ಜಾಣ ಕುಂಬುರನ ಮನಿ ಯಾವ ಕಡಿಗಽದ
ಕಪ್ಪುರದ ತಿಪ್ಪಿ ಎಡಽ ಬಲಽ| ಸೋ ||೧||
ಕಪ್ಪುರದ ತಿಪ್ಪಿ ಎಡ ಬಲ ಮಾಡಿಕೊಡು|
ಜಾಣ ಕುಂಬಾರನಽ ಮನಿಽಗ್ವ್ಹಾದಽ| ಸೋ ||೨||
ಮುಂಜಾಳಿ ಕುಂಬಾರಣ್ಣಾ ಮಸರ ಬೋನುಂಡಾನ|
ಹಾರ್‍ಯಾರಿ ಕೆಸರ ತುಳಽದಾನಽ| ಸೋ ||೩||
ಹಾರಿ ಹಾರೀ ಕೆಸರ ತುಳದು ತಾ ಮಾಡ್ಯಾನ|
ನಾರ್‍ಯಾರ ಹುರುವ ಒಂದೈಯಽರಾಣಿ | ಸೋ ||೪||
ಕಡಗದ ಕೈಯಕ್ಕಿ ಕೊಡೆವಿ ಕುಂಬಾರವ್ವ|
ಕೊಡದ ಮ್ಯಾಲ್ಯಾನ ಬರಽದಾಽಳ| ಸೋ ||೫||
ಕೊಡದನೆ ಮ್ಯಾಲ್ಯಾನ ಬರದಾಳ ನಮ್ಮೂರ|
ಬಾಳಿ ಬನದಾನೊಂದರಽಗಿಣಿಯ| ಸೋ ||೬||
*****
ಲಗ್ನ ಸಮಾರಂಭದ ಎರಡನೆಯ ದಿನದ ವಿಧಾನವಿದು. ಐದು ಮಂದಿ ಮುತ್ತೈದೆಯರು, ಕುಂಬಾರನ ಮನೆಯಿಂದ ಹೊಸ ಕೊಡೆಗಳನ್ನು ತಂದು ನೀರು ತುಂಬಿಕೊಂಡು ಬರುವರು. ಆಗಿನ ಹಾಡಿದು.
ಛಂದಸ್ಸು:- ತ್ರಿಪದಿ.
ಶಬ್ದಪ್ರಯೋಗಗಳು:- ಐರಾಣಿ=ಐದು ಮಂದಿ ರಾಣಿಯರು ಹೊರುವ ಕೊಡ ಮತ್ತು ಮಗಿಗಳ ಸಮೂಹ.