ಇಳೆಗೆ ಹೊಸರಾಗ ಕಲಿಸುವ ಹುಚ್ಚು
ಯಾಕೆ ಬಂತೋ ಈ ಮಳೆಗೆ?
ಹೊತ್ತು – ಗೊತ್ತು
ಒಂದೂ ಇಲ್ಲದೇ ಹೀಗೆ
ಸುರಿದು ಬಿಡುವುದೇ ಇಳೆಗೆ?
ನಡೆಯುತ್ತಾ ನಡೆಯುತ್ತಾ
ಅರ್ಧದಲ್ಲೇ ಥಟ್ಟನೆ
ಎಲ್ಲಾ ನಿಂತು
ಗಾಳಿ – ನೀರು – ಬೇರುಗಳೆಲ್ಲಾ
ಇಳೆಯೊಂದಿಗೇ
ಮೌನದಾಳದಲಿ ಹೂತಿರುವಾಗ
ಜೀವಂತಿಕೆ ಇಲ್ಲದೇ ಸೋತಿರುವಾಗ
ಇಳೆಗೆ ಹೊಸರಾಗ ಕಲಿಸುವ ಹುಚ್ಚು
ಯಾಕೆ ಬಂತೋ ಈ ಮಳೆಗೆ?
ಬೇಕೋ – ಬೇಡವೋ
ಆಗಲೋ – ಈಗಲೋ
ಎಂದನುಮಾನಿಸುತ್ತಲೇ
ಮೆಲ್ಲಗೆ ಕದ ತೆರೆದು
ಮುಗ್ಧತೆಯಿಂದ ಮಳೆಯ ಕಥೆಗೆ
ಕಿವಿ ನೀಡಿದ್ದ ಇಳೆಗೆ
ಸದ್ದಿಲ್ಲದೇ ರಪರಪನೆ ಬಡಿದು
ತೊಯ್ದು ತೊಪ್ಪೆಯಾಗಿಸಿದ ಮಳೆಗೆ
ಮೀಸೆಯಂಚಿನಲ್ಲೇ ನಗು
ಇಳೆಯನ್ನರಳಿಸಿದ ಬೀಗು!
ಏನೂ ಆಗಿಯೇ ಇಲ್ಲವೆಂಬಂತೆ
ಮಳೆ ನೀರು ಕೊಡವಿ
ಮಿಂದು ಮಡಿಯುಟ್ಟ ಇಳೆ
ತನ್ನೆದೆಯಾಳದ ಮಾತಿಗೆ
ಜೀವ ಬಂದುದ ನೋಡಿ ಹಿಗ್ಗುತ್ತದೆ
ಹಮ್ಮಿನಲಿ ದೂರ ಸರಿದು ನಿಂತ
ಮಳೆಯ ತಬ್ಬಿ
ನೂರು ಹೊಸರಾಗಗಳ ಹಾಡುತ್ತದೆ
ಕಂಡೂ ಕಾಣದಂತೆ
ಗೆಲುವಿನ ನಗೆ ನಗುತ್ತದೆ!
ಇಳೆಯ ಮೈ ಮನದ ತುಂಬೆಲ್ಲಾ
ಈಗ ಚಿಗುರು ಹೂ – ಹಣ್ಣು!
*****