ಒಮ್ಮೆ- ಭೋಜರಾಜ ಮಹಾರಾಜ, ‘ಜೀವನದಲ್ಲಿ ಯಾವುದು ಶ್ರೇಷ್ಠ?’ ಎಂದು ಅಲ್ಲಿದ್ದ ಆಸ್ಥಾನಿಕರೆನ್ನೆಲ್ಲ ಕೇಳುತ್ತಾ ಕುಳಿತರು.
ಮೊದಲು ಕವಿಯೊಬ್ಬ ಎದ್ದು ನಿಂತು- ‘ಮಹಾಪ್ರಭು… ಮಾನವ ಜನ್ಮ ಬಹು ದೊಡ್ಡದು. ಆದ್ದರಿಂದ ಜೀವನದಲ್ಲಿ ಹೆಂಡತಿಮಕ್ಕಳು ಅತ್ತೆಮಾವ, ತಾಯಿತಂದೆ, ಅಣ್ಣತಮ್ಮ, ಅಕ್ಕತಂಗಿ…. ಹೀಗೆ ಗೃಹಸ್ಥಾಶ್ರಮವಿದ್ದಂತೆ… ಬಲು ಶ್ರೇಷ್ಠ’ ಎಂದು ವರ್ಣಿಸುತ್ತಾ ನಿಂತ.
ಅಷ್ಟರಲ್ಲಿ ಮಹಾಪಂಡಿತನೊಬ್ಬ ಎದ್ದು ನಿಂತು- ‘ಪ್ರಭು… ಸಂಸಾರ ಸಾಗರದಾಗ ಲೆಕ್ಕವಿಲ್ಲದಷ್ಟು ದುಕ್ಕವಿದೆ. ಅನುಮಾನವಿದೆ, ಅವಮಾನವಿದೆ, ಕಷ್ಟವಿದೆ, ಸುಖ ಇಲ್ಲವೇ ಇಲ್ಲ. ಸುಖವೆಂಬುದು ಭ್ರಮೆ.. ಹೀಗಾಗಿ ಸನ್ಯಾಸಾಶ್ರಮವೇ ಶ್ರೇಷ್ಠ….’ ಎಂದು ವಾದಿಸುತ್ತಾ ನಿಂತ.
ಕೂಡಲೇ ಅಲ್ಲೇ ಕುಳಿತ್ತಿದ್ದ ಅನುಭವಿಯೊಬ್ಬ ಎದ್ದು ನಿಂತು ‘ಪ್ರಭು… ಕಾವಿ ತೊಟ್ಟು ಸುಖವಾಗಿರುವುದೇ ಶ್ರೇಷ್ಠ. ಯಾವ ಭವಬಂಧನದ ಜಂಜಡದ ಪಾಪಪ್ರಜ್ಞೆ ಇರುವುದಿಲ್ಲ. ಎಲ್ಲಿದ್ದರೂ ಹೇಗಿದ್ದರೂ ಎಂತಿದ್ದರೂ… ಆನಂದವಾಗಿ ಪೂಜೆ, ವ್ರತ, ನೇಮ, ನಿಷ್ಠೆ, ಪ್ರಸಾದವೆಂದು ಉಪದೇಶ ನೀಡುತ್ತಾ.. ಖುಷಿಖುಷಿಯಾಗಿ ಇರಲು ಸನ್ಯಾಸಾಶ್ರಮವೇ ಶ್ರೇಷ್ಠ…. ಇದು ನನ್ನ ಅನುಭವ’ ಎಂದು ಹೇಳಿದ.
ವೇದಾಂತಿಯೊಬ್ಬ ಎದ್ದು ನಿಂತು ‘ಪ್ರಭು. ಸಂಸಾರವೆಂಬುದು ಸುಂದರ ಲೋಕ, ಸ್ವರ್ಗಧಾರೆ, ಅಮೃತವರ್ಷಿಣಿ… ಅಲ್ಲಿ ಹಾಲು ಸಕ್ಕರೆ ಇದೆ. ಅಕ್ಕರೆಯ ಮಡದಿ ಮಣಿ, ನಕ್ಕು ನಗಿಸುವ ಮಕ್ಕಳಲೋಕ ಕಣ್ಣಿಗೆ ಕಾಣುವ ದೇವರುಗಳಾದ ಅಪ್ಪಮ್ಮ ಬಂಧುಬಳಗ ಕಣ್ಣು ಕೊಟ್ಟ ಹೆಣ್ಣು ಕೊಟ್ಟ ಅತ್ತೆಮಾವ, ಅಳಿಯಂದಿರು, ಸೊಸ್ತಿರು… ಆಹಾ! ಸ್ವರ್‍ಗ ಮೂರೇ ಗೇಣು. ಅದೊಂದು ಅನುಭವದ ಪಾಠ ಶಾಲೆ ವಸುದೇವಕ ಕುಟುಂಬದಂತೇ.. ಇದು ದೇವರಿಗೂ ಇಲ್ಲ! ಆದ್ದರಿಂದ ಗೃಹಸ್ಥಾಶ್ರಮವೇ ಶ್ರೇಷ್ಠ’ ಎಂದ.
