ಗಾಳಿ ಸುಳಿಯದ ಮನೆಯ ಹೊಗೆ ಹಾದಿಸಿಗದೆ ಒಳ-
ಗೊಳಗೆ ಹಬ್ಬುತ, ಉಸಿರ ಕಟ್ಟುವೊಲು, ಇರುಳು ಮುಗಿ-
ಲಲಿ ಅಭ್ರ ಕವಿಯುವವು ಚಿಕ್ಕೆಬೆಳಕನು; ಬೆಂದು ಬಳ
ಲಿದ ಹೆಂಣುಮನ ಕಂದುತಿದೆ ಕಂದುತಿದೆ ನೊಂದ-
ನುಡಿಯೊಂದರಲಿ; ಸರಸ ಸಲ್ಲಾಪದುಲ್ಲಾಸ
ಸೂಸದಾಗಿದೆ : “ವಿರಸ ಸಂಸಾರ ನಿಃಸಾರ
ಜೀವನವು ಹೇಸಿ, ಮರಣವು ಲೇಸು”-ಹುಸಿ ಭೂತ
ಖಿನ್ನಳಲಿ ಬೀಸುತಿದೆ ಬಲೆಯ ಯಮಪಾಶದೊಲು.
ಜಾಲಗಾರನು ಉಸುಕು ಜಾಳಿಸುವ ಹಾಗೆ, ಜೊತೆ-
ಗಾರ ತಸಿಜಿನುಗು ದನಿಯಲ್ಲಿ ಸೋಸುತಿಹನು, ಹಿ-
ನ್ನೋಟ ಮುನ್ನೋಟದಲಿ ಗಸಿಗಿಳಿಸುತಿರೆ, ಅಭ್ರ
ಧವಳಿಸುತಲಿವೆ. ಆದರೇನು? ಮಾನಿನಿಯ ನಗೆ-
ಮುಗುಳು ಸುಳಿಯೊಳೆ ನಡುಗಿ ಉಡುಗಿ ಅಡಗುವದು: ದು-
ರ್‍ಮೋಹ ಪಾಶವೊ ಎಂಬ ಭ್ರಾಂತಿವಿಭ್ರಾಂತಿಯಲಿ.
*****