಂಬಿಗಳು ಭ್ರಮರವೋ ಭ್ರಮೆಯೋ?
ಬಲವೇ ಬದುಕಾದ ಈ ಕಾಡಿನಲ್ಲಿ
ಎಲೆಮನೆಯಲ್ಲಿರುವೀ ತೇಲುನೋಟದವನಿಗೆ
ಉಳಿಗಾಲವಿದೆಯೇ? ಈ ಮಾಂತ್ರಿಕನ ಮಂತ್ರ ನಿಜವೆ?
ಆದೇಶ
ಮಧ್ಯ ಸೂತ್ರವನಂದಗೊಳಿಸುವ
ಇದು ತೇಲುತೆಪ್ಪ
ಕಲ್ಲಾಗಿ ಕೆಳಗಿಳಿಯದೆ
ಆವಿಯಾಗಿ ಮೇಲೇರದೆ
ಕಡಲ ತೊಡೆಯ ಮೇಲೆ ನಲಿದಾಡುವ
ಮಸೆಯುವ ಹಲ್ಲುಗಳ ಗಣಿಸದೆ
ತೆರೆಗಳ ಪರದಾಟವನ್ನು ಎಣಿಸುವ
ಕ್ಷಣವಿದ್ದರೂ ಕ್ಷಣಿಕವಾಗದೆ
ಹಿಂದು ಮುಂದನೊಂದಾಗಿ ಬೆಸೆಯುವ ಲೀಲೆ
*****