ಅಲ್ಲಿದ್ದವರೆಲ್ಲ ತಲೆದೂಗಿದರು.
ಆಸ್ಥಾನಿಕರ ವಾದ ವಿವಾದ ಕೇಳಿಕೇಳಿ… ಭೋಜರಾಜ ಮಹಾಪ್ರಭುಗಳ ತಲೆಕೆಟ್ಟು ಹೋಯಿತು! ‘ಇದೇನು ಪರ ವಿರೋಧ ಚರ್‍ವಿತಚರ್‍ವಣ ವಿತಂಡವಾದ ವಿವಾದ.. ಏನಾದರು ಹೊಸತ್ತಿದ್ದರೆ ಹೇಳಿ! ನನಗೆ ಕೇಳಿಕೇಳಿ ಆಹಾ… ಕಿವಿ ತೂತು ಬಿದ್ದವು…’ ಎಂದು ಅಬ್ಬರಿಸಿಬಿಟ್ಟರು.
ಅಷ್ಟರಲ್ಲಿ- ಕವಿರತ್ನ ಕಾಳಿದಾಸ ಎದ್ದು ನಿಂತು- ‘ಮಹಾಪ್ರಭು ನಿಮಗೆ ತೃಪ್ತಿಯಾಗುವಂತೆ ಸತ್ಯಸಂಗತಿಯೊಂದನ್ನು ಎಷ್ಟೋ ವರ್ಷಗಳಿಂದ ಹರ್ಷದಿಂದ ನಾನು ಕಂಡಿದ್ದನ್ನು ಕಂಡಂತೇ… ಇಂದು ಎಲ್ಲರಿಗೆ ತೋರಿಸಿ ಖುಷಿ ಪಡಿಸಲು ಸಿದ್ಧನಿದ್ದೇನೆ. ನನ್ನಿಂದ ನೀವೆಲ್ಲ… ಬನ್ನಿ, ಎಂದು ಊರ ಹೊರಗಿನ ಹಾಳು ಮಂಟಪಕ್ಕೆ ಕರೆದೊಯ್ದ. ಎಲ್ಲರೂ ಕಾಳಿದಾಸನ ಹಿಂದಿಂದೆ ಬಲು ಕುತೂಹಲದಿ… ಅವಸರ ಅವಸರದೀ… ನಡೆದರು.
ಅಲ್ಲೊಂದು ಭಿಕ್ಷುಕರ ದೊಡ್ಡ ಗುಂಪು…. ಗುಂಪು…. ಅವರಿಗೆ ಅವರೇ ಅಲ್ಲಿ ರಾಜರಾಣಿ, ಯುವರಾಜ ಯುವರಾಣಿಯರಂತೇ… ಜೀವನ ಸಾಗಿಸುತ್ತಿರುವ ಪರಿಗೆ ಎಲ್ಲರೂ ದಂಗುಬಡಿದು ನಿಂತಲ್ಲೇ ನಿಂತು ಬಿಟ್ಟರು! ತಾಸಾಗಿತು ಕಾಲುನೋವು ಬಂದವು, ತೀವ್ರ ತವಕದಿ ಎಲ್ಲರೂ ಮರೆಯಲ್ಲಿ ನಿಂತು… ಕೇಳುತ್ತಾ ಇದ್ದರು.
ಅಷ್ಟರಲ್ಲಿ ಭಿಕ್ಷುಕನೊಬ- ‘ರಾಣಿ ಯಾಕೋ ನನಗಿಂದು ಶೆಕೆಯಾಗುತ್ತಿದೆ. ತುಸು ಬೀಸಣಿಕೆಯಲಿ ಗಾಳಿ ಹಾಕು’ ಎಂದು ತನ್ನ ಹೆಂಡತಿಗೆ ಪ್ರೀತಿಲಿ ಹೇಳಿದ. ಚಳಿಗಾಲದ ಸಂಜೆಯದು ತಣ್ಣನೆ ಗಾಳಿಯ ವಾತಾವರಣದಲ್ಲಿ. ಆದರೂ ವಯಸ್ಸಾದ… ಹೆಂಡತಿ ತಲೆ ತುಂಬಾ ಸೆರಗು ಹೊದ್ದು ಭಯಭಕ್ತಿಲಿ ಬಲು ಪ್ರೀತಿಲಿ ಬೀಸಣಿಗೆಲಿ ಗಾಳಿ ಹಾಕುತ್ತಾ ನಿಂತಳು.
