ನನ್ನ ಷೇಕ್ಸ್‌ಪಿಯರನ ಪವಿತ್ರ ಅಸ್ಥಿಯನಿಡಲು
ಯುಗ ದುಡಿದು ಜೋಡಿಸಿದ ಕಲ್ಲರಾಶಿಯ ಮಹಲು
ಬೇಕೆ ? ಅಥವಾ ಮುಗಿಲ ಇರಿವ ಪಿರಿಮಿಡ್ಡುಗಳ
ತೆರೆ ಸಾಕೆ ಮರೆಸಲು ಪುನೀತ ಅವಶೇಷಗಳ?
ಸ್ಮೃತಿಯ ಪ್ರಿಯಪುತ್ರನೇ, ಪ್ರಥಮಪಾತ್ರನೆ ಎಲ್ಲ
ಕೀರ್‍ತಿಗೂ, ನಿನಗಂಥ ಕಳಪೆ ಸಾಕ್ಷಿಯು ಸಲ್ಲ;
ನಮ್ಮ ಎದೆಯಲಿ ಉಕ್ಕಿ ಸುರಿವ ಸಂತಸ ಬೆರಗೆ
ನೀನು ನಿರ್‍ಮಿಸಿಕೊಂಡ ಚಿರಸ್ಮಾರಕವು ನಿನಗೆ.
ಕೃತಿಯ ಸಾಲೇ ಹರಿಸಿ ಕಲೆಯ ಬಲು ಮೆಲುನಡೆಯ
ಅಪಹಾಸ್ಯಕೆಳೆದ ಹಿರಿಕವಿಯೆ, ನಿನ್ನ ಅಮೂಲ್ಯ
ಪುಟಪುಟಗಳಿಂದಲೂ ಅಮೃತ ಸೂಕ್ತಿಗಳನ್ನ
ಹೆಕ್ಕಿಕೊಂಡಿದೆ ಜನರ ಹೃದಯ. ಓದಲು ನಿನ್ನ,
ನಮ್ಮಲ್ಪ ಕಲ್ಪನೆಯ ಕೊಚ್ಚಿ ಕವಿವುದು ಬೆರಗು,
ನಾವಾಗುವೆವು ಅಮೃತಶಿಲೆ ಪೂರ್‍ತಿ ಮೈಮರೆದು.
ಎಂಥ ಸ್ಮಾರಕ ನಿನಗೆ, ಏನು ಭವ್ಯ ಪ್ರಸಿದ್ಧ,
ರಾಜರೂ ಅದರ ಸಲುವಾಗಿ ಸಾಯಲು ಸಿದ್ಧ!
– ಜಾನ್ ಮಿಲ್ಟನ್
*****