ತೇಲುವ ಬೆಂಡು ನೀರುಂಡು
ಮೀನು ಮೊಸಳೆಗಳ ಬಾಯಿ ಹಲ್ಲುಗಳ ಕಂಡು
ಅದು ಹೇಗೋ ಉಳಕೊಂಡು
ಇಳಿಯಿತು
ಇಳಿದೂ ಇಳಿದೂ ಗಟ್ಟಿಗೊಂಡು
ಕಲ್ಲಾಗಿ ಒರಟು ಕರಟಾಗಿ ತಳ ಕಂಡಿತು
ಆಗೊಂದು ಕಮಲನಾಳ
ಕಳಕಳಿಸಿ ನಳನಳಿಸಿ
ಕಲಕುತ್ತ ಇಳಿದು ಬಂತು
ಕಲ್ಲು ಕದಲಿತು
ಹೂವು ಕಳಿಸಿದ ಕಂಪು
ನಾಳ ನಾಳಗಳಲ್ಲಿ ಹರಿದು ಕೆಂಪು
ಸುಪ್ತ ಚೇತನವು
ಮಾಯಾ ಸ್ಪರ್ಶಕೆಚ್ಚತ್ತಿತು
ಲಯದಿಂದುದಿಸಿ ಬರೆ ಕಿಸಲಯ
ಮೃತ್ಯುವು ಚಿಗುರೊಡೆದು ಅಮೃತಫಲ ಕೊಟ್ಟಿತು
ಕಲ್ಲರಳಿ ಹೂವಾಗಿ
ಹಾಡು ಸೆಲೆಯೊಡೆಯಿತು
ಹೂನಗೆಯ ರಸ ಜೇನು
ಹನಿ ಹಳ್ಳ ಹರಿದು
ಹರಡಿ ಕಡಲಾಯಿತು.
*****