‘ಆಹಾ ಈ ಸುಖ ರಾಜನಿಗೂ ಇಲ್ಲ’ -ಎಂದ ಭಿಕ್ಷುಕ… ತುಸು ಸಮಯ ಕಳೆಯಿತು- ‘ಯುವ ರಾಣಿ… ತಣ್ಣಗಾಗಲಿ ಎಂದು ಗಾಳಿಗೆ ಆರಲು ಇಟ್ಟಿದ್ದ ಮುದ್ದೆ ರೊಟ್ಟಿ ಪಲ್ಲೆ ಚಟ್ನಿ ನನಗೆ ನಿನ್ನ ಕೈಯಾರೆ, ಎಂದಿನಂತೆ ಈಗ ನೀ… ತಿನಿಸು’ ಎಂದು ಎರಡನೆಯ ಹೆಂಡತಿಗೆ ಭಿಕ್ಷುಕ ಪ್ರೀತಿಲಿ ಅಂದ.
‘ಅಬ್ಬಾ’ ಎಂದರು ಇವರೆಲ್ಲ… ಮರೆಯಲ್ಲಿ ನಿಂತು!
ಎರಡನೆಯ ಹೆಂಡತಿ ತಂಗಳು ಹಳಸಿದ್ದು ಮುದ್ದೆ ಅನ್ನ, ರೊಟ್ಟಿ, ಪಲ್ಲೆ ಚಟ್ನಿಯನ್ನು ಪ್ರೀತಿಲಿ ತನ್ನ ಕೈಯಾರೆ… ತಿನಿಸುತ್ತಾ ಕುಳಿತಳು.
ಅಷ್ಟರಲ್ಲಿ- ‘ಚಿನ್ನ ಬಿಸಿಲು ಬೀಳುತ್ತಿದೆ. ಛತ್ರಿಯನ್ನು ತಗೋ ಈಗ ತುಸು ಹಿಡಿ’ ಎಂದು ಪ್ರೀತಿಲಿ ಅಂದ.
ಮರು ಮಾತನಾಡದೆ ತನ್ನ ಮೂರನೆಯ ಹೆಂಡತಿ- ‘ಆಗಲಿ’ ಎಂದು ಛತ್ರಿ ಹಿಡಿದಳು.
ಇವರ ಅಮರ ಪ್ರೇಮ ಎಲ್ಲರ ಕಣ್ಣ ಮುಂದೆ ಚಲನಚಿತ್ರದಂತೆ ಸಾಗುತ್ತಿದೆ…..
‘ಮಹಾಪ್ರಭು… ಈಗೋ ನೋಡಿ….. ಚಳಿಗಾಲದ ದಿನಗಳು. ತನ್ನ ಮೂರು ಜನ ಹೆಂಡತಿಯರ ಕೈಯಿಂದ, ಪ್ರೀತಿಯಿಂದ, ಹೀಗೆ ಕೆಲಸ ಮಾಡಿಸಿಕೊಳ್ಳುತ್ತಿರುವ ಭಿಕ್ಷುಕ. ತನ್ನ ಹೆಂಡತಿಯರೂ ಎಂದೂ ಗುನುಗಿಲ್ಲ. ವಿರೋಧಿಸಿಲ್ಲ… ಚಳಿಯಿದೆ ಗಾಳಿ ಯಾಕೆ? ಎಂದು ಪ್ರಶ್ನಿಸಿಲ್ಲ. ಈಗ ಬಿಸಿಲೇ ಇಲ್ಲ. ಛತ್ರಿ ಏಕೆ? ಎಂದು ಕೇಳಿಲ್ಲ. ಹಳಿಸಿದ್ದು ಮನೆಮನೆಗೆ ಬೇಡಿ ತಂದಿದ್ದು ಅದನ್ನು ತಿನ್ನಿಸಲು ನಾನೊಬ್ಬಳು ಕೇಡು ನಿನಗೆ ಎಂದು ಯಾರೂ ಅಂದಿಲ್ಲ…! ಪತಿಯೇ ದೇವರು! ಸರ್‍ವಸ್ವ, ಅವನ ಮಾತೇ ವೇದವಾಕ್ಯವೆಂದು ಹೀಗೆ… ಪರಿಪಾಲಿಸುವ ಇಂಥಾ ಸತಿ ಶಿರೋಮಣಿಯರಿದ್ದರೆ. ಗೃಹಸ್ಥಾಶ್ರಮವೇ ಶ್ರೇಷ್ಠವಲ್ಲವೇ ಪ್ರಭು..?!’ ಎಂದು ಕಾಳಿದಾಸ ವಿವರಿಸುತ್ತಾ ನಿಂತ!
ಅಲ್ಲಿದ್ದವರೇನು…. ಸ್ವತಃ ಪ್ರಭುಗಳೆ… ಸೋಜಿಗದಿ ಬಾಯಿ ಮೇಲೆ ಕೈ ಇಟ್ಟರು. ‘ಭಲೆ ಭಲೆ ಕಾಳಿದಾಸ…. ನಿನ್ನ ಪ್ರತ್ಯಕ್ಷ ದರ್ಶನ ನನ್ನ ಕಣ್ಣು ತೆರೆಸಿತು…. ನಡೀರಿ ಅರಮನೆಯತ್ತಾ…’ ಎಂದು ಪ್ರಭುಗಳು ನಡೆದರು.
ಅವರ ಹಿಂದಿಂದೆ ಉಳಿದವರೂ ನಡೆದರು.
*****